ದೀಪಾವಳಿ ರಶ್‌ನಿಂದ ಮುಂಬೈನ ಬಾಂದ್ರಾ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ; 9 ಮಂದಿ ಗಾಯ, ಇಬ್ಬರ ಸ್ಥಿತಿ ಗಂಭೀರ
Oct 27, 2024 12:28 PM IST
ದೀಪಾವಳಿ ರಶ್‌ನಿಂದ ಮುಂಬೈನ ಬಾಂದ್ರಾ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ; 9 ಮಂದಿ ಗಾಯ, ಇಬ್ಬರ ಸ್ಥಿತಿ ಗಂಭೀರ
- ಮುಂಬೈನ ಬಾಂದ್ರಾ ಟರ್ಮಿನಸ್ನ ಬಾಂದ್ರಾ ರೈಲು ನಿಲ್ದಾಣದ ಫ್ಲಾಟ್ಫಾರ್ಮ್ವೊಂದರಲ್ಲಿ ಇಂದು (ಅಕ್ಟೋಬರ್ 27) ಬೆಳಗ್ಗೆ 5:56ಕ್ಕೆ ನೂಕುನುಗ್ಗಲಿನಿಂದ ಕಾಲ್ತುಳಿತ ಸಂಭವಿಸಿ 9 ಮಂದಿ ಗಾಯಗೊಂಡಿದ್ದಾರೆ.
ಮುಂಬೈ/ನವದೆಹಲಿ: ದೀಪಾವಳಿ ಹಬ್ಬಕ್ಕೆ ಊರುಗಳಿಗೆ ಪ್ರಯಾಣಿಸಲು ಮುಂಬೈನ ಬಾಂದ್ರಾ ರೈಲು ನಿಲ್ದಾಣದ ಫ್ಲಾಟ್ಫಾರ್ಮ್ವೊಂದರಲ್ಲಿ ನೂಕುನುಗ್ಗಲು ಉಂಟಾಗಿ ಕಾಲ್ತುಳಿತದಿಂದ 9 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಏಳು ಮಂದಿಯ ಸ್ಥಿತಿ ಸ್ಥಿರವಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳು ಭಾಭಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ತಿಳಿಸಿದೆ. ಬಾಂದ್ರಾ ಟರ್ಮಿನಸ್ನ ಮೊದಲ ಪ್ಲಾಟ್‌ಫಾರ್ಮ್‌ನಲ್ಲಿ ಇಂದು ಬೆಳಗ್ಗೆ 5:56ಕ್ಕೆ ಈ ಘಟನೆ ಸಂಭವಿಸಿದೆ.
ಬಾಂದ್ರಾದಿಂದ ಗೋರಖ್‌ಪುರಕ್ಕೆ ಹೋಗುವ ರೈಲು ಸಂಖ್ಯೆ 22921 ನಿಲ್ದಾಣದ ಪ್ಲಾಟ್‌ಫಾರ್ಮ್ 1ಕ್ಕೆ ಬಂದಿತ್ತು. ಆಗ ಬೃಹತ್ ಸಂಖ್ಯೆಯಲ್ಲಿ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಯಾಣಿಕರು ಜಮಾಯಿಸಿದ್ದರು. ಅದು ಬೆಳಿಗ್ಗೆ 5:10ಕ್ಕೆ ಹೊರಡಬೇಕಿತ್ತು ಎಂದು ಮೂಲಗಳು ತಿಳಿಸಿವೆ. ಆದರೆ ಮರು ವೇಳಾಪಟ್ಟಿಯ ನಂತರ ಪ್ಲಾಟ್‌ಫಾರ್ಮ್‌ಗೆ ರೈಲು ತಡವಾಗಿ ಬಂದಿತು. ದೀಪಾವಳಿಗೆ ತಮ್ಮ ತಮ್ಮ ಊರುಗಳಿಗೆ ಹೊರಡಲು ಸಜ್ಜಾಗಿದ್ದ ಪ್ರಯಾಣಿಕರು, ಬೆಳಗಿನ ಜಾವ 3 ಗಂಟೆ ಸುಮಾರಿಗೆ ಪ್ಲಾಟ್‌ಫಾರ್ಮ್‌ನಲ್ಲಿ ಬೃಹತ್ ಪ್ರಮಾಣದಲ್ಲಿ ಜಮಾಯಿಸಿದ್ದರು. ರೈಲು ಬರುತ್ತಿದ್ದಂತೆ ಒಮ್ಮೆಲೆಗೆ ಪ್ರಯಾಣಿಕರು ಹತ್ತಲು ಪ್ರಯತ್ನಿಸಿದರು. ಇದು ಕಾಲ್ತುಳಿತಕ್ಕೆ ಕಾರಣವಾಯಿತು.
