Telangana Exit Polls: 'ಸೂಪರ್ ತಿರುವು' ತೆಲಂಗಾಣ ಮತಗಟ್ಟೆ ಸಮೀಕ್ಷೆ ಬಗ್ಗೆ ಶಶಿ ತರೂರ್‌ರಿಂದ ರೇವಂತ್ ರೆಡ್ಡಿವರೆಗೆ;ನಾಯಕರು ಏನು ಹೇಳಿದ್ರು
Dec 01, 2023 11:35 AM IST
ಕಾಂಗ್ರೆಸ್ ನಾಯಕ ಶಶಿ ತರೂರ್, ತೆಲಂಗಾಣ ಕೈ ನಾಯಕ ರೇವಂತ್ ರೆಡ್ಡಿ
ತೆಲಂಗಾಣದಲ್ಲಿ 80 ಸ್ಥಾನ ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಪಕ್ಷ ಘೋಷಿಸಿರುವ 6 ಗ್ಯಾರಂಟಿಗಳನ್ನು ಮೊದಲ ಸಚಿವ ಸಂಪುಟದಲ್ಲೇ ಜಾರಿ ಮಾಡ್ತೇವೆ ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ.
ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆ ಮತಗಟ್ಟೆ ಸಮೀಕ್ಷೆಗಳು (Telangana Assembly Election Exit Polls 2023) ನಿನ್ನೆಯಷ್ಟೇ (ನವೆಂಬರ್ 30, ಗುರುವಾರ) ಬಹಿರಂಗವಾಗಿದ್ದು, ಕಾಂಗ್ರೆಸ್ ಭಾರಿ ಮುನ್ನಡೆ ಸಾಧಿಸಲಿದೆ ಎಂದು ಮತಗಟ್ಟೆ ಸಮಿಕ್ಷೆಗಳು ಭವಿಷ್ಯ ನುಡಿದಿವೆ.
ಸತತ ಎರಡು ಬಾರಿ ಗೆದ್ದು ತೆಲಂಗಾಣದಲ್ಲಿ ಆಡಳಿತ ನಡೆಸುತ್ತಿರುವ ಕೆ ಚಂದ್ರಶೇಖರ್ ವಾರ್ ಅವರ ಬಿಆರ್‌ಎಸ್ ಪಕ್ಷ ಹ್ಯಾಟ್ರಿಕ್ ಗೆಲುವಿನ ಹುಮ್ಮಸ್ಸಿನಲ್ಲಿದೆ. ಆದರೆ ಎಕ್ಸಿಟ್ ಪೋನ್‌ಗಳ ಅಂಕಿ ಅಂಶಗಳು ಕೆಸಿಆರ್ ಅವರನ್ನು ಆತಂಕಕ್ಕೆ ದೂಡಿರುವುದು ಯಾವುದೇ ಅನುಮಾನವಿಲ್ಲ.
ಸೌತ್ ಫಸ್ಟ್ ಮತಗಟ್ಟೆ ಸಮೀಕ್ಷೆ ತೆಲಂಗಾಣದಲ್ಲಿ ಕಾಂಗ್ರೆಸ್ 62-72 ಸ್ಥಾನಗಳನ್ನು ಗೆಲ್ಲುತ್ತದೆ. ಬಿಆರ್‌ಎಸ್ 35-56 ಸ್ಥಾನಗಳೊಂದಿಗೆ ಎರಡನೇ ಸ್ಥಾನವನ್ನು ಪಡೆಯಲಿದೆ, ಎಐಎಂಐಎಂ 6 ರಿಂದ 7 ಹಾಗೂ ಬಿಜೆಪಿ 3 ರಿಂದ 8 ಸ್ಥಾನಗಳನ್ನ ಗಳಿಸಲಿದೆ ಎಂದು ಭವಿಷ್ಯ ನುಡಿದಿದೆ.
ಇದೇ ಸಮೀಕ್ಷೆಯನ್ನು ಇಟ್ಟುಕೊಂಡು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಶಶಿ ತರೂರ್, ಇದೊಂದು ಅದ್ಭುತ ತಿರುವು ಎಂದು ಬಣ್ಣಿಸಿದ್ದಾರೆ.
