BBC Tax Row: ಬಿಬಿಸಿ ವಿಷಯ ಪ್ರಸ್ತಾಪಿಸಿದ ಬ್ರಿಟನ್ ವಿದೇಶಾಂಗ ಕಾರ್ಯದರ್ಶಿಗೆ ದೃಢ ಉತ್ತರ ನೀಡಿದ ಎಸ್. ಜೈಶಂಕರ್
Mar 01, 2023 05:59 PM IST
ಡಾ. ಎಸ್. ಜೈಶಂಕರ್ (ಸಂಗ್ರಹ ಚಿತ್ರ)
- UK minister flags BBC offices I-T 'survey': ಭಾರತದ ವಿದೇಶಾಂಗ ಸಚಿವರಾದ ಜೈಶಂಕರ್ ಅವರು "ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಘಟಕಗಳು ನೆಲದ ಕಾನೂನನ್ನು ಅನುಸರಿಸಬೇಕು" ಎಂದು ದೃಢವಾಗಿ ಉತ್ತರಿಸಿದ್ದಾರೆ.
ನವದೆಹಲಿ: ಇಂದು ನಡೆದ ದ್ವಿಪಕ್ಷೀಯ ಸಭೆಯಲ್ಲಿ ಬ್ರಿಟಿಷ್ ವಿದೇಶಾಂಗ ಸಚಿವ ಜೇಮ್ಸ್ ಅವರು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗೆ ಬಿಬಿಸಿ ತೆರಿಗೆ ವಿಷಯವನ್ನು ಜಾಣತನದಿಂದ ಪ್ರಸ್ತಾಪಿಸಿದ್ದಾರೆ. ಇದಕ್ಕೆ ಭಾರತದ ವಿದೇಶಾಂಗ ಸಚಿವರಾದ ಜೈಶಂಕರ್ ಅವರು "ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಘಟಕಗಳು ನೆಲದ ಕಾನೂನನ್ನು ಅನುಸರಿಸಬೇಕು" ಎಂದು ದೃಢವಾಗಿ ಉತ್ತರಿಸಿದ್ದಾರೆ.
"ಭಾರತದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಘಟಕಗಳು ಈ ದೇಶಕ್ಕೆ ಸಂಬಂಧಿತ ಕಾನೂನುಗಳು ಮತ್ತು ನಿಬಂಧನೆಗಳನ್ನು ಸಂಪೂರ್ಣವಾಗಿ ಅನುಸರಿಸಬೇಕು" ಎಂದು ಯುಕೆ ವಿದೇಶಾಂಗ ಸಚಿವರಿಗೆ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ತೆರಿಗೆ ಪಾವತಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಮೇಲೆ ಕಳೆದ ತಿಂಗಳು ಆದಾಯ ತೆರಿಗೆ ಇಲಾಖೆ ದೆಹಲಿ ಮತ್ತು ಮುಂಬೈನ ಬಿಬಿಸಿ ಕಚೇರಿಗಳಲ್ಲಿ ಮೂರು ದಿನಗಳ ಕಾಲ ಶೋಧ ನಡೆಸಿತ್ತು.
ನಾಳೆ ನಡೆಯಲಿರುವ ಜಿ20 ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸುವ ಸಲುವಾಗಿ ಜೇಮ್ಸ್ ಭಾರತಕ್ಕೆ ಆಗಮಿಸಿದ್ದು, ಇಂದು ನಡೆದ ಮಾತುಕತೆಯಲ್ಲಿ ಬಿಬಿಸಿ ವಿಷಯ ಪ್ರಸ್ತಾಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಕುರಿತ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿರುವ ಸಮಯ ಆಕಸ್ಮಿಕವಲ್ಲ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಸುಬ್ರಹ್ಮಣ್ಯಂ ಜೈಶಂಕರ್ ಇತ್ತೀಚೆಗೆ ಹೇಳಿಕೆ ನೀಡಿದ್ದರು.
ಇದು ಇನ್ನೊಂದು ರೀತಿಯ ರಾಜಕೀಯ ವಿಧಾನ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. "ನೀವು ಹಠಾತ್ ಆಗಿ ಈ ಕೆಲಸ ಆರಂಭಿಸಿದ್ದೀರಿ. ಇದು ಸತ್ಯದ ಅನ್ವೇಷಣೆ ಎಂದು ಹೇಳಿದ್ದೀರಿ. ಇಪ್ಪತ್ತು ವರ್ಷಗಳ ಬಳಿಕ ಇದನ್ನು ಹೊರಹಾಕಲು ನಿರ್ಧರಿಸಿರುವುದು ಆಕಸ್ಮಿಕವೆಂದು ನೀವು ಭಾವಿಸುವಿರಾ? ಚುನಾವಣೆಯ ಋತುವು ಆರಂಭವಾಗಿರುವ ಸಮಯದಲ್ಲಿ ಇದನ್ನು ಬಿಡುಗಡೆ ಮಾಡಿರುವುದರ ಔಚಿತ್ಯವೇನು? ಈ ರಾಜಕೀಯ ಲಂಡನ್ ಮತ್ತು ನ್ಯೂಯಾರ್ಕ್‌ನಲ್ಲಿ ಆರಂಭವಾಗಿದೆ" ಎಂದು ಜೈಶಂಕರ್ ಎಂದು ಅಭಿಪ್ರಾಯಪಟ್ಟಿದ್ದರು.
ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ)ನ ದೆಹಲಿ ಮತ್ತು ಮುಂಬೈ ಕಚೇರಿಗಳಲ್ಲಿ ಇತ್ತೀಚಿಗೆ ಐಟಿ ಅಧಿಕಾರಿಗಳು ನಡೆಸಿದ ಸಮೀಕ್ಷೆ ವೇಳೆ ನಮ್ಮ ಪತ್ರಕರ್ತರಿಗೆ ಗಂಟೆಗಟ್ಟಲೆ ಕೆಲಸ ಮಾಡಲು ಬಿಟ್ಟಿಲ್ಲ ಮತ್ತು ನಮ್ಮ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದರು ಎಂದು ಬಿಬಿಸಿ ಆರೋಪಿಸಿತ್ತು.
ಬಿಬಿಸಿ ಕಚೇರಿಗಳಲ್ಲಿ ಪತ್ರಕರ್ತರ ಕೆಲಸಕ್ಕೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಸಮೀಕ್ಷೆ ಕೈಗೊಳ್ಳಲಾಗಿತ್ತು ಎಂದು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT) ಹೇಳಿತ್ತು. ಆದರೆ ಪತ್ರಕರ್ತರಿಗೆ ಹಲವು ಗಂಟೆಗಳ ಕಾಲ ಕೆಲಸ ಮಾಡಲು ಅವಕಾಶವಿರಲಿಲ್ಲ. ಅಲ್ಲದೇ ಆದಾಯ ತೆರಿಗೆ ಇಲಾಖೆಯ ಸಿಬ್ಬಂದಿ ಮತ್ತು ಪೊಲೀಸರು ಹಲವಾರು ಪತ್ರಕರ್ತರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಬಿಬಿಸಿ ಹಿಂದಿ ವೆಬ್‌ಸೈಟ್ ವರದಿ ಮಾಡಿತ್ತು.