ಅಮೆರಿಕ ಅಧ್ಯಕ್ಷ ಚುನಾವಣೆಯಲ್ಲಿ ವಿವೇಕ್ ರಾಮಸ್ವಾಮಿ ಹವಾ; ರಂಗಸ್ವಾಮಿ ಮೂಕನಹಳ್ಳಿ ಬರಹ
Aug 19, 2023 11:25 AM IST
ಅಮೆರಿಕ ಅಧ್ಯಕ್ಷ ಚುನಾವಣೆಯಲ್ಲಿ ವಿವೇಕ ರಾಮಸ್ವಾಮಿ ಹವಾ; ರಂಗಸ್ವಾಮಿ ಮೂಕನಹಳ್ಳಿ ಬರಹ
- ಕೇರಳದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿ, ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಬೃಹತ್ ಉದ್ಯಮ ಸೃಷ್ಟಿ ಮಾಡಿ, ಇದೀಗ ಅದೇ ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ್ದಾರೆ ವಿವೇಕ್ ಗಣಪತಿ ರಾಮಸ್ವಾಮಿ.
Vivek Ramaswamy: ಜಗತ್ತಿನ ದೊಡ್ಡಣ್ಣ ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಸಜ್ಜಾಗುತ್ತಿದೆ. ಈ ಚುನಾವಣೆಯ ಬೆನ್ನಲ್ಲೇ ಭಾರತ ಮೂಲದ ವಿವೇಕ್ ಗಣಪತಿ ರಾಮಸ್ವಾಮಿ ಎಂಬ 38ರ ಹರೆಯದ ವ್ಯಕ್ತಿಯ ಹೆಸರೂ ಮುನ್ನೆಲೆಗೆ ಬಂದಿದೆ. 2024ರ ಅಮೆರಿಕಾ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿಯಾಗಿ ವಿವೇಕ್ ಕಣಕ್ಕಿಳಿಯಲಿದ್ದಾರೆ. ಬೃಹತ್ ವಾಣಿಜ್ಯೋದ್ಯಮಿಯಾಗಿ, ತಮ್ಮ ಮಾತಿನ ಶೈಲಿಯಿಂದಲೇ ಗುರುತಿಸಿಕೊಂಡಿರುವ ವಿವೇಕ್ ಬಗ್ಗೆ ಎಲಾನ್ ಮಸ್ಕ್ ಸಹ ಮೆಚ್ಚುಗೆ ವ್ಯಕ್ತಪಡಿಸಿ ಬೆಂಬಲ ಸೂಚಿಸಿದ್ದಾರೆ. ಇದೀಗ ಇದೇ ವಿವೇಕ್ ಬಗ್ಗೆ ರಂಗಸ್ವಾಮಿ ಮೂಕನಹಳ್ಳಿ ತಮ್ಮ ಫೇಸ್‌ಬುಕ್‌ನಲ್ಲಿ ಬರಹವೊಂದನ್ನು ಪ್ರಕಟಿಸಿದ್ದಾರೆ. ಆ ಬರಹ ಈ ಕೆಳಗಿನಂತಿದೆ.
