logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Tripura Assembly Election: ಇಂದು ತ್ರಿಪುರಾ ವಿಧಾನಸಭಾ ಚುನಾವಣೆ.. ಇಲ್ಲಿದೆ ವಿವರ

Tripura assembly election: ಇಂದು ತ್ರಿಪುರಾ ವಿಧಾನಸಭಾ ಚುನಾವಣೆ.. ಇಲ್ಲಿದೆ ವಿವರ

HT Kannada Desk HT Kannada

Feb 17, 2023 05:02 PM IST

google News

ಇಂದು ತ್ರಿಪುರಾ ವಿಧಾನಸಭಾ ಚುನಾವಣೆ

    • ವಿಧಾನಸಭಾ ಚುನಾವಣೆಗೆ ತ್ರಿಪುರಾ ಸಜ್ಜಾಗಿದ್ದು, ಇಂದು 60 ಸ್ಥಾನಗಳಿಗೆ ಮತದಾನ ನಡೆಯಲಿದೆ. ರಾಜ್ಯದ ಒಟ್ಟು 3,337 ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದ್ದು, ಶಾಂತಿಯುತ ಚುನಾವಣೆ ನಡೆಸಲು ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಇಂದು ತ್ರಿಪುರಾ ವಿಧಾನಸಭಾ ಚುನಾವಣೆ
ಇಂದು ತ್ರಿಪುರಾ ವಿಧಾನಸಭಾ ಚುನಾವಣೆ

ಅಗರ್ತಲಾ (ತ್ರಿಪುರಾ): ವಿಧಾನಸಭಾ ಚುನಾವಣೆಗೆ ತ್ರಿಪುರಾ ಸಜ್ಜಾಗಿದ್ದು, ಇಂದು 60 ಸ್ಥಾನಗಳಿಗೆ ಮತದಾನ ನಡೆಯಲಿದೆ. ರಾಜ್ಯದ ಒಟ್ಟು 3,337 ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದ್ದು, ಶಾಂತಿಯುತ ಚುನಾವಣೆ ನಡೆಸಲು ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ರಾಜ್ಯಾದ್ಯಂತ ಪ್ರತಿಬಂಧ ಕಾಯ್ದೆ ವಿಧಿಸಲಾಗಿದ್ದು, ಇದು ನಾಳೆ (ಫೆ.17) ಬೆಳಗ್ಗೆ 6 ಗಂಟೆಯ ವರೆಗೆ ಜಾರಿಯಲ್ಲಿರಲಿದೆ. ಮತಗಟ್ಟೆಗಳಿಗೆ ಬಿಗಿ ಭದ್ರತೆ ಒದಗಿಸಲಾಗಿದೆ. 3,337 ಮತಗಟ್ಟೆಗಳ ಪೈಕಿ 1,100 ಮತಗಟ್ಟೆಗಳನ್ನು ಸೂಕ್ಷ್ಮ ಮತ್ತು 28 ಮತಗಟ್ಟೆಗಳನ್ನು ಅತಿಸೂಕ್ಷ್ಮ ಎಂದು ಗುರುತಿಸಲಾಗಿದೆ.

20 ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು 259 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ರಾಜ್ಯದಲ್ಲಿ ಒಟ್ಟು 28 ಲಕ್ಷ ಮತದಾರರಿದ್ದು, ಈ ಪೈಕಿ 13 ಲಕ್ಷ ಮಹಿಳೆಯರಿದ್ದಾರೆ. ಮಾರ್ಚ್ 2 ರಂದು ಮತ ಎಣಿಕೆ ನಡೆಯಲಿದೆ. ತ್ರಿಪುರಾ ಮುಖ್ಯಮಂತ್ರಿ ಡಾ.ಮಾಣಿಕ್ ಸಹಾ, ಉಪಮುಖ್ಯಮಂತ್ರಿ ಜಿಷ್ಣು ದೆಬ್ಬಾರ್ಮನ್, ಸಿಪಿಎಂ ನಾಯಕ ಜಿತೇಂದ್ರ ಚೌಧರಿ, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ರಾಜ್ಯ ಸಚಿವೆ ಪ್ರತಿಮಾ ಭೌಮಿಕ್ ಸೇರಿದಂತೆ ವಿವಿಧ ರಾಜಕೀಯ ಪ್ರಮುಖರು ಕಣದಲ್ಲಿದ್ದಾರೆ.

ಶಾಂತಿಯುತ ಮತದಾನಕ್ಕಾಗಿ ರಾಜ್ಯ ಪೊಲೀಸ್‌ ಪಡೆಯ ಜೊತೆಗೆ ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 31,000 ಚುನಾವಣಾ ಸಿಬ್ಬಂದಿ ಮತ್ತು ಕೇಂದ್ರೀಯ ಭದ್ರತಾ ಸಂಸ್ಥೆಗಳ ಸುಮಾರು 25,000 ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಬಿಜೆಪಿ–ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (ಐಪಿಎಫ್‌ಟಿ) ಮೈತ್ರಿಕೂಟ, ಭಾರತೀಯ ಕಮ್ಯೂನಿಸ್ಟ್ ಪಕ್ಷ -ಮಾರ್ಕ್​​​ವಾದ (ಸಿಪಿಐ-ಎಂ)–ಕಾಂಗ್ರೆಸ್‌ ಮೈತ್ರಿಕೂಟ ಮತ್ತು ರಾಜವಂಶಸ್ಥ ಪ್ರದ್ಯೋತ್ ಕಿಶೋರ್ ದೆಬ್ಬರ್ಮಾ ನೇತೃತ್ವದ ರಾಜ್ಯದ ಹೊಸ ಪ್ರಾದೇಶಿಕ ಪಕ್ಷವಾದ ಟಿಪ್ರಮೋಥಾ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಬಿಜೆಪಿಯು 55 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಿದ್ದು, ಐಪಿಎಫ್‌ಟಿ 6 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಈ ಬಾರಿ ಸಿಪಿಎಂ ಮತ್ತು ಕಾಂಗ್ರೆಸ್‌ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದೆ. ಆಲ್​ ಇಂಡಿಯಾ ಫಾರ್ವರ್ಡ್ ಬ್ಲಾಕ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಮತ್ತು ಕ್ರಾಂತಿಕಾರಿ ಸಮಾಜವಾದಿ ಪಕ್ಷ (ಆರ್‌ಎಸ್‌ಪಿ) ಸೇರಿದಂತೆ 47 ಕ್ಷೇತ್ರಗಳಲ್ಲಿ ಸಿಪಿಐ-ಎಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಹಾಗೂ 13 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಟಿಪ್ರಮೋಥಾ ಪಕ್ಷವು 42 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಸಿಪಿಎಂನ 25 ವರ್ಷಗಳ ಸುದೀರ್ಘ ಆಳ್ವಿಕೆಯನ್ನು ಕೊನೆಗೊಳಿಸಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ಈವರೆಗೆ ಶತ್ರುಗಳಂತಿದ್ದ ಸಿಪಿಎಂ ಮತ್ತು ಕಾಂಗ್ರೆಸ್‌ ಕೈಜೋಡಿಸಿವೆ. ಈ ಮೈತ್ರಿಕೂಟದಲ್ಲಿ ಎಡಪಕ್ಷಗಳೂ ಇವೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