ಗಗನಕ್ಕೇರಿದ ಟೊಮೆಟೊ ದರ: ದಕ್ಷಿಣದತ್ತ ಕೇಂದ್ರ ಚಿತ್ತ
Jul 07, 2024 01:29 PM IST
ಗಗನಕ್ಕೇರಿದ ಟೊಮೆಟೊ ದರ: ದಕ್ಷಿಣದತ್ತ ಕೇಂದ್ರ ಚಿತ್ತ
- Tomato price: ಉತ್ತರ ಭಾರತದಲ್ಲಿ ಟೊಮೆಟೊ ದರ ದಿನೇ ದಿನೇ ಏರಿಕೆಯಾಗುತ್ತಿದೆ. ದಿನನಿತ್ಯ ಬಳಕೆಯ ತರಕಾರಿಯಾಗಿರುವ ಟೊಮೆಟೊ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಕಂಗಾಲಾಗಿದ್ದಾರೆ. ಬೆಲೆ ಇಳಿಕೆಯತ್ತ ಜನರು ಎದುರು ನೋಡುತ್ತಿದ್ದಾರೆ.
ನವದೆಹಲಿ: ಬಿಸಿಗಾಳಿ, ವಾತಾವರಣದಲ್ಲಿ ಉಷ್ಣತೆ ಪ್ರಮಾಣ ಹೆಚ್ಚಳದ ಜೊತೆಗೆ ಭಾರಿ ಮಳೆಯೂ ಉತ್ತರ ಭಾರತದ ಕೆಲವೆಡೆ ಆಗುತ್ತಿರುವ ಕಾರಣ, ದೆಹಲಿ, ಕಾನ್ಪುರ ಮತ್ತು ಕೋಲ್ಕೊತ್ತಾಗಳಲ್ಲಿ ಟೊಮೆಟೊ ದರ ಕೆ.ಜಿ.ಗೆ 70ರೂಗಳಿಂದ 90 ರೂ. ಗಳವರೆಗೆ ಏರಿಕೆಯಾಗಿದೆ. ಇದು ಈ ವರ್ಷದ ಗರಿಷ್ಠ ಏರಿಕೆ ಎನ್ನಲಾಗಿದ್ದು, ದಿನನಿತ್ಯ ಬಳಕೆಯ ತರಕಾರಿಯಾಗಿರುವ ಟೊಮೆಟೊ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಕಂಗಾಲಾಗಿದ್ದಾರೆ. ಬೆಲೆ ಇಳಿಕೆಯತ್ತ ಎದುರು ನೋಡುತ್ತಿದ್ದಾರೆ.
ಕಳೆದ ತಿಂಗಳು ಮುಂಗಾರು ಪ್ರವೇಶ ನಿಧಾನವಾಗಿದ್ದುದು ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಸಗಟು ಮಾರಾಟದಲ್ಲೂ ವ್ಯತ್ಯಾಸ ಉಂಟಾಗಿತ್ತು. ಇದೀಗ ದಕ್ಷಿಣ ಭಾರತದ ರಾಜ್ಯಗಳಲ್ಲಿರುವ ಟೊಮೆಟೊ ಬೆಳೆಗಾರರತ್ತ ಕೇಂದ್ರ ಮುಖ ಮಾಡಿದೆ. ದಕ್ಷಿಣದ ರಾಜ್ಯಗಳಿಂದ ತಾಜಾ ಬೆಳೆಯು ಶೀಘ್ರ ಮಾರುಕಟ್ಟೆಗೆ ಬರುವ ವಿಶ್ವಾಸವನ್ನು ಕೇಂದ್ರದ ಗ್ರಾಹಕ ವ್ಯವಹಾರಗಳ ಸಚಿವಾಲಯ ವ್ಯಕ್ತಪಡಿಸಿದ್ದು, ಕೆಲವೇ ದಿನಗಳಲ್ಲಿ ಬೆಲೆಗಳು ಇಳಿಮುಖವಾಗುವ ಸಂಭವವಿದೆ. ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಳೆ ಪ್ರಮಾಣ ಹೆಚ್ಚಳವಾಗಿ, ಬೇಡಿಕೆಗೆ ತಕ್ಕ ಪೂರೈಕೆಯೂ ಆಗಬಹುದು ಎಂಬ ನಂಬಿಕೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯಕ್ಕಿದ್ದು, ಈ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ಬೆಳೆಗಾರರತ್ತ ಕೇಂದ್ರ ದೃಷ್ಟಿ ನೆಟ್ಟಿದೆ.
