logo
ಕನ್ನಡ ಸುದ್ದಿ  /  ಕ್ರೀಡೆ  /  Ht Kannada Special: ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ; ಟ್ರೋಫಿ ಇಲ್ಲದೆ ಮತ್ತೊಂದು ಆವೃತ್ತಿ ಮುಗಿಸಿದ ಪಂಜಾಬ್ ಕಿಂಗ್ಸ್‌

HT Kannada Special: ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ; ಟ್ರೋಫಿ ಇಲ್ಲದೆ ಮತ್ತೊಂದು ಆವೃತ್ತಿ ಮುಗಿಸಿದ ಪಂಜಾಬ್ ಕಿಂಗ್ಸ್‌

Rasesh Mandani HT Kannada

May 21, 2023 07:00 AM IST

ಪಂಜಾಬ್‌ ಕಿಂಗ್ಸ್‌ ತಂಡದ ಆಟಗಾರರು

    • Punjab Kings: ಪಂಜಾಬ್‌ ಅಭಿಮಾನಿಗಳು ಬೇಸರ ಹೊರಹಾಕುವ ಹಲವು ಅಂಶಗಳಿವೆ. 2014ರ ಐಪಿಎಲ್‌ ಆವೃತ್ತಿಯಲ್ಲಿ, ಅದೇ ಮೊದಲ ಹಾಗೂ ಕೊನೆಯ ಬಾರಿಗೆ ತಂಡವು ಫೈನಲ್‌ ಪ್ರವೇಶಿಸಿತ್ತು. ಅಲ್ಲಿ ಕೆಕೆಆರ್ ವಿರುದ್ಧ ಸೋತ ನಂತರ, ತಂಡವು ಇದುವರೆಗೂ ಪ್ಲೇಆಫ್‌ ಹಂತಕ್ಕೆ ಅರ್ಹತೆ ಪಡೆದಿಲ್ಲ. ಅಂದರೆ ಸತತ 9 ಆವೃತ್ತಿಗಳಲ್ಲಿ ತಂಡವು ಲೀಗ್ ಹಂತದಲ್ಲೇ ನಿರ್ಗಮಿಸಿದೆ.
ಪಂಜಾಬ್‌ ಕಿಂಗ್ಸ್‌ ತಂಡದ ಆಟಗಾರರು
ಪಂಜಾಬ್‌ ಕಿಂಗ್ಸ್‌ ತಂಡದ ಆಟಗಾರರು (PTI)

ಚೊಚ್ಚಲ ಆವೃತ್ತಿಯಿಂದಲೂ ಐಪಿಎಲ್‌ ಆಡುತ್ತಿರುವ ತಂಡಗಳ ಪೈಕಿ ಇದುವರೆಗೂ ಒಂದೇ ಒಂದು ಟ್ರೋಫಿ ಗೆಲ್ಲದ ಮೂರು ಫ್ರಾಂಚೈಸಿಗಳಲ್ಲಿ ಪಂಜಾಬ್ ಕಿಂಗ್ಸ್ ಕೂಡ ಒಂದು. ಶುಕ್ರವಾರ (ಮೇ 19) ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸೋತ ಶಿಖರ್‌ ಧವನ್‌ ಪಡೆಯು, ಮಿಲಿಯನ್‌ ಡಾಲರ್‌ ಟೂರ್ನಿಯ ಪ್ರಸಕ್ತ ಆವೃತ್ತಿಯಿಂದ ಅಧಿಕೃತವಾಗಿ ಹೊರಬಿತ್ತು. ಆ ಮೂಲಕ ಚೊಚ್ಚಲ ಐಪಿಎಲ್‌ ಕಪ್‌ಗಾಗಿ ಫ್ರಾಂಚೈಸಿಯು ಇನ್ನೂ ಒಂದು ವರ್ಷ ಕಾಯಬೇಕಾಗಿ ಬಂದಿದೆ. ಟ್ರೋಫಿ ಗೆಲ್ಲುವ ಕನಸು ಬದಿಗಿಟ್ಟು, ಕನಿಷ್ಠ ಪ್ಲೇ ಆಫ್‌ಗೆ ಟಿಕೆಟ್‌ ಗಿಟ್ಟಿಸುವಲ್ಲೂ ತಂಡ ವಿಫಲವಾಯ್ತು.

