Gas Cylinder Explosion: ಡೆಹ್ರಾಡೂನ್ ನಲ್ಲಿ ಘೋರ ದುರಂತ; ಗ್ಯಾಸ್ ಸಿಲಿಂಡರ್ ಸ್ಫೋಟಕ್ಕೆ ನಾಲ್ವರು ಬಾಲಕಿಯರು ಸಜೀವ ದಹನ!
Apr 07, 2023 02:47 PM IST
ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಹೊತ್ತಿ ಉರಿದ ಕಟ್ಟಡ (ಫೋಟೋ-ANI)
ಗ್ಯಾಸ್ ಸಿಲಿಂಡರ್ ಬದಲಾಯಿಸುವಾಗ ಮಹಿಳೆಯೊಬ್ಬರು ಮಾಡಿದ ಸಣ್ಣ ತಪ್ಪಿಗೆ ನಾಲ್ವರು ಬಾಲಕಿಯರ ಜೀವ ಕಳೆದುಕೊಂಡಿದ್ದಾರೆ. ಉತ್ತರಾಖಂಡ್‌ನ ಡೆಹ್ರಾಡೂನ್‌ನಲ್ಲಿ ಈ ದುರಂತ ಸಂಭವಿಸಿದೆ.
ಡೆಹ್ರಾಡೂನ್(ಉತ್ತರಾಖಂಡ್): ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ನಾಲ್ವರು ಬಾಲಕಿಯರು ಸಜೀವ ದಹನವಾಗಿರುವ ಘೋರ ದುರಂತ ಉತ್ತರಾಖಂಡ್ ನಲ್ಲಿ ಸಂಭವಿಸಿದೆ.
ಮೃತ ಬಾಲಕಿಯರು ಎರಡೂವರೆಯಿಂದ 12 ವರ್ಷದೊಳಗಿನವರು ಎನ್ನಲಾಗಿದ್ದು, ಓರ್ವ ಬಾಲಕಿ ಗಾಯಗೊಂಡಿದ್ದಾಳೆ. ಗಾಯಾಳುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಂದರ ಹಿಂದೆ ಒಂದರಂತೆ ನಾಲ್ಕು ಸಿಲಿಂಡರ್‌ಗಳು ಸ್ಫೋಟಗೊಂಡಿದ್ದರಿಂದ ಇಡೀ ಪ್ರದೇಶವನ್ನ ಬೆಂಕಿಯ ಕೆನ್ನಾಲಿಗೆ ಆವರಿಸಿದೆ.
ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಸುಮಾರು 5 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆಯಲ್ಲಿ ಕೆಲವು ಮನೆಗಳು ಸಂಪೂರ್ಣ ಸುಟ್ಟು ಕರಕಲಾಗಿವೆ ಎಂದು ತಿಳಿದು ಬಂದಿದೆ. ಡೆಹ್ರಾಡೂನ್‌ನ ವಿಕಾಸನಗರದಲ್ಲಿ ನಿನ್ನೆ ಸಂಜೆ ಅಗ್ನಿ ದುರಂತ ಸಂಭವಿಸಿದೆ.
ಗುಂಜನ್ (10), ರಿದ್ಧಿ (10), ಮಿಶ್ತಿ (6) ಹಾಗೂ ಸೇಜಲ್ (3) ಮೃತ ದುರ್ದೈವಿಗಳು. ಕುಸುಮಾ ಎಂಬ ಬಾಲಕಿ ಗಂಭೀರ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಜಿಲ್ಲಾಧಿಕಾರಿ ಸೇರಿದಂತೆ ಸ್ಥಳೀಯಕ್ಕೆ ಆಗಮಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಏನಿದು ಘಟನೆ?
ತುನಿ ನದಿ ಸೇತುವೆ ಬಳಿ ಮರದಿಂದ ನಿರ್ಮಿಸಿರುವ ಕಟ್ಟಡದಲ್ಲಿ ಶಿಕ್ಷಣ ಇಲಾಖೆಯ ನಿವೃತ್ತ ಉದ್ಯೋಗಿ ಸೂರತ್ ರಾಮ್ ಜೋಶಿ ಎಂಬುವರ ಕುಟುಂಬ ವಾಸವಾಗಿತ್ತು. ಇದರ ದೊತೆ ಐದು ಕುಟುಂಬಗಳು ಮನೆ ಬಾಡಿಗೆಗೆ ಪಡೆದು ಇಲ್ಲಿ ನೆಲೆಸಿವೆ.
