ಲೋನಾವಾಲಾ ಜಲಪಾತ ದುರಂತ; 4 ಮಕ್ಕಳು ಸೇರಿ ಐವರು ನೀರುಪಾಲು, 3 ಶವ ಪತ್ತೆ, ಮುಂದುವರಿದ ಶೋಧಕಾರ್ಯ- ವೈರಲ್ ವಿಡಿಯೋ
Jul 01, 2024 10:26 AM IST
ಲೋನಾವಾಲಾ ಜಲಪಾತ ದುರಂತ; 4 ಮಕ್ಕಳು ಸೇರಿ ಐವರು ನೀರುಪಾಲು, 3 ಶವ ಪತ್ತೆ, ಮುಂದುವರಿದ ಶೋಧಕಾರ್ಯ. ವೈರಲ್ ವಿಡಿಯೋದಿಂದ ತೆಗೆದ ಚಿತ್ರ
ಲೋನಾವಾಲಾ ಜಲಪಾತ ದುರಂತ; ಪುಣೆಯ ಭೂಶಿ ಅಣೆಕಟ್ಟು ಸಮೀಪದ ಜಲಪಾತ ನೋಡಲು ತೆರಳಿದ ಪ್ರವಾಸಿಗರ ಪೈಕಿ 4 ಮಕ್ಕಳು ಸೇರಿ ಐವರು ನೀರುಪಾಲು ಆಗಿದ್ದಾರೆ. ಈ ಪೈಕಿ 3 ಶವ ಪತ್ತೆ ಭಾನುವಾರವೇ ಪತ್ತೆಯಾಗಿದ್ದು, ಇನ್ನಿಬ್ಬರ ಶವಗಳಿಗಾಗಿ ಶೋಧಕಾರ್ಯ ಮುಂದುವರಿದಿದೆ.
ಪುಣೆ: ಪ್ರಸಿದ್ದ ಪ್ರವಾಸಿ ಸ್ಥಳವಾಗಿರುವ ಲೋನಾವಾಲಾದ ಭೂಶಿ ಅಣೆಕಟ್ಟಿನ ಬಳಿ ಭಾನುವಾರ ಮಧ್ಯಾಹ್ನ ನಾಲ್ಕು ಮಕ್ಕಳು ಮತ್ತು ಮಹಿಳೆ ಸೇರಿದಂತೆ ಐದು ಜನರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದಾರೆ. ಇದರ ವಿಡಿಯೋ ವೈರಲ್ ಆಗಿದ್ದು, ಮೂವರ ಮೃತದೇಹ ಪತ್ತೆಯಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಭಾರಿ ಮಳೆ ಮತ್ತು ಭೂಶಿ ಅಣೆಕಟ್ಟು ಪ್ರದೇಶದಲ್ಲಿ ಸೀಮಿತ ಬೆಳಕಿನ ನಂತರ ಶೋಧ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿತ್ತು.
ಪೊಲೀಸ್ ಮಾಹಿತಿಯ ಪ್ರಕಾರ, ಮೃತರನ್ನು ಸಾಹಿಸ್ತಾ ಲಿಯಾಕತ್ ಅನ್ಸಾರಿ (36), ಅಮಿಮಾ ಆದಿಲ್ ಅನ್ಸಾರಿ (13), ಉಮೇರಾ ಅಲಿಯಾಸ್ ಸಲ್ಮಾನ್ ಆದಿಲ್ ಅನ್ಸಾರಿ (8) ಎಂದು ಗುರುತಿಸಲಾಗಿದ್ದು, ಕಾಣೆಯಾದ ಅದ್ನಾನ್ ಶಬತ್ ಅನ್ಸಾರಿ (4) ಮತ್ತು ಮರಿಯಾ ಅನ್ಸಾರಿ (9) ಅವರ ಶೋಧ ಸೋಮವಾರ ಬೆಳಿಗ್ಗೆ ಪುನರಾರಂಭಗೊಂಡಿದೆ.
ಲೋನಾವಾಲಾ ಜಲಪಾತ ದುರಂತ; ಏನಿದು ಘಟನೆ
ಪುಣೆಯ ಹಡಪ್ಸರ್‌ನ ಲಿಯಾಕತ್ ಅನ್ಸಾರಿ ಮತ್ತು ಯೂನುಸ್ ಖಾನ್ ಅವರ ಕುಟುಂಬ ಸದಸ್ಯರು ಭೂಶಿ ಅಣೆಕಟ್ಟಿಗೆ ಭೇಟಿ ನೀಡಲು ಯೋಜಿಸಿದ್ದರು. ಅದರಂತೆ ಭಾನುವಾರ ಅಪರಾಹ್ನ 3 ಗಂಟೆ ಸುಮಾರಿಗೆ 17-18 ಕುಟುಂಬ ಸದಸ್ಯರು ಭೂಶಿ ಅಣೆಕಟ್ಟಿನ ಹಿಂಭಾಗದ ಜಲಪಾತವನ್ನು ತಲುಪಿದರು. ನಿರಂತರ ಮಳೆಯಿಂದಾಗಿ ನೀರಿನ ಮಟ್ಟವು ಹಠಾತ್ ಏರಿಕೆಯಾಗಿತ್ತು. ಕಡಿಮೆ ನೀರಿದ್ದಾಗ ಜಲಪಾತದ ನಡುವೆ ಹೋಗಿದ್ದ ಕುಟುಂಬದ 10 ಸದಸ್ಯರು ನೀರಿನ ತೊರೆಗಳಲ್ಲಿ ಸಿಲುಕಿ ಮುಳುಗಲು ಪ್ರಾರಂಭಿಸಿದರು. ಆದಾಗ್ಯೂ, ಅವರಲ್ಲಿ ಐವರು ನೀರಿನ ತೊರೆಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಉಳಿದ ಐದು ಮಂದಿ ನೀರಿನಲ್ಲಿ ಕೊಚ್ಚಿ ಹೋಗಿದ್ದರು.
