Year in Review 2022: ಮರೆಯಲಾಗದ ವರ್ಷದ ದುರ್ಘಟನೆಗಳಿವು; ಹೊಸ ವರ್ಷದಲ್ಲಿ ಮರುಕಳಿಸದಿರಲಿ ಈ ನೋವು..!
Dec 25, 2022 03:42 PM IST
ಮರೆಯಲಾಗದ ವರ್ಷದ ದುರ್ಘಟನೆಗಳು
- 2022ರಲ್ಲಿ ಪ್ರಕೃತಿ ವಿಕೋಪಗಳಿಗೆ ಸಾವಿರಾರು ಜನರು ಬಲಿಯಾಗಿದ್ದರೆ ಮಾನವನ ಕ್ರೌರ್ಯ, ನಿರ್ಲಕ್ಷ್ಯ, ಅಟ್ಟಹಾಸಗಳಿಂದಲೂ ಕೆಲವು ದುರ್ಘಟನೆಗಳು ಸಂಭವಿಸಿವೆ. ರಷ್ಯಾ-ಉಕ್ರೇನ್ ಯುದ್ಧ, ಮೊರ್ಬಿ ಸೇತುವೆ ದುರಂತ, ಇಂಡೋನೇಷ್ಯಾ ಹಿಂಸಾಚಾರ, ಸೊಮಾಲಿಯಾ ಕಾರು ಬಾಂಬ್ ಸ್ಫೋಟ ಈ ಸಾಲಿನಲ್ಲಿ ಸೇರುತ್ತವೆ. ಇದರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
2022ರಲ್ಲಿ ಪ್ರಕೃತಿ ವಿಕೋಪಗಳಿಗೆ ಸಾವಿರಾರು ಜನರು ಬಲಿಯಾಗಿದ್ದರೆ ಮಾನವನ ಕ್ರೌರ್ಯ, ನಿರ್ಲಕ್ಷ್ಯ, ಅಟ್ಟಹಾಸಗಳಿಂದಲೂ ಕೆಲವು ದುರ್ಘಟನೆಗಳು ಸಂಭವಿಸಿವೆ. ರಷ್ಯಾ-ಉಕ್ರೇನ್ ಯುದ್ಧ, ಮೊರ್ಬಿ ಸೇತುವೆ ದುರಂತ, ಇಂಡೋನೇಷ್ಯಾ ಹಿಂಸಾಚಾರ, ಸೊಮಾಲಿಯಾ ಕಾರು ಬಾಂಬ್ ಸ್ಫೋಟ ಈ ಸಾಲಿನಲ್ಲಿ ಸೇರುತ್ತವೆ. ಇದರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ರಷ್ಯಾ-ಉಕ್ರೇನ್ ಯುದ್ಧ
2022ರ ಭೀಕರ ಯುದ್ಧ ಎಂದರೆ ಅದು ರಷ್ಯಾ-ಉಕ್ರೇನ್ ಯುದ್ಧ. ಈ ವರ್ಷ ಫೆಬ್ರವರಿಯಲ್ಲಿ ಆರಂಭವಾದ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಡಿಸೆಂಬರ್ 18ರ ವರೆಗೆ 428 ಮಕ್ಕಳು ಸೇರಿದಂತೆ ಒಟ್ಟು 6,826 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್ (OHCHR) ಕಚೇರಿ ಮಾಹಿತಿ ನೀಡಿದೆ. ಉಕ್ರೇನ್ನ 13,000 ಸೈನಿಕರು ಮೃತಪಟ್ಟಿದ್ದಾರೆ. ಹಾಗೆಯೇ 10,000 ರಷ್ಯಾದ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಲಕ್ಷಾಂತರ ಜನರು ಮನೆಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ.