ವಿಕ್ಕಿ ಎಂಬ ಬಾಡಿಗೆದಾರರ ಪತ್ನಿ ಕುಸುಮ್ ಅವರು ಗುರುವಾರ ಅಡುಗೆ ಕೋಣೆಯಲ್ಲಿ ಎಲ್‌ಪಿಸಿ ಸಿಲಿಂಡರ್ ಬದಲಾಯಿಸುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ನಂದಿಸಲು ಯತ್ನಿಸಿದಾಗ ಬೆಂಕಿ ಮನೆಗೆ ಆವರಿಸಿದೆ.
ಕುಸುಮಾ ಸೇರಿ ನಾಲ್ವರು ಬಾಲಕಿಯರು ಹೊರ ಬರಲಾಗದೆ ಬೆಂಕಿಯಲ್ಲಿ ಸಿಲುಕಿಕೊಂಡಿದ್ದಾರೆ. ಒಬ್ಬ ವ್ಯಕ್ತಿ ಮತ್ತು ಒಬ್ಬ ಹುಡುಗ ಬೆಂಕಿಯಿಂದ ತಪ್ಪಿಸಿಕೊಂಡು ಹೊರಬಂದಿದ್ದಾರೆ.
ಮನೆಯಲ್ಲಿದ್ದ ನಾಲ್ಕು ಸಿಲಿಂಡರ್‌ಗಳು ಒಂದರ ಹಿಂದೆ ಒಂದರಂತೆ ಸ್ಫೋಟಗೊಂಡಿದ್ದು, ನೋಡ ನೋಡುತ್ತಿದ್ದಂತೆ ಭಾರಿ ಬೆಂಕಿ ಆವರಿಸಿದೆ. ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ವಾಹನವು ಘಟನಾ ಸ್ಥಳಕ್ಕೆ ಬಂದಿದೆ.
ಇಪ್ಪತ್ತು ನಿಮಿಷದಲ್ಲಿ ಘಟನಾ ಸ್ಥಳ ತಲುಪಿದ ಕೂಡಲೇ ಬೆಂಕಿ ನಂದಿಸಲು ಯತ್ನಿಸಿದೆ. ದುರಂತ ಅಂದರೆ ವಾಹನದಲ್ಲಿ ನೀರು ಇಲ್ಲದ ಕಾರಣ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗಲಿಲ್ಲ.
ಅಗ್ನಿಶಾಮಕ ದಳ ನೀರು ತುಂಬಿಕೊಂಡು ಹಿಂತಿರುಗುವಷ್ಟರಲ್ಲಿ ಇಡೀ ಮನೆ ಹೊತ್ತಿ ಉರಿದಿತ್ತು. ಉತ್ತರಕಾಶಿಯ ಡಿಎಂ ಮೋರಿ ಮತ್ತು ಹಿಮಾಚಲ ಪ್ರದೇಶದ ಜುಬಲ್‌ನಿಂದಲೂ ಅಗ್ನಿಶಾಮಕ ವಾಹನಗಳನ್ನೂ ಕರೆಸಲಾಗಿದೆ. ಆದರೆ ಆ ವೇಳೆಗಾಗಲೇ ನಾಲ್ವರು ಬಾಲಕಿಯರು ಬೆಂಕಿಯ ಕೆನ್ನಾಲಿಗೆಯಲ್ಲಿ ಸುಟ್ಟು ಕರಕಲಾಗಿದ್ದಾರೆ.
ಮುಖ್ಯ ಅಗ್ನಿಶಾಮಕ ಅಧಿಕಾರಿ, ಡೆಹ್ರಾಡೂನ್ ರಾಜೇಂದ್ರ ಖತಿ ಅವರು ಸಂಜೆ 4:25 ಕ್ಕೆ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ವಾಹನವು ತಕ್ಷಣವೇ ಸ್ಥಳಕ್ಕೆ ತಲುಪಿತ್ತು. ವಾಹನದ ಸಾಮರ್ಥ್ಯ 2,200 ಲೀಟರ್ ಆಗಿರುವುದರಿಂದ ನೀರು ಕಡಿಮೆ ಇತ್ತು. ಬೆಂಕಿ ನಂದಿಸಲು ಬೇರೆ ಕಡೆಯಿಂದಲೂ ಅಗ್ನಿಶಾಮಕ ವಾಹನವನ್ನ ತರಿಸಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.
ಸಿಲಿಂಡರ್ ನಿಂದ ಮತ್ತೊಂದು ಸಿಲಿಂಡರ್ ಗೆ ಗ್ಯಾಸ್ ಬದಲಾಯಿಸಲು ಮುಂದಾಗುವ ಮೂಲಕ ಮಹಿಳೆಯೊಬ್ಬಳು ಮಾಡಿದ ತಪ್ಪಿನಿಂದ ನಾಲ್ವರು ಬಾಲಕಿಯರ ಪ್ರಾಣ ಪಕ್ಷಿ ಹಾರಿ ಹೋಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ವಿಭಾಗ