logo
ಕನ್ನಡ ಸುದ್ದಿ  /  ಕ್ರೀಡೆ  /  Fifa World Cup 2022: ಸೆನೆಗಲ್ ಮಣಿಸಿದ ಇಂಗ್ಲೆಂಡ್; ಹಾಲಿ ಚಾಂಪಿಯನ್ ಜತೆ ಕ್ವಾರ್ಟರ್ ಫೈನಲ್ ಮುಹೂರ್ತ ಫಿಕ್ಸ್

FIFA World Cup 2022: ಸೆನೆಗಲ್ ಮಣಿಸಿದ ಇಂಗ್ಲೆಂಡ್; ಹಾಲಿ ಚಾಂಪಿಯನ್ ಜತೆ ಕ್ವಾರ್ಟರ್ ಫೈನಲ್ ಮುಹೂರ್ತ ಫಿಕ್ಸ್

HT Kannada Desk HT Kannada

Dec 05, 2022 09:35 AM IST

google News

ಇಂಗ್ಲೆಂಡ್‌ನ ಜೂಡ್ ಬೆಲ್ಲಿಂಗ್‌ಹ್ಯಾಮ್

    • ಸೆನೆಗಲ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಹ್ಯಾರಿ ಕೇನ್ ಅಂತಿಮವಾಗಿ ವಿಶ್ವಕಪ್ 2022ರ ನಾಕೌಟ್ ಹಂತದಲ್ಲಿ ತಮ್ಮ ಗೋಲು ಬರವನ್ನು ನೀಗಿಸಿದರು. ಇವರ ಗೋಲುಗಳ ನೆರವಿನಿಂದ, ಇಂಗ್ಲೆಂಡ್ ಸೆನೆಗಲ್ ವಿರುದ್ಧ ಸುಲಭ ಜಯ ಗಳಿಸಿ ಕತಾರ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಹಂತವನ್ನು ಪ್ರವೇಶಿಸಿತು.
ಇಂಗ್ಲೆಂಡ್‌ನ ಜೂಡ್ ಬೆಲ್ಲಿಂಗ್‌ಹ್ಯಾಮ್
ಇಂಗ್ಲೆಂಡ್‌ನ ಜೂಡ್ ಬೆಲ್ಲಿಂಗ್‌ಹ್ಯಾಮ್ (REUTERS)

ಫಿಫಾ ವಿಶ್ವಕಪ್ 2022ರಲ್ಲಿ ಇಂಗ್ಲೆಂಡ್ ತಂಡವು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ಕತಾರ್‌ನ ಅಲ್ ಬೇಟ್ ಸ್ಟೇಡಿಯಂನಲ್ಲಿ ನಡೆದ 16ರ ಸುತ್ತಿನ ಪಂದ್ಯದಲ್ಲಿ ಸೆನೆಗಲ್ ವಿರುದ್ಧ 3-0 ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದ ಇಂಗ್ಲೆಂಡ್, ಮುಂದಿನ ಹಂತಕ್ಕೆ ಬಡ್ತಿ ಪಡೆಯಿತು. ಇಂಗ್ಲೆಂಡ್ ತಂಡವು ಮುಂದೆ ನಡೆಯುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಫ್ರಾನ್ಸ್‌ ತಂಡವನ್ನು ಎದುರಿಸಲಿದೆ.

ಸೆನೆಗಲ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಹ್ಯಾರಿ ಕೇನ್ ಅಂತಿಮವಾಗಿ ವಿಶ್ವಕಪ್ 2022ರ ನಾಕೌಟ್ ಹಂತದಲ್ಲಿ ತಮ್ಮ ಗೋಲು ಬರವನ್ನು ನೀಗಿಸಿದರು. ಇವರ ಗೋಲುಗಳ ನೆರವಿನಿಂದ, ಇಂಗ್ಲೆಂಡ್ ಸೆನೆಗಲ್ ವಿರುದ್ಧ ಸುಲಭ ಜಯ ಗಳಿಸಿ ಕತಾರ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಹಂತವನ್ನು ಪ್ರವೇಶಿಸಿತು.

2018ರ ಸೆಮಿಫೈನಲಿಸ್ಟ್‌ ಆಗಿರುವ ಇಂಗ್ಲೆಂಡ್‌, ಈ ಬಾರಿ ಕಪ್‌ ಗೆಲ್ಲುವ ಉತ್ಸಾಹದಲ್ಲಿದೆ. ಸೆನೆಗಲ್‌ ವಿರುದ್ಧ ಮಿಡ್‌ಫೀಲ್ಡರ್ ಜೂಡ್ ಬೆಲ್ಲಿಂಗ್‌ಹ್ಯಾಮ್ ಎರಡು ಅದ್ಭುತ ಗೋಲುಗಳೊಂದಿಗೆ ಇಂಗ್ಲೆಂಡ್‌ಗೆ ಮುನ್ನಡೆ ತಂದುಕೊಟ್ಟರು. 39ನೇ ನಿಮಿಷದಲ್ಲಿ ಆರಂಭಿಕ ಗೋಲು ಬಂತು. ಆ ಮೂಲಕ ಸೆನೆಗಲ್‌ ಮೇಲೆ ಒತ್ತಡ ಬಿತ್ತು. 57ನೇ ನಿಮಿಷದಲ್ಲಿ ಬುಕಾಯೊ ಸಾಕಾ ಮೂರನೇ ಗೋಲು ಬಾರಿಸಿದರು. ಅಂತಿಮವಾಗಿ ಆಂಗ್ಲರ ಬಳಗದ ಕಪ್‌ ಆಸೆ ಜೀವಂತವಾಗಿ ಉಳಿಯಿತು.