ಯುದ್ಧ ಆರಂಭವಾದ ದಿನಗಳಲ್ಲಿ ಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ನೆಲಮಹಡಿಗಳಲ್ಲಿ, ಬಂಕರ್ಗಳಲ್ಲಿ ಹೊಟ್ಟೆಗೆ ಆಹಾರವಿಲ್ಲದೇ ದಿನಗಳನ್ನು ಕಳೆದಿದ್ದಾರೆ. ಗಗನಚುಂಬಿ ಕಟ್ಟಡಗಳು ನೆಲಕ್ಕುರುಳಿವೆ. ಉಕ್ರೇನ್ನಲ್ಲಿ ಸಿಲುಕಿದ್ದ ಅನೇಕ ಭಾರತೀಯ ವಿದ್ಯಾರ್ಥಿಗಳನ್ನು ಭಾರತ ದೇಶಕ್ಕೆ ಮರಳಿ ಕರೆತಂದಿದೆ. ಅಷ್ಟೇ ಅಲ್ಲದೇ, ಕೊರೊನಾ ನಂತರ ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಯುದ್ಧವು ಜಾಗತಿಕವಾಗಿ ಪರಿಣಾಮ ಬೀರಿದೆ. ಜಾಗತಿಕ ಮಟ್ಟದಲ್ಲಿ ಇಂಧನ ಬೆಲೆ ಸೇರಿದಂತೆ ಇತರೆ ಸರಕುಗಳ ಬೆಲೆ ಗಗನಕ್ಕೇರಿದೆ. ಉಕ್ರೇನ್ ರಾಷ್ಟ್ರದ ಚಿತ್ರಣವೇ ಸಂಪೂರ್ಣ ಬದಲಾಗಿದೆ. ಅಮೆರಿಕ ಸೇರಿದಂತೆ ಅನೇಕ ರಾಷ್ಟ್ರಗಳು ಉಕ್ರೇನ್ಗೆ ಬೆಂಬಲ ನೀಡಿವೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆಕ್ಸಿ ದಿಟ್ಟತನದಿಂದ ಹೋರಾಟುತ್ತಿದ್ದಾರೆ.
ಮೊರ್ಬಿ ಸೇತುವೆ ದುರಂತ
ಅಕ್ಟೋಬರ್ 30 ರಂದು ಗುಜರಾತ್ನ ಮೊರ್ಬಿ ಸೇತುವೆ ಕುಸಿದು 45 ಮಕ್ಕಳು ಸೇರಿದಂತೆ 141 ಮಂದಿ ಬಲಿಯಾಗಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಘಟನೆ ಈ ವರ್ಷ ಭಾರತದಲ್ಲಿ ಸಂಭವಿಸಿದ ಅತ್ಯಂತ ಭೀಕರ ದುರ್ಘಟನೆಯಾಗಿದೆ.
ಮೊರ್ಬಿ ಸ್ಥಳೀಯ ಆಡಳಿತ ನೀಡಿರುವ ಮಾಹಿತಿ ಪ್ರಕಾರ, ದುರಸ್ತಿ ಕಾರ್ಯಕ್ಕಾಗಿ ಏಳು ತಿಂಗಳಿಂದ ಮುಚ್ಚಲ್ಪಟ್ಟಿದ್ದ ತೂಗು ಸೇತುವೆಯನ್ನು ಘಟನೆ ನಡೆಯು ನಾಲ್ಕು ದಿನಗಳ ಹಿಂದಷ್ಟೇ (ಅ.26 ರಂದು) ಸಾರ್ವಜನಿಕರ ಬಳಕೆಗೆ ಪುನಃ ತೆರೆಯಲಾಗಿತ್ತು. 143 ವರ್ಷಗಳಷ್ಟು ಹಳೆಯದಾದ ಬ್ರಿಟಿಷರ ಕಾಲದ ಈ ತೂಗು ಸೇತುವೆಯ ಸುರಕ್ಷತಾ ಪ್ರಮಾಣ ಪತ್ರವನ್ನು ಇನ್ನೂ ಬಿಡುಗಡೆ ಮಾಡಿರಲಿಲ್ಲ. ಅಷ್ಟರಲ್ಲೇ ಇದರ ಪುನಃ ಬಳಕೆಗೆ ಅವಕಾಶ ನೀಡಿದ್ದು ದುರಂತಕ್ಕೆ ಕಾರಣ ಎನ್ನಲಾಗಿದೆ.
