logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಟ್ರಂಪ್ ಜಯಕ್ಕೆ ಭಾರತ ಎಷ್ಟರಮಟ್ಟಿಗೆ ಸಂಭ್ರಮಿಸಬಹುದು? ಭಾರತ- ಅಮೆರಿಕ ಬಲಪಂಥೀಯ ಚೌಕಟ್ಟುಗಳೇ ಬೇರೆ- ಚೈತನ್ಯ ಹೆಗಡೆ ವಿಶ್ಲೇಷಣೆ

ಟ್ರಂಪ್ ಜಯಕ್ಕೆ ಭಾರತ ಎಷ್ಟರಮಟ್ಟಿಗೆ ಸಂಭ್ರಮಿಸಬಹುದು? ಭಾರತ- ಅಮೆರಿಕ ಬಲಪಂಥೀಯ ಚೌಕಟ್ಟುಗಳೇ ಬೇರೆ- ಚೈತನ್ಯ ಹೆಗಡೆ ವಿಶ್ಲೇಷಣೆ

Praveen Chandra B HT Kannada

Nov 07, 2024 11:50 AM IST

google News

ಟ್ರಂಪ್ ಜಯಕ್ಕೆ ಭಾರತ ಎಷ್ಟರಮಟ್ಟಿಗೆ ಸಂಭ್ರಮಿಸಬಹುದು? ಚೈತನ್ಯ ಹೆಗಡೆ ವಿಶ್ಲೇಷಣೆ

    • US Election 2024: "ಡೊನಾಲ್ಡ್‌ ಟ್ರಂಪ್‌ ಗೆಲುವಿಗೆ ಭಾರತ ಎಷ್ಟರಮಟ್ಟಿಗೆ ಸಂಭ್ರಮಿಸಬಹುದು? ಅಮೆರಿಕದಲ್ಲಿ ಬಲಪಂಥ ಅಥವಾ ಕನ್ಸರ್ವೇಟಿಸಂ ಗಟ್ಟಿಯಾಗೋದು ಅಂದರೆ ಏನು? ಅಲ್ಲಿನ ಕ್ರೈಸ್ತ ಐಡೆಂಟಿಟಿ ಮತ್ತಷ್ಟು ಗಟ್ಟಿಯಾಗುವುದು ಅಂತ ಅರ್ಥ ಹಾಗೂ ಡೊನಾಲ್ಡ್ ಟ್ರಂಪ್ ಪ್ರತಿನಿಧಿಸುತ್ತಿರುವುದು ಆ ಬಲಪಂಥವನ್ನೇ" ಎಂದು ಚೈತನ್ಯ ಹೆಗಡೆ ವಿಶ್ಲೇಷಿಸಿದ್ದಾರೆ.
ಟ್ರಂಪ್ ಜಯಕ್ಕೆ ಭಾರತ ಎಷ್ಟರಮಟ್ಟಿಗೆ ಸಂಭ್ರಮಿಸಬಹುದು? ಚೈತನ್ಯ ಹೆಗಡೆ ವಿಶ್ಲೇಷಣೆ
ಟ್ರಂಪ್ ಜಯಕ್ಕೆ ಭಾರತ ಎಷ್ಟರಮಟ್ಟಿಗೆ ಸಂಭ್ರಮಿಸಬಹುದು? ಚೈತನ್ಯ ಹೆಗಡೆ ವಿಶ್ಲೇಷಣೆ

