Mallikarjun Kharge: 'ಎಲ್ಲೂ ಕೋವಿಡ್ ಇಲ್ಲ, ಯಾರಿಗೇನು ಆಗೇ ಇಲ್ಲ' ಎಂದ ಮಲ್ಲಿಕಾರ್ಜುನ ಖರ್ಗೆ
Dec 24, 2022 09:50 PM IST
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
- ಕೋವಿಡ್ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾದ-ವಿವಾದಗಳು ಭುಗಿಲೆದ್ದಿವೆ. ಈ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೋವಿಡ್ ಹೆಸರಿನಲ್ಲಿ ಭಾರತ್ ಜೋಡೋ ಯಾತ್ರೆ ನಿಲ್ಲಿಸಲು ಬಿಜೆಪಿ ಪ್ಲಾನ್ ಮಾಡಿದೆ ಎಂದು ಹೇಳಿದ್ದರು. ಇದೀಗ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಲ್ಲೂ ಕೋವಿಡ್ ಇಲ್ಲ, ಯಾರಿಗೇನು ಆಗೇಇಲ್ಲ ಎಂದು ಹೇಳಿಕೆ ನೀಡಿದ್ದಾರೆ.
ನವದೆಹಲಿ: ಕೋವಿಡ್ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾದ-ವಿವಾದಗಳು ಭುಗಿಲೆದ್ದಿವೆ. ಈ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೋವಿಡ್ ಹೆಸರಿನಲ್ಲಿ ಭಾರತ್ ಜೋಡೋ ಯಾತ್ರೆ ನಿಲ್ಲಿಸಲು ಬಿಜೆಪಿ ಪ್ಲಾನ್ ಮಾಡಿದೆ ಎಂದು ಹೇಳಿದ್ದರು. ಇದೀಗ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಲ್ಲೂ ಕೋವಿಡ್ ಇಲ್ಲ, ಯಾರಿಗೇನು ಆಗೇಇಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ಇಂದು ದೆಹಲಿ ಪ್ರವೇಶಿಸಿದ್ದು, ಕೆಂಪುಕೋಟೆಯಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, "ಭಾರತ್ ಜೋಡೋ ಯಾತ್ರೆಯಿಂದಾಗಿ ಬಿಜೆಪಿ ಭಯದಲ್ಲಿದೆ ಮತ್ತು ಕೋವಿಡ್ ಅನ್ನು ನೆಪವಾಗಿ ತೆಗೆದುಕೊಳ್ಳುತ್ತಿದೆ. ಎಲ್ಲಿಯೂ ಕೋವಿಡ್ ಇಲ್ಲ. ಯಾರಿಗೂ ಏನೂ ಆಗಿಲ್ಲ. ಪ್ರಧಾನಿ ಮೋದಿ ಅವರೇ ಮಾಸ್ಕ್ ಧರಿಸುವುದಿಲ್ಲ. ಜನರಲ್ಲಿ ಭಯ ಮೂಡಿಸಲು ಮತ್ತು ಈ ಯಾತ್ರೆಗೆ ಬ್ರೇಕ್ ಹಾಕಲು ಇದೆಲ್ಲ ಮಾಡಲಾಗುತ್ತಿದೆ" ಎಂದರು.
