ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Lord Shiva: ನಂದಿಯು ಶಿವನ ವಾಹನ ಆಗಿದ್ದು ಹೇಗೆ? ದೇವಸ್ಥಾನದಲ್ಲಿ ನಂದಿಯ ಕಿವಿಯಲ್ಲಿ ಭಕ್ತರು ಕೋರಿಕೆಗಳನ್ನು ಹೇಳಿಕೊಳ್ಳುವುದೇಕೆ?

Lord Shiva: ನಂದಿಯು ಶಿವನ ವಾಹನ ಆಗಿದ್ದು ಹೇಗೆ? ದೇವಸ್ಥಾನದಲ್ಲಿ ನಂದಿಯ ಕಿವಿಯಲ್ಲಿ ಭಕ್ತರು ಕೋರಿಕೆಗಳನ್ನು ಹೇಳಿಕೊಳ್ಳುವುದೇಕೆ?

Lord Shiva: ಯಾವುದೇ ವಾಹನ ಇಲ್ಲದೆ ಶಿವನು ತಿರುಗಾಡುವಾಗ ಯಮನು ಶಿವನ ವಾಹವಾಗಲು ಬಯಸುತ್ತಾನೆ. ಆಗ ಶಿವನನ್ನು ಪ್ರಾರ್ಥಿಸಿ ತನ್ನ ಕೋರಿಕೆಯನ್ನು ಹೇಳಿಕೊಳ್ಳುತ್ತಾನೆ. ಮತ್ತೊಂದು ಕಥೆಯ ಪ್ರಕಾರ ಶಿಲದ ಎಂಬ ಪುತ್ರ ನಂದಿಯ ಭಕ್ತಿಗೆ ಮೆಚ್ಚಿ ಶಿವನು ತನ್ನ ಮುಖ್ಯಸ್ಥನನ್ನಾಗಿ ನೇಮಿಸಿಕೊಂಡನು ಎಂದು ನಂಬಲಾಗಿದೆ.

ನಂದಿಯು ಶಿವನ ವಾಹನ ಆದ ಕಥೆ
ನಂದಿಯು ಶಿವನ ವಾಹನ ಆದ ಕಥೆ (PC: Pixabay)

ಹಿಂದೂಗಳು ಆರಾಧಿಸುವ ಪ್ರಮುಖ ದೇವರಲ್ಲಿ ಶಿವನಿಗೆ ಕೂಡಾ ಬಹಳ ಪ್ರಾಮುಖ್ಯತೆ ಇದೆ. ಭೋಲೆನಾಥ, ಶಂಕರ, ಪರಶಿವ, ನೀಲಕಂಠ, ಮಂಜುನಾಥ ಹೀಗೆ ಶಿವನನ್ನು ನಾನಾ ಹೆಸರುಗಳಿಂದ ಆರಾಧಿಸಲಾಗುತ್ತದೆ. ಪತ್ನಿಗೆ ತನ್ನ ದೇಹದಲ್ಲಿ ಸ್ಥಾನ ನೀಡಿ ಪತ್ನಿಯೂ ನನ್ನ ಸರಿ ಸಮಾನಳು ಎಂದು ತೋರಿಸಿಕೊಟ್ಟ ಅರ್ಧನಾರೀಶ್ವರ ಶಿವ ಎಂದರೆ ಅನೇಕ ಜನರಿಗೆ ವಿಶೇಷ ಭಕ್ತಿ ಇದೆ.

ಚಾಮುಂಡೇಶ್ವರಿಗೆ ಸಿಂಹ, ಅಯ್ಯಪ್ಪ ಸ್ವಾಮಿಗೆ ಹುಲಿ, ಗಣೇಶನಿಗೆ ಇಲಿ, ಶನೈಶ್ಚರನಿಗೆ ಕಾಗೆ ಹೀಗೆ ಧಾರ್ಮಿಕ ನಂಬಿಕೆಗಳ ಪ್ರಕಾರ ಒಂದೊಂದು ದೇವರಿಗೂ ಒಂದೊಂದು ವಾಹನ ಇದೆ. ತಮ್ಮ ತಮ್ಮ ವಾಹನಗಳೊಂದಿಗೆ ದೇವರು ಲೋಕ ಸಂಚಾರ ಮಾಡುತ್ತಾರೆ ಎಂದು ನಂಬಲಾಗಿದೆ. ಆದರೆ ಶಿವನಿಗೆ ನಂದಿಯು ವಾಹನ ಆಗಿದ್ದರ ಹಿಂದೆ ಒಂದು ರೋಚಕ ಕಥೆ ಇದೆ.