"ಅಮೆರಿಕದ ಶ್ವೇತಭವನವನ್ನು ಮತ್ತೆ ಡೊನಾಲ್ಡ್ ಟ್ರಂಪ್ ಗೆದ್ದುಕೊಂಡಿರುವುದು ಹಲವು ಆಯಾಮಗಳಲ್ಲಿ ಬೆರಗುಗೊಳಿಸುವ ವಿಜಯವೇ ಹೌದು. ಹಾಗಂತ, ಇಲ್ಲಿನ ಬಲಪಂಥವು ಇದು ತಮ್ಮದೇ ಸೈದ್ಧಾಂತಿಕ ವಿಜಯ ಎಂದು ಸಂಭ್ರಮಿಸುವುದರಲ್ಲಿ ತರ್ಕವಿಲ್ಲ. ಏಕೆಂದರೆ, ಭಾರತ ಮತ್ತು ಅಮೆರಿಕಗಳ ಬಲಪಂಥೀಯತೆಯ ಚೌಕಟ್ಟುಗಳೇ ಬೇರೆ ಬೇರೆ. ಅಮೆರಿಕದಲ್ಲಿ ಬಲಪಂಥ ಅಥವಾ ಕನ್ಸರ್ವೇಟಿಸಂ ಗಟ್ಟಿಯಾಗೋದು ಅಂದರೆ ಏನು? ಅಲ್ಲಿನ ಕ್ರೈಸ್ತ ಐಡೆಂಟಿಟಿ ಮತ್ತಷ್ಟು ಗಟ್ಟಿಯಾಗುವುದು ಅಂತ ಅರ್ಥ ಹಾಗೂ ಡೊನಾಲ್ಡ್ ಟ್ರಂಪ್ ಪ್ರತಿನಿಧಿಸುತ್ತಿರುವುದು ಆ ಬಲಪಂಥವನ್ನೇ.

ಅಷ್ಟಾಗಿಯೂ, ಈಗಿನ ಸ್ಥಿತಿಯಲ್ಲಿ ಡೆಮಾಕ್ರಟ್ ಪಾಳೆಯ ಗೆಲ್ಲುವುದಕ್ಕಿಂತ ರಿಪಬ್ಲಿಕನ್ ಗುಂಪು ಗೆಲ್ಲುವುದರಲ್ಲಿ ಶ್ರೇಯಸ್ಸಿತ್ತು. ಏಕೆಂದರೆ ಭಾರತದ ತಥಾಕಥಿತ ಸೆಕ್ಯುಲರ್-ಸಮಾಜವಾದಿ ರಾಜಕಾರಣ ವಿಜೃಂಭಿಸಿದಾಗ ಏನೆಲ್ಲ ಬಿಕ್ಕಟ್ಟುಗಳನ್ನು ತಂದಿತ್ತೋ ಅದನ್ನೇ ಅಲ್ಲಿನ ಇವತ್ತಿನ ಡೆಮಾಕ್ರಟ್ ರಾಜಕಾರಣದ ವೋಕ್ ಸಿದ್ಧಾಂತವು ಮಾಡಲು ಹೊರಟಿತ್ತು.

ಪ್ರಾಪ್ತ ವಯಸ್ಸು ತುಂಬುವುದಕ್ಕೂ ಮೊದಲೇ ಲಿಂಗ ಬದಲಾವಣೆಯಂಥ ವಿಷಯಗಳಿಗೆ ಅನುಮತಿ ಕೊಡುವ ‘ಉದಾರವಾದ’, ಉದ್ಯೋಗ ನೀಡಿಕೆಯಲ್ಲಿ ಬಿಳಿಯರಿಗೆ ಮತ್ತು ಭಾರತೀಯರಿಗೆ ಮಾತ್ರ ಅವಕಾಶ ಸಿಗುತ್ತಿದೆ, ಎಲ್ಲ ಜನಾಂಗದವರಿಗೆ ಕೆಲಸ ಕೊಟ್ಟು ಸಂಬಳ ನೀಡಿ ಎಂಬ ಪ್ರತಿಪಾದನೆ, ಪ್ರತಿಭೆ ಎಂಬುದೊಂದು ಸುಳ್ಳು ಕತೆ- ಎಲ್ಲರೂ ಒಂದೇ ಎಂಬ ಅಪ್ರಾಯೋಗಿಕ ನಿಯಮವನ್ನು ಉದ್ಯಮಗಳ ಮೇಲೆ ಹೇರುವುದು…ಇಂಥ ಎಲ್ಲ ದಾರಿಗಳಿಗೆ ಡೆಮಕ್ರಾಟ್ ರಾಜಕಾರಣ ತೆರೆದುಕೊಳ್ಳುತ್ತಿತ್ತು.

