ಚಹಾಲ್ ಇಲ್ಲದಿರುವುದು ದುರದೃಷ್ಟಕರ; ವಿಶ್ವಕಪ್‌ಗೆ ಅಶ್ವಿನ್ ಆಯ್ಕೆ ಒಪ್ಪದ ಯುವರಾಜ್ ಸಿಂಗ್
Sep 30, 2023 03:12 PM IST
ವಿಶ್ವಕಪ್‌ಗೆ ರವಿಚಂದ್ರನ್ ಅಶ್ವಿನ್ ಆಯ್ಕೆ ಕುರಿತು ಯುವರಾಜ್ ಸಿಂಗ್ ಅಭಿಪ್ರಾಯ
- ಏಕದಿನ ವಿಶ್ವಕಪ್‌ಗೆ ಅಕ್ಸರ್ ಪಟೇಲ್ ಬದಲಿಗೆ ವಾಷಿಂಗ್ಟನ್ ಸುಂದರ್ ಅವರನ್ನು ಆಯ್ಕೆ ಮಾಡದಿರುವುದು, ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್‌ಗೆ ಸರಿ ಕಾಣಿಸಿಲ್ಲ.
ಏಕದಿನ ವಿಶ್ವಕಪ್‌ಗೆ (ICC ODI World Cup 2023) ಭಾರತ ತಂಡ ಆಯ್ಕೆಯಾದ ಬಳಿಕ, ತಂಡದಲ್ಲಿ ಸ್ಥಾನ ಪಡೆದಿದ್ದ ಆಲ್‌ರೌಂಡರ್ ಅಕ್ಸರ್ ಪಟೇಲ್ ಗಾಯದಿಂದಾಗಿ ಪಂದ್ಯಾವಳಿಯಿಂದ ಹೊರಬಿದ್ದರು. ಅವರ ಬದಲಿಗೆ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (Ravichandran Ashwin) ಅವರನ್ನು ತಂಡಕ್ಕೆ ಕರೆಸಿಕೊಳ್ಳಲಾಯ್ತು. ಅತ್ತ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಆಸ್ಟ್ರೇಲಿಯ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಆಡಿದ್ದರು. ಆ ಪಂದ್ಯದಲ್ಲಿ ಅಶ್ವಿನ್‌ಗೆ ವಿಶ್ರಾಂತಿ ನೀಡಲಾಗಿತ್ತು. ಇದೀಗ ವಿಶ್ವಕಪ್ ತಂಡಕ್ಕೂ ಅಕ್ಷರ್ ಬದಲಿಗೆ ವಾಷಿಂಗ್ಟನ್ ಸುಂದರ್ ಅವರನ್ನು ಆಯ್ಕೆ ಮಾಡದೆ ಭಾರತವು ತಪ್ಪು ಮಾಡಿದೆ ಎಂದು ದಿಗ್ಗಜ ಕ್ರಿಕೆಟಿಗ ಹಾಗೂ 2011ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಏಷ್ಯಾಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಸೂಪರ್ ಫೋರ್ ಪಂದ್ಯದ ವೇಳೆ ಅಕ್ಷರ್ ಗಾಯಗೊಂಡರು. ಆಗ ದಿಢೀರನೆ ವಾಷಿಂಗ್ಟನ್ ಸುಂದರ್ ಅವರನ್ನು ಕೊಲಂಬೊಗೆ ಕರೆಸಲಾಯಿತು. ಅದರ ಬೆನ್ನಲ್ಲೇ ಫೈನಲ್ ಪಂದ್ಯದ ಆಡುವ ಬಳಗದಲ್ಲೂ ಸುಂದರ್ ಕಾಣಿಸಿಕೊಂಡರು. ಆದರೆ, ಅವರಿಗೆ ಬೌಲಿಂಗ್ ಮತ್ತು ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಲಭ್ಯ ವರದಿಯ ಪ್ರಕಾರ, ಅಶ್ವಿನ್ ಅವರನ್ನು ತಂಡಕ್ಕೆ ಮೊದಲು ಕರೆಸಲಾಗಿತ್ತು. ಆದರೆ ಅವರು ಫಿಟ್ ಆಗಿಲ್ಲ ಎಂದು ಅವಕಾಶವನ್ನು ನಿರಾಕರಿಸಿದ್ದರು. ಹೀಗಾಗಿ ಸುಂದರ್ ಅವರನ್ನು ಆಯ್ಕೆ ಮಾಡಲಾಗಿತ್ತು.