ತೆಲಂಗಾಣ ಕಾಂಗ್ರೆಸ್ ಘಟದ ಅಧ್ಯಕ್ಷ ರೇವಂತ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ನನ್ನ ಪ್ರಕಾರ 119 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 80ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸ್ಪಷ್ಟ ಬಹುಮತದೊಂದಿಗೆ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದು ಕಾಂಗ್ರೆಸ್ ಮತ್ತು ಬಿಆರ್‌ಎಸ್ ನಡುವಿನ ಚುನಾವಣೆಯಾಗಿರಲಿಲ್ಲ. ಕೆಸಿಆರ್ ಕುಟುಂಬ ಮತ್ತು ತೆಲಂಗಾಣ ಜನರ ನಡುವಿನ ಚುನಾವಣೆಯಾಗಿತ್ತು. ಯಾವಾಗಲೂ ಸಾರ್ವಜನಿಕರೇ ಗೆಲ್ಲುತ್ತಾರೆ ಎಂದಿರುವ ರೆಡ್ಡಿಗಾರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟ ಸಭೆಯಲ್ಲೇ ನಮ್ಮ ಆರು ಗ್ಯಾರಂಟಿಗಳನ್ನು ತಕ್ಷಣವೇ ಜಾರಿಗೆ ತರುತ್ತೇವೆ ಎಂದು ಹೇಳಿದ್ದಾರೆ.
ತೆಲಂಗಾಣ ಮತಗಟ್ಟೆ ಸಮೀಕ್ಷೆ ಅಂಕಿ ಅಂಶಗಳು
ವಿವಿಧ ಮಾಧ್ಯಮ ಹಾಗೂ ಇತರೆ ಸಂಸ್ಥೆಗಳು ತೆಲಂಗಾಣದಲ್ಲಿ ನಡೆಸಿರುವ ಚುನಾವಣೋತ್ತರ ಮತಗಟ್ಟೆ ಸಮೀಕ್ಷೆಯ ಪ್ರಕಾರ, ಕಾಂಗ್ರೆಸ್ ಮುನ್ನಡೆ ಸಾಧಿಸಲಿದೆ. ಕಾಂಗ್ರೆಸ್ ಮತ್ತು ಭಾರತ ರಾಷ್ಟ್ರ ಸಮಿತಿ-ಬಿಆರ್‌ಎಸ್ ನಡುವೆ ನೇರಾನೇರ ಪೈಪೋಟಿ ಏರ್ಪಟ್ಟಿದೆ ಎಂದು ಸಮೀಕ್ಷೆಯ ವರದಿಗಳು ಬಹಿರಂಗಪಡಿಸಿವೆ.
ಟಿವಿ9 ಸಮೀಕ್ಷೆಯ ಪ್ರಕಾರ, ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ 49 ರಿಂದ 59 ಸ್ಥಾನಗಳು, ಬಿಆರ್‌ಎಸ್‌ಗೆ 48 ರಿಂದ 58, ಇತರೆ 6 ರಿಂದ 8 ಸ್ಥಾನಗಳು ಸಿಗಲಿವೆ, ಜನ್ ಕೀ ಬಾತ್ ವರದಿಯ ಪ್ರಕಾರ ಬಿಆರ್‌ಎಸ್ 40 ರಿಂದ 55, ಕಾಂಗ್ರೆಸ್ 48 ರಿಂದ 64, ಬಿಜೆಪಿ 7 ರಿಂದ 13, ಐಎಎಂಐಎಂ 4 ರಿಂದ 7 ಸ್ಥಾನ, ಚಾಣಕ್ಯ ಸಮೀಕ್ಷೆಯ ಪ್ರಕಾರ ಬಿಆರ್‌ಎಸ್ 22-31, ಕಾಂಗ್ರೆಸ್ 67 ರಿಂದ 78, ಇತರರು 6 ರಿಂದ 7 ಸ್ಥಾನಗಳನ್ನು ಗಳಿಸಲಿದ್ದಾರೆ.