Kanhaiya on RSS-BJP: 'ಆರೆಸ್ಸೆಸ್ ಮರದ ಬೇರಾದರೆ, ಬಿಜೆಪಿ ಅದರ ಹಣ್ಣು.. ಅವೆರಡನ್ನು ಪ್ರತ್ಯೇಕವಾಗಿ ನೋಡುವುದಿಲ್ಲ' - ಕನ್ಹಯ್ಯಾ ಕುಮಾರ್
Jan 16, 2023 02:45 PM IST
ಕಾಂಗ್ರೆಸ್ ಮುಖಂಡ ಕನ್ಹಯ್ಯಾ ಕುಮಾರ್
- “ನಾವು ಆರೆಸ್ಸೆಸ್ ಮತ್ತು ಬಿಜೆಪಿಯನ್ನು ಪ್ರತ್ಯೇಕವಾಗಿ ನೋಡುವುದಿಲ್ಲ. ಆರೆಸ್ಸೆಸ್ ಮರದ ಬೇರಾದರೆ, ಬಿಜೆಪಿ ಅದರ ಹಣ್ಣು” ಎಂದು ಕಾಂಗ್ರೆಸ್ ಮುಖಂಡ ಕನ್ಹಯ್ಯಾ ಕುಮಾರ್ ಹೇಳಿದರು.
ಪಂಜಾಬ್: “ನಾವು ಆರೆಸ್ಸೆಸ್ ಮತ್ತು ಬಿಜೆಪಿಯನ್ನು ಪ್ರತ್ಯೇಕವಾಗಿ ನೋಡುವುದಿಲ್ಲ. ಆರೆಸ್ಸೆಸ್ ಮರದ ಬೇರಾದರೆ, ಬಿಜೆಪಿ ಅದರ ಹಣ್ಣು” ಎಂದು ಕಾಂಗ್ರೆಸ್ ಮುಖಂಡ ಕನ್ಹಯ್ಯಾ ಕುಮಾರ್ ಹೇಳಿದರು.
ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕನ್ಹಯ್ಯಾ ಕುಮಾರ್, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಇತ್ತೀಚಿನ ಸಂದರ್ಶನವನ್ನು ಉಲ್ಲೇಖಿಸಿ ಈ ಹೇಳಿಕೆ ನೀಡಿದ್ದಾರೆ. “ಆರೆಸ್ಸೆಸ್ನವರು ತಮ್ಮನ್ನು ತಾವು ಸಾಂಸ್ಕೃತಿಕ ಸಂಘಟನೆ ಎಂದು ಕರೆದರೂ, ಅವರ ಸಿದ್ಧಾಂತವು ಸಂಪೂರ್ಣವಾಗಿ ರಾಜಕೀಯವನ್ನು ಆಧರಿಸಿದೆ. ಬಲಪಂಥೀಯ ಸಂಘಟನೆಯ ಸಿದ್ಧಾಂತವು ಯಾವಾಗಲೂ ಸಂಪೂರ್ಣವಾಗಿ ರಾಜಕೀಯವನ್ನು ಆಧರಿಸಿರುತ್ತದೆ. ಧರ್ಮವು ದೇಶಕ್ಕೆ ಸೇರಿದ್ದು ಆದರೆ ಕೋಮುವಾದವಲ್ಲ. ಆರೆಸ್ಸೆಸ್ ಧಾರ್ಮಿಕ ಚಿಹ್ನೆಗಳನ್ನು ಬಳಸಿಕೊಂಡು ಕೋಮುವಾದಿ ರಾಜಕಾರಣ ಮಾಡುತ್ತಿದೆ” ಎಂದರು.
“ಧಾರ್ಮಿಕ ವ್ಯಕ್ತಿಯು ಯಾರನ್ನಾದರೂ ಆಕ್ರಮಣ ಮಾಡುವುದನ್ನು ಅಥವಾ ದ್ವೇಷವನ್ನು ಹರಡುವುದನ್ನು ಬೆಂಬಲಿಸುವುದಿಲ್ಲ. ಊಳಿಗಮಾನ್ಯ ಮತ್ತು ಧರ್ಮವನ್ನು ಒಟ್ಟಿಗೆ ಸೇರಿಸಿದಾಗ ಅದನ್ನು ರಾಜಕೀಯ ಎಂದು ಕರೆಯಲಾಗುತ್ತದೆ” ಎಂದು ಅವರು ಹೇಳಿದರು.
ಇತ್ತೀಚೆಗೆ 'ಆರ್ಗನೈಸರ್' ಮತ್ತು 'ಪಾಂಚಜನ್ಯ' ನಿಯತಕಾಲಿಕೆಗಳಿಗೆ ನೀಡಿದ ಸಂದರ್ಶನದಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್, ಭಾರತದ ಮುಸಲ್ಮಾನರು ಭಯಪಡುವ ಅಗತ್ಯವೇ ಇಲ್ಲ. ಆದರೆ ಅವರು ಪರಮಾಧಿಕಾರದ ಹೇಳಿಕೆಗಳನ್ನು ಕೈಬಿಡಬೇಕು. ಹಿಂದು ಎಂಬುದು ನಮ್ಮ ಅಸ್ಮಿತೆ, ರಾಷ್ಟ್ರೀಯತೆ. ಪ್ರತಿಯೊಬ್ಬರೂ ತಮ್ಮವರೆಂದು ಒಟ್ಟಿಗೆ ಕರೆದೊಯ್ಯುವ ಸಂಸ್ಕೃತಿ ನಮ್ಮದು. ನಮ್ಮ ದೇಶದಲ್ಲಿ ಇಸ್ಲಾಂ ಧರ್ಮಕ್ಕೆ ಯಾವುದೇ ಬೆದರಿಕೆ ಇಲ್ಲ. ಆದರೆ ಅದು 'ನಾವು ದೊಡ್ಡವರು' ಎಂಬ ಭಾವನೆಯನ್ನು ಬಿಡಬೇಕಾಗುತ್ತದೆ ಎಂದು ಹೇಳಿದ್ದರು.