ಶಿವನನ್ನು ಒಲಿಸಿಕೊಂಡ ಯಮ

ಮೊದಲು ಶಿವನು ಯಾವುದೇ ವಾಹನ ಇಲ್ಲದೆ ತಿರುಗಾಡುತ್ತಿದ್ದನ್ನು ನೋಡಿ ಯಮನು ಆತನ ವಾಹನವನ್ನಾಗಿ ಇರಲು ಬಯಸುತ್ತಾನೆ. ಆದರೆ ಶಿವನ ಅವನ ವಾಹನವಾಗುವುದು ಸುಲಭದ ಮಾತಲ್ಲ. ತನ್ನ ಭಕ್ತರಿಗೆ ತೊಂದರೆ ಆದಾಗ ಯಮನ ವಿರುದ್ಧ ನಿಂತ ಶಿವನನ್ನು ಒಲಿಸಿಕೊಳ್ಳುವುದು ಕಷ್ಟ ಎಂದು ಯಮನಿಗೂ ತಿಳಿದಿತ್ತು. ಅದೇ ಕಾರಣದಿಂದ ಶಿವನನ್ನು ಮೆಚ್ಚಿಸಲು ಯಮನು ಕಠಿಣ ತಪ್ಪಸನ್ನು ಆಚರಿಸುತ್ತಾನೆ. ಕೊನೆಗೆ ಯಮನ ತಪಸ್ಸಿಗೆ ಮೆಚ್ಚಿದ ಶಿವ ಏನು ಬೇಕೆಂದು ಕೇಳುತ್ತಾನೆ. ಆಗ ಯಮನು ತನ್ನ ಮನದ ಆಸೆಯನ್ನು ಹೇಳಿಕೊಳ್ಳುತ್ತಾನೆ. ಶಿವನು ಕೂಡಾ ಒಪ್ಪಿ, ಯಮನನ್ನು ನಂದಿಯ ರೂಪದಲ್ಲಿ ತನ್ನ ವಾಹವನ್ನಾಗಿ ಸ್ವೀಕರಿಸುತ್ತಾನೆ.

ಮತ್ತೊಂದು ನಂಬಿಕೆಯ ಪ್ರಕಾರ, ಹಿಂದೆ ಶಿಲದ ಎಂಬ ಋಷಿ ತನ್ನ ಕುಟುಂಬವನ್ನೂ ಮರೆತು ದೇವರ ಸೇವೆಯಲ್ಲಿ ನಿರತನಾಗಿರುತ್ತಾನೆ. ಆದರೆ ಆತನ ಕುಟುಂಬದವರಿಗೆ ಶಿಲದನ ಮದುವೆ, ಸಂಸಾರ ವಂಶ ಮುಂದುವರೆಯುತ್ತಿಲ್ಲ ಎಂಬುದೇ ಚಿಂತೆಯಾಗಿರುತ್ತದೆ. ತಮ್ಮ ಬೇಸರವನ್ನು ಶಿಲದನ ಮುಂದೆ ಹೇಳಿಕೊಂಡು ಮನೆಗೆ ವಾಪಸಾಗುವಂತೆ ಮನವಿ ಮಾಡುತ್ತಾರೆ. ಆದರೆ ಶಿಲದ ಅದಕ್ಕೆ ಒಪ್ಪುವುದಿಲ್ಲ. ಮನೆಯವರ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಶಿಲದನು ಇಂದ್ರನನ್ನು ಕುರಿತು ತಪ್ಪಸ್ಸು ಆಚರಿಸುತ್ತಾನೆ. ತಪ್ಪಸಿಗೆ ಮೆಚ್ಚಿ ಕೋರಿಕೆಗಳನ್ನು ಕೇಳುವ ಇಂದ್ರನ ಮುಂದೆ ಶಿಲದನು, ಮದುವೆ ಇಲ್ಲದೆ, ಹೆಣ್ಣನ್ನು ಸ್ಪರ್ಶಿಸದೆ ನನಗೆ ಒಂದು ಮಗುವನ್ನು ಕೊಡುವಂತೆ ಬೇಡುತ್ತಾನೆ. ಆದರೆ ಇಂದ್ರನು ಆ ಕೋರಿಯನ್ನು ಈಡೇರಿಸುವುದಿಲ್ಲ.

ದೇವಸ್ಥಾನದಲ್ಲಿ ನಂದಿಯ ಕಿವಿಯಲ್ಲು ಭಕ್ತರು ಆಸೆಗಳನ್ನು ಹೇಳಿಕೊಳ್ಳುವುದು ಏಕೆ?

