Vijay Mallya’s plea: ತಲೆಮರೆಸಿಕೊಂಡ ಆರ್ಥಿಕ ಅಪರಾಧಿ ಹಣೆಪಟ್ಟಿಗೆ ತಡೆಕೊಡಿ ಎಂದ ಮಲ್ಯ; ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
Mar 03, 2023 02:54 PM IST
ವಿಜಯ್ ಮಲ್ಯ (ಕಡತ ಚಿತ್ರ)
Vijay Mallya’s plea: ತನ್ನನ್ನು ಪರಾರಿಯಾದ ಆರ್ಥಿಕ ಅಪರಾಧಿ ಎಂದು ಘೋಷಿಸಲು ಮತ್ತು ತನ್ನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಮುಂಬೈ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ಪ್ರಶ್ನಿಸಿ ಸಂಕಷ್ಟದಲ್ಲಿರುವ ಉದ್ಯಮಿ ವಿಜಯ್ ಮಲ್ಯ ಈ ಮನವಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದರು. ಇದನ್ನು ಕೋರ್ಟ್ ವಜಾಗೊಳಿಸಿದೆ.
ನವದೆಹಲಿ: ತಲೆಮರೆಸಿಕೊಂಡಿರುವ ಆರ್ಥಿಕ ಅಪರಾಧಿ ಎಂದು ಘೋಷಿಸುವ ಪ್ರಯತ್ನಕ್ಕೆ ತಡೆ ನೀಡಬೇಕು ಎಂದು ಕೋರಿದ ಉದ್ಯಮಿ ವಿಜಯ್ ಮಲ್ಯ ಅವರ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ.
ತನ್ನನ್ನು ಪರಾರಿಯಾದ ಆರ್ಥಿಕ ಅಪರಾಧಿ ಎಂದು ಘೋಷಿಸಲು ಮತ್ತು ತನ್ನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಮುಂಬೈ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ಪ್ರಶ್ನಿಸಿ ಸಂಕಷ್ಟದಲ್ಲಿರುವ ಉದ್ಯಮಿ ವಿಜಯ್ ಮಲ್ಯ ಈ ಮನವಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದರು.
ಈ ವಿಷಯದಲ್ಲಿ ಅರ್ಜಿದಾರರಿಂದ (ವಿಜಯ್ ಮಲ್ಯ) ಯಾವುದೇ ಸೂಚನೆ ಸಿಕ್ಕಿಲ್ಲ ಎಂದು ಮಲ್ಯ ಪರ ವಕೀಲರು ಅಫಿಡವಿಟ್ ಸಲ್ಲಿಸಿದ ನಂತರ ಸುಪ್ರೀಂ ಕೋರ್ಟ್ ನಾನ್ ಪ್ರಾಸಿಕ್ಯೂಷನ್ ಅರ್ಜಿಯನ್ನು ವಜಾಗೊಳಿಸಿದೆ.
“ಅರ್ಜಿದಾರರು (ವಿಜಯ್ ಮಲ್ಯ) ಅರ್ಜಿದಾರರ ಪರ ವಕೀಲರಿಗೆ ಯಾವುದೇ ಸೂಚನೆಗಳನ್ನು ನೀಡುತ್ತಿಲ್ಲ ಎಂದು ಅರ್ಜಿದಾರರ ಪರ ವಕೀಲರು ಕೋರ್ಟ್‌ಗೆ ಹೇಳಿದ್ದಾರೆ. ಈ ಹೇಳಿಕೆಯನ್ನು ಪರಿಗಣಿಸಿ, ಪ್ರಾಸಿಕ್ಯೂಷನ್ ಇಲ್ಲದ ಕಾರಣ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ರಾಜೇಶ್ ಬಿಂದಾಲ್ ಅವರಿದ್ದ ನ್ಯಾಯಪೀಠ ಹೇಳಿದೆ.
ಮಲ್ಯ ಅವರ ಮನವಿಯ ಮೇರೆಗೆ 2018ರ ಡಿಸೆಂಬರ್ 7 ರಂದು ಜಾರಿ ನಿರ್ದೇಶನಾಲಯಕ್ಕೆ (ಇಡಿ) ನೋಟಿಸ್ ಜಾರಿಗೊಳಿಸಿದ್ದ ಸುಪ್ರೀಂ ಕೋರ್ಟ್, ಮುಂಬೈನ ವಿಶೇಷ ಪ್ರಿವೆನ್ಶನ್ ಆಫ್ ಮನಿ ಲಾಂಡರಿಂಗ್ ಆಕ್ಟ್ (ಪಿಎಂಎಲ್‌ಎ) ನ್ಯಾಯಾಲಯದ ಮುಂದೆ ತನಿಖಾ ಸಂಸ್ಥೆಯ ಅರ್ಜಿಯ ವಿಚಾರಣೆಯನ್ನು ತಡೆಯಲು ನಿರಾಕರಿಸಿತ್ತು. ಪರಾರಿಯಾದ ಆರ್ಥಿಕ ಅಪರಾಧಿಗಳ ಕಾಯಿದೆ, 2018ರ ಪ್ರಕಾರ ಮಲ್ಯ ಅವರನ್ನು 'ತಲೆಮರೆಸಿಕೊಂಡ ಆರ್ಥಿಕ ಅಪರಾಧಿ' ಎಂಬ ಹಣೆಪಟ್ಟಿಯನ್ನು ಕೇಂದ್ರ ಸರ್ಕಾರ ನೀಡಿತ್ತು. 2019ರ ಜನವರಿ 5ರಂದು ಮುಂಬೈ ವಿಶೇಷ ನ್ಯಾಯಾಲಯವು ಮಲ್ಯ ಅವರನ್ನು ಈ ಕಾಯ್ದೆಯಡಿ ‘ತಲೆಮರೆಸಿಕೊಂಡ ಆರ್ಥಿಕ ಅಪರಾಧಿ’ ಎಂದು ಘೋಷಿಸಿತ್ತು.
ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ, ಒಬ್ಬ ವ್ಯಕ್ತಿಯನ್ನು ಪರಾರಿಯಾದ ಆರ್ಥಿಕ ಅಪರಾಧಿ ಎಂದು ಘೋಷಿಸಿದ ನಂತರ, ಪ್ರಾಸಿಕ್ಯೂಟಿಂಗ್ ಏಜೆನ್ಸಿಯು ಅವನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವನ್ನು ಹೊಂದಿರುತ್ತದೆ.
ಹಲವಾರು ಬ್ಯಾಂಕ್‌ಗಳಿಂದ ಕಿಂಗ್‌ಫಿಶರ್ ಏರ್‌ಲೈನ್ಸ್ (ಕೆಎಫ್‌ಎ) ಗೆ 9,000 ಕೋಟಿ ರೂಪಾಯಿಗೂ ಹೆಚ್ಚು ಸಾಲ ಪಡೆದ ಮಲ್ಯ, ಅದನ್ನು ಮರುಪಾವತಿಸಿರಲಿಲ್ಲ. ಬಳಿಕ 2016ರ ಮಾರ್ಚ್‌ನಲ್ಲಿ ಯುನೈಟೆಡ್ ಕಿಂಗ್‌ಡಮ್‌ಗೆ ಪಲಾಯನ ಮಾಡಿದ್ದರು.
ಮಲ್ಯ ಅವರು 2018 ರಲ್ಲಿ ಬಾಂಬೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು. ಹೊಸ ಕಾನೂನಿನಡಿಯಲ್ಲಿ ತನ್ನನ್ನು ಪಲಾಯನಗೈದ ಆರ್ಥಿಕ ಅಪರಾಧಿ ಎಂದು ಘೋಷಿಸಲು ಇಡಿ ಸಲ್ಲಿಸಿದ ಮನವಿಯ ಮೇಲೆ ಮುಂಬೈನ ವಿಶೇಷ ಪಿಎಂಎಲ್‌ಎ ನ್ಯಾಯಾಲಯದ ಮುಂದೆ ವಿಚಾರಣೆಗೆ ತಡೆಯಾಜ್ಞೆ ಕೋರಿ ಮನವಿ ಸಲ್ಲಿಸಿದ್ದರು. ಆದರೆ ಇದು ಕೂಡ ವಜಾಗೊಂಡಿತ್ತು.
ಪ್ರತ್ಯೇಕ ಪ್ರಕರಣದಲ್ಲಿ, ಕಳೆದ ವರ್ಷ ಜುಲೈ 11 ರಂದು, ನ್ಯಾಯಾಂಗ ನಿಂದನೆಗಾಗಿ ಮಲ್ಯ ಅವರಿಗೆ ನಾಲ್ಕು ತಿಂಗಳ ಜೈಲು ಶಿಕ್ಷೆ ವಿಧಿಸಿದ ಉನ್ನತ ನ್ಯಾಯಾಲಯವು 2016 ರಿಂದ ಯುಕೆಯಲ್ಲಿರುವ ಪರಾರಿಯಾದ ಉದ್ಯಮಿಯ ಸೆರೆವಾಸದ ಉಪಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರಕ್ಕೆ ನಿರ್ದೇಶನ ನೀಡಿತು.
ಮಲ್ಯ ಅವರು ತಮ್ಮ ನಡವಳಿಕೆಗೆ ಯಾವುದೇ ಪಶ್ಚಾತ್ತಾಪ ಅಥವಾ ಕ್ಷಮೆಯಾಚಿಸಲಿಲ್ಲ ಮತ್ತು ಕಾನೂನಿನ ಘನತೆಯನ್ನು ಕಾಪಾಡಿಕೊಳ್ಳಲು ಸಾಕಷ್ಟು ಶಿಕ್ಷೆಯನ್ನು ವಿಧಿಸಬೇಕಾದ್ದು ಅನಿವಾರ್ಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಕೋರ್ಟ್ ಆದೇಶವನ್ನು ಮೀರಿ 40 ಮಿಲಿಯನ್ ಡಾಲರ್ ಹಣವನ್ನು ತನ್ನ ಮಕ್ಕಳ ಖಾತೆಗೆ ವರ್ಗಾವಣೆ ಮಾಡಿದ್ದಕ್ಕಾಗಿ ಮಲ್ಯ ನ್ಯಾಯಾಂಗ ನಿಂದನೆ ಮಾಡಿದ ಅಪರಾಧಿ ಎಂದು ನ್ಯಾಯಾಲಯ ಘೋಷಿಸಿತ್ತು. ಇದನ್ನು ಪರಿಗಣಿಸಿ ಸುಪ್ರೀಂ ಕೋರ್ಟ್ ಮಲ್ಯಗೆ ದಂಡವನ್ನು ವಿಧಿಸಿತ್ತು.