ಟ್ರೆಂಡಿಂಗ್​ ಸುದ್ದಿ

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಎಂಬ ಹೆಸರಿನಲ್ಲಿ ವಿಶ್ವದ ಶ್ರೀಮಂತ ಕ್ರಿಕೆಟ್‌ ಲೀಗ್‌ಗೆ ಕಾಲಿಟ್ಟ ಫ್ರಾಂಚೈಸಿಯು, ತಮ್ಮ ಅದೃಷ್ಟವನ್ನು ಬದಲಾಯಿಸುವ ಪ್ರಯತ್ನಕ್ಕೆ ಕೈ ಹಾಕಿತು. ಆ ಪ್ರಯತ್ನದ ಭಾಗವಾಗಿ ಫ್ರಾಂಚೈಸಿ ಮಾಲೀಕರು 2021ರ ಆರಂಭದಲ್ಲಿ ಕಿಂಗ್ಸ್ X1 ಪಂಜಾಬ್‌ ಹೆಸರನ್ನು ಕಿತ್ತು ಹಾಕಿ ಪಂಜಾಬ್‌ ಕಿಂಗ್ಸ್‌ ಎಂಬುದಾಗಿ ತಂಡಕ್ಕೆ ಮರುನಾಮಕರಣ ಮಾಡಿದರು. ಇಷ್ಟೇ ಅಲ್ಲ, ಕೋಚಿಂಗ್‌ ಸಿಬ್ಬಂದಿ ಮತ್ತು ತಂಡದ ನಾಯಕರನ್ನು ಕೂಡಾ ಕಾಲಕಾಲಕ್ಕೆ ವಜಾ ಮಾಡುವುದು ತಂಡದ ನಿಯಮಿತ ಸಂಪ್ರದಾಯದಂತೆ ಕಂಡುಬಂತು . ಆದರೆ, ತಂಡದ ಯಾವುದೇ ಯಂತ್ರ-ತಂತ್ರಗಳು ಫಲಿತಾಂಶದ ಬದಲಾವಣೆಯಾಗುವಲ್ಲಿ ಕೆಲಸ ಮಾಡಿಲ್ಲ.

ಪಂಜಾಬ್‌ ಅಭಿಮಾನಿಗಳು ಬೇಸರ ಹೊರಹಾಕುವ ಹಲವು ಅಂಶಗಳಿವೆ. 2014ರ ಐಪಿಎಲ್‌ ಆವೃತ್ತಿಯಲ್ಲಿ, ಅದೇ ಮೊದಲ ಹಾಗೂ ಕೊನೆಯ ಬಾರಿಗೆ ತಂಡವು ಫೈನಲ್‌ ಪ್ರವೇಶಿಸಿತ್ತು. ಅಲ್ಲಿ ಕೋಲ್ಕತ್ತಾ ನೈಟ್‌ ರೈಡರ್ಸ್‌ ವಿರುದ್ಧ ಸೋತ ನಂತರ, ತಂಡವು ಇದುವರೆಗೂ ಪ್ಲೇಆಫ್‌ ಹಂತಕ್ಕೆ ಅರ್ಹತೆ ಪಡೆದಿಲ್ಲ. ಅಂದರೆ ಸತತ 9 ಆವೃತ್ತಿಗಳಲ್ಲಿ ತಂಡವು ಲೀಗ್ ಹಂತದಲ್ಲೇ ನಿರ್ಗಮಿಸಿದೆ.

