ಅಮೆರಿಕ ಅಧ್ಯಕ್ಷರ ಚುನಾವಣೆ ಫಲಿತಾಂಶ ಭಾರತೀಯರಿಗೆ ಎಷ್ಟೊತ್ತಿಗೆ ಗೊತ್ತಾಗುತ್ತೆ? ಕಳೆದ ಬಾರಿ ಎಷ್ಟೊತ್ತಿಗೆ ಗೊತ್ತಾಗಿತ್ತು? -ಇಲ್ಲಿದೆ ವಿವರ
Nov 05, 2024 10:06 PM IST
ಅಮೆರಿಕ ಅಧ್ಯಕ್ಷರ ಚುನಾವಣೆ ಫಲಿತಾಂಶ ಭಾರತೀಯರಿಗೆ ಎಷ್ಟೊತ್ತಿಗೆ ಗೊತ್ತಾಗುತ್ತೆ?
- ಯುಎಸ್ ಚುನಾವಣಾ ಫಲಿತಾಂಶದ ಬಗ್ಗೆ ಭಾರತೀಯರ ಕುತೂಹಲ ಹೆಚ್ಚುತ್ತಿದೆ. ಅಮೆರಿಕದ 47ನೇ ಅಧ್ಯಕ್ಷರು ಯಾರು ಎಂಬುದು ತಿಳಿಯುವುದು ಹೇಗೆ? ಯುಎಸ್ ಚುನಾವಣಾ ಫಲಿತಾಂಶ ಯಾವಾಗ ತಿಳಿಯಲಿದೆ? ಭಾರತದಲ್ಲಿ ಎಷ್ಟೊತ್ತಿಗೆ ಫಲಿತಾಂಶ ಗೊತ್ತಾಗಲಿದೆ ಎಂಬುದನ್ನು ನೋಡೋಣ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ವಿಶ್ವದ ದೊಡ್ಡಣ್ಣ ಎನಿಸಿಕೊಳ್ಳುವ ಯುಎಸ್‌ನಲ್ಲಿ ಭಾರತಕ್ಕಿಂತ ಭಿನ್ನ ಸ್ವರೂಪದಲ್ಲಿ ಚುನಾವಣೆ ನಡೆಯುತ್ತದೆ. ದೇಶದುದ್ದಕ್ಕೂ ಐವತ್ತೊಂದು ಪ್ರತ್ಯೇಕ ಚುನಾವಣೆ ನಡೆಯುತ್ತಿದ್ದು, ಪ್ರತಿ ರಾಜ್ಯದಲ್ಲೂ ಒಂದೊಂದು ನಿಯಮಗಳಿವೆ. ಭಾರತೀಯ ಕಾಲಮಾನದ ಪ್ರಕಾರ, ನವೆಂಬರ್ 5 ಅಮೆರಿಕ ಚುನಾವಣಾ ದಿನ ಆಗಿದ್ದರೂ, ಡೆಮೋಕ್ರಾಟ್ ಪಕ್ಷದ ಕಮಲಾ ಹ್ಯಾರಿಸ್ ಮತ್ತು ಅವರ ಎದುರಾಳಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ನಡುವೆ ಗೆಲುವು ಯಾರಿಗೆ ಒಲಿಯಲಿದೆ ಎಂಬುದರ ಅಂದಾಜು ಚಿತ್ರಣ ಸಿಗಲು ಕೆಲವು ಗಂಟೆಗಳು ಅಥವಾ ದಿನಗಳೇ ಬೇಕಾಗುತ್ತದೆ.
ಭಾರತಕ್ಕಿಂತ ಅಮೆರಿಕ ಚುನಾವಣೆ ತುಂಬಾ ಭಿನ್ನ. ಅಲ್ಲಿ ಸ್ಪಷ್ಟ ಫಲಿತಾಂಶ ಕೊಡಲು ರಾಷ್ಟ್ರೀಯ ಮಟ್ಟದಲ್ಲಿ ಯಾ
ವುದೇ ಚುನಾವಣಾ ಆಯೋಗವೇ ಇಲ್ಲ. ಹೀಗಾಗಿ ಆಯಾ ರಾಜ್ಯ ಮತ್ತು ಸ್ಥಳೀಯ ಸರ್ಕಾರಗಳು ಮತ ಎಣಿಕೆಯ ಜವಾಬ್ದಾರಿ ಹೊಂದಿರುತ್ತದೆ. ಇದೇ ಕಾರಣಕ್ಕಾಗಿ, ಅಮೆರಿಕ ಚುನಾವಣಾ ಟ್ರೆಂಡ್ ಸಿಗಲು ಜಗತ್ತಿನ ವಿವಿಧ ರಾಷ್ಟ್ರಗಳು ಯುಎಸ್ ಮಾಧ್ಯಮಗಳ ಮೇಲೆ ಕಣ್ಣಿಟ್ಟಿರುತ್ತದೆ.