ದುರಂತದ ದಿನದಂದು ಬರೋಬ್ಬರಿ 3,165 ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿದೆ ಎಂಬ ಮಾಹಿತಿ ಕೂಡ ಬಯಲಾಗಿದೆ. ಒಮ್ಮೆಲೆ ಸೇತುವೆ ಮೇಲೆ 100-150 ಜನರು ನಿಲ್ಲಬಹುದು. ಆದರೆ ದುರಂತ ನಡೆದ ವೇಳೆ 400-500 ಜನರು ಅಲ್ಲಿ ಸೇರಿದ್ದರು ಎಂದು ಹೇಳಲಾಗಿದೆ. ದುರಂತದ ಗಂಭೀರತೆಯನ್ನು ನೋಡಿ ಈಗಾಗಲೇ ಗುಜರಾತ್ ಹೈಕೋರ್ಟ್ ಸುಮೋಟೋ ಪ್ರಕರಣ ದಾಖಲಿಸಿಕೊಂಡಿದೆ. ಮೊರ್ಬಿ ಸೇತುವೆ ಕುಸಿತದ ಘಟನೆಯನ್ನು ದೊಡ್ಡ ದುರಂತ ಎಂದು ಕರೆದಿರುವ ಸುಪ್ರೀಂಕೋರ್ಟ್, ಘಟನೆಗೆ ಸಂಬಂಧಿಸಿದ ತನಿಖೆ ಮತ್ತು ಇತರ ಅಂಶಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುವಂತೆ ಗುಜರಾತ್ ಹೈಕೋರ್ಟ್ಗೆ ಸೂಚಿಸಿದೆ.
ಇಂಡೋನೇಷ್ಯಾ ಹಿಂಸಾಚಾರ - ಭೀಕರ ಕ್ರೀಡಾ ಘಟನೆ
ಫುಟ್ಬಾಲ್ ಪಂದ್ಯ ಸೋತಿತು ಎಂಬ ಕಾರಣಕ್ಕೆ ಅಕ್ಟೋಬರ್ನಲ್ಲಿ ಇಂಡೋನೇಷ್ಯಾದಲ್ಲಿ ನಡೆದ ಹಿಂಸಾಚಾರದಲ್ಲಿ 174 ಮಂದಿ ಬಲಿಯಾಗಿದ್ದರು. ಈ ಮೂಲಕ ಪ್ರಪಂಚದ ಭೀಕರ ಕ್ರೀಡಾ ಘಟನೆಗಳ ಸಾಲಿಗೆ ಈ ಘಟನೆ ಸೇರ್ಪಡೆಯಾಗಿತ್ತು. ಘಟನೆ ಬಳಿಕ ಒಂದು ವಾರದ ವರೆಗೆ ಫುಟ್ಬಾಲ್ ಪಂದ್ಯಾವಳಿಯನ್ನು ಸ್ಥಗಿತಗೊಳಿಸಲಾಗಿತ್ತು.
