Vladimir Putin: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಮ್ಮ ಮೊದಲ ಪ್ರತಿರೂಪಿ ಯಾರೆಂಬುದನ್ನು ಬಹಿರಂಗಪಡಿಸಿದ್ರು
Dec 15, 2023 12:37 PM IST
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಅವರ ಎಐ ಪ್ರತಿರೂಪ
Vladimir Putin interacts with AI double: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಪ್ರತಿರೂಪಿಗಳು ಬಹಳ ಜನ ಇದ್ದಾರೆ ಎಂಬ ವದಂತಿಯನ್ನು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಕೂಡ ಪರಿಗಣನೆಗೆ ತೆಗೆದುಕೊಂಡಿದೆ. ವ್ಲಾಡಿಮಿರ್ ಪುಟಿನ್ ತಮ್ಮ ವಾರ್ಷಿಕ ಸುದ್ದಿಗೋಷ್ಠಿಯಲ್ಲಿ ಎಐ ಪ್ರತಿರೂಪಿಯ ಜತೆಗೆ ಸಂವಾದ ನಡೆಸಿದರು.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಪ್ರತಿರೂಪಿಗಳ ವಿಚಾರ ಪದೇಪದೆ ಚರ್ಚೆಗೆ ಒಳಗಾಗುತ್ತಿರುವಾಗಲೇ, ವಾರ್ಷಿಕ ಪತ್ರಿಕಾಗೋಷ್ಠಿಯಲ್ಲಿ ಅವರು ತಮ್ಮದೇ ಎಐ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಥವಾ ಕೃತಕ ಬುದ್ಧಿಮತ್ತೆ) ಪ್ರತಿರೂಪಿ ಜೊತೆಗೆ ಮುಖಾಮುಖಿಯಾದರು. ಅವರ ನಡುವಿನ ಮಾತುಕತೆ ವಿಲಕ್ಷಣವಾಗಿತ್ತು. ಇದಲ್ಲದೇ, ಜನರ ಪ್ರಶ್ನೆಗಳನ್ನು ಎದುರಿಸಿದಾಗ ವ್ಲಾಡಿಮಿರ್ ಪುಟಿನ್ ಮಾತನಾಡಲು ಪದಗಳಿಗೆ ತಡಕಾಡಿ ಕ್ಷಮೆಯಾಚಿಸಿದ ಪ್ರಸಂಗವೂ ನಡೆಯಿತು.
ನೂರಾರು ಪತ್ರಕರ್ತರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ವಾರ್ಷಿಕ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ಈ ವಾರ್ಷಿಕ ಪತ್ರಿಕಾಗೋಷ್ಠಿಯ ವಿಡಿಯೋ ನೇರ ಪ್ರಸಾರವೂ ಇತ್ತು. ಅದರ ನಡುವೆ ಎಐ ಪ್ರತಿರೂಪಿ ಜತೆಗೆ ವ್ಲಾಡಿಮಿರ್ ಪುಟಿನ್ ಮಾತುಕತೆಯನ್ನು ಆಯೋಜಿಸಲಾಗಿತ್ತು. ಈ ವಾರ್ಷಿಕ ಸುದ್ದಿಗೋಷ್ಠಿಯು ಮಾಧ್ಯಮ ಪ್ರತಿನಿಧಿಗಳ ಜೊತೆಗಿನ ವರ್ಷಾಂತ್ಯದ ಪ್ರಶ್ನೋತ್ತರ ಕಾರ್ಯಕ್ರಮದಂತೆ ಇರುವುದು ವಾಡಿಕೆ. ಇದಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶಾದ್ಯಂತ ಆಯ್ದ ಸಾರ್ವಜನಿಕರೂ ಸೇರಿಕೊಳ್ಳುವುದಕ್ಕೆ ಅವಕಾಶ ನೀಡಲಾಗುತ್ತದೆ. ಇದೇ ಸುದ್ದಿಗೋಷ್ಠಿಯಲ್ಲಿ ವ್ಲಾಡಿಮಿರ್ ಪುಟಿನ್ ಮತ್ತು ಎಐ ಪ್ರತಿರೂಪಿ ನಡುವೆ ವಿಲಕ್ಷಣ ಮಾತುಕತೆ ನಡೆಯಿತು.