ಬದಲಾವಣೆ, ಬದಲಾವಣೆ ಮತ್ತು ಬದಲಾವಣೆ

ಕಳೆದ ವರ್ಷ ಆರನೇ ಸ್ಥಾನಿಯಾಗಿ ಅಭಿಯಾನ ಮುಗಿಸಿದ ತಂಡವು, ಹೊಸ ಆವೃತ್ತಿಯಲ್ಲಿ ಬದಲಾದ ಮತ್ತು ಉತ್ತಮ ಮಾನದಂಡದೊಂದಿಗೆ ಕಣಕ್ಕಿಳಿಯುತ್ತದೆ ಎಂದು ಅಭಿಮಾನಿಗಳು ಭಾವಿಸಿದರು. ಬ್ಯಾಟಿಂಗ್ ಲೈನಪ್‌ ಬಲಶಾಲಿಯಾಗುತ್ತದೆ ಎಂಬ ನಿರೀಕ್ಷೆ ಇತ್ತು. 2022ರಲ್ಲಿ ಆರನೇ ಸ್ಥಾನದೊಂದಿಗೆ ಲೀಗ್ ಹಂತದಲ್ಲಿ ಹೊರಬಿದ್ದಾಗ, ತಂಡದ ಮಾಲೀಕರು ಮತ್ತಷ್ಟು ಬದಲಾವಣೆಗಳಿಗೆ ಕೈ ಹಾಕಿದರು. ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅವರೊಂದಿಗಿನ ಒಪ್ಪಂದವನ್ನು ಅಲ್ಲಿಗೆ ಮೊಟಕುಗೊಳಿಸಲಾಯ್ತು. ಅಲ್ಲದೆ ಪವರ್ ಹಿಟ್ಟಿಂಗ್ ಕೋಚ್ ಅನ್ನು ಕೂಡಾ ಹೊರಕಳುಹಿಸಲಾಯ್ತು. ಹರಾಜು ತಂತ್ರಜ್ಞ ಮತ್ತು ವಿಶ್ಲೇಷಕ ಕೂಡಾ ಹೊರಬಂದುಬಿಟ್ಟರು.

2021ರಲ್ಲಿ ಕನ್ನಡಿಗ ಕೆಎಲ್ ರಾಹುಲ್ ರಾಹುಲ್‌ಗೆ ನಾಯಕತ್ವದ ಜವಾಬ್ದಾರಿ ನೀಡಿದರೆ, 2022ರಲ್ಲಿ ಮತ್ತೋರ್ವ ಕನ್ನಡಿಗ ಮಯಾಂಕ್ ಅಗರ್ವಾಲ್ ತಂಡದ ಚುಕ್ಕಾಣಿ ಹಿಡಿದರು. ತಂಡಕ್ಕೆ ಇದ್ಯಾವುದೂ ಯಶಸ್ಸು ತಂದುಕೊಡಲಿಲ್ಲ.‌ ಅಷ್ಟಕ್ಕೆ ಫ್ರಾಂಚೈಸಿ ಬದಲಾವಣೆಯ ಮಂತ್ರ ಜಪಿಸಿತು. ಹೀಗಾಗಿ ಪ್ರಸಕ್ತ ಋತುವಿನಲ್ಲಿ ಶಿಖರ್ ಧವನ್ ಅವರಿಗೆ ನಾಯಕನ ಪಟ್ಟ ನೀಡಲಾಯ್ತು. ಈ ಬದಲಾವಣೆ ಕೂಡಾ ಫ್ರಾಂಚೈಸಿಗೆ ಕೈಕೊಟ್ಟಿದೆ. ಹೀಗಾಗಿ, 37 ವರ್ಷದ ನಾಯಕನನ್ನು ಸಹ ಮುಂದಿನ ಆವೃತ್ತಿಗೂ ಮುಂಚೆ ನಾಯಕತ್ವದಿಂದ ವಜಾಗೊಳಿಸಿದರೆ ಆಚ್ಚರಿಯೇನಿಲ್ಲ.

ಸ್ಟಾರ್‌ ಬೌಲರ್‌ಗಳೇ ಕೂ ಹಿಡಿಯಲಿಲ್ಲ

ತಂಡದ ಬೌಲಿಂಗ್‌ ದಾಳಿ ಕೂಡಾ ಆರಕ್ಕೇರಲಿಲ್ಲ, ಮೂರಕ್ಕಿಳಿಯಲಿಲ್ಲ ಎಂಬಂತಿತ್ತು. ಕೇವಲ ಆರು ಪಂದ್ಯಗಳಲ್ಲಿ ಗೆದ್ದ ಪಂಜಾಬ್ ತಂಡವು, ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನವನ್ನೇ ಹೊರಹಾಕಿದೆ. ನಾಲ್ಕು ಬಾರಿ 200 ಪ್ಲಸ್ ಮೊತ್ತ ಕಲೆಹಾಕಿರುವ ತಂಡವು, ಮೂರು ಬಾರಿ 190ರ ಗಡಿ ದಾಟಿದೆ. ಆದರೆ, ಬೌಲರ್‌ಗಳ ಕಳಪೆ ಪ್ರದರ್ಶನವು ತಂಡದ ಬ್ಯಾಟಿಂಗ್‌ ಸಾಮರ್ಥ್ಯವನ್ನು ಮರೆಮಾಚಿತು.