ನಾಳೆ ಈ ವೈರಸ್ಸುಗಳು ಭಾರತವನ್ನೂ ಗಾಢವಾಗಿ ಮುತ್ತುತ್ತಿದ್ದವು ಎಂಬುದಕ್ಕೆ ಸಂಶಯ ಬೇಡ. ಈ ಹಿನ್ನೆಲೆಯಲ್ಲಿ ನೋಡಿದಾಗ ಅಲ್ಲಿನ ಬಲಪಂಥ ಅಥವಾ ಸಾಂಪ್ರದಾಯಿಕ ಎಂಬ ವರ್ಗೀಕರಣದಲ್ಲಿ ಬರುವ ಟ್ರಂಪ್ ಗೆದ್ದದ್ದು ಒಳ್ಳೆಯದೆನ್ನಬಹುದು. ತಂತ್ರಜ್ಞಾನ ಮತ್ತು ಸಂಶೋಧನೆ ವಿಭಾಗದಲ್ಲಿ ಭಾರತದ ಪ್ರತಿಭಾವಂತರು ತನ್ನಲ್ಲಿ ಬಂದು ಯಶಸ್ಸು ಮತ್ತು ಸಿರಿವಂತಿಕೆಗಳನ್ನು ಕಂಡುಕೊಳ್ಳುವುದಕ್ಕೆ ಹಲವಾರು ದಶಕಗಳಿಂದಲೂ ಸಹಕರಿಸಿದ್ದ ನೆಲ ಅಮೆರಿಕ. ಟ್ರಂಪ್ ಗೆಲವಿನ ಮೂಲಕ ಆ ಪರಂಪರೆ ಉಳಿದಿಕೊಂಡಿತು ಎಂಬುದು ಇಲ್ಲಿರುವ ಸಮಾಧಾನ. ಆಫ್ಕೋರ್ಸ್, ಬಿಸಿನೆಸ್ ಮತ್ತು ತಂತ್ರಜ್ಞಾನ ವಲಯದಲ್ಲಿ ಅಮೆರಿಕನ್ನರಿಗೇ ಆದ್ಯತೆ ಎಂಬ ಸಹಜ ಧೋರಣೆ ಟ್ರಂಪ್ ಪಾಳೆಯದ್ದು. ಹಾಗಿದ್ದೂ, ದೀರ್ಘಾವಧಿಯಲ್ಲಿ ಭಾರತದ ಪ್ರತಿಭೆಗಳಿಗೆ ಇದು ಕೆಲಮಟ್ಟಿಗಾದರೂ ಸಹಕಾರಿಯೇ.

ಉಳಿದಂತೆ, ಬೇರೆ ದೇಶಗಳ ಜತೆ ಮಾಡಿದ ಚೌಕಾಶಿಯನ್ನೇ ಟ್ರಂಪ್ ಭಾರತದ ಜತೆಗೂ ಮಾಡುತ್ತಾರೆ. ಆತ ಆರಿಸಿ ಬಂದಿರುವುದು ಅಲ್ಲಿನ ಆರ್ಥಿಕ ಬಲಪಂಥಕ್ಕೆ ಸಹಕರಿಸಬಹುದೇ ಹೊರತು, ಬೈ ಡಿಫಾಲ್ಟ್ ನಮಗೆ ಸಹಕಾರಿ ಆಗುವುದಿಲ್ಲ. ಅಮೆರಿಕದಲ್ಲೇ ಉದ್ದಿಮೆ ಮತ್ತು ಉದ್ಯೋಗ ಅವಕಾಶಗಳನ್ನು ಉಳಿಸಿಕೊಳ್ಳುವುದಕ್ಕೆ ಬೇರೆಲ್ಲ ದೇಶಗಳಿಂದ ಬರುವ ಉತ್ಪಾದನಾ ಸರಕುಗಳಿಗೆ ಕನಿಷ್ಠ ಶೇ. 10ರ ಸುಂಕ ಹಾಗೂ ಚೀನಾಕ್ಕೆ ಶೇ. 60ರವರೆಗೆ ಸುಂಕ ಇರುತ್ತದೆ ಅನ್ನೋದು ಟ್ರಂಪ್ ಪ್ರಣಾಳಿಕೆ ನೀಡಿರುವ ಭರವಸೆ. ಈ ಶೇಕಡ 10ರ ಬ್ರಾಕೆಟ್ಟಿನಲ್ಲಿ ಭಾರತದೊಂದಿಗಿನ ವ್ಯವಹಾರವೂ ಬರುತ್ತದೆ. ಚೀನಾದ ಬಗ್ಗೆ ಟ್ರಂಪ್ ಆಡಳಿತ ನಿಜಕ್ಕೂ ಗಡಸಾಗುವ ನಿರ್ಧಾರದಲ್ಲಿದ್ದರೆ ಆಗ ಸಮತೋಲನಕ್ಕೆ ಭಾರತ ಬೇಕು. ಟ್ರಂಪ್ ಆಡಳಿತ ಭಾರತವನ್ನು ಒಂದು ಸಶಕ್ತ ಬಲವನ್ನಾಗಿ ನೋಡಲಿದೆ ಎಂಬುದು ನಾವು ಖುಷಿ ಇಟ್ಟುಕೊಳ್ಳಬಹುದಾದ ಅಂಶ.

