logo
ಕನ್ನಡ ಸುದ್ದಿ  /  ಕ್ರೀಡೆ  /  Ramiz Raja: 'ಭಾರತವು ಪಾಕಿಸ್ತಾನವನ್ನು ನೋಡಿ ಬೌಲಿಂಗ್ ದಾಳಿಯನ್ನು ರೂಪಿಸಿದೆ' -ರಮೀಜ್ ರಾಜಾ

Ramiz Raja: 'ಭಾರತವು ಪಾಕಿಸ್ತಾನವನ್ನು ನೋಡಿ ಬೌಲಿಂಗ್ ದಾಳಿಯನ್ನು ರೂಪಿಸಿದೆ' -ರಮೀಜ್ ರಾಜಾ

Jayaraj HT Kannada

Feb 03, 2023 10:30 PM IST

google News

ಹಾರ್ದಿಕ್ ಪಾಂಡ್ಯ(ಎಡ) ಹಾಗೂ ರಾಹುಲ್ ದ್ರಾವಿಡ್; ರಮೀಜ್ ರಾಜಾ

    • ಇತ್ತೀಚೆಗೆ ಭಾರತ ತಂಡವು ಉತ್ತಮ ಪ್ರದರ್ಶನ ನೀಡುತ್ತಿದೆ. ಅದು ಕೂಡಾ ವಿಶೇಷವಾಗಿ ಬೌಲಿಂಗ್‌ನಲ್ಲಿ. ಈ ಬಗ್ಗೆ ಪಾಕಿಸ್ತಾನದ ಮಾಜಿ ನಾಯಕ ರಮೀಜ್ ರಾಜಾ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ, ಭಾರತವು ಪಾಕಿಸ್ತಾನದ ಮಾದರಿಯಲ್ಲಿ ತಮ್ಮ ಬೌಲಿಂಗ್ ಘಟಕವನ್ನು ವಿನ್ಯಾಸಗೊಳಿಸಿದೆ ಎಂದು ಅವರು ಕೊಂಕು ಮಾತನಾಡಿದ್ದಾರೆ.
ಹಾರ್ದಿಕ್ ಪಾಂಡ್ಯ(ಎಡ) ಹಾಗೂ ರಾಹುಲ್ ದ್ರಾವಿಡ್; ರಮೀಜ್ ರಾಜಾ
ಹಾರ್ದಿಕ್ ಪಾಂಡ್ಯ(ಎಡ) ಹಾಗೂ ರಾಹುಲ್ ದ್ರಾವಿಡ್; ರಮೀಜ್ ರಾಜಾ (PTI/YouTube)

ಭಾರತ ಕ್ರಿಕೆಟ್‌ ತಂಡವು ಈ ವರ್ಷ ಉತ್ತಮ ಪ್ರದರ್ಶನ ನೀಡುತ್ತಿದೆ. ಆಡಿದ ಎಲ್ಲಾ ಸರಣಿಗಳಲ್ಲೂ ಜಯ ಗಳಿಸಿದೆ. ಮುಖ್ಯವಾಗಿ ಈ ವರ್ಷ ಟಿ20 ಸರಣಿಗಳಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೋಡಿ ಇಲ್ಲದೆ ಭಾರತ ಟಿ20 ಪಂದ್ಯಗಳನ್ನಾದೆ. ಇಬ್ಬರು ಹಿರಿಯ ಆಟಗಾರರಿಗೆ‌ ಚುಟುಕು ಮಾದರಿಯ ಕ್ರಿಕೆಟ್‌ನಿಂದ ಸತತ ವಿಶ್ರಾಂತಿ ನೀಡಲಾಗಿದೆ. ಈ ನಡುವೆ, ಆಲ್‌ ರೌಂಡರ್‌ ಹಾರ್ದಿಕ್ ಪಾಂಡ್ಯ, ಟಿ20 ತಂಡವನ್ನು ಮುನ್ನಡೆಸುತ್ತಿದ್ದಾರೆ. 2022ರಲ್ಲಿ ಆಡಿದ ಎರಡೂ ಟಿ20 ಸರಣಿಗಳಲ್ಲಿ ಭಾರತ ತಂಡವನ್ನು ಅದ್ಭುತವಾಗಿ ಮುನ್ನಡೆಸಿದ್ದ ಅವರು, ಈ ವರ್ಷವೂ ಅದೇ ಲಯವನ್ನು ಕಾಯ್ದುಕೊಂಡಿದ್ದಾರೆ. 28 ವರ್ಷ ವಯಸ್ಸಿನ ನಾಯಕನ ಅಡಿಯಲ್ಲಿ ಭಾರತದ ಬೌಲಿಂಗ್ ದಾಳಿಯು ಉತ್ತಮವಾಗಿ ಹೆಜ್ಜೆ ಹಾಕುತ್ತಿದೆ.

