FIFA World Cup 2022: ಈಕ್ವೆಡಾರ್-ನೆದರ್ಲ್ಯಾಂಡ್ಸ್ ಪಂದ್ಯ ಡ್ರಾ; ಗುಂಪು ಹಂತದಲ್ಲೇ ಹೊರಬಿದ್ದ ಅತಿಥೇಯ ಕತಾರ್
Nov 26, 2022 06:56 AM IST
ಈಕ್ವೆಡಾರ್-ನೆದರ್ಲ್ಯಾಂಡ್ಸ್ ಪಂದ್ಯದ ದೃಶ್ಯ
- ಫುಟ್ಬಾಲ್ ವಿಶ್ವಕಪ್ ಇತಿಹಾಸದಲ್ಲೇ, ದಕ್ಷಿಣ ಆಫ್ರಿಕಾ ಬಳಿಕ ಗುಂಪು ಹಂತದಲ್ಲಿಯೇ ಹೊರಹಾಕಲ್ಪಟ್ಟ ಎರಡನೇ ಅತಿಥೇಯ ದೇಶ ಎಂಬ ಕುಖ್ಯಾತಿಗೆ ಕತಾರ್ ಪಾತ್ರವಾಯ್ತು. ದಕ್ಷಿಣ ಆಫ್ರಿಕಾವು 2010ರ ವಿಶ್ವಕಪ್‌ನಿಂದ ಗುಂಪು ಹಂತದ ಪಂದ್ಯಗಳ ಮೂರನೇ ಸುತ್ತಿನಲ್ಲಿ ಹೊರಬಿದ್ದಿತ್ತು.
ಫಿಫಾ ವಿಶ್ವಕಪ್‌ನಿಂದ ಅತಿಥೇಯ ಕತಾರ್ ಹೊರಬಿದ್ದಿದೆ. ಶುಕ್ರವಾರ ನಡೆದ ಗುಂಪು ಹಂತದ ಪಂದ್ಯದಲ್ಲಿ ಸೋತ ಅತಿಥೇಯರು, ಫುಟ್ಬಾಲ್ ವಿಶ್ವಕಪ್‌ನಿಂದ ಹೊರಬಿದ್ದಿದ್ದಾರೆ. A ಗುಂಪಿನ ತನ್ನ ಎರಡನೇ ಪಂದ್ಯದಲ್ಲಿಯೂ ಸೆನೆಗಲ್ ವಿರುದ್ಧ 3-1ರಿಂದ ಕತಾರ್ ಸೋತಿತು. ಆ ಬಳಿಕ ನೆದರ್‌ಲ್ಯಾಂಡ್ಸ್ ಮತ್ತು ಈಕ್ವೆಡಾರ್ ನಡುವಿನ ಪಂದ್ಯವು 1-1ರಿಂದ ಡ್ರಾ ಆಗುವ ಮೂಲಕ ಗುಂಪು ಹಂತದಲ್ಲೇ ಕತಾರ್ ನಿರ್ಗಮನ ಖಚಿತವಾಯ್ತು.
ಫುಟ್ಬಾಲ್ ವಿಶ್ವಕಪ್ ಇತಿಹಾಸದಲ್ಲೇ, ದಕ್ಷಿಣ ಆಫ್ರಿಕಾ ಬಳಿಕ ಗುಂಪು ಹಂತದಲ್ಲಿಯೇ ಹೊರಹಾಕಲ್ಪಟ್ಟ ಎರಡನೇ ಅತಿಥೇಯ ದೇಶ ಎಂಬ ಕುಖ್ಯಾತಿಗೆ ಕತಾರ್ ಪಾತ್ರವಾಯ್ತು. ದಕ್ಷಿಣ ಆಫ್ರಿಕಾವು 2010ರ ವಿಶ್ವಕಪ್‌ನಿಂದ ಗುಂಪು ಹಂತದ ಪಂದ್ಯಗಳ ಮೂರನೇ ಸುತ್ತಿನಲ್ಲಿ ಹೊರಬಿದ್ದಿತ್ತು.