ತಂಡದ ಪ್ರಧಾನ ಆದ್ಯತೆಯ ಬೌಲರ್ ಅರ್ಷದೀಪ್ ಸಿಂಗ್, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸಿಕ್ಕ ಯಶಸ್ಸಿನ ವಿಶ್ವಾಸವನ್ನು ತಲೆ ಮೇಲೆ ಹೊತ್ತು ಉತ್ತಮ ಆರಂಭವನ್ನೇನೋ ಪಡೆದರು. ಇನ್ನೇನು ಪರ್ಪಲ್‌ ಕ್ಯಾಪ್‌ ಗೆಲ್ಲುತ್ತಾರೆ ಎಂಬ ನಿರೀಕ್ಷೆಯೂ ಹುಟ್ಟಿತು. ಆದರೆ, ಅಷ್ಟರಲ್ಲೇ ಬೌಲಿಂಗ್‌ ಲಯವನ್ನು ಕಳೆದುಕೊಂಡರು. ಎಡಗೈ ಆಟಗಾರ 17 ವಿಕೆಟ್‌ಗಳನ್ನು ಪಡೆಯುವ ಮೂಲಕ ಆವೃತ್ತಿಯನ್ನು ಮುಗಿಸಿದರು. ಈ ಸಂಖ್ಯೆ ಉತ್ತಮವಾಗಿದ್ದರೂ, 9.69ರ ಅತ್ಯಂತ ದುಬಾರಿ ಎಕಾನಮಿ ರೇಟ್‌ ಅವರಿಗೆ ಮುಳುವಾಯ್ತು. ಹೀಗಾಗಿ ಋತುವಿನ ಮಧ್ಯದಲ್ಲಿ ಹೊಸ ಚೆಂಡು ಬೌಲಿಂಗ್‌ ಮಾಡುವ ಅವಕಾಶವನ್ನು ಅವರಿಂದ ಹಿಂಪಡೆಯಲಾಯ್ತು.

ಅಂತಾರಾಷ್ಟ್ರೀಯ ಪಂದ್ಯಗಳ ಕಾರಣದಿಂದಾಗಿ ಐಪಿಎಲ್‌ಗೆ ತಡವಾಗಿ ಬಂದ ದಕ್ಷಿಣ ಆಫ್ರಿಕಾ ವೇಗಿ ಕಗಿಸೊ ರಬಾಡ ಕೂಡಾ ಕಳಪೆ ಪ್ರದರ್ಶನ ನೀಡಿದರು. ಕೇವಲ ಆರು ಪಂದ್ಯಗಳನ್ನು ಆಡಿದ ಅವರು, ಫ್ರಂಟ್-ಫುಟ್ ನೋ ಬಾಲ್‌ಗಳ ಮೂಲಕವೇ ತಂಡಕ್ಕೆ ದುಸ್ವಪ್ನರಾದರು. ಏಳು ವಿಕೆಟ್‌ ಸಂಪಾದಿಸುವಷ್ಟರಲ್ಲಿ, ಪ್ರತಿ ಓವರ್‌ಗೆ 10.08 ರನ್‌ಗಳನ್ನು ಬಿಟ್ಟುಕೊಟ್ಟು ದುಬಾರಿ ಎನಿಸಿಕೊಂಡರು.

ಅತ್ತ ರಾಹುಲ್ ಚಹಾರ್ 14 ಪಂದ್ಯಗಳನ್ನು ಆಡಿ 8 ವಿಕೆಟ್ ವಿಕೆಟ್‌ ಮಾತ್ರ ಪಡೆದರು. ಆದರೆ 7.75ರ ಎಕಾನಮಿ ಕಾಯ್ದುಕೊಂಡು ಗಮನ ಸೆಳೆದರು. ಮತ್ತೊಂದೆಡೆ, ಹರ್‌ಪ್ರೀತ್ ಬ್ರಾರ್ ಅವರ ಎಡಗೈ ಸ್ಪಿನ್ ದಾಳಿಯನ್ನು ಸಮರ್ಥವಾಗಿ ಬಳಸಲು ನಾಯಕ ಧವನ್ ವಿಫಲರಾದರು.

