Hanuman Chalisa: ಪ್ರತಿದಿನ ಹನುಮಾನ್ ಚಾಲೀಸ ಪಠಣದಿಂದ ಸಿಗುವ ಪ್ರಯೋಜನಗಳು ಹಲವು; ರೋಗ ಮುಕ್ತಿ, ಇಷ್ಟಾರ್ಥ ಸಿದ್ಧಿ
Hanuman Chalisa: ಮಂಗಳವಾರ, ಶುಕ್ರವಾರ ಅಥವಾ ಪ್ರತಿದಿನವೂ ಹನುಮಾನ್ ಚಾಲೀಸವನ್ನು ಓದುವುದರಿಂದ ಬಹಳಷ್ಟು ಪ್ರಯೋಜನಗಳಿವೆ. ಹನುಮಾನ್ ಚಾಲೀಸ ಓದುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಕಡಿಮೆ ಆಗುತ್ತವೆ. ಅನಾರೋಗ್ಯದಿಂದ ಬಳಲುತ್ತಿರುವವರು ಉತ್ತಮ ಆರೋಗ್ಯ ಹೊಂದುತ್ತಾರೆ.
ಆಂಜನೇಯ, ಹಿಂದೂಗಳು ಆರಾಧಿಸುವ ಪ್ರಮುಖ ದೇವರಲ್ಲಿ ಒಬ್ಬ. ಹಿಂದೂ ಸಂಪ್ರದಾಯದಲ್ಲಿ ಕೆಲವೆಡೆ ಮಂಗಳವಾರ ಹಾಗೂ ಇನ್ನೂ ಕೆಲವರು ಶನಿವಾರ ಹನುಮಂತನನ್ನು ಆರಾಧಿಸುತ್ತಾರೆ. ಏ 23 ರಂದು ಹನುಮಾನ್ ಜಯಂತಿ ಆಚರಿಸಲಾಗಿದೆ. ಆಚರಣೆ ಮುಗಿದಿದ್ದರೂ ಸಂಭ್ರಮ ಇನ್ನೂ ಕಡಿಮೆ ಆಗಿಲ್ಲ.
ಸಾಮಾನ್ಯವಾಗಿ ಆಂಜನೇಯನ ಭಕ್ತರು ಮಂಗಳವಾರ, ಶನಿವಾರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಬರುತ್ತಾರೆ. ಎಲೆ ಹಾರ ಮಾಡಿ ವಾಯುಪುತ್ರನಿಗೆ ಅರ್ಪಿಸುತ್ತಾರೆ. ತಮ್ಮ ಕಷ್ಟಗಳನ್ನು ಕಳೆಯುವಂತೆ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ. ಜೊತೆಗೆ ಶಕ್ತಿಶಾಲಿ ಹನುಮಾನ್ ಚಾಲೀಸ ಪಠಿಸುತ್ತಾರೆ. ಇದನ್ನು ಪಠಿಸುವುದರಿಂದ ಬಹುತೇಕ ಕಷ್ಟಗಳು ದೂರಾಗುತ್ತದೆ ಎಂಬ ನಂಬಿಕೆ ಇದೆ. ಮಂಗಳವಾರ, ಶನಿವಾರ ಅಥವಾ ಪ್ರತಿನಿತ್ಯ ಹನುಮಾನ್ ಚಾಲೀಸವನ್ನು ಪಠಿಸುವ ಮೂಲಕ ವ್ಯಕ್ತಿಯು ತನ್ನ ಜೀವನದಲ್ಲಿ ಏನೆಲ್ಲಾ ಪ್ರಯೋಜನಗಳನ್ನು ಪಡೆಯಬಹುದು ಎಂದು ತಿಳಿಯೋಣ.
ಹನುಮನನ್ನು ಸಂಕತ್ಮೋಚನ ಎಂದೂ ಕರೆಯುತ್ತಾರೆ, ಏಕೆಂದರೆ ಅವನನ್ನು ಪೂಜಿಸುವುದರಿಂದ ಭಕ್ತರ ಎಲ್ಲಾ ತೊಂದರೆಗಳು ದೂರವಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಪ್ರತಿದಿನ ಹನುಮಾನ್ ಚಾಲೀಸಾವನ್ನು ಪಠಿಸುವ ಮೂಲಕ, ವ್ಯಕ್ತಿಯು ಜೀವನದಲ್ಲಿ ಅದ್ಭುತವಾದ ಪ್ರಯೋಜನಗಳನ್ನು ಪಡೆಯಬಹುದು.