ಆದಾಗ್ಯೂ ದಕ್ಷಿಣ ಭಾರತದಲ್ಲೂ ಟೊಮೆಟೊ ಬೆಲೆ ಕಡಿಮೆಯಂತೂ ಆಗಿಲ್ಲ. ಬೆಂಗಳೂರಿನಲ್ಲಿ ಸುಮಾರು 60ರಷ್ಟಿದ್ದರೆ, ಇತರೆಡೆಯೂ ಕಡಿಮೆಯೇನೂ ಆಗಿಲ್ಲ. ಈ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ಬೆಳೆ ಉತ್ತರ ತಲುಪಲು ಸಾಕಷ್ಟು ಕಾಲಾವಕಾಶ ಬೇಕಾಗುವುದು ನಿಶ್ಚಿತವಾಗಿದ್ದು, ಅಲ್ಲಿಯವರೆಗೆ ಟೊಮೆಟೊ ಗ್ರಾಹಕರಿಗೆ ತುಟ್ಟಿಯಾಗಲಿದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಧೀನದಲ್ಲಿ ಬರುವ ಬೆಲೆ ನಿಯಂತ್ರಣ ವಿಭಾಗದ ಮಾಹಿತಿ ಪ್ರಕಾರ, ಪ್ರಸ್ತುತ ದೇಶದಲ್ಲಿ ಟೊಮೆಟೊದ ಸರಾಸರಿ ಬೆಲೆ ಕೆ. ಜಿಗೆ 58.2 ಇದೆ. ಕಳೆದ ತಿಂಗಳಿನಲ್ಲಿ ಇದ್ದ ಚಿಲ್ಲರೆ ದರಕ್ಕೆ ಹೋಲಿಸಿದರೆ ಶೇ 64.45ರಷ್ಟು ಏರಿಕೆಯಾಗಿದೆ. ಸಗಟು ದರದಲ್ಲಿ ಶೇ 73.24ರಷ್ಟು ಹೆಚ್ಚಳವಾಗಿದೆ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಟೊಮೆಟೊಗೆ ಕೆ.ಜಿ.ಗೆ 75 ರೂ ಇದ್ದರೆ, ಆನ್ಲೈನ್ ನ ಮಾರಾಟದಲ್ಲಿ 86 ರೂಗಳಿದ್ದವು.
ಈ ಕುರಿತು ದೆಹಲಿಯ ಆಝಾದ್ ಪುರದ ಟೊಮೆಟೊ ಮಾರಾಟಗಾರರ ಸಂಘದ ಅಧ್ಯಕ್ಷ ಅಶೋಕ್ ಕೌಶಿಕ್ ಹೇಳಿದ ಪ್ರಕಾರ, ಇತ್ತೀಚಿನ ಹೀಟ್ ವೇವ್ ನಿಂದಾಗಿ ಟೊಮೆಟೊ ಪೂರೈಕೆ ಸಮರ್ಪಕವಾಗಿ ಆಗಿಲ್ಲ. ಬೆಳೆಗಾರರು ತಮ್ಮಲ್ಲಿದ್ದ ಬೆಳೆಯನ್ನು ಸಮರ್ಪಕವಾಗಿ ಒದಗಿಸಲು ಸಾಧ್ಯವಾಗದೆ, ಬೆಳೆಯೂ ನಷ್ಟವಾದ ಘಟನೆಗಳೂ ನಡೆದಿವೆ. ಹೀಗಾಗಿ ದೆಹಲಿಗೆ ಹಿಮಾಚಲ ಪ್ರದೇಶದಿಂದಷ್ಟೇ ಟೊಮೆಟೊಗಳು ಬರುತ್ತಿವೆ ಎಂದರು.