ಎ ಗುಂಪಿನಲ್ಲಿ ನೆದರ್ಲೆಂಡ್ಸ್ ಮತ್ತು ಈಕ್ವೆಡಾರ್ ತಂಡವು ತಲಾ ನಾಲ್ಕು ಅಂಕಗಳನ್ನು ಹೊಂದಿದ್ದರೆ, ಸೆನೆಗಲ್ ಮೂರು ಅಂಕಗಳನ್ನು ಪಡೆದಿದೆ. ನೆದರ್ಲ್ಯಾಂಡ್ಸ್ ವಿರುದ್ಧ ಕತಾರ್‌ಗೆ ಇನ್ನೂ ಒಂದು ಪಂದ್ಯವಿದೆ.
ಏಷ್ಯಾದ ಅತ್ಯಂತ ಬಲಿಷ್ಠ ತಂಡಗಳಲ್ಲಿ ಒಂದಾದ ಕತಾರ್ ತಂಡವು ಫುಟ್ಬಾಲ್‌ನ ಇತರ ಬಲಿಷ್ಠ ತಂಡಗಳ ಸಾಮರ್ಥ್ಯದ ಎದುರು ಹೊಂದಿಕೆಯಾಗಲಿಲ್ಲ. ಇದು ಯುರೋಪ್ ಮತ್ತು ಏಷ್ಯಾದ ನಡುವಿನ ಪ್ರತಿಭೆಯಲ್ಲಿನ ಅಸಮಾನತೆಯನ್ನು ಎತ್ತಿತೋರಿಸಿತು.
ಆತಿಥೇಯರ ವಿರುದ್ಧ ಸೆನೆಗಲ್ 3-1 ಗೋಲುಗಳಿಂದ ಜಯ ಸಾಧಿಸುವ ಮೂಲಕ ಮುಂದಿನ ಸುತ್ತಿನ ಆಸೆಯನ್ನು ಜೀವಂತವಾಗಿರಿಸಿದೆ. ಈ ತಂಡದಲ್ಲಿ, ಬೌಲೆ ದಿಯಾ, ಫಮಾರಾ ಡಿಧೌ ಮತ್ತು ಬಂಬಾ ಡಿಯಾಂಗ್ ಗೋಲು ಗಳಿಸುವ ಮೂಲಕ ತಮ್ಮ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮತ್ತೊಂದೆಡೆ, ಕತಾರ್ ಪರ ಮುಹಮ್ಮದ್ ಮುಂಟಾರಿ ಹೊರತುಪಡಿಸಿ, ಉಳಿದವರು ಗೋಲು ಗಳಿಸಲು ವಿಫಲರಾದರು.
ಪಂದ್ಯ ಆರಂಭದಿಂದಲೂ ರೋಚಕವಾಗಿತ್ತು. ಸೆನೆಗಲ್ ತಂಡ ಮೂರನೇ ನಿಮಿಷದಲ್ಲಿ ಗೋಲು ಗಳಿಸಲು ಯತ್ನಿಸಿತು. ಆದರೆ ಆ ಪ್ರಯತ್ನ ಯಶಸ್ವಿಯಾಗಲಿಲ್ಲ. ಐದು ನಿಮಿಷಗಳ ಬಳಿಕ, ಕಡಿಮೆ ಆಟಗಾರರಿದ್ದಾಗ ಮೆಂಡಿ ಮತ್ತೊಮ್ಮೆ ಕತಾರ್ ಬಾಕ್ಸ್‌ನಲ್ಲಿ ಗೋಲು ಗಳಿಸಲು ಪ್ರಯತ್ನಿಸುವ ಮೂಲಕ ಎದುರಾಳಿಯ ಮೇಲೆ ಒತ್ತಡ ಹೇರಿದರು. ಮತ್ತೊಂದೆಡೆ, ರಕ್ಷಣಾತ್ಮಕ ಆಟದ ವಿಷಯದಲ್ಲಿ ಸೆನೆಗಲ್ ತಂಡವು ಅತ್ಯುತ್ತಮ ಪ್ರದರ್ಶನ ತೋರಿತು.
