Rohit Sharma: ಪರೋಕ್ಷವಾಗಿ ಡಬ್ಲ್ಯುಟಿಸಿ ಫೈನಲ್ ಉಲ್ಲೇಖಸಿ ಶುಬ್ಮನ್ ಗಿಲ್ ಆಟವನ್ನು ಕೊಂಡಾಡಿದ ರೋಹಿತ್ ಶರ್ಮಾ
May 27, 2023 12:50 PM IST
ರೋಹಿತ್ ಶರ್ಮಾ
- WTC final: ಐಪಿಎಲ್ ಮುಗಿದ ಬೆನ್ನಲ್ಲೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಅದಕ್ಕೂ ಮುನ್ನ ಶುಬ್ಮನ್ ಗಿಲ್ ಉತ್ತಮ ಫಾರ್ಮ್‌ನಲ್ಲಿದ್ದು, ಈ ಬಗ್ಗೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಸಂತಸ ವ್ಯಕ್ತಪಡಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (Indian Premier league) 16ನೇ ಆವೃತ್ತಿಯ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ (Mumbai Indians) ತಂಡವು 62 ರನ್‌ಗಳಿಂದ ಸೋಲನುಭವಿಸಿತು. ಅತ್ತ ಗೆಲುವಿನೊಂದಿಗೆ ಗುಜರಾತ್ ಟೈಟಾನ್ಸ್ ತಂಡವು ಫೈನಲ್‌ಗೆ ಲಗ್ಗೆ ಹಾಕಿತು.
ಗುಜರಾತ್ ತಂಡದ ಭರವಸೆಯ ಬ್ಯಾಟರ್ ಶುಬ್ಮನ್ ಗಿಲ್, 32 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಆ ಬಳಿಕ ಮುಂದಿನ ಐವತ್ತು ರನ್‌ಗಳಿಗೆ ಕೇವಲ 17 ಎಸೆತಗಳನ್ನು ಮಾತ್ರ ತೆಗೆದುಕೊಂಡರು. ಆವೃತ್ತಿಯಲ್ಲಿ ಮೂರನೇ ಶತಕ ಸಿಡಿಸಿದ ಅವರು, ಪಂದ್ಯಾವಳಿಯ ಪ್ಲೇಆಫ್‌ಗಳ ಇತಿಹಾಸದಲ್ಲಿ ಅತ್ಯಧಿಕ ರನ್ ದಾಖಲಿಸಿದ ಬ್ಯಾಟರ್ ಎನಿಸಿಕೊಂಡರು.
ಗಿಲ್ ಪ್ರದರ್ಶನಕ್ಕೆ ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟಿಗರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಇದೇ ವೇಳೆ ಎದುರಾಳಿ ತಂಡದ ನಾಯಕ ಹಾಗೂ ಟೀಮ್ ಇಂಡಿಯಾದ ಆರಂಭಿಕ ಜೊತೆಗಾರನಾದ ರೋಹಿತ್ ಶರ್ಮಾ ಕೂಡ ಭಾರತದ ಯುವ ಆಟಗಾರನ ಅಮೋಘ ಆಟವನ್ನು ಕೊಂಡಾಡಿದ್ದಾರೆ. ಶುಬ್ಮನ್‌ರನ್ನು ಹೊಗಳಿದ ರೋಹಿತ್, ಆಸ್ಟ್ರೇಲಿಯಾ ವಿರುದ್ಧ ಜೂನ್ ತಿಂಗಳಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ (World Test Championship) ಬಗ್ಗೆಯೂ ಪರೋಕ್ಷ ಉಲ್ಲೇಖ ಮಾಡಿದ್ದಾರೆ.
“ಈ ಋತುವಿನಲ್ಲಿ ಎಲ್ಲಾ ಬೌಲಿಂಗ್ ತಂಡಗಳು ಸವಾಲು ನೀಡಿವೆ. ಕಳೆದ ಪಂದ್ಯದಲ್ಲಿ ಏನಾಯಿತು ಎಂಬುದನ್ನು ನೋಡಿದರೆ, ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ. ಆದರೆ, ಶುಬ್ಮನ್ ಆಟಕ್ಕೆ ಮನ್ನಣೆ ನೀಡಬೇಕಾಗಿದೆ. ಅವರು ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಅಲ್ಲದೆ ಇದೇ ರೀತಿಯ ಪ್ರದರ್ಶನವನ್ನು ಮುಂದುವರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ,” ಎಂದು ರೋಹಿತ್ ಹೇಳಿದ್ದಾರೆ.