ತವರಿನಲ್ಲಿ ಸೋಲಿನ ಸರಪಳಿ

ಪಂಜಾಬ್‌ ತಂಡಕ್ಕೆ ಕಂಟಕವಾಗಿದ್ದೇ ಅದರ ತವರಿನ ಪಂದ್ಯಗಳು. ತವರು ಮೈದಾನಗಳಾದ ಮೊಹಾಲಿ ಮತ್ತು ಧರ್ಮಶಾಲಾದಲ್ಲಿ ಆಡಿದ ಒಟ್ಟು ಏಳು ಪಂದ್ಯಗಳಲ್ಲಿ ಒಂದನ್ನು ಮಾತ್ರ ತಂಡ ಗೆದ್ದಿದೆ. ಆ ಏಕೈಕ ಯಶಸ್ಸು ಮೊಹಾಲಿಯಲ್ಲಿ ನಡೆದ ಮೊದಲ ಪಂದ್ಯದಿಂದ ಬಂದಿತ್ತು.

ಲಭ್ಯ ಸಂಪನ್ಮೂಲಕಗಳ ಅಸಮರ್ಪಕ ಬಳಕೆ

ಪಂಜಾಬ್‌ ಫ್ರಾಂಚೈಸಿಯ ಅತಿ ದೊಡ್ಡ ವೈಫಲ್ಯವೆಂದರೆ, ಸ್ಟಾರ್ ವಿದೇಶಿ ಆಟಗಾರರನ್ನು ಸಮರ್ಪಕವಾಗಿ ಬಳಸಲು ಅಸಮರ್ಥವಾಗಿದ್ದು. ಐಪಿಎಲ್‌ನ ಅತ್ಯಂತ ದುಬಾರಿ ಆಟಗಾರ ಎಂಬ ದಾಖಲೆಗೆ ಪಾತ್ರರಾದ ಇಂಗ್ಲೆಂಡ್‌ನ ಆಲ್‌ರೌಂಡರ್ ಸ್ಯಾಮ್ ಕರನ್ ಹೊರತುಪಡಿಸಿ, ಬೇರೆ ಯಾವುದೇ ವಿದೇಶಿ ಆಟಗಾರರು ತಂಡದ ಎಲ್ಲಾ ಪಂದ್ಯಗಳಲ್ಲಿ ಆಡಿಲ್ಲ. 2022ರ ಟಿ20 ವಿಶ್ವಕಪ್‌ನಲ್ಲಿ ಸರಣಿ ಶ್ರೇಷ್ಠ ಪಡೆದ ಕರನ್‌ ಕೂಡಾ, ಅಪಾರ ನಿರೀಕ್ಷೆಯ ಒತ್ತಡದಿಂದ ಉತ್ತಮ ಪ್ರದರ್ಶನ ನೋಡಲು ವಿಫಲರಾದರು.

ಈ ಸಮಸ್ಯೆಗಳ ಹೊರತಾಗಿಯೂ, ತಂಡದ ಪವರ್ ಹಿಟ್ಟರ್‌ಗಳು ತಮ್ಮ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದರು. ಇಂಗ್ಲೆಂಡ್‌ ದೈತ್ಯ ಲಿಯಾಮ್ ಲಿವಿಂಗ್‌ಸ್ಟನ್ 163.15ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿದರೆ, ಜಿತೇಶ್ ಶರ್ಮಾ 156.06ರ ಸ್ಟ್ರೈಕ್‌ ರೇಟ್‌ನಲ್ಲಿ ಸ್ಫೋಟಿಸಿದರು. ಪ್ರಭ್‌ಸಿಮ್ರಾನ್‌ ಸಿಂಗ್‌ ಒಂದು ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದರು. ಯುವ ಆಟಗಾರರು ಮುನ್ನೆಲೆಗೆ ಬಂದರು. ಇಂತಹ ಧನಾತ್ಮಕ ಅಂಶಗಳನ್ನು ಪರಿಗಣಿಸಿ, ಮುಂದಿನ ಆವೃತ್ತಿಗೆ ಹೆಚ್ಚು ಬದಲಾವಣೆಗಳಿಲ್ಲದೆ ತಂಡವನ್ನು ಕಟ್ಟುವ ಪ್ರಯತ್ನಕ್ಕೆ ಫ್ರಾಂಚೈಸಿ ಕೈಹಾಕಬೇಕಿದೆ.

    ಹಂಚಿಕೊಳ್ಳಲು ಲೇಖನಗಳು