Shani Sade Sati: ಸಾಡೇ ಸಾತಿ ಶನಿಯಿಂದ ಏನೆಲ್ಲ ಸಮಸ್ಯೆಗಳು ಎದುರಾಗಬಹುದು; ಇದಕ್ಕೆ ಪರಿಹಾರಗಳೇನು?
ಶನಿಯು ಏಳೂವರೆ ವರ್ಷಗಳ ಕಾಲ ಒಂದೇ ರಾಶಿಯಲ್ಲಿ ನೆಲೆಸಿದರೆ ಅದನ್ನು ಸಾಡೇ ಸಾತಿ ಶನಿ ಎನ್ನಲಾಗುತ್ತದೆ. ಈ ಸಮಯದಲ್ಲಿ ಶನಿಯು ವ್ಯಕ್ತಿಯ ಭೂತಕಾಲದ ಪಾಪ–ಪುಣ್ಯಗಳಿಗೆ ಅನುಸಾರವಾಗಿ ಫಲವನ್ನು ನೀಡುತ್ತಾನೆ. ಸಾಡೇ ಸಾತಿ ಶನಿಯಿಂದ ಅನೇಕ ಅಡೆತಡೆಗಳು, ಆರೋಗ್ಯ, ಹಣಕಾಸು ಸಮಸ್ಯೆ ಮುಂತಾದವುಗಳು ಎದುರಾಗಬಹುದು.
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯನ್ನು ಕ್ರೂರ ಗ್ರಹ ಎಂದು ಕರೆಯಲಾಗುತ್ತದೆ. ಶನಿ ಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಾಗಲು ತೆಗೆದುಕೊಳ್ಳುವ 7.5 ವರ್ಷಗಳ ಅವಧಿಯನ್ನು ಶನಿ ಸಾಡೇ ಸಾತಿ ಎಂದು ಕರೆಯಲಾಗುತ್ತದೆ. ಶನಿ ನೀಡುವ ನ್ಯಾಯದಿಂದ ತಪ್ಪಿಸಿಕೊಳ್ಳಲು ದೇವಾನುದೇವತಗಳಿಂದಲೂ ಸಾಧ್ಯವಿಲ್ಲ ಎಂಬುದು ಪುರಾಣದ ಕಥೆಗಳಿಂದ ತಿಳಿದುಬಂದ ವಿಷಯವಾಗಿದೆ. ಏಕೆಂದರೆ ಶನಿಯು ಕರ್ಮ ಮತ್ತು ನ್ಯಾಯದ ದೇವರಾಗಿದ್ದಾನೆ. ಏಳೂವರೆ ವರ್ಷಗಳ ಅವಧಿಯಲ್ಲಿ ವ್ಯಕ್ತಿಗೆ ಅವನ ಹಿಂದಿನ ಪಾಪ–ಪುಣ್ಯಗಳಿಗನುಸಾರವಾಗಿ ಶನಿಯು ಫಲ ಕೊಡುತ್ತಾನೆ. ಆದರೆ ಕೆಲವರ ಜೀವನದಲ್ಲಿ ಇದು ಅನೇಕ ಕಷ್ಟಗಳನ್ನು ತರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ಸಮಸ್ಯೆಗೂ ಪರಿಹಾರಗಳನ್ನು ಹೇಳಲಾಗಿದೆ. ಆದರೆ ಸಮಸ್ಯೆಯ ಗಂಭೀರತೆಗೆ ಅನುಗುಣವಾಗಿ ಪರಿಹಾರಗಳು ಇರುತ್ತವೆ. ಸಾಡೇ ಸಾತಿ ಶನಿಯ ಪ್ರಭಾವದಿಂದ ಅನೇಕ ಸಮಸ್ಯೆಗಳು ಎದುರಾಗಬಹುದು ಮತ್ತು ಅದು ಕೆಟ್ಟ ಪರಿಣಾಮಗಳನ್ನು ಉಂಟುಮಾಡಬಹುದು. ಅದರಿಂದ ಪಾರಾಗಲು ಶಾಸ್ತ್ರದಲ್ಲಿ ಕೆಲವು ಪರಿಹಾರಗಳನ್ನು ಹೇಳಲಾಗಿದೆ. ಕರ್ಮ ಫಲಗಳನ್ನು ನೀಡುವ ಶನಿ ಗ್ರಹವು ಒಂದೇ ರಾಶಿಯಲ್ಲಿ ಏಳೂವರೆ ವರ್ಷಗಳ ಸುದೀರ್ಘ ಸಮಯ ನೆಲೆಸಿದಾಗ ಏನೆಲ್ಲಾ ಸಮಸ್ಯೆಗಳನ್ನುಂಟು ಮಾಡಬಹುದು ಎಂದು ತಿಳಿಯೋಣ.
