Budget 2024: ನಿರ್ಮಲಾ ಸೀತಾರಾಮನ್ ಬಜೆಟ್‌ಗೂ ಅಯೋಧ್ಯೆ ನಂಟು: ಸೂರ್ಯೋದಯ ಯೋಜನೆಗೆ ರಾಮನ ಪ್ರೇರಣೆ !
Feb 01, 2024 04:52 PM IST
ರಾಮಮಂದಿರ ವಿಷಯ ಪ್ರಸ್ತಾಪಿಸಿ ಸೌರ ವಿದ್ಯುತ್ ಯೋಜನೆ ಘೋಷಿಸುತ್ತಿರುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದರು.
- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಅಯೋಧ್ಯೆ ರಾಮ ಮಂದಿರ ಹಾಗೂ ರಾಮನ ಪ್ರಸ್ತಾಪ ಕೂಡ ಆಯಿತು.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2024-25ರ ಮಧ್ಯಂತರ ಆಯವ್ಯಯದಲ್ಲಿ ಅಯೋಧ್ಯೆ ರಾಮನಿಗೂ ಅವಕಾಶವುಂಟು. ಅದನ್ನು ಖುದ್ದು ನಿರ್ಮಲಾ ಅವರೇ ತಮ್ಮ ಭಾಷಣದಲ್ಲಿ ರಾಮನನ್ನು ಪ್ರಸ್ತಾಪಿಸಿ 10 ದಿನಗಳ ಹಿಂದೆಯಷ್ಟೇ ಉದ್ಘಾಟನೆಗೊಂಡ ಮಂದಿರದ ನೆನಪು ಮಾಸಿಲ್ಲ ಎಂದು ಸಾರಿದರು. ಅದರಲ್ಲೂ ರಾಮನ ಪ್ರೇರಣೆಯಂದಲೇ ಪ್ರಧಾನಿ ನರೇಂದ್ರ ಮೋದಿ ಅವರು ಜನರಿಗೆ ಉಚಿತವಾಗಿ ಸೌರವಿದ್ಯುತ್ ಕಲ್ಪಿಸುವ ಸೂರ್ಯೋದಯ ಯೋಜನೆಯನ್ನೂ ಪ್ರಕಟಿಸಿದ್ದು, ಅದನ್ನು ಬಜೆಟ್ ಮೂಲಕ ತಾವು ಘೋಷಣೆ ಮಾಡುತ್ತಿರುವುದಾಗಿಯೂ ಹೇಳಿದರು.
ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಯನ್ನು ಪ್ರಕಟ ಮಾಡುವಾಗ, ನಿರ್ಮಲಾ ಸೀತಾರಾಮನ್ ತಮ್ಮ ಮಧ್ಯಂತರ ಬಜೆಟ್ ಭಾಷಣದಲ್ಲಿ ಮೇಲ್ಛಾವಣಿ ಸೌರವಿದ್ಯುತ್ ಯೀಜನೆ ಮೂಲಕ, ಒಂದು ಕೋಟಿ ಕುಟುಂಬಗಳು ಪ್ರತಿ ತಿಂಗಳು 300 ಯುನಿಟ್‌ವರೆಗೆ ಉಚಿತ ವಿದ್ಯುತ್ ಪಡೆಯಲು ಅನುವು ಮಾಡಿಕೊಡಲಾಗುವುದು ಎಂದು ಹೇಳಿದರು. ಅಷ್ಟೇ ಅಲ್ಲದೇ ಈ ಯೋಜನೆಯು ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆಯ ಐತಿಹಾಸಿಕ ದಿನದಂದು ಪ್ರಧಾನಿಯವರ ಸಂಕಲ್ಪವನ್ನು ಆಧರಿಸಿದೆ. ಅಂದು ಪ್ರಧಾನಿ ಅವರು ಸೂರ್ಯೋದಯ ಯೋಜನೆ ಪ್ರಕಟಿಸಿದ್ದರು. ಅದರಂತೆ ನಾನೂ ಇದನ್ನು ಘೋಷಿಸುತ್ತಿದ್ದೇನೆ ಎಂದರು ನಿರ್ಮಲಾ.