ಎರಡು ಬಾರಿ ಗೋಲು ಗಳಿಸಲು ವಿಫಲವಾದ ನಂತರ ಸೆನೆಗಲ್ 40ನೇ ನಿಮಿಷದಲ್ಲಿ ತನ್ನ ಗೋಲು ಗಳಿಕೆಯ ಹಸಿವನ್ನು ನೀಗಿಸಿತು. ಬೌಲೆ ದಿಯಾ ಗೋಲು ಗಳಿಸಿ ಸೆನೆಗಲ್ ಗೆ 1-0 ಮುನ್ನಡೆಯನ್ನು ತಂದು ಕೊಟ್ಟರು. ದ್ವಿತೀಯಾರ್ಧದಲ್ಲಿ ಸೆನೆಗಲ್ ತನ್ನ ಪ್ರಾಬಲ್ಯವನ್ನು ಮುಂದುವರಿಸಿತು. ಫಮಾರಾ 48ನೇ ನಿಮಿಷದಲ್ಲಿ ಅಮೋಘ ಗೋಲು ಬಾರಿಸಿ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು. ಆ ಸಮಯದಿಂದ ಗೋಲು ಗಳಿಸಲು ಮತ್ತೆ ಮತ್ತೆ ಪ್ರಯತ್ನಿಸಿದ ಕತಾರ್‌ಗೆ ಸೆನೆಗಲ್ ಆಟಗಾರರು ಕಠಿಣ ಪೆನಾಲ್ಟಿ ನೀಡಿದರು.
ಈಕ್ವೆಡಾರ್ ನೆದರ್ಲ್ಯಾಂಡ್ಸ್ ಪಂದ್ಯ ಡ್ರಾ
ಸೆನೆಗಲ್ ವಿರುದ್ಧದ ತನ್ನ ಆರಂಭಿಕ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ನೆದರ್ಲ್ಯಾಂಡ್ಸ್, ಈಕ್ವೆಡಾರ್ ವಿರುದ್ಧದ ಎರಡನೇ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಶುಕ್ರವಾರ, ಅವರು ಈ ವಿಶ್ವಕಪ್‌ನ ಇದುವರೆಗಿನ ಆರನೇ ಅತಿ ವೇಗದ ಗೋಲು ಗಳಿಸಿದರು. ಆದರೆ ಅಲ್ ರಯಾನ್‌ನಲ್ಲಿರುವ ಖಲೀಫಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ರೋಚಕ ಮುಖಾಮುಖಿಯಲ್ಲಿ, ಸಮಾನ ಸ್ಪರ್ಧೆ ಒಡ್ಡಿದ ಈಕ್ವೆಡಾರ್ ಮತ್ತೊಂದು ಗೋಲು ಗಳಿಸಿತು. ಆ ಮೂಲಕ 1-1ರೊಂದಿಗೆ ಪಂದ್ಯವು ರೋಚಕ ಡ್ರಾ ಕಂಡಿತು.
ಪಂದ್ಯ ಡ್ರಾಗೊಂಡ ಬಳಿಕ ಉಭಯ ತಂಡಗಳ ಬಳಿ ನಾಲ್ಕು ಅಂಕಗಳಿವೆ. ಸೆನೆಗಲ್ ಬಳಿಕ ಮೂರು ಅಂಕಗಳಿವೆ. ಡಚ್ಚರು (ನೆದರ್ಲ್ಯಾಂಡ್ಸ್) ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಈಗಾಗಲೇ ಹೊರಬಿದ್ದಿರುವ ಕತಾರ್ ಅನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಡಚ್ಚರು ಸುಲಭವಾಗಿ ಗೆಲ್ಲುವ ನಿರೀಕ್ಷೆ ಇದೆ. ಗುಂಪು ಹಂತದಿಂದ ಮುಂದಿನ ಹಂತಕ್ಕೆ ಎಂಟ್ರಿ ಪಡೆಯುವ ಎರಡನೇ ತಂಡವನ್ನು ನಿರ್ಧರಿಸಲು ಈಕ್ವೆಡಾರ್ ಮತ್ತು ಸೆನೆಗಲ್ ನಡುವಿನ ಪಂದ್ಯ ರೋಚಕವಾಗಿ ಸಾಗಲಿದೆ.