ಭಾರತದಂತೆ ಅಮೆರಿಕ ಕೂಡಾ ದೊಡ್ಡ ದೇಶ. ಇಲ್ಲಿ ವಿವಿಧ ಪ್ರದೇಶಗಳಲ್ಲಿ ವಿವಿಧ ಸಮಯಗಳಲ್ಲಿ ಮತದಾನ ನಡೆಯುತ್ತದೆ. ಯುಎಸ್‌ನಲ್ಲಿ ಆರು ಸಮಯ ವಲಯಗಳಿವೆ. ಸುದ್ದಿಸಂಸ್ಥೆ ಬಿಬಿಸಿ ವರದಿ ಪ್ರಕಾರ, ದೇಶದಲ್ಲಿ ಕೊನೆಯ ಮತದಾನವು 01.00 ESTಗೆ ಮುಕ್ತಾಯಗೊಳ್ಳುತ್ತದೆ. ಅಂದರೆ ಭಾರತೀಯ ಕಾಲಮಾನದ ಪ್ರಕಾರ ನವೆಂಬರ್ 6ರ ಬುಧವಾರ ಬೆಳಿಗ್ಗೆ 11.30ಕ್ಕೆ ಯುಸ್‌ನಲ್ಲಿ ಮತದಾನ ಮುಕ್ತಾಯಗೊಳ್ಳುತ್ತದೆ. ಹೀಗಾಗಿ, ಭಾರತದಲ್ಲಿ ಬುಧವಾರ ರಾತ್ರಿಯ ಹೊತ್ತಿಗೆ, ಚುನಾವಣಾ ಟ್ರೆಂಡ್ ಬಗೆಗಿನ ಸ್ಪಷ್ಟ ಚಿತ್ರಣ ಹೊರಹೊಮ್ಮಲು ಆರಂಭವಾಗುತ್ತದೆ. ಅಂದರೆ, ಗೆಲುವು ಸಾಧಿಸಲಿರುವ ಅಭ್ಯರ್ಥಿಯ ಚಿತ್ರಣ ಸಿಗಲಿದೆ.
2020 ಮತ್ತು 2016 ರ ಚುನಾವಣಾ ಫಲಿತಾಂಶಗಳನ್ನು ಯಾವಾಗ ಘೋಷಿಸಲಾಗಿತ್ತು?
2020ರ ಯುಎಸ್ ಅಧ್ಯಕ್ಷೀಯ ಚುನಾವಣೆಯು ನವೆಂಬರ್ 3ರಂದು ನಡೆಯಿತು. ಆದರೂ, ಡೆಮೋಕ್ರೆಟಿಕ್ ಪಕ್ಷದ ಜೋ ಬಿಡೆನ್ ಅವರು ಟ್ರಂಪ್ ಅವರನ್ನು ಸೋಲಿಸಿದ್ದನ್ನು ಘೋಷಿಸಲು ಮಾಧ್ಯಮಗಳು ನಾಲ್ಕು ದಿನಗಳನ್ನು (ನವೆಂಬರ್ 7) ತೆಗೆದುಕೊಂಡಿತು. ಏಕೆಂದರೆ ಪೆನ್ಸಿಲ್ವೇನಿಯಾದಲ್ಲಿ ಫಲಿತಾಂಶವು ತಡವಾಗಿ ಸ್ಪಷ್ಟವಾಗಿತ್ತು. 2020ರಲ್ಲಿ, ಆರಂಭದಲ್ಲಿ ಟ್ರಂಪ್ ಮುನ್ನಡೆ ಹೊಂದಿದ್ದರು. ಆದಾಗ್ಯೂ, ಮೇಲ್-ಇನ್ ಮತಪತ್ರಗಳನ್ನು ಎಣಿಸಿದ ನಂತರ ಬಿಡೆನ್ ನಂತರದ ಎರಡು ದಿನಗಳಲ್ಲಿ ಮುನ್ನಡೆ ಸಾಧಿಸಿದರು.