ಕಳೆದ ವಾರ ಇದೇ ವಿಚಾರವಾಗಿ ಮಾತನಾಡಿದ್ದ ಪ್ರಧಾನಿ ಮೋದಿ, ಅಯೋಧ್ಯೆಯಿಂದ ಹಿಂದಿರುಗಿದ ನಂತರ ನಾನು ನನ್ನ ಮೊದಲ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ, ನಮ್ಮ ಸರ್ಕಾರವು ಒಂದು ಕೋಟಿ ಮನೆಗಳಲ್ಲಿ ಮೇಲ್ಛಾವಣಿ ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸುವ ಉದ್ದೇಶದಿಂದ 'ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ' ಪ್ರಾರಂಭಿಸಲಿದೆ ಎಂದಿದ್ದರು. ಅದು ಈ ಬಜೆಟ್ ಮೂಲಕ ಜಾರಿಗೊಂಡಿದೆ.
ಈ ಯೋಜನೆಯಡಿ, ಜನರು ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ಸಾಧ್ಯವಾಗುತ್ತದೆ; ಇದು ಹೆಚ್ಚಿನ ಸಂಖ್ಯೆಯ ಮಾರಾಟಗಾರರಿಗೆ ಪೂರೈಕೆ ಮತ್ತು ಸ್ಥಾಪನೆಗಾಗಿ ಉದ್ಯಮಶೀಲತೆ ಅವಕಾಶಗಳನ್ನು ನೀಡುತ್ತದೆ ಮತ್ತು ಉತ್ಪಾದನೆ, ಸ್ಥಾಪನೆ ಮತ್ತು ನಿರ್ವಹಣೆಯಲ್ಲಿ ತಾಂತ್ರಿಕ ಕೌಶಲ್ಯ ಹೊಂದಿರುವ ಯುವಕರಿಗೆ ಉದ್ಯೋಗಾವಕಾಶಗಳನ್ನು ನೀಡುತ್ತದೆ ಎನ್ನುವುದು ಕೇಂದ್ರ ಸರ್ಕಾರದ ವಿವರಣೆ.
ಉಚಿತ ಸೌರ ವಿದ್ಯುತ್ ಮತ್ತು ಹೆಚ್ಚುವರಿಯನ್ನು ವಿತರಣಾ ಕಂಪನಿಗಳಿಗೆ ಮಾರಾಟ ಮಾಡುವುದರಿಂದ ಕುಟುಂಬಗಳಿಗೆ ವಾರ್ಷಿಕವಾಗಿ 15,000-18,000 ರೂ.ಗಳವರೆಗೆ ಉಳಿತಾಯವಾಗಲಿದೆ. ಇದು ವಿದ್ಯುತ್ ಬಳಕೆಯ ಭವಿಷ್ಯದ ಮಾರ್ಗ ಕೂಡ ಎನ್ನುವುದನ್ನು ನಿರ್ಮಲಾ ಸೀತಾರಾಮನ್ ಒತ್ತಿ ಹೇಳಿದರು
ಇದರೊಟ್ಟಿಗೆ 1 ಗಿಗಾವ್ಯಾಟ್ ಆರಂಭಿಕ ಸಾಮರ್ಥ್ಯಕ್ಕಾಗಿ ಕಡಲಾಚೆಯ ಪವನ ಶಕ್ತಿ ಸಾಮರ್ಥ್ಯವನ್ನು ಬಳಸಿಕೊಳ್ಳಲು ಕಾರ್ಯಸಾಧ್ಯತೆ ಅಂತರ ನಿಧಿಯನ್ನು ಒದಗಿಸಲಾಗುವುದು ಎನ್ನುವ ಅಂಶವನ್ನೂ ಪ್ರಸ್ತಾಪಿಸಿದರು.