Vastu Tips: ಪಾದರಕ್ಷೆಗಳಿಗೂ ಇದೆ ವಾಸ್ತು ನಿಯಮ; ಯಾವ ಬಣ್ಣದ ಚಪ್ಪಲಿಗಳನ್ನು ಧರಿಸಬೇಕು, ಯಾವುದನ್ನು ಧರಿಸಬಾರದು?
Vastu Tips: ಕಾಲಿಗೆ ಧರಿಸುವುದು ಎಂಬ ಕಾರಣಕ್ಕೆ ಪಾದರಕ್ಷೆಗಳ ಬಗ್ಗೆ ಯಾರೂ ನಿರ್ಲಕ್ಷ್ಯ ತೋರಬಾರದು. ಏಕೆಂದರೆ ಪಾದರಕ್ಷೆಗಳಿಗೂ ವಾಸ್ತು ನಿಯಮವಿದೆ. ನಿರ್ದಿಷ್ಟ ಬಣ್ಣದ ಪಾದರಕ್ಷೆಗಳು ನಿಮ್ಮ ಜೀವನವನ್ನು ಸಂತೋಷವನ್ನಾಗಿಸುತ್ತದೆ. ಹಾಗೇ ಪಾದರಕ್ಷೆಗಳಿಗೆ ಸಂಬಂಧಿಸಿದಂತೆ ಇನ್ನೂ ಕೆಲವೊಂದು ಪ್ರಮುಖ ವಿಚಾರಗಳು ಇಲ್ಲಿವೆ.
Vastu Tips: ವಾಸ್ತು ಪ್ರಕಾರ ನೀವು ಮನೆ ಕಟ್ಟಿದರೆ, ವಾಸ್ತು ಪ್ರಕಾರ ನಡೆದುಕೊಂಡರೆ ನಿಮ್ಮ ಜೀವನದಲ್ಲಿ ಯಶಸ್ಸು ಎನ್ನುವುದು ಕಟ್ಟಿಟ್ಟ ಬುತ್ತಿ. ಮನೆ ಕಟ್ಟಲು ಮಾತ್ರವಲ್ಲದೆ, ನೀವು ಧರಿಸುವ ಬಟ್ಟೆಗಳು, ಪೂಜಾ ಕೋಣೆ, ನಿಮ್ಮ ಪರ್ಸ್‌ಗೆ ಸಂಬಂಧಿಸಿದಂತೆ ಕೂಡಾ ವಾಸ್ತು ನಿಯಮವಿದೆ. ಅಷ್ಟೇ ಅಲ್ಲ ನೀವು ಧರಿಸುವ ಪಾದರಕ್ಷೆ ವಿಚಾರದಲ್ಲಿ ಕೂಡಾ ನೀವು ವಾಸ್ತುವನ್ನು ಪಾಲಿಸಿದರೆ ಸಂತೋಷ ಎನ್ನುವುದು ಸದಾ ಕಾಲ ನಿಮ್ಮ ಪಾಲಿಗೆ ಇರಲಿದೆ.
ಅನೇಕ ಜನರು ಫ್ಯಾಷನ್ ಮತ್ತು ಟ್ರೆಂಡಿಂಗ್ ಹೆಸರಿನಲ್ಲಿ ತಮ್ಮ ಮೆಚ್ಚಿನ ಬಣ್ಣದ ಉಡುಪುಗಳನ್ನು ಖರೀದಿಸುತ್ತಾರೆ. ಅದಕ್ಕೆ ಮ್ಯಾಚ್ ಆಗುಂವಥ ಪಾದರಕ್ಷೆಗಳನ್ನು ಕೂಡಾ ಖರೀದಿಸುತ್ತಾರೆ. ಆದರೆ ನೀವು ಕೆಲವೊಂದು ಬಣ್ಣದ ಪಾದರಕ್ಷೆಗಳನ್ನು ಧರಿಸುವುದರಿಂದ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ಕೆಲವು ಬಗೆಯ ಬಣ್ಣಗಳು ಕೆಲವರ ಬದುಕಿನ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತವೆ. ಆದ್ದರಿಂದ ವಾಸ್ತು ಪ್ರಕಾರ ನೀವು ಯಾವ ಬಣ್ಣದ ಪಾದರಕ್ಷೆಗಳನ್ನು ಧರಿಸಬೇಕು ಎನ್ನುವುದರ ಬಗ್ಗೆ ಇಲ್ಲಿ ಒಂದಿಷ್ಟು ಮಾಹಿತಿ ಇದೆ.
