logo
ಕನ್ನಡ ಸುದ್ದಿ  /  ಕ್ರೀಡೆ  /  Wasim Akram: ಅವನಿಗೆ ಉಜ್ವಲ ಭವಿಷ್ಯವಿದೆ; ಸಿಎಸ್‌ಕೆ ಬ್ಯಾಟರ್ ಭಾರತದ ಭವಿಷ್ಯ ಎಂದ ವಾಸಿಂ ಅಕ್ರಮ್

Wasim Akram: ಅವನಿಗೆ ಉಜ್ವಲ ಭವಿಷ್ಯವಿದೆ; ಸಿಎಸ್‌ಕೆ ಬ್ಯಾಟರ್ ಭಾರತದ ಭವಿಷ್ಯ ಎಂದ ವಾಸಿಂ ಅಕ್ರಮ್

Jayaraj HT Kannada

Jun 01, 2023 06:03 PM IST

google News

ವಾಸಿಂ ಅಕ್ರಮ್ ಅವರ ಫೈಲ್ ಫೋಟೋ

    • ಐಪಿಎಲ್ 2023ರ ಸೀಸನ್ ಕುರಿತು ಮಾತನಾಡಿದ ಪಾಕಿಸ್ತಾನದ ಮಾಜಿ ವೇಗಿ ವಾಸಿಂ ಅಕ್ರಮ್, ರುತುರಾಜ್‌ ಗಾಯಕ್ವಾಡ್‌ ಮೇಲೆ ಪ್ರಶಂಸೆಯ ಸುರಿಮಳೆಗೈದಿದ್ದಾರೆ.
ವಾಸಿಂ ಅಕ್ರಮ್ ಅವರ ಫೈಲ್ ಫೋಟೋ
ವಾಸಿಂ ಅಕ್ರಮ್ ಅವರ ಫೈಲ್ ಫೋಟೋ (Getty Images)

ಪ್ರಸಕ್ತ ಆವೃತ್ತಿಯ ಐಪಿಎಲ್ (Indian Premier league) ಪಂದ್ಯಾವಳಿಯು, ಹಲವು ಯುವ ಪ್ರತಿಭೆಗಳನ್ನು ಹುಟ್ಟುಹಾಕಿತು. ಗುಜರಾತ್‌ ಟೈಟಾನ್ಸ್‌ (Gujarat Titans) ತಂಡದ ಆಟಗಾರ ಶುಬ್ಮನ್ ಗಿಲ್, ಸ್ಟಾರ್ ಆಟಗಾರನಾಗಿ ಹೊರಹೊಮ್ಮಿದರು. ಬ್ಯಾಕ್‌ ಟು ಬ್ಯಾಟಕ ಶತಕ ಸಿಡಿಸುವ ಮೂಲಕ ಬಲಿಷ್ಠ ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮುಂಬೈ ಇಂಡಿಯನ್ಸ್‌ (MI) ತಂಡದ ಪ್ಲೇಆಫ್‌ ಹಾದಿಗೆ ಅಡ್ಡಿಯಾದರು. ಇದೇ ವೇಳೆ ಸಿಎಸ್‌ಕೆ ತಂಡದ ಯುವ ಆಟಗಾರ ರುತುರಾಜ್‌ ಗಾಯಕ್ವಾಡ್‌, ತಂಡದ ಪ್ರಮುಖ ಬ್ಯಾಟರ್‌ ಆಗಿ ಹೊರಹೊಮ್ಮಿದರು.

ಭಾರತ ತಂಡದಲ್ಲಿ ತಮ್ಮ ಸ್ಥಾನವನ್ನು ಈಗಾಗಲೇ ಖಚಿತಪಡಿಸಿರುವ ಗಿಲ್‌, ಐಪಿಎಲ್ 2023ರ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದರು. ಆ ಮೂಲಕ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡರು. ಅಲ್ಲದೆ ಸರಣಿ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಐಪಿಎಲ್ 2023ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರ ಬಗ್ಗೆ ಮಾತನಾಡಿದ ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್, ಈ ಋತುವಿನಲ್ಲಿ 17 ಪಂದ್ಯಗಳಲ್ಲಿ 890 ರನ್ ಗಳಿಸಿದ ಗಿಲ್ ಅವರನ್ನು ಕೊಂಡಾಡಿದ್ದಾರೆ.