ಪ್ರತಿ ಬಿಕ್ಕಟ್ಟು ದೂರವಾಗುತ್ತದೆ
ಪ್ರತಿದಿನ ಹನುಮಾನ್ ಚಾಲೀಸವನ್ನು ಪಠಿಸುವ ಮೂಲಕ, ಒಬ್ಬ ವ್ಯಕ್ತಿಯು ರಾಮ ಭಕ್ತ ಹನುಮಂತನ ವಿಶೇಷ ಆಶೀರ್ವಾದ ಪಡೆಯಬಹುದು. ಇದರಿಂದಾಗಿ ವ್ಯಕ್ತಿಯ ಜೀವನದಲ್ಲಿ ಬರುವ ದೊಡ್ಡ ಬಿಕ್ಕಟ್ಟು ಕೂಡ ದೂರವಾಗುತ್ತದೆ. ಇದಲ್ಲದೆ, ಹನುಮಾನ್ ಚಾಲೀಸವನ್ನು ಪ್ರತಿದಿನ ಪಠಿಸುವುದರಿಂದ, ಜಾತಕದಲ್ಲಿ ರಾಹು ಮತ್ತು ಕೇತುಗಳ ಜೊತೆಗೆ ಮಂಗಳ ದೋಷವನ್ನು ತೊಡೆದುಹಾಕಬಹುದು ಎಂದು ನಂಬಲಾಗಿದೆ.
ಆಸೆಗಳು ಈಡೇರುತ್ತವೆ
ಹನುಮಾನ್ ಚಾಲೀಸದಲ್ಲಿ ವಿವರಿಸಿದಂತೆ, ಅದನ್ನು ಪಠಿಸಿದರೆ ಪವನಸುತನು ಅಷ್ಟ ಸಿದ್ಧಿ ಮತ್ತು ನವನಿಧಿಯನ್ನು ನೀಡಲಿದ್ದಾನೆ. ಅಂದರೆ ಹನುಮಾನ್ ಚಾಲೀಸ ಪಠಿಸುವ ಎಲ್ಲರ ಆಸೆಯನ್ನು ಹನುಮನು ಈಡೇರಿಸುತ್ತಾನೆ.
ಆರೋಗ್ಯ ಸುಧಾರಿಸುತ್ತದೆ
ಆಗಾಗ್ಗೆ ಅನಾರೋಗ್ಯದಿಂದ ಬಳಲುತ್ತಿರುವವರು ಹನುಮಾನ್ ಚಾಲೀಸಾವನ್ನು ನಿಯಮಿತವಾಗಿ ಪಠಿಸಬೇಕು. ಇದರಿಂದ ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು. ರಾತ್ರಿ ನಿದ್ರೆ ಇಲ್ಲದೆ ಬಳಲುವವರು ಕೂಡಾ ಪ್ರತಿದಿನ ಹನುಮಾನ್ ಚಾಲೀಸಾ ಪಠಿಸಿದರೆ ಚೆನ್ನಾಗಿ ನಿದ್ರೆ ಬರುತ್ತದೆ, ಮಾನಸಿಕ ನೆಮ್ಮದಿಯೂ ಎಂದು ಸ್ವತ: ಅನುಭವಿಸಿದ ಎಷ್ಟೋ ಜನರು ಹೇಳುತ್ತಾರೆ.
ಶನಿ ಪ್ರಭಾವದಿಂದ ಮುಕ್ತಿ
ರವಿಪುತ್ರ ಶನಿಯು ಪ್ರತಿಯೊಬ್ಬರಿಗೂ ಸಮಸ್ಯೆ ಕೊಡುವವನು. ಪಾಪಕ್ಕೆ ತಕ್ಕ ಶಿಕ್ಷೆ, ಪುಣ್ಯಕ್ಕೆ ತಕ್ಕಂಥ ಒಳ್ಳೆಯ ಫಲಗಳನ್ನು ನೀಡುವಂಥವನು. ಆದರೆ ಏನು ಮಾಡಿದರೂ ಶನಿಗೆ ಹನುಮಂತನನ್ನು ಕಾಡಿಸಲು ಸಾಧ್ಯವಾಗುವುದಿಲ್ಲ. ಇದೇ ಕಾರಣಕ್ಕೆ ಆಂಜನೇಯನನ್ನು ಪೂಜಿಸಿದರೆ ಶನಿದೋಷ ಕೂಡಾ ನಿವಾರಣೆ ಆಗಲಿದೆ.
ಮನೆಯಲ್ಲಿ ನಕಾರಾತ್ಮಕ ಶಕ್ತಿ ತೊಲಗುತ್ತದೆ
ಹನುಮಾನ್ ಚಾಲೀಸ ಪಠಿಸುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ತೊಲಗಿ. ಮನೆಯು ಎಲ್ಲಾ ರೀತಿಯಲ್ಲೂ ಅಭಿವೃದ್ಧಿ ಹೊಂದುತ್ತದೆ. ದುಷ್ಟ ಶಕ್ತಿಗಳಿಂದ ಕುಟುಂಬದವರನ್ನು ಕಾಪಾಡುತ್ತದೆ.
ಗಮನಿಸಿ: ಇದು ನಂಬಿಕೆ ಮತ್ತ ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.