ಗೋರಖ್‌ಪುರ ಎಕ್ಸ್ಪ್ರೆಸ್ನಲ್ಲಿ ಟಿಕೆಟ್ ಬುಕ್ ಮಾಡಿದವರು ಸೇರಿ ಒಟ್ಟಾರೆ 1000ಕ್ಕೂ ಅಧಿಕ ಪ್ರಯಾಣಿಕರು 22 ಬೋಗಿ ರೈಲಿಗೆ ಹತ್ತಲು ಆಗಮಿಸಿದ್ದರು. ರೈಲು ಇನ್ನೂ ಚಲಿಸುತ್ತಿರುವಾಗಲೇ ಕೆಲವು ಪ್ರಯಾಣಿಕರು ಬೋಗಿಗಳನ್ನು ಹತ್ತಲು ಪ್ರಯತ್ನಿಸಿದರು. ಇದರಿಂದಾಗಿ ಇಬ್ಬರು ಪ್ರಯಾಣಿಕರು ಗಾಯಗೊಂಡರು. ಪ್ಲಾಟ್ಫಾರ್ಮ್ನ ನೆಲದ ಮೇಲೆ ರಕ್ತದ ಕಲೆಗಳು ಕಾಣ ಸಿಗುತ್ತಿತ್ತು. ಗಾಯಗೊಂಡವರನ್ನು ರೈಲ್ವೇ ಪೊಲೀಸ್ ಸಿಬ್ಬಂದಿ ಮತ್ತು ಇತರ ಪ್ರಯಾಣಿಕರು ಸ್ಟ್ರೆಚರ್‌ಗಳಲ್ಲಿ ಕರೆದೊಯ್ಯುತ್ತಿರುವ ದೃಶ್ಯಗಳು ಇದೀಗ ವೈರಲ್ ಆಗುತ್ತಿವೆ. ಗಾಯಗೊಂಡ ಪ್ರಯಾಣಿಕರನ್ನು ರೈಲ್ವೆ ಪೊಲೀಸರು ಭುಜದ ಮೇಲೆ ತೆಗೆದುಕೊಂಡು ಹೋಗುತ್ತಿರುವುದನ್ನೂ ವಿಡಿಯೋ ಮೂಲಕ ಕಾಣಬಹುದು.
ಕೆಲವೊಬ್ಬರು ಗಾಯಗೊಂಡು ಅಲ್ಲಿನ ಬೆಂಚಿನ ಮೇಲೆ ಕುಳಿತುಕೊಂಡಿದ್ದರು. ಅವರ ಬಟ್ಟೆ ಹರಿದಿತ್ತು. ಅವರ ದೇಹದಲ್ಲಿ ರಕ್ತ ಹರಿಯುತ್ತಿತ್ತು. ಒಬ್ಬ ಪ್ರಯಾಣಿಕನಿಗೆ ಬೆನ್ನುಮೂಳೆ ಮುರಿದಿದೆ. ಕೆಲವು ಪ್ರಯಾಣಿಕರಿಗೆ ಕಾಲು ಮುರಿತವಾಗಿದೆ. ಏತನ್ಮಧ್ಯೆ, ಇಬ್ಬರು ಗಾಯಾಳುಗಳು ಡಿಸ್ಚಾರ್ಜ್ ಮಾಡಲಾಗಿದೆ. ಜನಸಂದಣಿಯನ್ನು ನಿಯಂತ್ರಿಸಲು ಪ್ಲಾಟ್‌ಫಾರ್ಮ್ 1 ರಲ್ಲಿ 50 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಇದ್ದರು.
ಗಾಯಗೊಂಡವರ ಪಟ್ಟಿ ಹೀಗಿದೆ
ಪರಮೇಶ್ವರ್ ಸುಖದರ್ ಗುಪ್ತಾ (28)
ರವೀಂದ್ರ ಹರಿಹರ್ ಚುಮಾ (30)
ಮೊಹಮ್ಮದ್ ಶರೀಫ್ ಶೇಖ್ (25)
ಇಂದ್ರಜಿತ್ ಸಹಾನಿ (19)
ನೂರ್ ಮೊಹಮ್ಮದ್ ಶೇಖರ್ (18)
ರಾಮಸೇವಕ್ ರವೀಂದ್ರ ಪ್ರಸಾದ್ ಪ್ರಜಾಪತಿ (29)
ಶಬೀರ್ ಅಬ್ದುಲ್ ರೆಹಮಾನ್ (40)
ಸಂಜಯ್ ತಿಲಕ್ರಾಮ್ ಕಂಗಯ್ (27)
ದಿವ್ಯಾಂಶು ಯೋಗೇಂದ್ರ ಯಾದವ್ (18)