ಅತ್ತ ಕೈಫ್ ಅವರು ಗಿಲ್ ಆಟವನ್ನು ಶ್ಲಾಘಿಸಿದರೆ, ಪಾಕಿಸ್ತಾನದ ದಿಗ್ಗಜ ವೇಗಿ ವಾಸಿಂ ಅಕ್ರಮ್, ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಅವರ ಆಟವನ್ನು ಪ್ರಶಂಸಿಸಿದ್ದಾರೆ. ಅಲ್ಲದೆ ಅವರಿಗೆ ಭಾರತೀಯ ಕ್ರಿಕೆಟ್‌ನಲ್ಲಿ ಉಜ್ವಲ ಭವಿಷ್ಯವಿದೆ ಎಂದು ಹೇಳಿದ್ದಾರೆ.

ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ಪರ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್‌ ಉತ್ತಮ ಪ್ರದರ್ಶನ ನೀಡಿದರು. ಈ ಕುರಿತು ಮಾತನಾಡಿದ ವಾಸಿಂ ಅಕ್ರಮ್, ರುತುರಾಜ್ ಗಾಯಕ್ವಾಡ್ ಭಾರತೀಯ ಕ್ರಿಕೆಟ್‌ನಲ್ಲಿ ಉಜ್ವಲ ಭವಿಷ್ಯ ಹೊಂದಿದ್ದಾರೆ ಎಂದರು. ಮಂಗಳವಾರ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2023ರ ಫೈನಲ್‌ ಪಂದ್ಯದಲ್ಲಿ ಗಾಯಕ್ವಾಡ್ ಅವರ ಸಿಎಸ್‌ಕೆ ತಂಡವು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟಕ್ಕೇರಿತು.

ಈ ಬಗ್ಗೆ ಮಾತನಾಡಿದ ಅಕ್ರಂ, “ಅವರು ಒತ್ತಡದ ಪರಿಸ್ಥಿತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ಅವರ ಪ್ಲಸ್ ಪಾಯಿಂಟ್‌ ಏನೆಂದರೆ ಅವರು ದೈಹಿಕವಾಗಿ ತುಂಬಾ ಫಿಟ್ ಆಗಿದ್ದಾರೆ. ಅವರು ಉತ್ತಮ ಫೀಲ್ಡರ್ ಕೂಡಾ ಹೌದು. ಗಾಯಕ್ವಾಡ್ ಅವರು ಭಾರತೀಯ ಕ್ರಿಕೆಟ್ ಮತ್ತು ಅವರು ಆಡುವ ಫ್ರಾಂಚೈಸಿಗಳ ಪರ ಉಜ್ವಲ ಭವಿಷ್ಯ ಹೊಂದಿದ್ದಾರೆ,” ಎಂದು ಅಕ್ರಂ ಹೇಳಿದರು.

ಗಾಯಕ್ವಾಡ್ ತಮ್ಮ ತಂಡದ ಪರ ಪ್ರಸಕ್ತ ಋತುವಿನಲ್ಲಿ ಒಟ್ಟು 590 ರನ್‌ ಕಲೆ ಹಾಕಿದ್ದಾರೆ. 42.14ರ ಸರಾಸರಿಯಲ್ಲಿ ಬ್ಯಾಟ್‌ ಬೀಸಿದ ಅವರು, ಒಟ್ಟು ನಾಲ್ಕು ಅರ್ಧಶತಕಗಳನ್ನು ಸಿಡಿಸಿದ್ದಾರೆ. 26ರ ಹರೆಯದ ಗಾಯಕ್ವಾಡ್‌, ಸಿಎಸ್‌ಕೆ ಪರ ಈವರೆಗೆ ಆಡಿರುವ 52 ಪಂದ್ಯಗಳಲ್ಲಿ 1797 ರನ್ ಗಳಿಸಿದ್ದಾರೆ. ಭಾರತದ ಪರ 10 ಟಿ20 ಪಂದ್ಯಗಳನ್ನು ಆಡಿರುವ ಗಾಯಕ್ವಾಡ್, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯಕ್ಕೆ ಸ್ಟ್ಯಾಂಡ್‌ಬೈ ಆಟಗಾರನಾಗಿ ಆಯ್ಕೆಯಾಗಿದ್ದರು. ಆದರೆ, ಅವರ ಮದುವೆ ಕಾರಣದಿಂದಾಗಿ ಅವರ ಬದಲಿಗೆ ಯಶಸ್ವಿ ಜೈಸ್ವಾಲ್ ಅವರನ್ನು ಟೀಮ್‌ ಇಂಡಿಯಾಗೆ ಆಯ್ಕೆ ಮಾಡಲಾಗಿದೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