ಪರಿಸ್ಥಿತಿಯ ಗಾಂಭೀರ್ಯವನ್ನು ಪರಿಗಣಿಸಿದ ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳದ ಸೇವೆಗಳು, ಶಿವದುರ್ಗ ಮಿತ್ರ ಮಂಡಲ್, ಅಪದ ಮಿತ್ರ ಮಾವಲ್ ಮತ್ತು ವನ್ಯಾ ಜೀವ್ ರಕ್ಷಣಾ ಸಂತಾ ಸದಸ್ಯರು ಕೂಡಲೇ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ದಿನದ ಅಂತ್ಯದ ವೇಳೆಗೆ, ಅಧಿಕಾರಿಗಳು ಮೂರು ಮೃತ ದೇಹಗಳನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಪ್ರವಾಸಿಗರಿಗೆ ಎಚ್ಚರಿಕೆ; ಪೊಲೀಸರಿಂದ ಜಾಗೃತಿ ಸಂದೇಶ ರವಾನೆ
ಮುಂಗಾರು ಮಳೆ ಶುರುವಾಗಿದ್ದು, ಭುಶಿ ಅಣೆಕಟ್ಟು, ಘುಬಾದ್ ತಲಾಬ್, ಟಾಟಾ ಅಣೆಕಟ್ಟು, ತುಂಗರ್ಲಿ ಅಣೆಕಟ್ಟು, ರಾಜ್ಮಾಚಿ ಪಾಯಿಂಟ್, ಕುನೆಗಾಂವ್, ಕುರ್ವಾಂಡೆ ಪಾಯಿಂಟ್ಗಳಿಗೆ ಭೇಟಿ ನೀಡುವಾಗ ಪ್ರವಾಸಿಗರು ಜಾಗರೂಕರಾಗಿರಬೇಕು ಎಂದು ಪೊಲೀಸರು ಎಚ್ಚರಿಸಿದ್ದಾರೆ.
“ನೀರಿನಲ್ಲಿ ಕೊಚ್ಚಿ ಹೋದ ಐವರ ಪೈಕಿ ಮೂವರ ಮೃತದೇಹ ಪತ್ತೆಯಾಗಿದೆ. ಅವುಗಳನ್ನು ಮಹಜರಿಗೆ ಕಳುಹಿಸಲಾಗಿದೆ. ಇನ್ನುಳಿದ ಇಬ್ಬರ ಮೃತದೇಹಕ್ಕಾಗಿ ಸೋಮವಾರ ಶೋಧ ಮುಂದುವರಿಯಲಿದೆ” ಎಂದು ಲೋನಾವ್ಲಾ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಸುಹಾಸ್ ಜಗತಾಪ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಪುಣೆ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ ಎಸ್ಪಿ) ಪಂಕಜ್ ದೇಶಮುಖ್ ಅವರು ರಕ್ಷಣಾಕಾರ್ಯಾಚರಣೆ ಕುರಿತು ಮಾತನಾಡಿದ್ದು, “ನಾವು 40 ವರ್ಷದ ಮಹಿಳೆ ಮತ್ತು ಇಬ್ಬರು ಹುಡುಗಿಯರ ಶವಗಳನ್ನು ಪತ್ತೆ ಹಚ್ಚಿದ್ದೇವೆ. ಘಟನೆಯಲ್ಲಿ 9 ವರ್ಷದ ಬಾಲಕಿ ಮತ್ತು 4 ವರ್ಷದ ಬಾಲಕ ನಾಪತ್ತೆಯಾಗಿದ್ದಾರೆ. ಎಲ್ಲರೂ ಒಂದೇ ಕುಟುಂಬದವರು. ಭೂಶಿ ಅಣೆಕಟ್ಟಿನಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಜಲಪಾತದಲ್ಲಿ ಜಾರಿ ಕೆಳಭಾಗದ ಜಲಾಶಯದಲ್ಲಿ ಮುಳುಗಿ ದುರಂತ ಸಂಭವಿಸಿದೆ” ಎಂದು ತಿಳಿಸಿದರು.
ಪುಣೆ ಜಿಲ್ಲೆಯ ಘಟ್ಟ ಪ್ರದೇಶಗಳಲ್ಲಿ ಮಳೆಯ ಚಟುವಟಿಕೆ ಗಮನಾರ್ಹವಾಗಿ ಹೆಚ್ಚಾಗಿದೆ. ಜೂನ್ 30 ರ ಭಾನುವಾರ ಲೋನಾವಾಲಾದಲ್ಲಿ 163 ಮಿ.ಮೀ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.