ಸಾಡೇ ಸಾತಿ ಶನಿಯಿಂದ ಏನೆಲ್ಲ ಸಮಸ್ಯೆಗಳು ಎದುರಾಗಬಹುದು?
ಸಾಡೇ ಸಾತಿ ಶನಿಯು ವ್ಯಕ್ತಿಯ ಭೂತಕಾಲದ ಕರ್ಮಗಳಿಗೆ ಅನುಸಾರವಾಗಿ ವಿವಿಧ ಕೆಟ್ಟ ಪರಿಣಾಮಗಳನ್ನು ಬೀರುತ್ತವೆ. ಇದು ವ್ಯಕ್ತಿಯ ಜಾತಕದಲ್ಲಿ ಶನಿಯ ಸ್ಥಾನವನ್ನು ಅವಲಂಬಿಸಿರುತ್ತದೆ. ಅದರ ಮೇಲೆ ಕೆಟ್ಟ ಪರಿಣಾಮಗಳು ಯಾವುವು ಎಂಬುದು ತಿಳಿದುಬರುತ್ತದೆ. ವ್ಯಕ್ತಿಯು ಸಾಡೇ ಸಾತಿ ಶನಿಯ ಪರಿಣಾಮದಿಂದ ಈ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಅಡೆತಡೆಗಳು
ಒಂದೇ ರಾಶಿಯಲ್ಲಿ ಶನಿಯ ಸಾಡೇ ಸಾತಿ ವರ್ಷಗಳ ಸಂಚಾರವು ವ್ಯಕ್ತಿಯ ಮೇಲೆ ಹಲವಾರು ಕೆಟ್ಟ ಪರಿಣಾಮಗಳನ್ನು ಬೀರುತ್ತವೆ. ಅದು ಜೀವನದಲ್ಲಿ ಅನೇಕ ಅಡೆತಡೆಗಳನ್ನು ಸೃಷ್ಟಿಸುತ್ತವೆ. ಸಮಸ್ಯೆಗಳಿಂದ ತುಂಬಿ ಹೋಗುವಂತೆ ಮಾಡುತ್ತದೆ. ವೈಯಕ್ತಿಕ ಮತ್ತು ವೃತ್ತಿ ಜೀವನದಲ್ಲಿ ವಿವಿಧ ಸವಾಲುಗಳನ್ನು ಎದುರಿಸುವಂಥ ಸಂದರ್ಭಗಳನ್ನು ತರುತ್ತದೆ.
ಆರೋಗ್ಯ
ಸಾಡೇ ಸಾತಿ ಸಮಯದಲ್ಲಿ ವ್ಯಕ್ತಿಯ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ವಿಶೇಷವಾಗಿ ಕಾಲುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಜಾತಕದಲ್ಲಿ ಶನಿಯ ಸ್ಥಾನವನ್ನು ಅವಲಂಬಿಸಿ ಇತರ ಆರೋಗ್ಯ ಸಮಸ್ಯೆಗಳು ಎದುರಾಗಬಹುದು.
ಲವ್ ಲೈಫ್
ಏಳೂವರೆ ವರ್ಷಗಳ ಅವಧಿಯಲ್ಲಿ ಪ್ರೀತಿ ಪ್ರೇಮ ವಿಷಯಗಳಿಗೆ ಸಂಬಂಧಿಸಿದಂತೆ ಅನೇಕ ಅಡಚಣೆಗಳನ್ನು ಎದುರಿಸಬೇಕಾಗಬಹುದು. ಇದು ಸಂಗಾತಿಯೊಂದಿಗಿನ ಸಂಬಂಧವನ್ನು ಹಾಳು ಮಾಡಬಹುದು. ತಪ್ಪುಗ್ರಹಿಕೆ, ಸಂಘರ್ಷ, ಬ್ರೆಕ್‌ಅಪ್ ಮತ್ತು ವಿಚ್ಛೇದನಗಳಂಥ ಸಮಸ್ಯೆಗಳನ್ನು ಸೃಷ್ಟಿಸಬಹುದು.
