Women's Premier League: ಮೊದಲ ಪಂದ್ಯದಲ್ಲೇ ಅಬ್ಬರಿಸಿದ ಮುಂಬೈ; ಮೊದಲ ಸಿಕ್ಸರ್, ಫಿಫ್ಟಿ ಸೇರಿ ಡಬ್ಲ್ಯೂಪಿಎಲ್ ಪ್ರಥಮಗಳ ಪಟ್ಟಿ ಇಲ್ಲಿದೆ
Mar 04, 2023 10:24 PM IST
ಕಪ್‌ನೊಂದಿಗೆ ಗುಜರಾತ್ ಹಾಗೂ ಮುಂಬೈ ತಂಡದ ನಾಯಕಿಯರು
- ಪಂದ್ಯಾವಳಿಯ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ನ ಯಾಸ್ತಿಕಾ ಭಾಟಿಯಾ ಅವರನ್ನು ಔಟ್ ಮಾಡುವ ಮೂಲಕ ಗುಜರಾತ್‌ನ ತನುಜಾ ಕನ್ವರ್ ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಮೊದಲ ವಿಕೆಟ್ ಪಡೆದರು.
ವಿಮೆನ್ಸ್ ಪ್ರೀಮಿಯರ್ ಲೀಗ್ ಉದ್ಘಾಟನಾ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ವನಿತೆಯರ ತಂಡವು ಗುಜರಾತ್ ಜೈಂಟ್ಸ್ ವಿರುದ್ಧ ಅಬ್ಬರಿಸಿದೆ. ಚೊಚ್ಚಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಹರ್ಮನ್‌ಪ್ರೀತ್ ಬಳಗ 200ಕ್ಕೂ ಹೆಚ್ಚು ರನ್ ಕಲೆ ಹಾಕಿದೆ. ಅಲ್ಲದೆ ವಿಮೆನ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್‌ನ ಹಲವು ಪ್ರಥಮಗಳಿಗೆ ಮುಂಬೈ ಹಾಗೂ ಗುಜರಾತ್ ತಂಡಗಳು ಸಾಕ್ಷಿಯಾಗಿವೆ.
ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಜೈಂಟ್ಸ್ ನಾಯಕಿ ಬೆತ್ ಮೂನಿ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ, ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಅರ್ಧಶತಕದ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ, ಆರಂಭದಲ್ಲೇ ಯಾಸ್ತಿಕಾ ವಿಕೆಟ್ ಕಳೆದುಕೊಂಡರೂ ಉತ್ತಮವಾಗಿ ಮುನ್ನುಗ್ಗಿತು. ಮತ್ತೋರ್ವ ಆರಂಭಿಕ ಆಟಗಾರ್ತಿ ವೆಸ್ಟ್ ಇಂಡೀಸ್ ಸುಂದರಿ ಹೇಲಿ ಮ್ಯಾಥ್ಯೂಸ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ತಂಡ ಹಾಗೂ ಡಬ್ಲ್ಯೂಪಿಎಲ್ ಟೂರ್ನಿಯಲ್ಲೇ ಮೊದಲ ಸಿಕ್ಸರ್ ಹಾಗೂ ಮೊದಲ ಬೌಂಡರಿ ಸಿಡಿಸಿದ ಖ್ಯಾತಿಗೆ ಇವರು ಪಾತ್ರರಾದರು. 31 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್‌ಗಳೊಂದಿಗೆ ತವರಿನ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಿದರು. ಅಂತಿಮವಾಗಿ 47 ರನ್ ಗಳಿಸಿ, ಅರ್ಧಶತಕದ ಅಂಚಿನಲ್ಲಿ ಎಡವಿದರು.
ನ್ಯಾಟ್ ಸಿವರ್ ಬ್ರಂಟ್ ಕೂಡಾ ಬಂದಂತೆಯೇ ಅಬ್ಬರಿಸಿ 23 ರನ್ ಸಿಡಿಸಿದರು. ಆ ಬಳಿಕ ಬಂದ ನಾಯಕಿ ಕೌರ್ ಬರೋಬ್ಬರಿ 14 ಬೌಂಡರಿಗಳೊಂದಿಗೆ 65 ರನ್ ಸಿಡಿಸಿದರು. ಆ ಮೂಲಕ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಮೊದಲ ಅರ್ಧಶತಕ ಸಿಡಿಸಿದ ಖ್ಯಾತಿಗೆ ಮುಂಬೈ ಹಾಗೂ ಟೀಮ್ ಇಂಡಿಯಾ ನಾಯಕಿ ಪಾತ್ರರಾದರು.