ಗಿಲ್ ಪ್ರದರ್ಶನಕ್ಕೆ ಮುಂಬೈ ನಾಯಕ ಸಂತಸ ವ್ಯಕ್ತಪಡಿಸಲು ಮಹತ್ವದ ಕಾರಣವಿದೆ. ಐಪಿಎಲ್ ಬಳಿಕ ಜೂನ್ 7ರಿಂದ 11ರವರೆಗೆ ಇಂಗ್ಲೆಂಡ್‌ನ ದಿ ಓವರ್ ಮೈದಾನದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಇದರಲ್ಲಿಯೂ ಗಿಲ್ ಇದೇ ರೀತಿಯ ಪ್ರದರ್ಶನ ನೀಡಬೇಕೆಂಬ ಇರಾದೆ ಹಾಗೂ ನಿರೀಕ್ಷೆ ರೋಹಿತ್ ಅವರದ್ದು.
ಡಬ್ಲ್ಯೂಟಿಸಿ ಫೈನಲ್‌ನಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಜೊತೆಗೆ ಶುಬ್ಮನ್ ಗಿಲ್ ಇನ್ನಿಂಗ್ಸ್ ತೆರೆಯಲು ಸಿದ್ಧರಾಗಿದ್ದಾರೆ. ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಅವರು ಅಗ್ರ ಮತ್ತು ಮಧ್ಯಮ ಕ್ರಮಾಂಕದದಲ್ಲಿ ಬ್ಯಾಟ್ ಬೀಸುವ ಸಾಧ್ಯತೆಯಿದೆ.
ಪಂದ್ಯದ ಬಗ್ಗೆ ಮಾತನಾಡಿದ ರೋಹಿತ್, ಗುಜರಾತ್ ತಂಡಕ್ಕೆ ಗಿಲ್ ನೀಡಿದ ಕೊಡುಗೆಯಂತೆಯೇ ಮುಂಬೈ ತಂಡದಲ್ಲೂ ಬ್ಯಾಟ್ ಬೀಸುವ ಆಟಗಾರನ ಅಗತ್ಯವಿತ್ತು. ಆದರೆ ಅದು ಸಾಧ್ಯವಾಗಲಿಲ್ಲ ಎಂದು ಹೇಳಿದರು. “ಗಿಲ್ ಆಟ ಅಮೋಘವಾಗಿತ್ತು. ಗಿಲ್‌ನಂತೆ ನಮಗೆ ಕೊನೆಯವರೆಗೂ ಬ್ಯಾಟ್ ಬೀಸಲು ಯಾರಾದರೂ ಬೇಕಾಗಿದ್ದರು. ಅದು ಉತ್ತಮ ಪಿಚ್ ಆಗಿತ್ತು. ಅಲ್ಲದೆ ಮೈದಾನದ ಒಂದು ಬದಿ ಚಿಕ್ಕದಾಗಿತ್ತು. ನಾವು ಪಂದ್ಯದಲ್ಲಿ ಆಳವಾಗಿ ಭಾಗಿಯಾಗಿದ್ದರೆ ಫಲಿತಾಂಶವು ಏನು ಬೇಕಾದರೂ ಆಗಬಹುದಿತ್ತು,” ಎಂದು ತಮ್ಮ ಗೆಲುವಿನ ಸಾಧ್ಯತೆಗಳ ಬಗ್ಗೆ ಅವರು ಮಾತನಾಡಿದರು.
ಗುಜರಾತ್ ಟೈಟಾನ್ಸ್ ತಂಡವು ಭಾನುವಾರ (ಮೇ 28) ನಡೆಯಲಿರುವ 2023ರ ಐಪಿಎಲ್ ಋತುವಿನ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಆ ಮೂಲಕ ಸತತ ಎರಡನೇ ಐಪಿಎಲ್ ಟ್ರೋಫಿ ಎತ್ತಿ ಹಿಡಿಯುವ ಉತ್ಸಾಹದಲ್ಲಿದೆ.