ರಂಗಸ್ವಾಮಿ ಮೂಕನಹಳ್ಳಿ ಬರಹ
ಬಯೋಟೆಕ್ ಮತ್ತು ಫೈನಾನ್ಸ್ ಬಿಸಿನೆಸ್‌ಗಳ ಮೂಲಕ ಹತ್ತಿರತ್ತಿರ 650 ಮಿಲಿಯನ್ ಡಾಲರ್ ನೆಟ್ ವರ್ತ್ ಹೊಂದಿರುವ ವಿವೇಕ್ ಗಣಪತಿ ರಾಮಸ್ವಾಮಿ ಸದ್ಯಕ್ಕೆ ಸುದ್ದಿಯಲ್ಲಿದ್ದಾರೆ. 38 ರ ಹರೆಯದ ವಿವೇಕ್ ಉದ್ಯಮಿಯಾಗಿ ಅತ್ಯಂತ ದೊಡ್ಡ ಯಶಸ್ಸು ಕಂಡಿದ್ದಾರೆ. ನಿನ್ನೆ ಮೊನ್ನೆಯವರೆಗೆ ತಮ್ಮ ವ್ಯಾಪಾರಗಳ ಸಿಇಓ, ಛೇರ್ಮನ್ ಪಟ್ಟಗಳನ್ನು ಹೊಂದಿದ್ದ ಇವರು ರಿಪಬ್ಲಿಕನ್ ಪಾರ್ಟಿಯ ಮೂಲಕ ಅಮೆರಿಕಾದ ಅಧ್ಯಕ್ಷೀಯ ಪಟ್ಟಕ್ಕೆ ಉಮೇದುವಾರರಾಗಿ ಅರ್ಜಿ ಸಲ್ಲಿಸಿದ್ದಾರೆ. ಅಮೆರಿಕನ್ ಮೂಲಭೂತವಾದಿ ಜನರ ಮಧ್ಯದಲ್ಲಿ ಅತಿ ಹೆಚ್ಚು ಪ್ರಸಿದ್ಧರಾಗಿದ್ದಾರೆ. ಇದೆ ಪಾರ್ಟಿಯ ಮೂಲಕ ಮರು ಆಯ್ಕೆ ಬಯಸಿ ಉಮೇದುವಾರಿಕೆಯಲ್ಲಿರುವ ಟ್ರಂಪ್ ಮಹಾಶಯನನ್ನು ಸೋಲಿಸಬೇಕಾದ ದೊಡ್ಡ ಕೆಲಸ ಇವರ ಮುಂದಿದೆ.
ಅಮೆರಿಕಾದ ಜನತೆಗೆ, ಅಮೇರಿಕೆ ದೇಶಕ್ಕೆ ಐಡೆಂಟಿಟಿ ಕ್ರೈಸಿಸ್ ಹೆಚ್ಚಾಗಿದೆ. ನಾವು ಮೊದಲು ಅಡ್ರೆಸ್ ಮಾಡಬೇಕಿರುವ ವಿಷಯವಿದು ಎನ್ನುತ್ತಾ, ನಮ್ಮ ಜನತೆಗೆ ಜೀವನದ ಉದ್ದೇಶ -ಪರ್ಪಸ್ ಗೊತ್ತಿಲ್ಲ. ಮೊದಲು ಜನತೆಗೆ, ದೇಶಕ್ಕೆ ಒಂದು ಉದ್ದೇಶ ನೀಡುವ ಅವಶ್ಯಕತೆಯಿದೆ ಎನ್ನುವುದನ್ನು ಮುಚ್ಚುಮರೆಯಿಲ್ಲದೆ ಹೇಳುತ್ತಾ, ತಮ್ಮ ಮಾತಿನ ಮೋಡಿಯ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ. ಟ್ರಂಪ್ ಸೋಲಿಸಬೇಕಿದೆ. ಅದೆಲ್ಲಾ ಏನೇ ಇರಲಿ, ಈ ವ್ಯಕ್ತಿ ಇಷ್ಟವಾಗಿದ್ದು ತನ್ನ ಮಾತನಾಡುವ ಕಲೆಯಿಂದ.
ಕೇರಳ ಮೂಲದ ಸಂಪ್ರದಾಯಸ್ಥ ತಮಿಳು ಬ್ರಾಹ್ಮಣ ಕುಟುಂಬ ಅಮೆರಿಕಾ ದೇಶಕ್ಕೆ ವಲಸೆ ಹೋಗಿರುತ್ತದೆ. ಇಂತಹ ವಲಸಿಗಳ ಮನೆಯಲ್ಲಿ ಜನಿಸಿದ ವಿವೇಕ್ ಗಣಪತಿ ರಾಮಸ್ವಾಮಿ , ಸಹಜವಾಗೇ ಅಮೆರಿಕಾದಲ್ಲಿ ಸಿಗುವ ಪ್ರೋತ್ಸಾಹ ಮತ್ತು ಈಸ್ ಆಫ್ ಡುಯಿಂಗ್ ಬಿಸಿನೆಸ್ ಕಲ್ಚರ್ ಬಳಸಿಕೊಂಡು ಇಂದಿಗೆ ತಮ್ಮದೇ ಆದ ಬಿಸಿನೆಸ್ ಸಾಮ್ರಾಜ್ಯ ಕಟ್ಟಿದ್ದಾರೆ. ದಿಕ್ಕು ತಪ್ಪಿರುವ ಅಮೆರಿಕಾ ದೇಶಕ್ಕೆ ಹೊಸ ಐಡೆಂಟಿಟಿ ಬೇಕು. ಸೊಕ್ಕಿನಿಂದ ಕೈಗೆ ಸಿಗದೇ ಮೆರೆಯುತ್ತಿರುವ ಚೀನಾ ದೇಶವನ್ನು ಕೊನೆಪಕ್ಷ ಮಾತುಕತೆಗೆ ಟೇಬಲ್ ಮುಂದೆ ತಂದು ಕೂರಿಸುವ ಕೆಲಸವಾಗಬೇಕು ಎನ್ನುವ ಮಾತುಗಳಿಂದ, ಇರುವ ವೀಕ್ನೆಸ್ಸ್ ಒಪ್ಪಿಕೊಂಡು ಬದಲಾವಣೆಗೆ ದುಡಿಯಬೇಕು ಎನ್ನುತ್ತಾ ದೇಶದ ಜನರಿಗೆ ಹತ್ತಿರವಾಗುತ್ತಿದ್ದಾರೆ. ಟ್ರಂಪ್ ಕೂಡ ಈ ವ್ಯಕ್ತಿ ನಾನೇಳಿದ ವಿಷಯವನ್ನೇ ಸ್ಪಷ್ಟವಾಗಿ, ಜನರಿಗೆ ಅರ್ಥವಾಗುವ ರೀತಿಯಲ್ಲಿ ಹೇಳುತ್ತಿದ್ದಾನೆ, ಐ ಲೈಕ್ ದಿಸ್ ಗಯ್ ಎಂದಿದ್ದಾನೆ ಎನ್ನುವ ಗುಸುಗುಸು ರಿಪಬ್ಲಿಕನ್ ವಲಯದಲ್ಲಿ ಗಿರಕಿ ಹೊಡೆಯುತ್ತಿದೆ .
ರಾಜಕೀಯ, ಅದರ ಫಲಿತಾಂಶವೇನೆ ಇರಲಿ, ಈ ವ್ಯಕ್ತಿಯ ವಾಕ್ಚಾತುರ್ಯಕ್ಕೆ ನಾನು ಬೆರಗಾಗಿದ್ದೇನೆ. ಹೇಳುವ ವಿಷಯದಲ್ಲಿ ಸ್ಪಷ್ಟತೆ, ನಿಖರತೆ ಬೇಕು. ಧ್ವನಿ ಏರಿಸಿ ಅಬ್ಬರಿಸಿ , ಬೊಬ್ಬಿರಿಯುವುದು ಬೇಕಿಲ್ಲ.ವಿವೇಕ್ ಗಣಪತಿ ರಾಮಸ್ವಾಮಿ ಅವರಿಗೆ ಶುಭವಾಗಲಿ .
ಹೋಗುವ ಮುನ್ನ: ನಾಳೆ ವಿವೇಕ್ ಗೆದ್ದರೆ , ಅಮೆರಿಕಾದ ಪ್ರೆಸಿಡೆಂಟ್ ಆದರೆ, ಆಗ ಭಾರತೀಯ ಅಮೆರಿಕಾದ ಪ್ರೆಸಿಡೆಂಟ್ ಆದ, ಇಂಗ್ಲೆಂಡನಲ್ಲೂ ಭಾರತೀಯ, ಇತ್ಯಾದಿ ಭಾವನಾತ್ಮಕ ಬರಹಗಳಿಗೆ ನನ್ನ ಸಮ್ಮತವಿರುವುದಿಲ್ಲ. ಎಷ್ಟೇ ಆದರೂ ಬ್ರಾಹ್ಮಣ ಎಂದು ಯಾವುದೋ ಮಂಡಿಯಲ್ಲಿ ಗೋಣಿಚೀಲ ಹೊರುತ್ತಿರುವ ಬ್ರಾಹ್ಮಣ ಹೆಮ್ಮೆ ಪಟ್ಟುಕೊಂಡರೆ ಅದಕ್ಕೂ ವಿರೋಧವಿದೆ. ಜಗತ್ತು ಪೂಜಿಸುವುದು ಶಕ್ತಿಯನ್ನು. ನಾವೆಲ್ಲರೂ ಆ ನಿಟ್ಟಿನಲ್ಲಿ ಶ್ರಮಿಸಬೇಕಿದೆ ಅಷ್ಟೇ . ಶುಭವಾಗಲಿ ಎಂದಿದ್ದಾರೆ.
ದೇಶ ವಿದೇಶದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