ಹಳದಿ ಬಣ್ಣದ ಪಾದರಕ್ಷೆಗಳು ಬೇಡ
ವಾಸ್ತು ಶಾಸ್ತ್ರದ ಪ್ರಕಾರ ಹಳದಿ ಬಣ್ಣದ ಪಾದರಕ್ಷೆಗಳನ್ನು ಯಾವುದೇ ಸಂದರ್ಭದಲ್ಲೂ ಧರಿಸಬಾರದು. ಏಕೆಂದರೆ ಈ ಬಣ್ಣ ಗುರುವನ್ನು ಪ್ರತಿನಿಧಿಸುತ್ತದೆ. ಈ ಬಣ್ಣದ ಪಾದರಕ್ಷೆ ಧರಿಸುವುದರಿಂದ ನೀವು ಗುರುವಿಗೆ ಅಗೌರವ ತೋರುತ್ತೀರಿ ಎಂದರ್ಥ. ನಿಮ್ಮ ಜಾತಕದಲ್ಲಿ ಗುರುವಿನ ಸ್ಥಾನವೂ ದುರ್ಬಲವಾಗುತ್ತದೆ. ವಾಸ್ತು ಪ್ರಕಾರ ಗುರು ದುರ್ಬಲನಾಗಿದ್ದರೆ ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಿಶೇಷವಾಗಿ ನೀವು ಮಾಡುವ ಪ್ರತಿಯೊಂದರಲ್ಲೂ ನೀವು ಯಶಸ್ಸು ಕಾಣದೆ ನಿರಾಸೆಗೊಳ್ಳುವಿರಿ. ಹಣಕಾಸಿನ ಸಮಸ್ಯೆಗಳು ನಿಮ್ಮನ್ನು ಕಾಡುತ್ತವೆ. ನಿಮ್ಮ ಮನೆಯಲ್ಲಿ ಅಶಾಂತಿ ಇರುತ್ತದೆ. ಹಾಗಾಗಿ ಯಾವುದೇ ಸಂದರ್ಭದಲ್ಲೂ ಈ ಬಣ್ಣದ ಶೂ ಅಥವಾ ಚಪ್ಪಲಿಗಳನ್ನು ಧರಿಸಬೇಡಿ.
ಕಚೇರಿಗೆ ಕಂದು ಬಣ್ಣದ ಚಪ್ಪಲಿಗಳು ಬೇಡ
ಕೆಲವರು ಕಚೇರಿಗೆ ಒಂದು, ಹೊರಗೆ ಹೋಗಲು ಒಂದು, ಪಂಕ್ಷನ್‌ಗಳಿಗೆ ಮತ್ತೊಂದು ಬಣ್ಣದ ಪಾದರಕ್ಷೆಗಳನ್ನು ಇಟ್ಟಿರುತ್ತಾರೆ. ಅದರಲ್ಲಿ ಕಚೇರಿಗಾಗಿ ಕೆಲವರು ಕಂದು ಬಣ್ಣದ ಬೂಟುಗಳು, ಚಪ್ಪಲಿಗಳನ್ನು ಮೀಸಲಿಡುತ್ತಾರೆ. ಆದರೆ ಕಂದು ಬಣ್ಣದ ಶೂಗಳ ಬದಲಿಗೆ ಕಡು ಕಂದು ಅಥವಾ ಕಾಫಿ ಬಣ್ಣದ ಶೂ ಅಥವಾ ಚಪ್ಪಲಿಗಳನ್ನು ಧರಿಸಿದರೆ ಸೂಕ್ತ.
