The Kerala Story: ಕಟಕಟೆಯಲ್ಲಿ ದಿ ಕೇರಳ ಸ್ಟೋರಿ, ಟೀಸರ್ ತೆಗೆಯಲು ಸಮ್ಮತಿ, ಸಿನಿಮಾ ಬಿಡುಗಡೆಗೆ ತಡೆ ಇಲ್ಲ
May 05, 2023 01:48 PM IST
The official poster of The Kerala Story which will be released on May 5.
ದಿ ಕೇರಳ ಸ್ಟೋರಿ (The Kerala Story) ಬಿಡುಗಡೆಗೆ ತಡೆ ನೀಡಲು ಕೇರಳ ಹೈಕೋರ್ಟ್ ನಿರಾಕರಿಸಿದೆ. 32,000 ಕ್ಕೂ ಹೆಚ್ಚು ಮಹಿಳೆಯರನ್ನು ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್‌ಗೆ ಸೇರಿಸಿಕೊಳ್ಳಲಾಗಿದೆ ಎಂಬ ಹೇಳಿಕೆಯಿರುವ ಟೀಸರ್ ಅನ್ನು ಸೋಷಿಯಲ್ ಮೀಡಿಯಾದಿಂದ ತೆಗೆದುಹಾಕಲು ನಿರ್ಮಾಪಕರು ಕೋರ್ಟ್‌ಗೆ ತಿಳಿಸಿದ್ದಾರೆ.
ಎರ್ನಾಕುಲಂ: ದೇಶಾದ್ಯಂತ ಇಂದು ಬಿಡುಗಡೆಯಾಗುತ್ತಿರುವ ದಿ ಕೇರಳ ಸ್ಟೋರಿ (The Kerala Story) ಸಿನಿಮಾದ ಕುರಿತಾದ ವಿಚಾರಣೆಯು ಕೇರಳ ಹೈಕೋರ್ಟ್‌ನಲ್ಲಿ ನಡೆದಿದೆ. ದಕ್ಷಿಣ ರಾಜ್ಯದಿಂದ 32,000 ಕ್ಕೂ ಹೆಚ್ಚು ಮಹಿಳೆಯರನ್ನು ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್‌ಗೆ ಸೇರಿಸಿಕೊಳ್ಳಲಾಗಿದೆ ಎಂದು ಹೇಳುವ ಟೀಸರ್ ಅನ್ನು ಅವರ ಸೋಷಿಯಲ್ ಮೀಡಿಯಾಗಳಿಂದ ಖಾತೆಗಳಿಂದ ತೆಗೆದುಹಾಕಲಾಗುವುದು ಎಂದು ವಿವಾದಾತ್ಮಕ ಚಿತ್ರ ‘ದಿ ಕೇರಳ ಸ್ಟೋರಿ’ ನಿರ್ಮಾಪಕ ಕೇರಳ ಹೈಕೋರ್ಟ್‌ಗೆ ತಿಳಿಸಿದ್ದಾರೆ.
ನ್ಯಾಯಮೂರ್ತಿ ಎನ್ ನಾಗರೇಶ್ ಮತ್ತು ನ್ಯಾಯಮೂರ್ತಿ ಸೋಫಿ ಥಾಮಸ್ ಅವರ ವಿಭಾಗೀಯ ಪೀಠವು ನಿರ್ಮಾಪಕರ ಹೇಳಿಕೆಯನ್ನು ದಾಖಲಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ. ಆದರೆ, ಚಿತ್ರ ಬಿಡುಗಡೆಗೆ ತಡೆ ನೀಡಲು ಕೋರ್ಟ್ ನಿರಾಕರಿಸಿದೆ.
ಚಲನಚಿತ್ರವು "ನಿಜವಾದ ಘಟನೆಗಳಿಂದ ಪ್ರೇರಿತವಾಗಿದೆ" ಎಂದು ಮಾತ್ರ ಹೇಳುತ್ತದೆ ಎಂದು ಗಮನಿಸಿದ ನ್ಯಾಯಾಲಯವು ಚಿತ್ರದ ಬಿಡುಗಡೆಗೆ ತಡೆ ನೀಡಲು ನಿರಾಕರಿಸಿದೆ. ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್‌ಸಿ) ಚಲನಚಿತ್ರವನ್ನು ಸಾರ್ವಜನಿಕ ವೀಕ್ಷಣೆಗಾಗಿ ಪ್ರಮಾಣೀಕರಿಸಿದೆ ಎಂದು ನ್ಯಾಯ ಪೀಠ ಹೇಳಿದೆ.