ವ್ಲಾಡಿಮಿರ್ ಪುಟಿನ್ ಅವರಿಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಕುರಿತ ಪ್ರಶ್ನೆ ಕೇಳುವ ಅವಕಾಶ ಎಐ ಪ್ರತಿರೂಪಿಗೆ ಸಿಕ್ಕಿತ್ತು. ಆದರೆ ಎಐ ಪ್ರತಿರೂಪಿಯ ಪ್ರಶ್ನೆಗೆ ಉತ್ತರ ನೀಡುವಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಿಂದೇಟು ಹಾಕಿದಂತೆ ಭಾಸವಾಗಿದೆ. ಅದರ ಪ್ರಮುಖ ಅಂಶಗಳು ಹೀಗಿವೆ
- "ವ್ಲಾಡಿಮಿರ್ ವ್ಲಾಡಿಮಿರೊವಿಚ್, ಹಲೋ, ನಾನು ಸೇಂಟ್ ಪೀಟರ್ಸ್‌ಬರ್ಗ್ ಸ್ಟೇಟ್ ಯೂನಿವರ್ಸಿಟಿಯ ವಿದ್ಯಾರ್ಥಿ. ನೀವು ಬಹಳಷ್ಟು ಪ್ರತಿರೂಪಿಗಳನ್ನು ಹೊಂದಿದ್ದೀರಿ ಎಂಬುದು ನಿಜವೇ? ಎಂದು ನಾನು ಕೇಳಬಯಸುತ್ತೇನೆ” ಎಂದು ಎಐ ಪ್ರತಿರೂಪಿ ಕೇಳಿದಾಗ, ಸುದ್ದಿಗೋಷ್ಠಿಯ ಸಭಾಂಗಣ ನಗೆಗಡಲಲ್ಲಿ ಮುಳುಗಿತು.
- ಈ ಪ್ರಶ್ನೆ ಅತ್ಯಂತ ವಿರಳ ಮತ್ತು ಅನಿರೀಕ್ಷಿತವಾಗಿ ಎದುರಾದ ಕಾರಣ ವ್ಲಾಡಿಮಿರ್ ಪುಟಿನ್ ಉತ್ತರ ನೀಡಲು ಒಂದು ಕ್ಷಣ ಹಿಂದೇಟು ಹಾಕಿದಂತೆ ಕಂಡಿತು. ಬಳಿಕ ನಿಧಾನವಾಗಿ ಮಾತನಾಡಿದ ಪುಟಿನ್, “ನೀವು ನನ್ನನ್ನು ಹೋಲುತ್ತೀರಿ ಮತ್ತು ನನ್ನ ಧ್ವನಿಯಲ್ಲಿ ಮಾತನಾಡುತ್ತಿದ್ದೀರಿ ಎಂಬುದು ನನಗೆ ಮನವರಿಕೆ ಆಗಿದೆ. ಅದರ ಬಗ್ಗೆಯೇ ಯೋಚಿಸಿದೆ. ಒಬ್ಬ ವ್ಯಕ್ತಿ ಮಾತ್ರ ನನ್ನಂತೆ ಇರಬೇಕು. ನನ್ನ ಧ್ವನಿಯಲ್ಲೇ ಮಾತನಾಡಬೇಕು. ಆ ವ್ಯಕ್ತಿ ನಾನೇ ಆಗಿರಬೇಕು ಎಂದು ನಿರ್ಧರಿಸಿದೆ" ಎಂದು ಹೇಳಿದರು. ಅಲ್ಪ ವಿರಾಮ ತೆಗೆದುಕೊಂಡು ನೀವೆ ನನ್ನ ಮೊದಲ ಪ್ರತಿರೂಪಿ ಎಂದು ಹೇಳಿದರು ಪುಟಿನ್.
ಜನರು ಮತ್ತು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪುಟಿನ್ ಉತ್ತರ ಹೀಗಿತ್ತು
ಎಐ ಪ್ರತಿರೂಪಿ ಜೊತೆಗೆ ಮಾತುಕತೆ ನಡೆಸುವ ಮೊದಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಸಾರ್ವಜನಿಕರು ಮತ್ತು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರ ನೀಡಿದ್ದರು.
