logo
ಕನ್ನಡ ಸುದ್ದಿ  /  ಕ್ರೀಡೆ  /  ಪ್ಯಾರಿಸ್ ಒಲಿಂಪಿಕ್ಸ್‌: ಇಸ್ರೇಲ್ ಫುಟ್‌ಬಾಲ್ ಪಂದ್ಯದ ವೇಳೆ ಪ್ಯಾಲೆಸ್ತೀನ್‌ ಪರ ಪ್ರತಿಭಟನಾಕಾರರಿಂದ ಹಿಟ್ಲರ್ ಪರ ಘೋಷಣೆ -ವಿಡಿಯೋ

ಪ್ಯಾರಿಸ್ ಒಲಿಂಪಿಕ್ಸ್‌: ಇಸ್ರೇಲ್ ಫುಟ್‌ಬಾಲ್ ಪಂದ್ಯದ ವೇಳೆ ಪ್ಯಾಲೆಸ್ತೀನ್‌ ಪರ ಪ್ರತಿಭಟನಾಕಾರರಿಂದ ಹಿಟ್ಲರ್ ಪರ ಘೋಷಣೆ -ವಿಡಿಯೋ

Jayaraj HT Kannada

Aug 02, 2024 02:58 PM IST

google News

ಇಸ್ರೇಲ್ ಫುಟ್‌ಬಾಲ್ ಪಂದ್ಯದ ವೇಳೆ ಪ್ಯಾಲೆಸ್ತೀನ್‌ ಪರ ಪ್ರತಿಭಟನಾಕಾರರಿಂದ ಹಿಟ್ಲರ್ ಪರ ಘೋಷಣೆ

    • ಇಸ್ರೇಲ್ ದೇಶದ ಫುಟ್‌ಬಾಲ್ ಪಂದ್ಯದ ಸಮಯದಲ್ಲಿ ಸ್ಟೇಡಿಯಂನಲ್ಲಿ ಸೇರಿದ್ದ ಪ್ಯಾಲೆಸ್ತೀನ್‌ ಪರ ಪ್ರತಿಭಟನಾಕಾರರು ಹಿಟ್ಲರ್ ಪರ ಘೋಷಣೆ ಕೂಗಿದ್ದಾರೆ. ಇದೇ ವೇಳೆ ನಾಜಿ ಸೆಲ್ಯೂಟ್ (ಹಿಟ್ಲರ್‌ ಸೆಲ್ಯೂಟ್) ಮಾಡುತ್ತಾ ಪ್ರತಿಭಟನಾಕಾರರು ಕಿರುಚಿದ್ದಾರೆ. ಈ ವಿಡಿಯೋ ವೈರಲ್‌ ಆಗಿದೆ.
ಇಸ್ರೇಲ್ ಫುಟ್‌ಬಾಲ್ ಪಂದ್ಯದ ವೇಳೆ ಪ್ಯಾಲೆಸ್ತೀನ್‌ ಪರ ಪ್ರತಿಭಟನಾಕಾರರಿಂದ ಹಿಟ್ಲರ್ ಪರ ಘೋಷಣೆ
ಇಸ್ರೇಲ್ ಫುಟ್‌ಬಾಲ್ ಪಂದ್ಯದ ವೇಳೆ ಪ್ಯಾಲೆಸ್ತೀನ್‌ ಪರ ಪ್ರತಿಭಟನಾಕಾರರಿಂದ ಹಿಟ್ಲರ್ ಪರ ಘೋಷಣೆ (AFP)

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಆಟೋಟಗಳ ಸುದ್ದಿ ಒಂದೆಡೆಯಾದರೆ, ವಿವಿಧ ವಿವಾದಗಳು ಹಾಗೂ ಆಯೋಜಕರ ಎಡವಟ್ಟುಗಳು ಕೂಡಾ ಸುದ್ದಿಯಾಗುತ್ತಿವೆ. ಉದ್ಘಾಟನೆಯ ದಿನವೇ ದಕ್ಷಿಣ ಕೊರಿಯಾ ಮತ್ತು ಉತ್ತರ ಕೊರಿಯಾ ದೇಶಗಳ ಹೆಸರಿನ ಗೊಂದಲ ಸುದ್ದಿಯಾಗಿತ್ತು. ಮಹಿಳೆಯರ ಬಾಕ್ಸಿಂಗ್‌ನಲ್ಲಿ ಜೈವಿಕ ಪುರುಷ ಭಾಗಿಯಾಗಿದ್ದು, ಇನ್ನೂ ದೊಡ್ಡ ಮಟ್ಟದ ಚರ್ಚೆಯಾಗಿ ಉಳಿದಿದೆ. ಇದರ ನಡುವೆ ಇಸ್ರೇಲ್‌ ದೇಶದ ಫುಟ್ಬಾಲ್‌ ಪಂದ್ಯದ ವೇಳೆ ಪ್ಯಾಲೆಸ್ತೀನ್‌ ಪರ ಪ್ರತಿಭಟನಾಕಾರರು 'ಹೇಲ್‌ ಹಿಟ್ಲರ್‌' ಎಂದು ಘೋಷಣೆ ಕೂಗಿದ್ದಾರೆ. ಇದರೊಂದಿಗೆ ಇಸ್ರೇಲ್‌ ಆಟಗಾರರನ್ನು ಕೆಣಕುವ ಪ್ರಯತ್ನ ನಡೆದಿದೆ ಎಂದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇಸ್ರೇಲ್ ಮತ್ತು ಪರಾಗ್ವೆ ನಡುವಿನ ಫುಟ್‌ಬಾಲ್ ಪಂದ್ಯದ ಸಮಯದಲ್ಲಿ ಈ ಘಟನೆ ನಡೆದಿದೆ. ಸ್ಟೇಡಿಯಂನಲ್ಲಿ ಸೇರಿದ್ದ ಪ್ಯಾಲೆಸ್ತೀನ್‌ ಪರ ಪ್ರತಿಭಟನಾಕಾರರು, ಇಸ್ರೇಲ್‌ ದೇಶದ ರಾಷ್ಟ್ರಗೀತೆ ಪ್ಲೇ ಮಾಡಿದಾಗ 'ಹೇಲ್ ಹಿಟ್ಲರ್' ಎಂದು ಘೋಷಣೆ ಕೂಗಿದ್ದಾರೆ. ಇದೇ ವೇಳೆ ನಾಜಿ ಸೆಲ್ಯೂಟ್ (ಹಿಟ್ಲರ್‌ ಸೆಲ್ಯೂಟ್) ಮಾಡುತ್ತಾ ಪ್ರತಿಭಟನಾಕಾರರು 'ಹೇಲ್ ಹಿಟ್ಲರ್' ಎಂದು ಕಿರುಚಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