ಇತ್ತೀಚಿನ ತಿಂಗಳುಗಳಲ್ಲಿ ಭಾರತ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದೆ. ಅದು ಕೂಡಾ ವಿಶೇಷವಾಗಿ ಬೌಲಿಂಗ್‌ನಲ್ಲಿ. ಈ ಬಗ್ಗೆ ಪಾಕಿಸ್ತಾನದ ಮಾಜಿ ನಾಯಕ ರಮೀಜ್ ರಾಜಾ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ, ಭಾರತವು ಪಾಕಿಸ್ತಾನದ ಮಾದರಿಯಲ್ಲಿ ತಮ್ಮ ಬೌಲಿಂಗ್ ಘಟಕವನ್ನು ವಿನ್ಯಾಸಗೊಳಿಸಿದೆ ಎಂದು ಕೊಂಕು ಮಾತನಾಡಿದ್ದಾರೆ.

“ಭಾರತವು ಪಾಕಿಸ್ತಾನ ತಂಡವವನ್ನು ನೋಡಿ, ಅದರಂತೆಯೇ ಬೌಲಿಂಗ್ ದಾಳಿಯನ್ನು ವಿನ್ಯಾಸಗೊಳಿಸಿದೆ ಎಂದು ನನಗೆ ಆಗಾಗ ಅನಿಸುತ್ತದೆ. ಉಮ್ರಾನ್ ಮಲಿಕ್ ಅವರು ಹ್ಯಾರಿಸ್ ರೌಫ್ ಅವರಂತೆಯೇ ವೇಗವನ್ನು ಹೊಂದಿದ್ದಾರೆ. ಅರ್ಷದೀಪ್ ಸಿಂಗ್‌ ಅವರು ಶಾಹೀನ್ ಅಫ್ರಿದಿಯಂತೆ ಬೌಲಿಂಗ್‌ ಮಾಡುತ್ತಾರೆ. ಮಧ್ಯಮ ಓವರ್‌ಗಳಲ್ಲಿ ವಾಸಿಂ ಜೂನಿಯರ್ ನಿರ್ವಹಿಸುವ ಪಾತ್ರವನ್ನು ಹಾರ್ದಿಕ್ ಪಾಂಡ್ಯ ಅದೇ ವೇಗದಲ್ಲಿ ನಿರ್ವಹಿಸುತ್ತಾರೆ. ಶಿವಂ ಮಾವಿ ಸಹ ಪೋಷಕ ಬೌಲರ್‌ನ ಪಾತ್ರವನ್ನು ನಿರ್ವಹಿಸುತ್ತಾರೆ” ಎಂದು ರಮೀಜ್ ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ತಿಳಿಸಿದ್ದಾರೆ.

“ಭಾರತದ ಸ್ಪಿನ್ ವಿಭಾಗವು ಪಾಕಿಸ್ತಾನಕ್ಕಿಂತ ಸ್ವಲ್ಪ ಉತ್ತಮವಾಗಿದೆ. ಎರಡೂ ತಂಡಗಳು ಆಡುವುದನ್ನು ನಾನು ನೋಡಿದಾಗಲೆಲ್ಲಾ ಪಾಕಿಸ್ತಾನವು ಏನನ್ನು ಸುಧಾರಿಸಬೇಕು ಎಂದು ನಾನು ಯಾವಾಗಲೂ ನೋಡುತ್ತೇನೆ” ಎಂದು ಪಿಸಿಬಿ ಮಾಜಿ ಅಧ್ಯಕ್ಷರು ಹೇಳಿದ್ದಾರೆ.

