ತಮಿಳುನಾಡು ಲೋಕಸಭಾ ಫಲಿತಾಂಶ; ಡಿಎಂಕೆಗೆ 39ಕ್ಕೆ 39, ಎಐಎಡಿಎಂಕೆಗೆ ಪೈಪೋಟಿ ನೀಡಿ ಗಮನಸೆಳೆದ ಬಿಜೆಪಿ
Jun 05, 2024 10:52 AM IST
ತಮಿಳುನಾಡು ಲೋಕಸಭಾ ಫಲಿತಾಂಶ ; ಡಿಎಂಕೆ ಪ್ರಾಬಲ್ಯವಾದರೂ, ಎಐಎಡಿಎಂಕೆಗೆ ಬಿಜೆಪಿಯಿಂದಲೇ ಪೈಪೋಟಿ
ತಮಿಳುನಾಡು ಲೋಕಸಭಾ ಫಲಿತಾಂಶ ಪ್ರಕಟವಾಗಿದ್ದು, ಡಿಎಂಕೆ 39ಕ್ಕೆ 39 ಗೆದ್ದು ಪ್ರಾಬಲ್ಯದ ಪ್ರದರ್ಶನ ನೀಡಿದೆ. ಇಷ್ಟಾದರೂ, ಎಐಎಡಿಎಂಕೆಗೆ ಪೈಪೋಟಿ ನೀಡಿ ಬಿಜೆಪಿ ಗಮನಸೆಳೆದಿದೆ. ರಾಜ್ಯದ 39 ಸ್ಥಾನಗಳ ಪೈಕಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಇಲ್ಲಿದೆ ವಿವರ.
ಚೆನ್ನೈ: ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದು, ತಮಿಳುನಾಡಿನ 39 ಕ್ಷೇತ್ರಗಳ ಪೈಕಿ ಬಹುತೇಕ ಕ್ಷೇತ್ರಗಳನ್ನು ಆಡಳಿತಾರೂಢ ಡಿಎಂಕೆ ಗೆದ್ದುಕೊಂಡಿದೆ. ನಿಖರವಾಗಿ ಹೇಳಬೇಕು ಎಂದರೆ ಡಿಎಂಕೆ 39ಕ್ಕೆ 39 ಸ್ಥಾನಗಳನ್ನು ಗೆದ್ದುಕೊಂಡಿದೆ. ಎಐಎಡಿಎಂಕೆ ಮತ್ತು ಮಿತ್ರ ಪಕ್ಷಗಳದ್ದು ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎಯದ್ದು ಶೂನ್ಯ ಸಾಧನೆ. ಆದಾಗ್ಯೂ, ಎಐಎಡಿಎಂಕೆಗೆ ಪೈಪೋಟಿ ನೀಡಿ ಬಿಜೆಪಿ ಗಮನಸೆಳೆದಿದೆ.
ತಮಿಳಿನಾಡಿನ 39 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಅಂದರೆ ಏಪ್ರಿಲ್ 19ರಂದೆ ಮತದಾನ ನಡೆಯಿತು. ಬಿಜೆಪಿ ಮತ್ತು ಎಐಎಡಿಎಂಕೆ ತಮ್ಮ ಮೈತ್ರಿ ಕಡಿದುಕೊಂಡ ಬಳಿಕ ತಮಿಳುನಾಡಿನಲ್ಲಿ ಎರಡೂ ಪಕ್ಷಗಳು ಎದುರಿಸುತ್ತಿರುವ ಮೊದಲ ಚುನಾವಣೆ ಇದಾಗಿದೆ. ಪಕ್ಷ ಸಂಘಟನೆ ವಿಚಾರದಲ್ಲಿ ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿಗೆ ಬಹಳಷ್ಟು ಸವಾಲುಗಳಿವೆ. ಬಿಜೆಪಿ ಇಲ್ಲಿ ಪಕ್ಷ ಸಂಘಟನೆಗಾಗಿ ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಅವರನ್ನು ಮುಂದೆ ನಿಲ್ಲಿಸಿದೆ. ತಮಿಳುನಾಡಿನ ಸಾಂಪ್ರದಾಯಿಕ ರಾಜಕಾರಣಕ್ಕೆ ಭಿನ್ನವಾಗಿ ಅಣ್ಣಾಮಲೈ ರಾಜಕಾರಣ ನಡೆಸಿದ್ದು, ಯುವಜನರ ಮನಗೆಲ್ಲುತ್ತಿರುವುದು ಕಂಡುಬಂದಿದೆ.