ಹೇಲ್ ಹಿಟ್ಲರ್ ಎಂದರೇನು?

ನಾಜಿ ಆಡಳಿತದ ಅವಧಿಯಲ್ಲಿ ಜರ್ಮನ್ನರು ಅಥವಾ ಅವರ ಬೆಂಬಲಿಗರು ಹಿಟ್ಲರ್‌ ಶ್ರೇಷ್ಠತೆಯನ್ನು ಹೇಳಲು ಶುಭಾಶಯದ ‘ಹೇಲ್ ಹಿಟ್ಲರ್’ ಘೋಷಣೆ ಬಳಸುತ್ತಿದ್ದರು. ಇದೀಗ ಇಸ್ರೇಲ್‌ಗೆ ವಿರುದ್ಧವಾಗಿ ಹಿಟ್ಲರ್‌ ಪರವಾಗಿ ಪ್ಯಾಲೆಸ್ಟೈನ್ ಪರ ಪ್ರತಿಭಟನಾಕಾರರು ಘೋಷಣೆ ಕೂಗಿದ್ದಾರೆ.

ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಜಾಗತಿಕ ಮಟ್ಟದಲ್ಲಿ ಇಸ್ರೇಲ್‌ ಹಾಗೂ ಪ್ಯಾಲೆಸ್ತೀನ್‌ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿತ್ತು. ಇಸ್ರೇಲ್‌ ಹಾಗೂ ಹಮಾಸ್ ನಡುವಿನ ಯುದ್ಧ ಆರಂಭಗೊಂಡು ಸಾವಿರಾರು ಜನರು ಸಾವನ್ನಪ್ಪಿದರು. ಆ ನಂತರ ಇಸ್ರೇಲ್‌ ಕ್ರೀಡಾಪಟುಗಳಿಗೆ ಅವರ ಸುರಕ್ಷತೆಯ ದೃಷ್ಟಿಯಿಂದ ಒಲಿಂಪಿಕ್ಸ್‌ನಲ್ಲಿ ಭಾರಿ ಭದ್ರತೆ ಒದಗಿಸಲಾಗಿದೆ.

ಸದ್ಯ ಇಸ್ರೇಲ್‌ ಪಂದ್ಯದಲ್ಲಿ ಪ್ಯಾಲೆಸ್ತೀನ್‌ ಪರ ಪ್ರತಿಭಟನಾಕಾರರ ಘೋಷಣೆಯಿಂದ, ಇಸ್ರೇಲ್‌ ಆಟಗಾರರು ಹಾಗೂ ದೇಶವಾಸಿಗಳಿಗೆ ಭದ್ರತೆಯ ಪ್ರಶ್ನೆ ಎದುರಾಗಿದೆ. ಸುರಕ್ಷತೆಯ ಕಾರಣದಿಂದ ಒಲಿಂಪಿಕ್ ಸಂಘಟಕರು ಯೆಹೂದ್ಯ ವಿರೋಧಿ ಪ್ರತಿಭಟನಾಕಾರರ ವಿರುದ್ಧ ತನಿಖೆಗೆ ವಿನಂತಿಸಿದ್ದಾರೆ ಎಂದು ಸ್ಕೈ ನ್ಯೂಸ್ ವರದಿ ಹೇಳಿದೆ.

“ಪ್ಯಾರಿಸ್ ಒಲಿಂಪಿಕ್ಸ್‌ ಆಯೋಜಕರು ಈ ಕೃತ್ಯಗಳನ್ನು ಬಲವಾಗಿ ಖಂಡಿಸುತ್ತದೆ” ಎಂದು ಒಲಿಂಪಿಕ್ ಸಂಘಟಕರು ಹೇಳಿದ್ದಾರೆ. “ಈಗಾಗಲೇ ಘಟನೆ ಕುರಿತು ದೂರು ದಾಖಲಿಸಲಾಗಿದೆ”, ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