ಪೂರ್ವ ಜಾವಾದ ಮಲಾಂಗ್ ರೀಜೆನ್ಸಿಯ ಕಂಜುರುಹಾನ್ ಸ್ಟೇಡಿಯಂನಲ್ಲಿ ಅರೆಮಾ ಎಫ್‌ಸಿ ಮತ್ತು ಪರ್ಸೆಬಯಾ ಸುರಬಯಾ ನಡುವೆ ಪಂದ್ಯ ನಡೆದಿತ್ತು. ಅರೆಮಾ ಎಫ್‌ಸಿ ತಂಡ ಸೋಲು ಕಂಡಿದೆ. ಇದರಿಂದ ರೊಚ್ಚಿಗೆದ್ದ ಸಾವಿರಾರು ಅಭಿಮಾನಿಗಳು ಪರಸ್ಪರ ಕಿತ್ತಾಡಿಕೊಂಡು, ಮೈದಾನಕ್ಕೂ ನುಗ್ಗಿ ದಾಂಧಲೆ ಮಾಡಿದ್ದಾರೆ. ಆಟಗಾರರ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್, ಅಶ್ರುವಾಯು ಪ್ರಯೋಗ ಮಾಡಿದ್ದಾರೆ. ಹಲ್ಲೆ, ಕಾಲ್ತುಳಿದಿಂದ ಜನರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಇಬ್ಬರು ಪೊಲೀಸರೂ ಸೇರಿದ್ದಾರೆ. 34 ಮಂದಿ ಮೈದಾನದಲ್ಲೇ ಸಾವನ್ನಪ್ಪಿದ್ದು, ಉಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು.
ಸಿಯೋಲ್ ಕಾಲ್ತುಳಿತ - ಯಮಸ್ವರೂಪಿಯಾದ ಹ್ಯಾಲೋವೀನ್ ಆಚರಣೆ
ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್ನಲ್ಲಿ ಅಕ್ಟೋಬರ್ನಲ್ಲಿ ಹ್ಯಾಲೋವೀನ್ ಹಬ್ಬದ ಆಚರಣೆ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 151 ಮಂದಿ ಸಾವನ್ನಪ್ಪಿದ್ದು, 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಸಿಯೋಲ್ನ ಇಟಾವೊನ್ ಎಂಬ ಪ್ರದೇಶದ ಕಿರಿದಾದ ಗಲ್ಲಿಯಲ್ಲಿ ಹ್ಯಾಲೋವೀನ್ ಹಬ್ಬವನ್ನು ಆಚರಿಸಲು ಸುಮಾರು 1 ಲಕ್ಷ ಜನರು ಸೇರಿದ್ದರು. 20ರ ಆಸುಪಾಸಿನ ಹದಿಹರೆಯದವರೇ ಹೆಚ್ಚು ಮಂದಿ ಇದ್ದರು. ಗಲ್ಲಿ ಕಿರಿದಾಗಿದ್ದ ಕಾರಣ ನೂಕುನುಗ್ಗಲು ಉಂಟಾಗಿದೆ. ಈ ವೇಳೆ ಕಾಲ್ತುಳಿತ ಸಂಭವಿಸಿದೆ. ಈ ವೇಳೆ ಉಸಿರುಗಟ್ಟಿಯೇ ಅನೇಕ ಮಂದಿ ಸಾವನ್ನಪ್ಪಿದ್ದಾರೆ.
ದಕ್ಷಿಣ ಕೊರಿಯಾದಲ್ಲಿ ದಶಕಗಳಲ್ಲಿ ಸಂಭವಿಸಿದ ಅತ್ಯಂತ ಭೀಕರ ಘಟನೆ ಇದಾಗಿದೆ. ಕೊರೊನಾ ಸಾಂಕ್ರಾಮಿಕ ರೋಗದ ಕಾರಣದಿಂದ ಸ್ಥಗಿತಗೊಂಡಿದ್ದ ಹ್ಯಾಲೋವೀನ್ ಹಬ್ಬ ಎರಡು ವರ್ಷಗಳ ನಂತರ ಪ್ರಾರಂಭಗೊಂಡಿತ್ತು. ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿ ಜನರು ಜಮಾಯಿಸಿದ್ದರು. ದಕ್ಷಿಣಾ ಕೊರಿಯಾ ಸರ್ಕಾರ ಇತ್ತೀಚೆಗಷ್ಟೆ ಕೋವಿಡ್ ನಿರ್ಬಂಧಗಳನ್ನು ಸಡಿಲಿಸಿತ್ತು.