ಹಣಕಾಸಿನ ತೊಂದರೆಗಳು
ಆರ್ಥಿಕ ವಿಚಾರದಲ್ಲಿ ಶನಿ ಸಾಡೇ ಸಾತಿ ಅವಧಿಯು ಏರಿಳಿತಗಳಿಂದ ಕೂಡಿರುತ್ತದೆ. ಈ ಅವಧಿಯಲ್ಲಿ ಹಣಕಾಸಿನ ಬಿಕ್ಕಟ್ಟು ಮತ್ತು ಅದಕ್ಕೆ ಸಂಬಂಧಿಸಿದ ಉದ್ಯೋಗ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ಅವಧಿಯಲ್ಲಿ ಹಣವನ್ನು ಯಾರಿಗೂ ನೀಡದಂತೆ ಸಲಹೆ ನೀಡಲಾಗುತ್ತದೆ. ಏಕೆಂದರೆ ಆ ಹಣವನ್ನು ಮರಳಿ ಪಡೆಯುವುದು ಕಷ್ಟವಾಗುತ್ತದೆ. ಕೆಲಸ ಮತ್ತು ವ್ಯಾಪಾರದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಹಣಕಾಸಿನ ನಷ್ಟ ಎದುರಿಸುವ ಸಾಧ್ಯತೆ ಕಂಡುಬರಬಹುದು.
ಸಾಡೇ ಸಾತ್ ಶನಿ ನೀಡುವ ಸಮಸ್ಯೆಗಳಿಂದ ಪಾರಾಗಲು ಹೀಗೆ ಮಾಡಿ
- ಹನುಮಾನ್ ಚಾಲೀಸಾ ತಪ್ಪದೇ ಹೇಳಿ.
- ಪ್ರತಿ ಮಂಗಳವಾರ ಮತ್ತು ಶನಿವಾರ ಸುಂದರ ಕಾಂಡವನ್ನು ಪಠಿಸಿ. ನಿತ್ಯ ಪಠಿಸಿದರೆ ಬಹಳ ಉತ್ತಮ.
- ಪ್ರತಿ ಶನಿವಾರ ಅಶ್ವತ್ಥ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪ ಹಚ್ಚಿ.
- ಶನಿವಾರದಂದು ಶನಿ ಮಂತ್ರವನ್ನು 108 ಬಾರಿ ಜಪಿಸಿ.
- ಸಾಸಿವೆ ಎಣ್ಣೆ ಬಟ್ಟಲಿನಲ್ಲಿ ನಿಮ್ಮ ಮುಖದ ಪ್ರತಿಬಿಂಬವನ್ನು ನೋಡಿ ನಂತರ ಅದನ್ನು ದಾನ ಮಾಡಿ.
- ಪಕ್ಷಿ, ಇರುವೆ ಮತ್ತು ಕಾಗೆಗಳಿಗೆ ಆಹಾರ ನೀಡಿ.
- ಪ್ರತಿ ಮಂಗಳವಾರ ಆಂಜನೇಯನಿಗೆ ನೆನೆಸಿದ ಬಿಳಿ ಕಡ್ಲೆ, ಮಲ್ಲಿಗೆ ಎಣ್ಣೆ ಮತ್ತು ಕುಂಕುಮ ಅರ್ಪಿಸಿ.
- ಕುರುಡರು ಮತ್ತು ಅಂಗವಿಕಲರಿಗೆ ಆಹಾರ ಮತ್ತು ಬಟ್ಟೆಗಳನ್ನು ದಾನಮಾಡಿ.
ಶನಿ ಮಂತ್ರ
ಶನಿ ಸಾಡೇ ಸಾತಿಯಿಂದ ಉಂಟಾಗುವ ಸಮಸ್ಯೆಗಳನ್ನು ದೂರಮಾಡಿಕೊಳ್ಳಲು ಈ ಶನಿ ಮಂತ್ರಗಳನ್ನು ಪಠಿಸಿ.
- ಓ ಶನೈಶ್ಚರಾಯೇ ನಮಃ ||
- ಓಂ ಪ್ರಾಂ ಪ್ರೀಂ ಪ್ರೌಂ ಸಹ ಶನೈಶ್ಚರಾಯ ನಮಃ ||
- ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ
ಛಾಯಾ ಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಂ ||
ಇನ್ನಷ್ಟು ರಾಶಿಭವಿಷ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.