ತಮಿಳುನಾಡಿನಲ್ಲಿ ಲೋಕಸಭಾ ಚುನಾವಣೆ; ಹೈ ಫ್ರೊಫೈಲ್ ಕ್ಷೇತ್ರಗಳಿವು
ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನ 39 ಕ್ಷೇತ್ರಗಳಲ್ಲಿ ಐದು ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಕಂಡುಬಂದಿತ್ತು. ಬಿಜೆಪಿ ನೇತೃತ್ವದ ಎನ್‌ಡಿಎ, ತಮಿಳುನಾಡಿನ ಆಡಳಿತಾರೂಢ ಡಿಎಂಕೆ, ಪ್ರತಿಪಕ್ಷ ಎಐಎಡಿಎಂಕೆ, ಕಾಂಗ್ರೆಸ್ ನೇತೃತ್ವದ ಐಎನ್‌ಡಿಐಎ ಬ್ಲಾಕ್ ನಡುವೆ ಈ ಸ್ಪರ್ಧೆ ನಡೆದಿದೆ.
ದಕ್ಷಿಣ ಚೆನ್ನೈ - ತಮಿಳ್ ಸಾಯಿ ಸೌಂದರರಾಜನ್ (ಬಿಜೆಪಿ)
ನೀಲಗಿರೀಸ್ - ಎ ರಾಜಾ (ಡಿಎಂಕೆ)
ಕೊಯಮತ್ತೂರು - ಕೆ. ಅಣ್ಣಾಮಲೈ (ಬಿಜೆಪಿ)
ಚಿದಂಬರಂ- ತೋಲ್ ತಿರುಮಾವಲವನ್ (ವಿಸಿಕೆ)
ತೂತುಕುಡಿ - ಕನ್ನಿಮೊಳಿ(ಡಿಎಂಕೆ)
ರಾಮನಾಥಪುರಂ- ಓ.ಪನ್ನೀರಸೆಲ್ವಂ (ಸ್ವತಂತ್ರ ಅಭ್ಯರ್ಥಿ-ಎನ್‌ಡಿಎ ಬೆಂಬಲ)
ಇದೇ ರೀತಿ, ಡಿಎಂಕೆ ಭದ್ರಕೋಟೆ ಚೆನ್ನೈ ಉತ್ತರದಲ್ಲಿ ಬಿಜೆಪಿ ಪೈಪೋಟಿ, ಚೆನ್ನೈ ದಕ್ಷಿಣದಲ್ಲಿ ಡಿಎಂಕೆಗೆ ಬಿಜೆಪಿ, ಕಾಂಗ್ರೆಸ್ ಪೈಪೋಟಿ ನೀಡುತ್ತಿದ್ದವು. ತೂತುಕುಡಿಯಲ್ಲಿ ಡಿಎಂಕೆಗೆ ಎಐಎಡಿಎಂಕೆ ಸವಾಲು ಒಡ್ಡುವಂತೆ ಇತ್ತು. ಐತಿಹಾಸಿಕ ಪ್ರಾಮುಖ್ಯತೆ ಇರುವ ಮಧುರೈನಲ್ಲಿ ಡಿಎಂಕೆ, ಎಐಎಡಿಎಂಕೆ ಮತ್ತು ಬಿಜೆಪಿ ತ್ರಿಕೋನ ಸ್ಪರ್ಧೆ ಇತ್ತು. ತಿರುನೆಲ್ವೇಲಿ, ಕನ್ಯಾಕುಮಾರಿ, ಸೇಲಂ ಕೂಡ ಗಮನಸೆಳೆದ ಇತರೆ ಕ್ಷೇತ್ರಗಳು.