ಚೀನಾ, ಯುನೈಟೆಡ್ ಸ್ಟೇಟ್ಸ್, ಜಪಾನ್ ಮತ್ತು ಬ್ರೆಜಿಲ್ನಲ್ಲಿ ಕೊರೊನಾ ರೂಪಾಂತರ ಒಮಿಕ್ರಾನ್ನ ಬಿಎಫ್ 7 (BF.7) ಉಪತಳಿ ವ್ಯಾಪಕವಾಗಿ ಹರಡುತ್ತಿದ್ದು, ಭಾರತದಲ್ಲಿಯೂ ನಾಲ್ಕು ಪ್ರಕರಣಗಳು ಪತ್ತೆಯಾಗಿವೆ. ಗುಜರಾತ್ನಲ್ಲಿ ಎರಡು ಹಾಗೂ ಒಡಿಶಾದಲ್ಲಿ 2 ಕೇಸ್ಗಳು ವರದಿಯಾಗಿವೆ. ಚೀನಾದಲ್ಲಿ ದಿನಕ್ಕೆ ಮಿಲಿಯನ್ಗಟ್ಟಲೆ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದು, ಪ್ರತಿನಿತ್ಯ 5 ಸಾವಿರ ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
ಮೊನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದಿದೆ. ಕೋವಿಡ್ ಇನ್ನೂ ಮುಗಿದಿಲ್ಲ ಎಂದಿರುವ ಪಿಎಂ ಮೋದಿ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ತೆಗೆದುಕೊಳ್ಳಲಾಗುತ್ತಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ಬಲಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಕಿಕ್ಕಿರಿದ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಲು, ದುರ್ಬಲ ಮತ್ತು ವಯಸ್ಸಾದ ಜನರು 'ಮುನ್ನೆಚ್ಚರಿಕೆ ಡೋಸ್'ಗಳನ್ನು ಪಡೆಯಲು ಮನವಿ ಮಾಡಿದ್ದಾರೆ. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಲಿಂಡರ್ಗಳು, ವೆಂಟಿಲೇಟರ್, ಉಪಕರಣಗಳು, ಮಾನವ ಸಂಪನ್ಮೂಲ, ಬೆಡ್ಗಳು, ಔಷಧಿಗಳು ಸೇರಿದಂತೆ ಕೋವಿಡ್ ಪರಿಸ್ಥಿತಿ ಎದುರಿಸಲು ಬೇಕಾದ ಎಲ್ಲಾ ಅಗತ್ಯ ಮೂಲಸೌಕರ್ಯಗಳನ್ನು ಖಚಿತಪಡಿಸಿಕೊಳ್ಳಲು ಸೂಚಿಸಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಭಾರತ್ ಜೋಡೋ ಯಾತ್ರೆ ಸಮಯದಲ್ಲಿ ಕೋವಿಡ್ -19 ಪ್ರೋಟೋಕಾಲ್‌ಗಳನ್ನು ಅನುಸರಿಸಲು ಕೋರಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಗೆ ಪತ್ರ ಬರೆದಿದ್ದರು. ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಲು ಸಾಧ್ಯವಾಗದಿದ್ದರೆ ಯಾತ್ರೆಯನ್ನು ದೇಶದ ಹೆಚ್ಚಿನ ಹಿತದೃಷ್ಟಿಯಿಂದ ರದ್ದುಗೊಳಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ರಾಹುಲ್ ಗಾಂಧಿ, "ನಮ್ಮ ಭಾರತ್ ಜೋಡೋ ಯಾತ್ರೆ ಕಾಶ್ಮೀರದ ವರೆಗೆ ಹೋಗೇಹೋಗುತ್ತದೆ. ಯಾತ್ರೆ ನಿಲ್ಲಿಸಲು ಬಿಜೆಪಿ ಹೊಸ ಪ್ಲಾನ್ ಮಾಡಿದೆ. ಕೋವಿಡ್ ಬರುತ್ತಿದೆ ಯಾತ್ರೆ ನಿಲ್ಲಿಸಿ ಎಂದು ನನಗೆ ಪತ್ರ ಬರೆದಿದ್ದಾರೆ. ಇವೆಲ್ಲವೂ ಈ ಯಾತ್ರೆಯನ್ನು ನಿಲ್ಲಿಸಲು ಅವರ ಐಡಿಯಾ ಆಗಿದೆ. ಅವರು ಭಾರತದ ಸತ್ಯದ ಬಗ್ಗೆ ಹೆದರುತ್ತಾರೆ" ಎಂದು ಹೇಳಿದ್ದಾರೆ.
