logo
ಕನ್ನಡ ಸುದ್ದಿ  /  ಕ್ರೀಡೆ  /  Babar Azam Record: ಕೊಹ್ಲಿ, ಹಶೀಮ್ ಆಮ್ಲಾ ದಾಖಲೆ ನುಚ್ಚುನೂರು ಮಾಡಿದ ಬಾಬರ್; ಏಕದಿನ ಕ್ರಿಕೆಟ್‌ನಲ್ಲಿ ಶರವೇಗದ ಸಾಧನೆ

Babar Azam Record: ಕೊಹ್ಲಿ, ಹಶೀಮ್ ಆಮ್ಲಾ ದಾಖಲೆ ನುಚ್ಚುನೂರು ಮಾಡಿದ ಬಾಬರ್; ಏಕದಿನ ಕ್ರಿಕೆಟ್‌ನಲ್ಲಿ ಶರವೇಗದ ಸಾಧನೆ

Jayaraj HT Kannada

May 06, 2023 02:24 PM IST

ವಿರಾಟ್ ಕೊಹ್ಲಿ, ಬಾಬರ್ ಅಜಮ್

    • ಏಕದಿನ ಕ್ರಿಕೆಟ್‌ನಲ್ಲಿ ಬಾಬರ್‌ ಅಜಮ್ 5000 ರನ್‌ಗಳ ಮೈಲಿಗಲ್ಲನ್ನು ತಲುಪಿದರು. ಅಲ್ಲದೆ ಆಡಿದ 97ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆಯನ್ನು ಪೂರ್ಣಗೊಳಿಸಿದರು.
ವಿರಾಟ್ ಕೊಹ್ಲಿ, ಬಾಬರ್ ಅಜಮ್
ವಿರಾಟ್ ಕೊಹ್ಲಿ, ಬಾಬರ್ ಅಜಮ್

ಏಕದಿನ ಕ್ರಿಕೆಟ್‌ನಲ್ಲಿ ಕಳೆದ ಎರಡು ವರ್ಷಗಳಿಂದ ಪಾಕಿಸ್ತಾನ ಕ್ರಿಕೆಟ್‌ ತಂಡದ ನಾಯಕ ಬಾಬರ್ ಅಜಮ್ (Babar Azam) ಅದ್ಭುತ ಸ್ಥಿರತೆ ಪ್ರದರ್ಶಿಸಿದ್ದಾರೆ. ಕ್ರೀಸ್‌ಕಚ್ಚಿ ಆಡುವ ಮೂಲಕ ಹಲವು ಪಂದ್ಯಗಳಲ್ಲಿ ಪಾಕ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 2021ರ ಜುಲೈ ತಿಂಗಳಿನಿಂದ ಅವರು ಆಡಿರುವ 16 ಇನ್ನಿಂಗ್ಸ್‌ಗಳಲ್ಲಿ ಅವರು, 1000ಕ್ಕೂ ಅಧಿಕ ರನ್ ಕಲೆ ಹಾಕಿದ್ದಾರೆ. ಇದರಲ್ಲಿ 13 ಇನ್ನಿಂಗ್ಸ್‌ಗಳಲ್ಲಿ ಅರ್ಧಶತಕದ ಗಡಿ ದಾಟಿದ್ದಾರೆ. ಅದರಲ್ಲಿ ನಾಲ್ಕು ಭರ್ಜರಿ ಶತಕಗಳು ಕೂಡಾ ಸೇರಿವೆ.

ಟ್ರೆಂಡಿಂಗ್​ ಸುದ್ದಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ದೇಶಕ್ಕಾಗಿ ಪದಕ ಗೆಲ್ಲುವುದೇ ನನ್ನ ಗುರಿ; ಅದಕ್ಕಾಗಿ ತೂಕ ಕಾಪಾಡಿಕೊಳ್ಳಬೇಕು ಎಂದ ವಿನೇಶ್ ಫೋಗಟ್

ಶುಕ್ರವಾರ (ಮೇ 05)ರಂದು ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲ್ಯಾಂಡ್ (New Zealand tour of Pakistan) ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಬಾಬರ್ ಮತ್ತೊಂದು ದಾಖಲೆ ನಿರ್ಮಿಸಿದರು. ಪಂದ್ಯಶ್ರೇಷ್ಠ ಪ್ರದರ್ಶನ ನೀಡಿದ ಅವರು, ಏಕದಿನ ಕ್ರಿಕೆಟ್‌ನಲ್ಲಿ 14ನೇ ಅರ್ಧಶತಕ ಸಿಡಿಸಿದರು. ಆ ಮೂಲಕ ರನ್‌ ಮಷಿನ್ ವಿರಾಟ್ ಕೊಹ್ಲಿ (Virat Kohli) ಮತ್ತು ದಕ್ಷಿಣ ಆಫ್ರಿಕಾದ ಹಶೀಮ್ ಆಮ್ಲಾ(Hashim Amla) ಅವರ ದಾಖಲೆಯನ್ನು ಬ್ರೇಕ್‌ ಮಾಡಿದ್ದಾರೆ.