ನ್ಯಾಯಪೀಠವು ದಿ ಕೇರಳ ಸ್ಟೋರಿ ಚಿತ್ರವನ್ನು ನೋಡುವ ಮೊದಲು ಟ್ರೇಲರ್ ಆಧಾರದಲ್ಲಿ ಅದರ ಪ್ರದರ್ಶನವನ್ನು ತಡೆಯಲು ನಿರಾಕರಿಸಿದೆ. ಟ್ರೇಲರ್‌ನಲ್ಲಿ ನಿರ್ದಿಷ್ಟ ಸಮುದಾಯದ ಮೇಲೆ ಆಕ್ರಮಣಕಾರಿ ವಿಚಾರವೇನು ಇಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಯಾವುದೇ ಅರ್ಜಿದಾರರು ಚಲನಚಿತ್ರವನ್ನು ವೀಕ್ಷಿಸಿಲ್ಲ ಮತ್ತು ನಿರ್ಮಾಪಕರು ಚಲನಚಿತ್ರವು ಕಾಲ್ಪನಿಕ ಆವೃತ್ತಿ ಎಂದು ಹಕ್ಕು ನಿರಾಕರಣೆ ಸೇರಿಸಿದ್ದಾರೆ ಎಂದು ಪೀಠವು ಗಮನಿಸಿದೆ.
"ಇದನ್ನು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಕರೆಯುತ್ತಾರೆ. ಅವರಿಗೆ ಕಲಾತ್ಮಕ ಸ್ವಾತಂತ್ರ್ಯವಿದೆ. ಇದು ಸಮತೋಲದಲ್ಲಿರುವಂತೆ ನೋಡಿಕೊಳ್ಳುವುದು ನಮ್ಮ ಕೆಲಸ" ಎಂದು ನ್ಯಾಯಮೂರ್ತಿ ನಾಗರೇಶ್ ಅವರ ಹೇಳಿಕೆಯನ್ನು ಲೈವ್ ಲಾ ಉಲ್ಲೇಖಿಸಿದೆ.
“ಚಿತ್ರದಲ್ಲಿ ಇಸ್ಲಾಂ ಧರ್ಮಕ್ಕೆ ವಿರುದ್ಧವಾದದ್ದೇನಿದೆ? ಧರ್ಮದ ವಿರುದ್ಧ ಯಾವುದೇ ಆರೋಪವಿಲ್ಲ. ಇದರಲ್ಲಿ ಇರುವುದು ಐಸಿಸ್ ಸಂಘಟನೆಯ ವಿರುದ್ಧ ಮಾತ್ರ. ಹೀಗಾಗಿ, ಇದರಲ್ಲಿ ಧಾರ್ಮಿಕ ವಿಚಾರಗಳು ಇಲ್ಲ" ಎಂದು ನ್ಯಾಯಮೂರ್ತಿ ನಾಗರೇಶ್ ಅಭಿಪ್ರಾಯಪಟ್ಟಿದ್ದಾರೆ.
ದಿ ಕೇರಳ ಸ್ಟೋರಿಯು 2016 ರಲ್ಲಿ ಉತ್ತರ ಕೇರಳದ 21 ಜನರು ನಾಪತ್ತೆಯಾಗಿರುವ ಘಟನೆಗೆ ಥಳಕು ಹಾಕಿಕೊಂಡಿದೆ ಎನ್ನಲಾಗಿದೆ. ನಾಪತ್ತೆಯಾಗಿರುವವರು ಸಿರಿಯಾ ಮತ್ತು ಅಫ್ಘಾನಿಸ್ತಾನದ ಇಸ್ಲಾಮಿಕ್ ಸ್ಟೇಟ್ ಹಿಡಿತದ ಪ್ರದೇಶಗಳಿಗೆ ಹೋಗಿ ಅಲ್ಲಿ ಉಗ್ರ ಸಂಘಟನೆಗಳಿಗೆ ಸೇರಿರುವ ಕುರಿತು ಸಿನಿಮಾದಲ್ಲಿ ಹೇಳಲಾಗಿದೆ ಎನ್ನಲಾಗುತ್ತಿದೆ.
“ದಿ ಕೇರಳ ಸ್ಟೋರಿ ಚಿತ್ರವು ಸುಳ್ಳಿನ ಕಂತೆಯಾಗಿದೆ. ಸಂಪೂರ್ಣವಾಗಿ ಕಪೋಲಕಲ್ಪಿತವಾಗಿದೆ. 32,000 ಮಹಿಳೆಯರನ್ನು ಮತಾಂತರಗೊಳಿಸಿ ಇಸ್ಲಾಮಿಕ್ ಸ್ಟೇಟ್ ಹಿಡಿತದಲ್ಲಿರುವ ಪ್ರದೇಶಗಳಿಗೆ ಕಳುಹಿಸಲಾಗಿದೆ ಎಂದು ಈ ಸಿನಿಮಾ ಹೇಳುತ್ತದೆ. ಇದರ ಕುರಿತು ಟ್ರೇಲರ್‌ನಲ್ಲಿ ಸಾಕಷ್ಟು ಸುಳಿವು ನೀಡಲಾಗಿದೆ. ಇದು ರಾಜ್ಯ ಮತ್ತು ಮುಸ್ಲಿಂ ಸಮುದಾಯದ ಮಾನಹಾನಿ ಮಾಡುವ ಉದ್ದೇಶ ಹೊಂದಿದೆ. ಇದರ ಹಿಂದೆ ಸಂಘಪರಿವಾರದ ಕೈವಾಡವಿದೆ" ಎಂದು ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್ ಹೇಳಿದ್ದರು.