ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Vastushasthara: ಮನೆಯಲ್ಲಿ ಕಪ್ಪು ಇರುವೆಗಳು ಕಾಣಿಸಿಕೊಂಡರೆ ಏನು ಅರ್ಥ? ಕೆಂಪು ಇರುವೆಗಳು ಬಂದರೆ ಯಾವುದರ ಸಂಕೇತ?

Vastushasthara: ಮನೆಯಲ್ಲಿ ಕಪ್ಪು ಇರುವೆಗಳು ಕಾಣಿಸಿಕೊಂಡರೆ ಏನು ಅರ್ಥ? ಕೆಂಪು ಇರುವೆಗಳು ಬಂದರೆ ಯಾವುದರ ಸಂಕೇತ?

Vastushasthra: ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕೆಲವೊಂದು ಜೀವಿಗಳು ನಮಗೆ ಒಳಿತು ಮಾಡಿದರೆ , ಇನ್ನೂ ಕೆಲವು ಅಶುಭದ ಸಂಕೇತ ಎಂದು ಪರಿಗಣಿಸಲಾಗಿದೆ. ಅದರ ಪ್ರಕಾರ ಮನೆಗೆ ಕೆಂಪು ಇರುವೆಗಳು ಬಂದರೆ ಅದು ಸಮಸ್ಯೆ ಹಾಗೂ ಕಪ್ಪು ಇರುವೆಗಳು ಬಂದರೆ ಅದು ಶುಭ ಸಂಕೇತ ಎಂದು ನಂಬಲಾಗಿದೆ.

ಕಪ್ಪು, ಕೆಂಪು ಇರುವೆಗಳಿಗೆ ಸಂಬಂಧಿಸಿದಂತೆ ವಾಸ್ತು ಶಾಸ್ತ್ರ
ಕಪ್ಪು, ಕೆಂಪು ಇರುವೆಗಳಿಗೆ ಸಂಬಂಧಿಸಿದಂತೆ ವಾಸ್ತು ಶಾಸ್ತ್ರ

ನಾವು ಪ್ರತಿದಿನ ಬೆಳಗ್ಗೆಯಿಂದ ಸಂಜೆವರೆಗೂ ನೋಡುವ ಕೆಲವೊಂದು ವಸ್ತುಗಳು, ನಡೆಯುವ ಕೆಲವೊಂದು ಘಟನೆಗಳು ನಮ್ಮ ಭವಿಷ್ಯವನ್ನು ಪ್ರತಿನಿಧಿಸುತ್ತದೆ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ಪರಿಗಣಿಸಲಾಗಿದೆ. ಬೆಳಗ್ಗೆ ಎದ್ದ ಕೂಡಲೇ ತುಂಬಿದ ಕೊಡ ನೋಡುವುದು ಶುಭವಾದರೆ, ಖಾಲಿ ಕೊಡ ನೋಡುವುದು ಅಶುಭ, ನರಿಯನ್ನು ನೋಡಿದರೆ ಶುಭ, ಬೆಕ್ಕನ್ನು ನೋಡಿದರೆ ಅಶುಭ... ಹೀಗೆ ಅನೇಕ ರೀತಿಯ ನಂಬಿಕೆಗಳಿವೆ.

ಅದೇ ರೀತಿ ಕೆಲವೊಂದು ಪ್ರಾಣಿ, ಪಕ್ಷಿಗಳು ಕಾಣಿಸಿಕೊಂಡರೆ, ಮನೆ ಬಳಿ ಬಂದರೆ ಕೂಡಾ ಶುಭ, ಅಶುಭ ಎಂಬ ಮಾತಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮನೆ ಅಥವಾ ಕಚೇರಿಯಲ್ಲಿ ಕಪ್ಪು ಇರುವೆಗಳನ್ನು ಕಂಡರೆ ಶುಭ, ಕೆಂಪು ಇರುವೆಗಳನ್ನು ಕಂಡರೆ ಸಮಸ್ಯೆ ಎಂದು ನಂಬಲಾಗಿದೆ. ಅಷ್ಟೇ ಅಲ್ಲ, ಕೆಂಪು ಇರುವೆಗಳು ಕಚ್ಚುತ್ತವೆ, ಆದರೆ ಕಪ್ಪು ಇರುವೆಗಳು ಕಚ್ಚುವುದಿಲ್ಲ. ಆದ್ದರಿಂದ ಕಪ್ಪು ಇರುವೆ ಯಾವಾಗಲೂ ಶುಭವೇ. ಮನೆಯ ಆವರಣದಲ್ಲಿ, ಮನೆ ಒಳಗೆ ಎಲ್ಲಾದರೂ ಕಪ್ಪು ಇರುವೆ ಕಾಣಿಸಿಕೊಂಡರೆ ಮನೆಯಲ್ಲಿ ಹಣದ ಹೊಳೆ ಹರಿಯಲಿದೆ ಎಂದು ನಂಬಲಾಗಿದೆ.

ಕಪ್ಪು ಇರುವೆಗಳು ಬಂದರೆ ಏನು ಅರ್ಥ?