ನಂತರ ಶಿಲದನು ಶಿವನನ್ನು ಪ್ರಾರ್ಥಿಸುತ್ತಾನೆ. ಶಿಲದನ ಭಕ್ತಿಗೆ ಮೆಚ್ಚಿ ನಿನ್ನ ಕೋರಿಕೆಯನ್ನು ಈಡೇರಿಸುವುದಾಗಿ ಹೇಳುತ್ತಾನೆ. ಒಮ್ಮೆ ಶಿಲದನು ಹೊಲ ಉಳುವಾಗ ಒಂದು ಮಗು ಸಿಗುತ್ತದೆ. ಆ ಮಗುವೇ ಶಿವನು ನೀಡಿದ ಪ್ರಸಾದ ಎಂದುಕೊಂಡು ಮನೆಗೆ ತಂದು ನಂದಿ ಎಂಬ ಹೆಸರಿಟ್ಟು ಸಾಕುತ್ತಾನೆ. ಆದರೆ ನಂದಿಗೆ ಅಲ್ಪಾಯುಷ್ಯ ಎಂದು ತಿಳಿದು ಶಿಲದನು ನಂದಿಯನ್ನು ಕುರಿತು ಶಿವನನ್ನು ಪ್ರಾರ್ಥಿಸುವಂತೆ ಹೇಳುತ್ತಾನೆ. ಅದರಂತೆ ನಂದಿಯು ಶಿವನನ್ನು ಆರಾಧಿಸುತ್ತಾನೆ. ನಂದಿಯ ಭಕ್ತಿಗೆ ಮೆಚ್ಚಿದ ಶಿವನು ಅವನಿಗೆ ಸಾವಿನ ಭಯದಿಂದ ಪಾರು ಮಾಡಿ ತನ್ನ ಮುಖ್ಯಸ್ಥನನ್ನಾಗಿ ನೇಮಿಸಿಕೊಳ್ಳುತ್ತಾನೆ. ಇದೇ ಸಮಯದಲ್ಲಿ ಸಮುದ್ರ ಮಂಥನದ ಸಮಯದಲ್ಲಿ ಬರುವ ವಿಷವನ್ನು ಶಿವನು ಕುಡಿದು ನೀಲಂಕಂಠ ಎನಿಸಿಕೊಳ್ಳುತ್ತಾನೆ. ಹೀಗೆ ವಿಷ ಕುಡಿಯುವಾಗ ಕೆಲವು ಹನಿಗಳು ಭೂಮಿಯ ಮೇಲೆ ಬೀಳುತ್ತವೆ. ಆಗ ನಂದಿಯು ತನ್ನ ನಾಲಗೆಯಿಂದ ವಿಷವನ್ನು ನೆಕ್ಕುತ್ತಾನೆ.

ಈ ಘಟನೆ ನಂತರ ಶಿವನು ನಂದಿಯ ಬಗ್ಗೆ ಇನ್ನಷ್ಟು ಪ್ರೀತಿ, ವಿಶ್ವಾಸ ಹೆಚ್ಚಾಗುತ್ತದೆ. ಅಲ್ಲಿಂದ ತನಗೆ ಸಲ್ಲಬೇಕಾದ ಎಲ್ಲಾ ಗೌರವ ನಂದಿಗೂ ಸಲ್ಲಬೇಕೆಂದು ಆಜ್ಞಾಪಿಸುತ್ತಾನೆ. ಆದ್ದರಿಂದಲೇ ಎಲ್ಲಾ ದೇವಾಲಯಗಳಲ್ಲೂ ಶಿವನ ವಿಗ್ರಹದ ಎದುರಿಗೆ ನಂದಿಯ ವಿಗ್ರಹ ಕೂಡಾ ಇರುತ್ತದೆ. ಭಕ್ತರು ಶಿವನನ್ನು ಪ್ರಾರ್ಥಿಸುವ ಮುನ್ನ ನಂದಿಯ ಕಿವಿಯಲ್ಲಿ ತಮ್ಮ ಕೋರಿಕೆಗಳನ್ನು ಹೇಳಿಕೊಳ್ಳುತ್ತಾರೆ. ಹೀಗೆ ಮಾಡುವುದರಿಂದ ಆ ಆಸೆ ಬೇಗ ನೆರವೇರುತ್ತದೆ ಎಂಬ ನಂಬಿಕೆ ಭಕ್ತರದ್ದು.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.