ಹಿಂದುಸ್ತಾನವು ಹಿಂದುಸ್ತಾನವಾಗಿಯೇ ಉಳಿಯಬೇಕು. ಇದು ಬಹಳ ಸರಳವಿಚಾರ. ಭಾರತದಲ್ಲಿ ಮುಸ್ಲಿಮರು ಯಾರಿದ್ದಾರೋ ಅವರಿಗೆ ಯಾವುದೇ ಹಾನಿ ಇಲ್ಲ. ಅವರು ಇದ್ದಾರೆ ಮತ್ತು ಅವರು ಇಲ್ಲೇ ಇರಲು ಬಯಸುತ್ತಾರೆ. ಇರಲಿ. ಪೂರ್ವಜರ ಬಳಿಗೆ ಮರಳಲು ಬಯಸಿದರೆ ಮರಳಿ ಬರಲಿ. ಇದು ಅವರ ಮನಸ್ಸಿನಲ್ಲಿದೆ. ಆದರೆ, ಭಾರತದಲ್ಲಿ ಇಸ್ಲಾಂ ಧರ್ಮಕ್ಕೆ ಯಾವುದೇ ಬೆದರಿಕೆ ಇಲ್ಲ. ಆದರೆ ನಾವು ಒಂದಾನೊಂದು ಕಾಲದಲ್ಲಿ ರಾಜರಾಗಿದ್ದೆವು. ನಾವು ದೊಡ್ಡವರು, ಮತ್ತೆ ರಾಜರಾಗುತ್ತೇವೆ ಎಂಬ ಭಾವನೆಗಳನ್ನು ತೊರೆಯಬೇಕಾಗುತ್ತದೆ. ಅದು ಹಿಂದು ಆಗಿದ್ದರೂ, ಕಮ್ಯೂನಿಸ್ಟ್ ಆಗಿದ್ದರೂ ಪ್ರತಿಯೊಂದು ಸಮುದಾಯದವರೂ ಈ ಭಾವನೆಯನ್ನು ತೊರೆಯಬೇಕು. ಹಿಂದೂಗಳಲ್ಲಿ ಅಂತಹ ಹಠಮಾರಿತನವಿಲ್ಲ ಎಂದು ಹೇಳಿದ್ದರು ಭಾಗವತ್.
ಆಕ್ರಮಣಕಾರಿಯಲ್ಲದ ಏಕೈಕ ಸಮಾಜ ಹಿಂದು. ಅದಕ್ಕೆ ಅಹಿಂಸೆ, ಪ್ರಜಾಪ್ರಭುತ್ವ, ಜಾತ್ಯತೀತತೆ ಹೀಗೆ ಎಲ್ಲವನ್ನೂ ಉಳಿಸಿಕೊಳ್ಳಬೇಕಿದೆ. ಟಿಮೋರ್, ಸುಡಾನ್, ಪಾಕಿಸ್ತಾನ ರಚನೆ ಆಗಿರುವುದನ್ನು ನಾವು ನೋಡಿದ್ದೇವೆ. ಇದು ಏಕೆ ಸಂಭವಿಸಿತು? ರಾಜಕೀಯವನ್ನು ಬಿಟ್ಟು ತಟಸ್ಥವಾಗಿ ಯೋಚಿಸಿದರೆ ಪಾಕಿಸ್ತಾನ ಏಕೆ ರೂಪುಗೊಂಡಿತು? ಭಾರತ ಒಂದಾಗಿತ್ತು. ಬ್ರಿಟಿಷರ ದಾಳಿ ಮತ್ತು ಬ್ರಿಟಿಷರು ಹೋದ ನಂತರ ಈ ದೇಶ ಹೇಗೆ ಒಡೆದು ಹೋಯ್ತು... ಅಂದು ನಾವೆಲ್ಲ ಹಿಂದು ಚೇತನವನ್ನು ಮರೆತಿದ್ದರಿಂದಲೇ ಇಷ್ಟೆಲ್ಲ ನರಳಬೇಕಾಯಿತು ಎಂದು ಹೇಳಿದ್ದರು.
ಈಗ ನಮ್ಮ ರಾಜಕೀಯ ಸ್ವಾತಂತ್ರ್ಯವನ್ನು ಕದಡುವ ಶಕ್ತಿ ಯಾರಿಗೂ ಇಲ್ಲ. ಹಿಂದೂ ಈ ದೇಶದಲ್ಲಿ ಉಳಿಯುತ್ತಾನೆ, ಹಿಂದೂ ಎಲ್ಲಿಯೂ ಹೋಗುವುದಿಲ್ಲ ಎಂಬುದು ಈಗ ದೃಢಪಟ್ಟಿದೆ. ಹಿಂದೂಗಳು ಈಗ ಜಾಗೃತರಾಗಿದ್ದಾರೆ. ಈಗ ನಾವು ನಮ್ಮೊಳಗಿನ ಸಮರವನ್ನು ಜಯಿಸಬೇಕು ಮತ್ತು ನಮ್ಮಲ್ಲಿರುವ ಪರಿಹಾರವನ್ನು ಪ್ರಸ್ತುತಪಡಿಸಬೇಕು ಎಂದು ಭಾಗವತ್ ಹೇಳಿಕೆ ನೀಡಿದ್ದರು.