ಬಪ್ಪೆ ಮ್ಯಾಜಿಕ್; ಫ್ರಾನ್ಸ್ ಕ್ವಾರ್ಟರ್ ಫೈನಲ್‌ ಪ್ರವೇಶ

ಇಂಗ್ಲೆಂಡ್ ಪಂದ್ಯಕ್ಕೂ ಮುನ್ನ ನಡೆದ ಕಾಲ್ಚೆಂಡು ಕದನದಲ್ಲಿ ಪೋಲೆಂಡ್‌ ತಂಡವನ್ನು ಮಣಿಸಿ ಹಾಲಿ ಚಾಂಪಿಯನ್‌ ಫ್ರಾನ್ಸ್‌ ಕೂಡಾ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು. ಫ್ರಾನ್ಸ್‌-ಇಂಗ್ಲೆಂಡ್‌ ತಂಡವನ್ನು ಮುಂದಿನ ಸುತ್ತಿನಲ್ಲಿ ಎದುರಿಸಲಿದೆ.

ಭಾನುವಾರ ನಡೆದ 16ನೇ ಸುತ್ತಿನ ಪಂದ್ಯದಲ್ಲಿ ಪೋಲೆಂಡ್ ವಿರುದ್ಧ ಫ್ರಾನ್ಸ್ 3-1 ಅಂತರದಿಂದ ಗೆದ್ದು ಬೀಗಿತು. ಬಪ್ಪೆ ಅವರ ಎರಡು ಗೋಲುಗಳ ನೆರವಿನಿಂದ, ಹಾಲಿ ಚಾಂಪಿಯನ್‌ಗಳ ವಿಶ್ವಕಪ್‌ ಆಸೆ ಜೀವಂತವಾಗಿದೆ. ಅವರು ಈಗಾಗಲೇ ಐದು ವಿಶ್ವಕಪ್ ಗೋಲುಗಳನ್ನು ಸಂಪಾದಿಸಿದ್ದಾರೆ. ಇದು ಗೋಲ್ಡನ್ ಬೂಟ್ ರೇಸ್‌ನಲ್ಲಿರುವ ಉಳಿದ ಆಟಗಾರರಿಗಿಂತ ಎರಡು ಗೋಲು ಹೆಚ್ಚು.

ಆಸೀಸ್ ವಿರುದ್ಧ ಗೆದ್ದು ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಅರ್ಜೆಂಟೀನಾ

ಫಿಫಾ ವಿಶ್ವಕಪ್‌ನ ಅಹ್ಮದ್ ಬಿನ್ ಅಲಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರೌಂಡ್ 16 ಹಂತದ ರೋಚಕ ಹಣಾಹಣಿಯಲ್ಲಿ ಅರ್ಜೆಂಟೀನಾ ಆಸ್ಟ್ರೇಲಿಯಾವನ್ನು 2-1 ಗೋಲುಗಳಿಂದ ಸೋಲಿಸಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದೆ. ಮಧ್ಯರಾತ್ರಿ ನಡೆದ ಈ ಹೈವೋಲ್ಟೇಜ್ ಪಂದ್ಯದಲ್ಲಿ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಗೋಲು ಗಳಿಸುವ ಮೂಲಕ ತಮ್ಮ ತಂಡಕ್ಕೆ ಜಯ ತಂದುಕೊಟ್ಟಿದ್ದಾರೆ.

ಇಂದಿನ ಪಂದ್ಯಗಳು

ಮಂಗಳವಾರ ಕತಾರ್‌ನ ಸ್ಟೇಡಿಯಂ 974ನಲ್ಲಿಇಂದು ಮಧ್ಯರಾತ್ರಿ(ಮಂಗಳವಾರ) ನಡೆಯಲಿರುವ ಪಂದ್ಯದಲ್ಲಿ ಬ್ರೆಜಿಲ್ ತಂಡವು ದಕ್ಷಿಣ ಕೊರಿಯಾವನ್ನು ಎದುರಿಸಲಿದೆ. ಮಧ್ಯರಾತ್ರಿ 12:30ಕ್ಕೆ ಪಂದ್ಯ ಆರಂಭವಾಗಲಿದೆ. ಮತ್ತೊಂದೆಡೆ ಅಲ್ ಜನೌಬ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಪಂದ್ಯದ 16ನೇ ಸುತ್ತಿನಲ್ಲಿ ಜಪಾನ್ ತಂಡವು ಕ್ರೊಯೇಷಿಯಾವನ್ನು ಎದುರಿಸಲಿದೆ. ಜಪಾನ್ ತನ್ನ ಗುಂಪು ಹಂತದ ಪಂದ್ಯಗಳಲ್ಲಿ ಜರ್ಮನಿ ಮತ್ತು ಸ್ಪೇನ್ ಅನ್ನು ಸೋಲಿಸಿ ಆರು ಅಂಕಗಳೊಂದಿಗೆ ಇ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಏತನ್ಮಧ್ಯೆ, ಕ್ರೊಯೇಷಿಯಾ ಐದು ಅಂಕಗಳೊಂದಿಗೆ ಎಫ್ ಗುಂಪಿನಲ್ಲಿ ಎರಡನೇ ಸ್ಥಾನ ಗಳಿಸಿದೆ.

ವಿಭಾಗ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