ಆಂಧ್ರಪ್ರದೇಶದ ಚಿತ್ತೂರು ಮತ್ತು ಕರ್ನಾಟಕದ ಕೋಲಾರದಂಥ ಪ್ರಮುಖ ಟೊಮೆಟೊ ಉತ್ಪಾದಕ ಪ್ರದೇಶಗಳಲ್ಲಿ ಉತ್ತಮ ಬೆಳೆಯಾಗುತ್ತಿರುವ ಕಾರಣ ಬೆಲೆಗಳು ಒಂದು ವಾರದಲ್ಲಿ ಇಳಿಕೆಯಾಗುವ ವಿಶ್ವಾಸವನ್ನು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ವ್ಯಕ್ತಪಡಿಸಿದೆ. ಕೋಲಾರದಲ್ಲಿ ಟೊಮೆಟೊ ಕಟಾವು ಆರಂಭವಾಗಿದ್ದು, ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ಪ್ರಕಟಣೆ ತಿಳಿಸಿದೆ.
ಎರಡು ವಾರಗಳವರೆಗೆ ತರಕಾರಿ ಬೆಲೆ ಏರಿಕೆ
ಆದಾಗ್ಯೂ, ಮುಂಗಾರು ಮಳೆಯು ತರಕಾರಿಗಳ ಬೆಲೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಆಜಾದ್ಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸದಸ್ಯ ಅನಿಲ್ ಮಲ್ಹೋತ್ರಾ ಹೇಳಿದ್ದಾರೆ. "ಮುಂದಿನ ಎರಡು ವಾರಗಳಲ್ಲಿ ನಾವು ಹಲವಾರು ತರಕಾರಿಗಳ ಬೆಲೆಗಳಲ್ಲಿ ಏರಿಕೆಯನ್ನು ನೋಡಬಹುದು." ಎಂದವರು ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ ತಿಂಗಳಿಗೆ ಹೋಲಿಸಿದರೆ, ಈ ತಿಂಗಳು ತರಕಾರಿ ಬೆಲೆ ತುಸು ಏರಿಕೆ ಕಂಡಿದೆ. ಚಳಿಗಾಲದಲ್ಲಿ ಬಿತ್ತನೆಯಾದ ಈರುಳ್ಳಿ ಉತ್ಪಾದನೆ ಈ ವರ್ಷ 19 ಮಿಲಿಯನ್ ಟನ್‌ಗಳಿಗೆ ಅಂದರೆ ಶೇ. 20ರಷ್ಟು ಕುಸಿದಿದೆ. ರಬಿ ಈರುಳ್ಳಿ ಸಾಮಾನ್ಯವಾಗಿ ಭಾರತದ ವಾರ್ಷಿಕ ಪೂರೈಕೆಯ ಸುಮಾರು 72 ಶೇಕಡಾವಾರಿನಷ್ಟಿರುತ್ತದೆ. ಕಳೆದ ವರ್ಷ ಜುಲೈನಲ್ಲಿ, ಸಾಮಾನ್ಯವಾಗಿ ಬಳಕೆಯಾಗುವ ತರಕಾರಿ ಬೆಲೆಗಳು ದೆಹಲಿಯಲ್ಲಿ ದಾಖಲೆಯ ದರ (ಕೆಜಿಗೆ 178ರೂ) ಗೆ ಏರಿತ್ತು,
ಜೂನ್ ತಿಂಗಳಲ್ಲಿ ನಡೆದ ಸಭೆಯಲ್ಲಿ ಆರ್.ಬಿ.ಐ. ಗವರ್ನರ್ ಶಕ್ತಿಕಾಂತ ದಾಸ್ ಆಹಾರದ ಬೆಲೆ ಏರಿಕೆಯ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದು, ಪೂರೈಕೆಯ ಏರುಪೇರುಗಳ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.
(ವರದಿ: ಹರೀಶ್ ಮುಂಬಾಡಿ)
ವಿಭಾಗ