ಪಾದರಕ್ಷೆಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು
- ವಾಸ್ತು ಶಾಸ್ತ್ರದ ಪ್ರಕಾರ ಕಪ್ಪು, ಬಿಳಿ, ನೀಲಿ, ಹಸಿರು ಬಣ್ಣಗಳ ಪಾದರಕ್ಷೆ ಅಥವಾ ಚಪ್ಪಲಿಯನ್ನು ಧರಿಸಬೇಕು. ಇವುಗಳನ್ನು ಧರಿಸುವುದರಿಂದ ನಿಮಗೆ ಯಾವುದೇ ತೊಂದರೆಯಾಗುವುದಿಲ್ಲ. ನೀವು ಪ್ರತಿ ಪ್ರಯತ್ನದಲ್ಲಿ ಯಶಸ್ವಿಯಾಗುತ್ತೀರಿ.
- ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಪಾದರಕ್ಷೆಗಳನ್ನು ಮೆಟ್ಟಿಲುಗಳ ಕೆಳಗೆ ಇಡಬಾರದು. ಇದನ್ನು ವಾಸ್ತು ಪ್ರಕಾರ ದೋಷವೆಂದು ಪರಿಗಣಿಸಲಾಗಿದೆ.
- ವಾಸ್ತು ಶಾಸ್ತ್ರದ ಪ್ರಕಾರ, ಯಾವುದೇ ಸಂದರ್ಭದಲ್ಲೂ ನಿಮ್ಮ ಚಪ್ಪಲಿ ಅಥವಾ ಬೂಟುಗಳನ್ನು ಬ್ರಹ್ಮನ ಸ್ಥಾನದಲ್ಲಿ ಮತ್ತು ಈಶಾನ್ಯ ದಿಕ್ಕಿನಲ್ಲಿ ಇಡಬಾರದು.
- ಮನೆ ಒಳಗೆ ಹೋಗುವ ಮುನ್ನ ನಿಮ್ಮ ಬೂಟುಗಳು ಅಥವಾ ಚಪ್ಪಲಿಗಳನ್ನು ನಿಮ್ಮ ಮನೆಯ ಮುಖ್ಯ ದ್ವಾರದ ಮುಂಭಾಗಿಲಿನ ಎದುರು ಇಡಬೇಡಿ, ಬದಲಿಗೆ ಪಕ್ಕಕ್ಕೆ ಸರಿಯಾಗಿ ಜೋಡಿಸಿ ಇಡಿ.
- ಮನೆಯ ಹೊರಗೆ ಇಟ್ಟ ಪಾದರಕ್ಷೆಗಳು ನಿಮಗೆ ಅದೃಷ್ಟವನ್ನು ತರುತ್ತವೆ ಎಂದು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.
- ಪಾದರಕ್ಷೆಗಳನ್ನು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಡಬೇಡಿ, ಹೀಗೆ ಮಾಡಿದರೆ ಲಕ್ಷ್ಮಿ ಕೋಪಗೊಳ್ಳುತ್ತಾಳೆ
- ವಾಸ್ತು ಶಾಸ್ತ್ರದ ಪ್ರಕಾರ ಚಪ್ಪಲಿಗಳನ್ನು ಉಲ್ಟಾ ಇಡಬಾರದು, ಹೀಗೆ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಉಂಟಾಗುತ್ತದೆ.
- ಶೂ, ಚಪ್ಪಲಿಗಳನ್ನು ಇಡಲು ಲೋಹದ ಕಪಾಟು, ಸ್ಟ್ಯಾಂಡ್‌ಗಳ ಬದಲಿಗೆ ಮರದ ಕಪಾಟುಗಳನ್ನು ಬಳಸಿ.
- ಕಾಲಿಗೆ ಬಳಸುವುದು ತಾನೇ ಎಂಬ ನಿರ್ಲಕ್ಷ್ಯ ಬೇಡ, ನಿಮ್ಮ ಪಾದರಕ್ಷೆಗಳನ್ನು ಆಗ್ಗಾಗ್ಗೆ ಸ್ವಚ್ಛಗೊಳಿಸುತ್ತಿರಿ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.