ಏಷ್ಯಾಕಪ್ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ತಂಡವನ್ನು ಆಯ್ಕೆ ಮಾಡಿದಾಗ, ಅಕ್ಸರ್‌ಗೆ ಬದಲಿಯಾಗಿ ಅಶ್ವಿನ್ ಮತ್ತು ಸುಂದರ್ ಇಬ್ಬರನ್ನೂ ಆಯ್ಕೆ ಮಾಡಲಾಯಿತು. ಆದರೆ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಅಶ್ವಿನ್ ಆಡಿದರೆ, ಕೊನೆಯ ಪಂದ್ಯದಲ್ಲಿ ಸುಂದರ್ ಕಣಕ್ಕಿಳಿದರು. ಅದಾದ ಬಳಿಕ ಅಶ್ವಿನ್ ಭಾರತ ವಿಶ್ವಕಪ್ ತಂಡದೊಂದಿಗೆ ಗುವಾಹಟಿಗೆ ಪ್ರಯಾಣಿಸಿದರೆ, ಸುಂದರ್ ಏಷ್ಯನ್ ಗೇಮ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಗುವಾಹಟಿಯಲ್ಲಿ ಭಾರತವು ಇಂಗ್ಲೆಂಡ್ ವಿರುದ್ಧ ಶನಿವಾರ ಅಭ್ಯಾಸ ಪಂದ್ಯದಲ್ಲಿ ಆಡುತ್ತಿದೆ.
ಸುಂದರ್ ಆಯ್ಕೆಯಾಗಬೇಕಿತ್ತು
ದೆಹಲಿಯಲ್ಲಿ ವಿಕ್ಸ್ ಆಯೋಜಿಸಿದ್ದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಯುವರಾಜ್ ಸಿಂಗ್, ಅಶ್ವಿನ್ ಬದಲಿಗೆ ಸುಂದರ್ ಅವರನ್ನು ಆಯ್ಕೆ ಮಾಡದೆ ಭಾರತವು ಎಡವಟ್ಟು ಮಾಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಯುಜ್ವೇಂದ್ರ ಚಹಾಲ್ ವಿಶ್ವಕಪ್ ತಂಡದಿಂದ ಹೊರಗುಳಿದಿರುವುದು ಸಂಪೂರ್ಣ ದುರದೃಷ್ಟಕರ ಎಂದು ಅವರು ಹೇಳಿದ್ದಾರೆ.
ಯುಜ್ವೇಂದ್ರ ಚಹಾಲ್ ಆಯ್ಕೆಯಾಗದಿರುವುದು ದುರದೃಷ್ಟಕರ
“ಅಕ್ಸರ್ ಪಟೇಲ್ ತಂಡದಲ್ಲಿ ಇಲ್ಲದ ಕಾರಣ 7ನೇ ಕ್ರಮಾಂಕದದಲ್ಲಿ ಯಾರು ಬ್ಯಾಟ್ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಒಂದು ವೇಳೆ ವಾಷಿಂಗ್ಟನ್ ಸುಂದರ್ ಅವರು ಅಕ್ಷರ್ ಬದಲಿಗೆ ಆಡುತ್ತಿದ್ದರೆ, ಭಾರತಕ್ಕೆ ಇನ್ನೊಬ್ಬ ಎಡಗೈ ಆಟಗಾರ ಇರುತ್ತಿದ್ದರು ಎಂದು ನಾನು ಯೋಚಿಸುತ್ತಿದ್ದೆ. ಆದರೆ ದುರದೃಷ್ಟವಶಾತ್ ಅವರು ಆಯ್ಕೆಯಾಗಲಿಲ್ಲ. ಅತ್ತ ಯುಜ್ವೇಂದ್ರ ಚಹಾಲ್ ಕೂಡ ಆಯ್ಕೆಯಾಗಲಿಲ್ಲ. ಅದನ್ನು ಹೊರತುಪಡಿಸಿದರೆ ತಂಡದ ಸಂಯೋಜನೆಯು ಉತ್ತಮವಾಗಿದೆ ಎಂದು ನಾನು ಭಾವಿಸುತ್ತೇನೆ,” ಎಂದು ಅವರು ಹಿಂದೂಸ್ತಾನ್ ಟೈಮ್ಸ್ ಡಿಜಿಟಲ್‌ನೊಂದಿಗಿನ ಮಾತುಕತೆಯಲ್ಲಿ ಹೇಳಿದ್ದಾರೆ.
ಐಸಿಸಿ ಏಕದಿನ ವಿಶ್ವಕಪ್‌ಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ (ಉಪ ನಾಯಕ), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಆರ್ ಅಶ್ವಿನ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್.