1. ರಷ್ಯಾ- ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ವ್ಲಾಡಿಮಿರ್ ಪುಟಿನ್, ಈ ಬಿಕ್ಕಟ್ಟಿನಲ್ಲಿ ಮಾಸ್ಕೋ ತನ್ನ ಗುರಿ ಸಾಧಿಸಿದ ಬಳಿಕ ಮಾತ್ರವೇ ಶಾಂತಿ ನೆಲೆಸಲಿದೆ. ನಾವು ನಮ್ಮ ಗುರಿಗಳನ್ನು ಸಾಧಿಸಿದಾಗ ಶಾಂತಿ ಇರುತ್ತದೆ. ಅವರು ಬದಲಾಗುತ್ತಿಲ್ಲ. ಉಕ್ರೇನನ್ನು ಅದರ ಡಿ-ನಾಜಿಫಿಕೇಶನ್ ಮತ್ತು ಡಿ-ಮಿಲಿಟರೈಸೇಶನ್ ಮತ್ತು ಅದರ ತಟಸ್ಥ ಸ್ಥಿತಿಯನ್ನು ಮುರಿದ ಬಳಿಕವೇ ಶಾಂತಿ ನೆಲೆಸಲಿದೆ. ನಾವು ಈ ವಿಚಾರ ಮಾತನಾಡಿದ್ದನ್ನು ನಾನು ನಿಮಗೆ ಮತ್ತೊಮ್ಮೆ ನೆನಪಿಸುತ್ತೇನೆ ಎಂದು ವ್ಲಾಡಿಮಿರ್ ಪುಟಿನ್ ಎಂದು ಸ್ಪಷ್ಟಪಡಿಸಿದರು.
2. ದೇಶದಲ್ಲಿ ಆಹಾರ ವಸ್ತುಗಳ ಬೆಲೆ ಗಗನಕ್ಕೇರಿದ ವಿಚಾರದಲ್ಲಿ ವ್ಲಾಡಿಮಿರ್ ಪುಟಿನ್ ಕ್ಷಮೆಯಾಚಿಸಿದರು. ಪಿಂಚಣಿ ಪಡೆದು ಬದುಕುತ್ತಿರುವ ಮಹಿಳೆ ಐರಿನಾ ಅಕೋಪೋವಾ ಎಂಬ ಮಹಿಳೆ ತನ್ನ ಅಡುಗೆಮನೆಯಿಂದಲೇ ನೇರ ಪ್ರಸಾರದಲ್ಲಿ ಭಾಗಿಯಾಗಿದ್ದರು.
ಅಧ್ಯಕ್ಷರನ್ನು ಉದ್ದೇಶಿಸಿ ಮಾತನಾಡಿದ ಅವರು, "ವ್ಲಾಡಿಮಿರ್ ವ್ಲಾಡಿಮಿರೊವಿಚ್, ಪಿಂಚಣಿದಾರರ ಮೇಲೆ ಕರುಣೆ ತೋರಿ! ನಾವು ಪಿಂಚಣಿ ರೂಪದಲ್ಲಿ ಲಕ್ಷಗಟ್ಟಣೆ ಹಣ ಪಡೆಯುವುದಿಲ್ಲ. ಮೊಟ್ಟೆ, ಚಿಕನ್ ಮುಂತಾದ ಆಹಾರ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದನ್ನು ನಿಯಂತ್ರಿಸಿ. ನಮ್ಮ ಅಳಲು ಕೇಳಲು ಯಾರೂ ಇಲ್ಲ. ನೀವು ನಮಗೆ ಸಹಾಯ ಮಾಡುವಿರೆಂದು ನಂಬುತ್ತೇವೆ ಎಂದು ಅಸಮಾಧಾನದ ಅಳಲು ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಪುಟಿನ್, ಈ ವಿಚಾರದಲ್ಲಿ ಸರ್ಕಾರ ವಿಫಲವಾಗಿದೆ. ಬೆಲೆ ಏರಿಕೆ ನಿಯಂತ್ರಣಕ್ಕೆ ಕೂಡಲೇ ಕ್ರಮ ಜರುಗಿಸುವುದಾಗಿ ಹೇಳಿ ಮಹಿಳೆಯ ಕ್ಷಮೆಯಾಚಿಸಿದರು.
ದೀರ್ಘ ಅವಧಿಯ ಮ್ಯಾರಥಾನ್ ಪ್ರಶ್ನೋತ್ತರ ಕಾರ್ಯಕ್ರಮ ಇದಾಗಿತ್ತು. ಇದರಲ್ಲಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಸಹಾನುಭೂತಿ ತೋರುವ ನಡವಳಿಕೆ ಪ್ರದರ್ಶಿಸುವುದಕ್ಕೆ ವ್ಲಾಡಿಮಿರ್ ಪುಟಿನ್ ಅವರಿಗೆ ಅವಕಾಶ ಸಿಕ್ಕಿತು ಎಂದು ವರದಿಗಳು ಹೇಳಿವೆ.