ಶನಿವಾರ ನಡೆದ ಪಂದ್ಯಾವಳಿಯ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ನ ಯಾಸ್ತಿಕಾ ಭಾಟಿಯಾ ಅವರನ್ನು ಔಟ್ ಮಾಡುವ ಮೂಲಕ ಗುಜರಾತ್‌ನ ತನುಜಾ ಕನ್ವರ್ ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಮೊದಲ ವಿಕೆಟ್ ಪಡೆದರು. ಗುಜರಾತ್ ಜೈಂಟ್ಸ್ ತಂಡದ ಎಡಗೈ ಬೌಲರ್ ತನುಜಾ, ಪಂದ್ಯದ ಎರಡನೇ ಓವರ್‌ನಲ್ಲಿ ಎಡಗೈ ಬ್ಯಾಟರ್ ಯಾಸ್ತಿಕಾ ಅವರನ್ನು ಔಟ್ ಮಾಡಿದರು. ಜಾರ್ಜಿಯಾ ವೇರ್‌ಹ್ಯಾಮ್ ಸ್ಕ್ವೇರ್ ಲೆಗ್‌ನಲ್ಲಿ ಆಕರ್ಷಕ ಕ್ಯಾಚ್ ಪಡೆದು ತಂಡದ ಮೊದಲ ಹಾಗೂ ಟೂರ್ನಿಯ ಮೊದಲ ಕ್ಯಾಚ್ ಪಡೆದರು.
ಯಾಸ್ತಿಕಾ ತಮ್ಮ ಇನ್ನಿಂಗ್ಸ್‌ನಲ್ಲಿ ಏಳು ಎಸೆತಗಳನ್ನು ಎದುರಿಸಿ ಕೇವಲ ಒಂದು ರನ್ ಮಾತ್ರ ಕಲೆ ಹಾಕಿದರು. ತನುಜಾ ಎಸೆದ ಎಂಟನೇ ಎಸೆತ ಎದುರಿಸಿದ ಅವರು ಆಕ್ರಮಣಕಾರಿ ಸ್ಟ್ರೋಕ್‌ಗೆ ಪ್ರಯತ್ನಿಸಿದರು. ಆದರೆ ಕ್ಯಾಚ್ ನೀಡಿ ಔಟಾದರು.
ವಿಮೆನ್ಸ್ ಪ್ರೀಮಿಯರ್ ಲೀಗ್‌ನ ಪ್ರಥಮಗಳು
ಮೊದಲ ಓವರ್ ಎಸೆದವರು: ಆಶ್ಲೀಗ್ ಗಾರ್ಡ್ನರ್ (ಗುಜರಾತ್ ಜೈಂಟ್ಸ್)
ಮೊದಲು ರನ್ ಗಳಿಸಿದವರು: ಯಾಸ್ತಿಕಾ ಭಾಟಿಯಾ (ಮುಂಬೈ ಇಂಡಿಯನ್ಸ್) 1 ರನ್
ಮೊದಲ ಬೌಂಡರಿ: ಹೇಲಿ ಮ್ಯಾಥ್ಯೂಸ್ (ಮುಂಬೈ ಇಂಡಿಯನ್ಸ್)
ಮೊದಲ ಸಿಕ್ಸರ್:ಹೇಲಿ ಮ್ಯಾಥ್ಯೂಸ್ (ಮುಂಬೈ ಇಂಡಿಯನ್ಸ್)
ಮೊದಲ ವಿಕೆಟ್: ತನುಜಾ ಕನ್ವರ್ (ಗುಜರಾತ್ ಜೈಂಟ್ಸ್)
ಮೊದಲ ಕ್ಯಾಚ್: ಜಾರ್ಜಿಯಾ ವೇರ್‌ಹ್ಯಾಮ್ (ಗುಜರಾತ್ ಜೈಂಟ್ಸ್)
ಮೊದಲ ಅರ್ಧಶತಕ: ಹರ್ಮನ್ಪ್ರೀತ್ ಕೌರ್ (ಮುಂಬೈ ಇಂಡಿಯನ್ಸ್)