ಮನೆಯಲ್ಲಿ ಇದ್ದಕ್ಕಿದ್ದಂತೆ ಕಪ್ಪು ಇರುವೆಗಳು ಕಾಣಿಸಿಕೊಂಡರೆ ಬಹಳ ಶುಭ. ಕಪ್ಪು ಇರುವೆಗಳ ದಂಡು ನಿಮ್ಮ ಮನೆಯಲ್ಲಿ ಕಾಣಿಸಿಕೊಂಡರೆ ನಿಮ್ಮ ಜೀವನದಲ್ಲಿ ದುಃಖ ಕಳೆದು ಸಂತೋಷದ ಸಮಯ ಬರುತ್ತಿದೆ ಎಂದು ಅರ್ಥ. ನಿಮ್ಮ ವೃತ್ತಿಯಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ. ಹಣಕಾಸಿನ ಹರಿವು ಹೆಚ್ಚಾಗಲಿದೆ. ಆದಾಯದಲ್ಲಿ ಹೆಚ್ಚಳವಾಗಲಿದೆ. ಹಳೆಯ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ ಮನೆಯಲ್ಲಿ ಕಪ್ಪು ಇರುವೆ ಕಾಣಿಸಿಕೊಂಡರೆ ಅದಕ್ಕೆ ಸಕ್ಕರೆ ಅಥವಾ ಬೆಲ್ಲ ಹಾಕಬೇಕು. ಮನೆಯ ಪೂರ್ವ ದಿಕ್ಕಿನಲ್ಲಿ ಕಪ್ಪು ಇರುವೆಗಳು ಕಾಣಿಸಿಕೊಂಡರೆ, ನೀವು ಶುಭ ಸುದ್ದಿ ಕೇಳಲಿದ್ದೀರಿ ಎಂದು ಅರ್ಥ. ಒಂದು ವೇಳೆ ಕಪ್ಪು ಇರುವೆಗಳು ಪಶ್ಚಿಮ ದಿಕ್ಕಿನಿಂದ ಬಂದರೆ ಶೀಘ್ರದಲ್ಲೇ ನೀವು ದೂರದ ಊರಿಗೆ ಪ್ರಯಾಣಿಸುತ್ತಿದ್ದೀರಿ ಎಂಬ ಅರ್ಥವನ್ನು ಕೊಡುತ್ತದೆ. ಉತ್ತರ ದಿಕ್ಕಿನಿಂದ ಮನೆಗೆ ಕಪ್ಪು ಇರುವೆ ಬಂದರೆ ಧನಲಾಭ, ಆರ್ಥಿಕ ಮುಗ್ಗಟ್ಟು ಪರಿಹಾರವಾಗುತ್ತದೆ. ಚಿನ್ನವನ್ನು ಇಟ್ಟಿರುವ ಜಾಗದಲ್ಲಿ ಕಪ್ಪು ಇರುವೆಗಳು ಕಂಡರೆ ಶೀಘ್ರದಲ್ಲಿಯೇ ಹೊಸ ಆಭರಣ ಖರೀದಿಸಲಿದ್ದೀರಿ ಎಂದು ನಂಬಲಾಗಿದೆ.

ಕೆಂಪು ಇರುವೆಗಳು ಕಂಡರೆ ಏನು ಸಂಕೇತ?

ಕೆಂಪು ಇರುವೆಗಳನ್ನು ಸಾಮಾನ್ಯವಾಗಿ ಅಶುಭ ಎಂದೇ ಪರಿಗಣಿಸಲಾಗುತ್ತದೆ. ಒಂದು ವೇಳೆ ಕೆಂಪು ಇರುವೆಗಳ ಗೂಡಿನ ಬಳಿ ಅಪ್ಪಿ ತಪ್ಪಿ ನೀವು ಕಾಲಿಟ್ಟರೆ ಮುಗಿಯಿತು. ಅವುಗಳು ಕಚ್ಚಿದರೆ ಆ ನೋವಿನಿಂದ ಶಮನವಾಗಲು ಸಾಕಷ್ಟು ಸಮಯ ಬೇಕಾಗುತ್ತದೆ. ಹಾಗೇ ಮನೆಯಲ್ಲಿ ಕೆಂಪು ಇರುವೆಗಳ ಗೂಡನ್ನು ನೋಡಿದರೆ ಅದು ಅಷ್ಟು ಒಳ್ಳೆಯದಲ್ಲ ಎನ್ನಲಾಗಿದೆ. ಮನೆಯಲ್ಲಿ ಇದ್ದಕ್ಕಿದ್ದಂತೆ ಕೆಂಪು ಇರುವೆಗಳು ಕಾಣಿಸಿಕೊಳ್ಳುವುದು ಒಳ್ಳೆಯದಲ್ಲ. ಹೀಗೆ ಕಂಡರೆ. ಹಣ ಕಳೆದುಕೊಳ್ಳುವ ಸಂಕೇತ. ಸಾಲ ಮಾಡುವುದಲ್ಲದೆ ಹಣದ ಸಮಸ್ಯೆ ಹೆಚ್ಚುತ್ತಲೇ ಇರುತ್ತದೆ ಎಂದು ನಂಬಲಾಗಿದೆ. ಮನೆಯಲ್ಲಿ ಪದೇ ಪದೇ ಕೆಂಪು ಇರುವೆಗಳು ಕಾಣಿಸಿಕೊಂಡರೆ ಹಣದ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು. ಜೊತೆಗೆ ಕುಟುಂಬದ ಸದಸ್ಯರಿಗೆ ಅನಾರೋಗ್ಯ ಕಾಡಲಿದೆ. ಇದನ್ನು ತಡೆಯಲು ನಿಮ್ಮ ಇಷ್ಟದೈವವನ್ನು ಆರಾಧಿಸಿ. ಜೊತೆಗೆ ಕೆಂಪು ಇರುವೆಗಳು ಬರದಂತೆ ತಡೆಯಲು ಅಲ್ಲಲ್ಲಿ ಲವಂಗ, ನಿಂಬೆ, ಕರ್ಪೂರವನ್ನು ಇಡಿ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.