ಇಷ್ಟರ ಹೊರತಾಗಿ ಅಮೆರಿಕ ರಾಜಕಾರಣವನ್ನು ಪ್ರಸ್ತುತ ಕಾಲಕ್ಕೆ ಹೇಗೆ ನೋಡಬೇಕು ಎಂಬುದನ್ನು ನಮ್ಮ ವಿದೇಶ ಸಚಿವ ಜೈಶಂಕರ್ ಅವರೇ ಪರಿಣಾಮಕಾರಿಯಾಗಿ ಹೇಳಿದ್ದಾರೆ.

ಅಮೆರಿಕದ ಚುನಾವಣೆ ಫಲಿತಾಂಶ ಪ್ರಕಟವಾಗುವುದಕ್ಕೆ ಒಂದು ದಿನ ಮುಂಚೆ ಆಸ್ಟ್ರೇಲಿಯದ ವೇದಿಕೆಯೊಂದರಲ್ಲಿ ಅವರು ತೆರೆದಿಟ್ಟ ನೋಟ ಎಷ್ಟು ಸ್ಪಷ್ಟವಾಗಿದೆ ಗಮನಿಸಿ… ಅವರು ಹೇಳಿದ್ದು, “ಅಮೆರಿಕದಲ್ಲಿ ಯಾರೇ ಗೆಲ್ಲಲಿ. ಆ ದೇಶ ಆದಷ್ಟೂ ಸ್ವಕೇಂದ್ರಿತವಾಗಿರಲಿದೆ. ಅಧಿಕಾರದಲ್ಲಿ ರಿಪಬ್ಲಿಕನ್ನರಿದ್ದರೂ, ಡೆಮಾಕ್ರಟ್ ಇದ್ದರೂ ಈ ದೀರ್ಘಾವಧಿ ಅಮೆರಿಕ ನೀತಿಯಲ್ಲಿ ಬದಲಾವಣೆ ಆಗುವ ಲಕ್ಷಣವಿಲ್ಲ. ಬರಾಕ್ ಒಬಾಮಾ ಅವಧಿಯಲ್ಲೇ ಅಮೆರಿಕವು ತನ್ನ ಜಾಗತಿಕ ಬದ್ಧತೆಗಳನ್ನು ಕಡಿಮೆ ಮಾಡಿಕೊಳ್ಳುತ್ತ ಬಂತು. ಟ್ರಂಪ್ ಅವಧಿಯಲ್ಲಿ ಅಫಘಾನಿಸ್ತಾನದಿಂದ ಸೇನಾ ಹಿಂತೆಗೆತವೂ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಇನ್ನಷ್ಟು ಸ್ಪಷ್ಟತೆಯಿಂದ ಮಾತನಾಡಲಾಯಿತು ಅಷ್ಟೆ. ಈ ಹಿಂದೆ ಜಗತ್ತಿನ ಮೇಲೆ ಅಮೆರಿಕವು ಹೆಚ್ಚಿನ ಹಿಡಿತವನ್ನೂ ಇರಿಸಿಕೊಂಡಿತ್ತು ಹಾಗೆಯೇ ಕೆಲವೆಡೆ ಔದಾರ್ಯವನ್ನೂ ಮೆರೆದಿತ್ತು. ಆದರೆ ಇವೆರಡರಿಂದಲೂ ವಿಮುಖವಾಗುತ್ತಹೋಗುವ ಅಮೆರಿಕವನ್ನು ಜಗತ್ತು ಭವಿಷ್ಯದಲ್ಲಿ ಕಾಣಲಿದೆ.”

ಲೇಖನ: ಚೈತನ್ಯ ಹೆಗಡೆ (ಫೇಸ್‌ಬುಕ್‌ ಬರಹ)

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