ಲೋಕಸಭಾ ಚುನಾವಣೆ; ತಮಿಳುನಾಡು ರಾಜಕೀಯದ ಚಿತ್ರಣ
ತಮಿಳುನಾಡಿನ ರಾಜಕೀಯ ಇತರೆ ರಾಜ್ಯಗಳಿಗಿಂತ ಭಿನ್ನವಾದುದು. ಇಲ್ಲಿ ಪ್ರಾದೇಶಿಕತೆ ಹೆಚ್ಚಿನ ಒತ್ತು. ಹಿಂದಿ ವಿರೋಧಿ ನಿಲುವು ಹೆಚ್ಚಾಗಿದ್ದು, ತಮಿಳುನಾಡಿನಲ್ಲಿ 1967ರಿಂದೀಚೆಗೆ ಪ್ರಾದೇಶಿಕ ಪಕ್ಷಗಳದ್ದೇ ಆಡಳಿತ. ಸಿಎನ್ ಅಣ್ಣಾದುರೈ ಆರಂಭಿಸಿದ ಡಿಎಂಕೆ ಹೆಚ್ಚು ಬಾರಿ ಆಡಳಿತ ಚುಕ್ಕಾಣಿ ಹಿಡಿದಿದೆ. 1969 ರಲ್ಲಿ ಕರುಣಾನಿಧಿ ಪಕ್ಷದ ಸಾರಥ್ಯವಹಿಸಿಕೊಂಡರು. ಸದ್ಯ ಎಂಕೆ ಸ್ಟಾಲಿನ್ ಸಾರಥ್ಯದಲ್ಲಿ ಮುನ್ನಡೆಯುತ್ತಿದೆ. ಈಗ ಅವರದ್ಧೇ ಸರಕಾರವಿದೆ. 1977ರಲ್ಲಿ ಎಂಜಿ ರಾಮಚಂದ್ರನ್ ಸ್ಥಾಪಿಸಿದ ಎಐಎಡಿಎಂಕೆ ಆಡಳಿತ ಚುಕ್ಕಾಣಿ ಹಿಡಿಯಿತು. ಅಷ್ಟರಲ್ಲಾಗಲೇ ಕಾಂಗ್ರೆಸ್ ಪಕ್ಷದ ಪ್ರಾಬಲ್ಯ ಕಡಿಮೆಯಾಗುತ್ತ ಬಂದಿತ್ತು. 2021ರ ತನಕ ಡಿಎಂಕೆ, ಎಐಎಡಿಎಂಕೆ ಪರ್ಯಾಯ ಪಕ್ಷಗಳಾಗಿ ಕಂಡುಬಂದವು. 2021ರಲ್ಲಿ ಡಿಎಂಕೆ ಪ್ರಭಾವ ಹೆಚ್ಚಿದ್ದು, ಎಐಎಡಿಎಂಕೆ ಎರಡನೆ ಪಕ್ಷವಾದರೆ, ಕಾಂಗ್ರೆಸ್, ಬಿಜೆಪಿ ಮತ್ತು ಇತರೆ ಪಕ್ಷಗಳೂ ತಮ್ಮ ಅಸ್ತಿತ್ವವನ್ನು ತೋರಿಸಿದವು.
ಕಳೆದ (2019) ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನ 39 ಕ್ಷೇತ್ರಗಳ ಪೈಕಿ ಎಸ್‌ಪಿಎ ಮೈತ್ರಿ 38 ಸ್ಥಾನಗಳನ್ನು ಗೆದ್ದುಕೊಂಡಿತು. ಈ ಪೈಕಿ ಡಿಎಂಕೆಗೆ 24, ಕಾಂಗ್ರೆಸ್ 8, ಸಿಪಿಐ 2, ಸಿಪಿಐ(ಎಂ) 2, ವಿಸಿಕೆ 1, ಐಯುಎಂಎಲ್ 1 ಸ್ಥಾನಗಳಲ್ಲಿ ಗೆಲುವು ಕಂಡಿದ್ದವು. ಎನ್‌ಡಿಎಗೆ 1 ಸ್ಥಾನ ಸಿಕ್ಕಿದ್ದು, ಇದು ಎಐಎಡಿಎಂಕೆಯ ಗೆಲುವು. ಇನ್ನು 2014 ಲೋಕಸಭಾ ಚುನಾವಣೆ ಗಮನಿಸಿದರೆ, 37 ಸ್ಥಾನಗಳು ಎಐಎಡಿಎಂಕೆಗೆ ಮತ್ತು ಬಿಜೆಪಿ, ಪಿಎಂಕೆ ಪಕ್ಷಗಳು ತಲಾ ಒಂದು ಸ್ಥಾನ ಗೆದ್ದುಕೊಂಡಿದ್ದವು.
👉🏻 ಲೋಕಸಭಾ ಚುನಾವಣೆ ಫಲಿತಾಂಶ: ಸ್ಪಷ್ಟ & ನಿಖರ ಮಾಹಿತಿಗೆ
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.