2016ರ ಚುನಾವಣೆಯಲ್ಲಿ, ಅಸೋಸಿಯೇಟೆಡ್ ಪ್ರೆಸ್ ಸುದ್ದಿಸಂಸ್ಥೆಯು ಚುನಾವಣಾ ರಾತ್ರಿ ಟ್ರಂಪ್ ಅವರನ್ನು ವಿಜಯಿ ಎಂದು ಸರಿಯಾಗಿ ಘೋಷಿಸಿತ್ತು. ಮರುದಿನ ಬೆಳಿಗ್ಗೆ ಬಿಬಿಸಿ ವಿಜೇತರನ್ನು ಘೋಷಿಸಿತು.
ಈ ಬಾರಿ ಯುಸ್ ಚುನಾವಣೆಯ ಅಧಿಕೃತ ಫಲಿತಾಂಶವನ್ನು ಭಾರತದಲ್ಲಿ ಯಾವಾಗ ನಿರೀಕ್ಷಿಸಬಹುದು?
ಮಾಧ್ಯಮ ಸಂಸ್ಥೆಗಳು ವಿಜೇತರನ್ನು ಘೋಷಿಸಿದ ಮಾತ್ರಕ್ಕೆ, ಚುನಾವಣಾ ಪ್ರಕ್ರಿಯೆಯ ಅಂತ್ಯವಲ್ಲ. ಇದು ಆರಂಭವಷ್ಟೇ. ಮತ ಚಲಾಯಿಸಿದ ನಂತರ, ರಾಜ್ಯಗಳು ಫಲಿತಾಂಶಗಳನ್ನು ಪ್ರಮಾಣೀಕರಿಸುತ್ತವೆ. ಈ ಪ್ರಕ್ರಿಯೆಯು ಡಿಸೆಂಬರ್ 11ರೊಳಗೆ ಪೂರ್ಣಗೊಳ್ಳಬೇಕು. ಅದಾದ ಆರು ದಿನಗಳ ನಂತರ, 538 ಮತದಾರರು ತಮ್ಮ ರಾಜ್ಯಗಳ ರಾಜಧಾನಿಗಳಲ್ಲಿ ಔಪಚಾರಿಕವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಮತ ಚಲಾಯಿಸಲು ಭೇಟಿಯಾಗುತ್ತಾರೆ. ಈ ಮತಗಳ ಪ್ರಮಾಣಪತ್ರಗಳನ್ನು ನಂತರ ಡಿಸೆಂಬರ್ ನಾಲ್ಕನೇ ಬುಧವಾರದೊಳಗೆ US ಸೆನೆಟ್ ಮುಖ್ಯಸ್ಥರಿಗೆ ಸಲ್ಲಿಸಲಾಗುತ್ತದೆ.
2025ರ ಜನವರಿ 6ರಂದು, ಚುನಾವಣಾ ಮತಗಳನ್ನು ಎಣಿಸಲು ಯುಎಸ್ ಕಾಂಗ್ರೆಸ್ ಸಭೆ ಸೇರುತ್ತದೆ. ಈ ದಿನದಂದು ಅಮೆರಿಕ ಮತದಾರರು ಅಧಿಕೃತವಾಗಿ ಪ್ರತಿ ಅಭ್ಯರ್ಥಿಗೆ ಚಲಾಯಿಸಿದ ಮತ ಮತ್ತು ಚುನಾವಣೆಯಲ್ಲಿ ಗೆದ್ದ ಮತಗಳ ಸಂಖ್ಯೆಯನ್ನು ತಿಳಿದುಕೊಳ್ಳಬಹುದು. ಜನವರಿ 20ರಂದು,ನೂತನ ಅಧ್ಯಕ್ಷರ ಪ್ರಮಾಣವಚನ ಸಮಾರಂಭವು ರಾಜಧಾನಿ ವಾಷಿಂಗ್ಟನ್‌ನಲ್ಲಿ ನಡೆಯುತ್ತದೆ.
ಭಾರತದಲ್ಲಿ ಅಮೆರಿಕ ಚುನಾವಣೆ ಫಲಿತಾಂಶ ವೀಕ್ಷಣೆ ಹೇಗೆ?
ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತದಾನ, ಫಲಿತಾಂಶಗಳನ್ನು ಅಲ್ಲಿನ ಮಾಧ್ಯಮಗಳು ಪ್ವರದಿ ಮಾಡುತ್ತವೆ. ವಿವಿಧ ವೆಬ್ ಮಾಧ್ಯಮಗಳಲ್ಲಿ ಅಥವಾ ಚಾನೆಲ್‌ಗಳಲ್ಲಿ ಇವು ಕಾಲಕಾಲಕ್ಕೆ ಪ್ರಸಾರವಾಗುತ್ತವೆ.