ಸರಣಿಯಲ್ಲಿ ಸತತ ಮೂರನೇ ಅರ್ಧಶತಕ ಸಿಡಿಸಿದ ಬಾಬರ್, ಏಕದಿನ ವೃತ್ತಿಜೀವನದಲ್ಲಿ 5000 ರನ್‌ಗಳ ಮೈಲಿಗಲ್ಲನ್ನು ತಲುಪಿದರು. ಅಲ್ಲದೆ ಏಕದಿನದಲ್ಲಿ ತಾವು ಆಡಿದ 97ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆಯನ್ನು ಪೂರ್ಣಗೊಳಿಸಿದರು. ಆ ಮೂಲಕ 5000 ರನ್‌ಗಳನ್ನು ಅತ್ಯಂತ ವೇಗವಾಗಿ ಪೂರೈಸಿದ ಬ್ಯಾಟರ್ ಎಂಬ ದಾಖಲೆಯನ್ನು ನಿರ್ಮಿಸಿದರು. ಈ ಹಿಂದೆ ದಕ್ಷಿಣ ಆಫ್ರಿಕಾದ ಅನುಭವಿ ಬ್ಯಾಟರ್ ಹಶೀಮ್‌ ಆಮ್ಲಾ ಹೊಂದಿದ್ದ ದಾಖಲೆಯನ್ನು ಬಾಬರ್‌ ಮುರಿದಿದ್ದಾರೆ. ಆಮ್ಲಾ 101 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು. ಇದೇ ವೇಳೆ ಕಿಂಗ್ ಕೊಹ್ಲಿ ಮತ್ತು ವಿವ್ ರಿಚರ್ಡ್ಸ್ ಇಬ್ಬರೂ ಈ ಸಾಧನೆಯನ್ನು 114 ಇನ್ನಿಂಗ್ಸ್ ತೆಗೆದುಕೊಂಡು ಮಾಡಿದ್ದರು. ಮತ್ತೊಂದೆಡೆ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ 115 ಇನ್ನಿಂಗ್ಸ್‌ಗಳಲ್ಲಿ ಐದು ಸಾವಿರ ರನ್‌ ಪೂರೈಸಿದ್ದಾರೆ.

ಕಳೆದ ವರ್ಷ, ಬಾಬರ್ 4000 ಏಕದಿನ ರನ್‌ಗಳನ್ನು ಪೂರೈಸುವ ವೇಳೆ ಆಮ್ಲಾ ಅವರ ವಿಶ್ವ ದಾಖಲೆಯನ್ನು ಮುರಿಯುವ ಹಂತದಿಂದ ಕೂದಲೆಳೆ ಅಂತರದಿಂದ ಹಿಂದಿದ್ದರು. ತಮ್ಮ 82ನೇ ಇನ್ನಿಂಗ್ಸ್‌ನಲ್ಲಿ ಆ ಮೈಲಿಗಲ್ಲನ್ನು ತಲುಪಿದ್ದರು. ಇದು ಆಮ್ಲಾ ದಾಖಲೆಗಿಂತ ಒಂದು ಇನ್ನಿಂಗ್ಸ್ ಹೆಚ್ಚು.

ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿರುವ ಕಿವೀಸ್‌, ಸರಣಿಯಲ್ಲಿ ಹಿನ್ನಡೆ ಅನುಭವಿಸಿದೆ. ಟಿ20 ಸರಣಿಯಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿದ್ದವು. ಆ ಬಳಿಕ ನಡೆಯುತ್ತಿರುವ ಏಕದಿನ ಸರಣಿಯನ್ನು ಈಗಾಗಲೇ ಪಾಕಿಸ್ತಾನ ಗೆದ್ದಿದೆ. ಇನ್ನೊಂದು ಪಂದ್ಯ ಉಳಿದಿದ್ದು, ಈಗಾಗಲೇ 4-0ಯಿಂದ ಮೇಲುಗೈ ಸಾಧಿಸಿರುವ ಬಾಬರ್‌ ಬಳಗ ಸರಣಿ ಕ್ಲೀನ್‌ಸ್ವೀಪ್‌ ಮಾಡುವ ನಿರೀಕ್ಷೆಯಲ್ಲಿದೆ. ಶುಕ್ರವಾರ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಬಾಬರ್‌ ಶತಕದ ನೆರವಿನಿಂದ ಪಾಕಿಸ್ತಾನ ಭರ್ಜರಿ 102 ರನ್‌ಗಳಿಂದ ಗೆದ್ದು ಬೀಗಿದೆ.

ರಾವಲ್ಪಿಂಡಿಯಲ್ಲಿ ನಡೆದ ಮೊದಲ ಎರಡು ಪಂದ್ಯಗಳನ್ನು ಕ್ರಮವಾಗಿ ಐದು ಮತ್ತು ಏಳು ವಿಕೆಟ್‌ಗಳಿಂದ ಗೆದ್ದ ಪಾಕಿಸ್ತಾನ, ಕರಾಚಿಯಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಬ್ಲ್ಯಾಕ್ ಕ್ಯಾಪ್ಸ್ ತಂಡವನ್ನು 26 ರನ್‌ಗಳಿಂದ ಸೋಲಿಸಿತು. ನಾಲ್ಕನೇ ಪಂದ್ಯದಲ್ಲಿ ಗೆಲುವಿನ ಹುಡುಕಾಟದಲ್ಲಿದ್ದ ನ್ಯೂಜಿಲೆಂಡ್, ಅಲ್ಲಿಯೂ ಹೀನಾಯ ಸೋಲು ಕಂಡಿದೆ. ನ್ಯೂಜಿಲೆಂಡ್ ಪ್ರವಾಸದ ಅಂತಿಮ ಏಕದಿನ ಪಂದ್ಯವು ಮೇ 7ರಂದು ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.

    ಹಂಚಿಕೊಳ್ಳಲು ಲೇಖನಗಳು