ತಂಡದ ಕೊನೆಯ ಟಿ20 ಸರಣಿಯಲ್ಲಿ ಭಾರತೀಯ ಬೌಲಿಂಗ್ ದಾಳಿಯಲ್ಲಿ ಅರ್ಷದೀಪ್, ಉಮ್ರಾನ್, ಮಾವಿ ಮತ್ತು ಪಾಂಡ್ಯ ಅವರು ವೇಗದ ಬೌಲರ್‌ಗಳಾಗಿ ಕಣಕ್ಕಿಳಿದಿದ್ದರು. ಇದೇ ವೇಳೆ ಕುಲದೀಪ್ ಯಾದವ್, ಯಜುವೇಂದ್ರ ಚಹಾಲ್ ಮತ್ತು ವಾಷಿಂಗ್ಟನ್ ಸುಂದರ್ ಸ್ಪಿನ್ ವಿಭಾಗವನ್ನು ನೋಡಿಕೊಂಡಿದ್ದರು. ಹಿರಿಯ ಬೌಲರ್‌ ಜಸ್ಪ್ರೀತ್ ಬುಮ್ರಾ ಗಾಯದಿಂದ ಹೊರಗುಳಿದಿದ್ದು, ಮೊಹಮ್ಮದ್ ಸಿರಾಜ್‌ಗೆ ವಿಶ್ರಾಂತಿ ನೀಡಲಾಗಿದೆ. ಇವರ ಅನುಪಸ್ಥಿಯತಿಯಲ್ಲೂ ಭಾರತ ತಂಡ ಉತ್ತಮ ಪ್ರದರ್ಶನ ನೀಡಿದೆ.

ಈ ವಾರದ ಆರಂಭದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ 2-1 ಅಂತರದಿಂದ ಟಿ20 ಸರಣಿಯನ್ನು ಗೆದ್ದುಕೊಂಡಿತು. ಬುಧವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಬಳಗವು ಭಾರಿ ರನ್‌ಗಳ ಅಂತರದಿಂದ ಜಯಶಾಲಿಯಾಯ್ತು. 20 ಓವರ್‌ಗಳಲ್ಲಿ ಭಾರತವು 234 ರನ್‌ ಕಲೆ ಹಾಕಿದರೆ, ಪ್ರವಾಸಿ ಕಿವೀಸ್‌ ಕೇವಲ 66 ರನ್‌ಗಳಿಗೆ ಆಲೌಟ್‌ ಆಯ್ತು. ಈ ಶ್ರೇಯಸ್ಸು ಭಾರತದ ಬೌಲರ್‌ಗಳಿಗೆ ಸೇರುತ್ತದೆ. ಬ್ಯಾಟಿಂಗ್‌ನಲ್ಲಷ್ಟೇ ಬಲಿಷ್ಠ ತಂಡ ಎನಿಸಿಕೊಳ್ಳುತ್ತಿದ್ದ ಭಾರತ, ಈಗೀಗ ಬೌಲಿಂಗ್‌ನಲ್ಲೇ ದಾಖಲೆ ನಿರ್ಮಿಸುತ್ತಿದೆ. ಶುಬ್ಮನ್ ಗಿಲ್ ಅಜೇಯ 126 ರನ್‌ ಸಿಡಿಸಿ ಪಂದ್ಯಶ್ರೇಷ್ಠರಾಗಿ ಹೊರಹೊಮ್ಮಿದರು. ಮತ್ತೊಂದೆಡೆ ಸರಣಿಯುದ್ದಕ್ಕೂ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಮಿಂಚಿದ ನಾಯಕ ಹಾರ್ದಿಕ್ ಪಾಂಡ್ಯ ಸರಣಿ ಶ್ರೇಷ್ಠ ಪ್ರದರ್ಶನ ನೀಡಿದರು. ಅದರಲ್ಲೂ ಅಂತಿಮ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ 30 ರನ್‌ ಹಾಗೂ ಬೌಲಿಂಗ್‌ನಲ್ಲಿ 4 ವಿಕೆಟ್‌ ಕಿತ್ತರು.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