ಆಚರಣೆ ವೇಳೆ ಎಲ್ಲರೂ ಒಟ್ಟೊಟ್ಟಿಗೆ ಸಾಗುತ್ತಿದ್ದಾಗ ಒಬ್ಬರನ್ನೊಬ್ಬರು ತಳ್ಳಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಕಾಲ್ತುಳಿತ ಸಂಭವಿಸಿದೆ. ಮೃತಪಟ್ಟಿರುವವರಲ್ಲಿ 19 ಮಂದಿ ಹಾಗೂ ಗಾಯಗೊಂಡವರಲ್ಲಿ 15 ಮಂದಿ ವಿದೇಶಿಗರಾಗಿದ್ದು, ಇರಾನ್, ಉಜ್ಬೇಕಿಸ್ತಾನ್, ಚೀನಾ ಮತ್ತು ನಾರ್ವೆ ದೇಶದವರು ಎಂದು ತಿಳಿದು ಬಂದಿದೆ.
ಸೊಮಾಲಿಯಾ ಕಾರು ಬಾಂಬ್ ಸ್ಫೋಟ
ಸೊಮಾಲಿಯಾದ ರಾಜಧಾನಿ ಮೊಗಾಡಿಶುವಿನಲ್ಲಿ ಶಿಕ್ಷಣ ಸಚಿವಾಲಯ ಮುಂದೆ ಅಕ್ಟೋಬರ್ನಲ್ಲಿ ನಡೆದ ಎರಡು ಪ್ರತ್ಯೇಕ ಕಾರು ಬಾಂಬ್ ಸ್ಫೋಟದಲ್ಲಿ ಕನಿಷ್ಠ 120 ಜನರು ಸಾವನ್ನಪ್ಪಿದ್ದರು ಮತ್ತು 300 ಮಂದಿ ಗಾಯಗೊಂಡಿದ್ದರು. ಈ ದಾಳಿಯನ್ನು ಭೀಕರ ಹತ್ಯಾಕಾಂಡ ಎಂದು ಸೊಮಾಲಿಯಾ ಅಧ್ಯಕ್ಷ ಹಸನ್ ಶೇಖ್ ಮೊಹಮ್ಮದ್ ಕರೆದಿದ್ದಾರೆ. ಈ ಕ್ರೂರ ದಾಳಿಯ ವಿರುದ್ಧ ಸರ್ಕಾರ ಹೋರಾಡಲಿದೆ ಎಂದು ಹೇಳಿದ್ದರು.
ಹಿಂಸಾತ್ಮಕ ಉಗ್ರವಾದವನ್ನು ಎದುರಿಸಲು, ವಿಶೇಷವಾಗಿ ರಾಜಧಾನಿಯನ್ನು ಗುರಿಯಾಗಿಸುವ ಅಲ್-ಖೈದಾ ಜೊತೆ ಸಂಪರ್ಕ ಹೊಂದಿರುವ ಅಲ್-ಶಬಾಬ್ ಸಂಘಟನೆಯನ್ನು ಹತ್ತಿಕ್ಕುವ ಕುರಿತು ದೇಶದ ಅಧ್ಯಕ್ಷರು, ಪ್ರಧಾನ ಮಂತ್ರಿ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆ ನಡೆಸುತ್ತಿದ್ದ ದಿನವೇ ರಾಜಧಾನಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಎರಡು ಬಾರಿ ಸ್ಫೋಟ ಸಂಭವಿಸಿದ್ದು, ಶಿಕ್ಷಣ ಸಚಿವಾಲಯ ಮುಂದೆ ಮೊದಲು ನಡೆದಿದೆ. ಸಂತ್ರಸ್ತರಿಗೆ ಸಹಾಯ ಮಾಡಲು ಜನರು ಜಮಾಯಿಸಿದಾ ಹಾಗೂ ಆಂಬ್ಯುಲೆನ್ಸ್‌ಗಳು ಆಗಮಿಸಿದಾಗ ಎರಡನೆಯದು ಸಂಭವಿಸಿತ್ತು.
ವಿಭಾಗ