Ramiz Raja on Gill: ದ್ವಿಶತಕ ವೀರನನ್ನು ರೋಹಿತ್‌ಗೆ ಹೋಲಿಸಿದ ರಾಜಾ; 'ಹಾಗೆಯೇ ಬ್ಯಾಟಿಂಗ್ ಮುಂದುವರೆಸು' ಎಂದು ಸಲಹೆ
Jan 22, 2023 01:41 PM IST
ಶುಬ್ಮನ್ ಗಿಲ್, ರಮೀಜ್ ರಾಜಾ, ರೋಹಿತ್ ಶರ್ಮಾ
- “ಶುಬ್ಮನ್ ಗಿಲ್, ರೋಹಿತ್ ಶರ್ಮಾರಂತೆ ಆಡುತ್ತಾರೆ. ಅವನಿಗೆ ಸಾಕಷ್ಟು ಸಾಮರ್ಥ್ಯವಿದೆ. ಸಾಕಷ್ಟು ಸಮಯ ಆಡಿದ ಬಳಿಕ ಆತನ ಆಟದಲ್ಲಿ ಆಕ್ರಮಣಶೀಲತೆ ಬೆಳೆಯುತ್ತದೆ. ಅವನು ಆಟದಲ್ಲಿ ಏನನ್ನೂ ಬದಲಾಯಿಸುವ ಅಗತ್ಯವಿಲ್ಲ” ಎಂದು ರಾಜಾ ಹೇಳಿದ್ದಾರೆ.
ಕಳೆದ ಬಾರಿಯ(2019) ವಿಶ್ವಕಪ್ ರನ್ನರ್ ಅಪ್ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಎಂಟು ವಿಕೆಟ್‌ಗಳ ಭರ್ಜರಿ ಗೆಲುವಿನೊಂದಿಗೆ, ಟೀಮ್ ಇಂಡಿಯಾ ಸರಣಿ ಜಯ ಸಾಧಿಸಿದೆ. ಬೌಲರ್‌ಗಳು ಕಿವೀಸ್ ಬ್ಯಾಟರ್‌ಗಳನ್ನು ಕೇವಲ 108 ರನ್‌ಗಳಿಗೆ ಆಲೌಟ್ ಮಾಡಿದರು. ಇದಕ್ಕೆ ಪ್ರತಿಯಾಗಿ, ಕೇವಲ 20.1 ಓವರ್‌ಗಳಲ್ಲಿ ಭಾರತ ಚೇಸಿಂಗ್ ಮಾಡಿ ಗೆಲುವನ್ನು ತನ್ನದಾಗಿಸಿತು. ನಾಯಕ ರೋಹಿತ್ ಶರ್ಮಾ ಅವರೊಂದಿಗೆ 72 ರನ್‌ಗಳ ಆರಂಭಿಕ ಜೊತೆಯಾಟ ನೀಡಿದ ಶುಬ್ಮನ್ ಗಿಲ್, ಅಜೇಯ 40 ರನ್ ಗಳಿಸಿ ಮಿಂಚಿದರು.
ಪಂದ್ಯದ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಯ ಮಾಜಿ ಅಧ್ಯಕ್ಷ ರಮೀಜ್ ರಾಜಾ ಮಾತನಾಡುತ್ತಾ, ಗಿಲ್ ಮತ್ತು ರೋಹಿತ್ ಶರ್ಮಾ ನಡುವಣ ಹೋಲಿಕೆಗಳ ಬಗ್ಗೆ ಹೇಳಿಕೆ ನೀಡಿದರು. ಈ ವೇಳೆ ನ್ಯೂಜಿಲೆಂಡ್ ವಿರುದ್ಧದ ಸರಣಿಯ ಆರಂಭಿಕ ಪಂದ್ಯದಲ್ಲಿ ಅವರ ದಾಖಲೆಯ ದ್ವಿಶತಕವನ್ನು ನೆನಪಿಸಿಕೊಂಡರು.
ಬುಧವಾರ, ಹೈದರಾಬಾದ್‌ನಲ್ಲಿ ನಡೆದ ಸರಣಿಯ ಆರಂಭಿಕ ಪಂದ್ಯದಲ್ಲಿ ಗಿಲ್ 208 ರನ್ ಗಳಿಸಿ ದಾಖಲೆ ಬರೆದಿದ್ದರು. ಅವರು ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಿದ ಐದನೇ ಭಾರತೀಯ ಬ್ಯಾಟರ್ ಆಗಿ ಹೊರಹೊಮ್ಮಿದರು. ಅಲ್ಲದೆ, ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಆಟಗಾರರಾದರು. ಆ ಪಂದ್ಯದಲ್ಲಿ ಅತಿಥೇಯರು ನ್ಯೂಜಿಲೆಂಡ್ ತಂಡವನ್ನು 12 ರನ್‌ಗಳಿಂದ ಸೋಲಿಸಿತು.
ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ರಾಜಾ, ಗಿಲ್ ಅವರನ್ನು "ಮಿನಿ ರೋಹಿತ್ ಶರ್ಮಾ" ಎಂದು ಶ್ಲಾಘಿಸಿದ್ದಾರೆ. ಗಿಲ್ ಅವರ ಬ್ಯಾಟಿಂಗ್ ತಂತ್ರಗಳನ್ನು ಭಾರತದ ದಂತಕಥೆ ರೋಹಿತ್ ಶರ್ಮಾಗೆ ಹೋಲಿಸಿದರು. ಹೀಗಾಗಿ ಗಿಲ್ ತಮ್ಮ ಆಟದ ಶೈಲಿಯನ್ನು ಬದಲಾಯಿಸುವ ಅಗತ್ಯವಿಲ್ಲ ಎಂದು ಸಲಹೆ ನೀಡಿದರು.
“ಶುಬ್ಮನ್ ಗಿಲ್ ಮಿನಿ ರೋಹಿತ್ ಶರ್ಮಾರಂತೆ ಕಾಣುತ್ತಾರೆ. ಅವನಿಗೆ ಸಾಕಷ್ಟು ಸಾಮರ್ಥ್ಯವಿದೆ. ಸಾಕಷ್ಟು ಸಮಯ ಆಡಿದ ಬಳಿಕ ಆತನ ಆಟದಲ್ಲಿ ಆಕ್ರಮಣಶೀಲತೆ ಬೆಳೆಯುತ್ತದೆ. ಅವನು ಆಟದಲ್ಲಿ ಏನನ್ನೂ ಬದಲಾಯಿಸುವ ಅಗತ್ಯವಿಲ್ಲ” ಎಂದು ರಾಜಾ ಹೇಳಿದ್ದಾರೆ.
ಇದೇ ವೇಳೆ, ಚೇಸಿಂಗ್‌ನಲ್ಲಿ 50 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಭಾರತೀಯ ನಾಯಕನ ಬಗ್ಗೆಯೂ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ರೋಹಿತ್ ಶರ್ಮಾ ಅವರಂತಹ ಅತ್ಯುತ್ತಮ ಬ್ಯಾಟರ್ ಇರುವುದರಿಂದ ಭಾರತಕ್ಕೆ ಬ್ಯಾಟಿಂಗ್ ಸುಲಭವಾಗಿದೆ. ಅವರು ತುಂಬಾ ಚೆನ್ನಾಗಿ ಆಡುತ್ತಾರೆ. ಹೀಗಾಗಿ 108 ರನ್ ಚೇಸ್ ಮಾಡುವುದು ಭಾರತಕ್ಕೆ ತುಂಬಾ ಸುಲಭ, ಎಂದು ರಾಜಾ ಹೇಳಿದ್ದಾರೆ.
ಭಾರತ ಮತ್ತು ನ್ಯೂಜಿಲೆಂಡ್ ತಂಡವು ಮುಂದೆ ಜನವರಿ 24ರಂದು ಇಂದೋರ್‌ನಲ್ಲಿ ಮೂರನೇ ಏಕದಿನ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಗಮನಿಸಬಹುದಾದ ಇತರೆ ಸುದ್ದಿಗಳು
ICC ODI rankings: ಸೋಲಿನ ಬಳಿಕ ಶ್ರೇಯಾಂಕದಲ್ಲಿ ಕುಸಿದ ಕಿವೀಸ್; ಸರಣಿ ಕ್ಲೀನ್ ಸ್ವೀಪ್ ಮಾಡಿದ್ರೆ ಭಾರತಕ್ಕೆ ಅಗ್ರಸ್ಥಾನ
ರಾಯ್‌ಪುರದಲ್ಲಿ ಶನಿವಾರ ನಡೆದ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಪಂದ್ಯದಲ್ಲಿ, ರೋಹಿತ್ ಶರ್ಮಾ ಬಳಗ ಭರ್ಜರಿ ಜಯ ಗಳಿಸಿದೆ. ಎಂಟು ವಿಕೆಟ್‌ಗಳ ಅಂತರದ ಸೋಲಿನ ಬಳಿಕ, ಕಿವೀಸ್ ಸರಣಿ ಸೋಲು ಅನುಭವಿಸಿದೆ. ಅದರೊಂದಿಗೆ ಐಸಿಸಿ ಪುರುಷರ ಏಕದಿನ ಶ್ರೇಯಾಂಕದಲ್ಲೂ ಕುಸಿತ ಕಂಡಿದೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.