ರಾಹುಲ್ ಹೇಳಿಕೆಗೆ ತಿರುಗೇಟು ನೀಡಿದ್ದ ಮನ್ಸುಖ್ ಮಾಂಡವಿಯಾ, “ಇದು ರಾಜಕೀಯವಲ್ಲ. ನಾನು ಆರೋಗ್ಯ ಸಚಿವ ಮತ್ತು ಇದನ್ನು ನೋಡಿಕೊಳ್ಳುವುದು ನನ್ನ ಕರ್ತವ್ಯ. ಕೋವಿಡ್ -19 ನಿಯಮಗಳನ್ನು ಅನುಸರಿಸುವ ಅವಶ್ಯಕತೆಯ ಪ್ರಗತಿಯನ್ನು ನಾನು ಯಾವಾಗಲೂ ಪಾಲಿಸುತ್ತೇನೆ. ಮೂವರು ಸಂಸದರು ಈ ಬಗ್ಗೆ ನನಗೆ ಪತ್ರ ಬರೆದಿದ್ದಾರೆ. ಭಾರತ್ ಜೊಡೊ ಯಾತ್ರೆಯಲ್ಲಿ ಭಾಗವಹಿಸಿದ ನಂತರ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರಿಗೆ ಕೋವಿಡ್ ತಗುಲಿದೆ ”ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್, "ಚೀನಾದಲ್ಲಿ ಉಲ್ಬಣವಾಗಿರುವ ಓಮಿಕ್ರಾನ್ ಉಪತಳಿಯ 4 ಪ್ರಕರಣಗಳು ಜುಲೈ, ಸೆಪ್ಟೆಂಬರ್ ಮತ್ತು ನವೆಂಬರ್ನಲ್ಲಿ ಗುಜರಾತ್ ಮತ್ತು ಒಡಿಶಾದಲ್ಲಿ ವರದಿಯಾಗಿದೆ. ಆರೋಗ್ಯ ಸಚಿವರು ನಿನ್ನೆ ರಾಹುಲ್ ಗಾಂಧಿಗೆ ಪತ್ರ ಬರೆಯುತ್ತಾರೆ. ಪ್ರಧಾನಿ ಇಂದು ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ. ಭಾರತ್ ಜೋಡೋ ಯಾತ್ರೆ ದೆಹಲಿಗೆ ಪ್ರವೇಶಿಸಲಿದೆ. ಈಗ ನೀವು ಕಾಲಗಣನೆಯನ್ನು ಅರ್ಥ ಮಾಡಿಕೊಳ್ಳಿ" ಎಂದು ವ್ಯಂಗ್ಯವಾಡಿದ್ದಾರೆ.
"ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಚುನಾವಣೆಗಳಲ್ಲಿ ಪ್ರಧಾನ ಮಂತ್ರಿಯ ರ್ಯಾಲಿಗಳಲ್ಲಿ ಕೋವಿಡ್ ಪ್ರೋಟೋಕಾಲ್‌ಗಳನ್ನು ಅನುಸರಿಸಲಾಗಿದೆಯೇ" ಎಂದು ಲೋಕಸಭಾ ಸಂಸದ ಅಧೀರ್ ಚೌಧರಿ ಪ್ರಶ್ನಿಸಿದ್ದಾರೆ. "ನನ್ನ ಪ್ರಕಾರ, ಮನ್ಸುಖ್ ಮಾಂಡವಿಯಾ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯನ್ನು ಇಷ್ಟಪಡುವುದಿಲ್ಲ ಆದರೆ ಜನರು ಅದನ್ನು ಇಷ್ಟಪಡುತ್ತಾರೆ ಮತ್ತು ಸೇರುತ್ತಿದ್ದಾರೆ. ಸಾರ್ವಜನಿಕರ ಗಮನವನ್ನು ಬೇರೆಡೆಗೆ ತಿರುಗಿಸಲು ಮಾಂಡವಿಯಾ ಅವರನ್ನು ನಿಯೋಜಿಸಲಾಗಿದೆ" ಎಂದು ಕಿಡಿಕಾರಿದ್ದಾರೆ.