ತವರಿನಲ್ಲೇ ಸನ್ರೈಸರ್ಸ್ ಹೈದರಾಬಾದ್ಗೆ ಹೀನಾಯ ಸೋಲು; ಕೊನೆಗೂ ಗೆದ್ದ ಆರ್ಸಿಬಿಗೆ ಪ್ಲೇಆಫ್ ಕನಸು ಜೀವಂತ
RCB beat SRH : ಸೀಸನ್-17ರ ಐಪಿಎಲ್ನ 41ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜಯದ ನಗೆ ಬೀರಿದೆ. ಸತತ 6 ಸೋಲುಗಳ ನಂತರ ಆರ್ಸಿಬಿ ಗೆಲುವು ದಾಖಲಿಸಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB 2024) ಕೊನೆಗೂ ಜಯದ ನಗೆ ಬೀರಿದ್ದು, ಭರ್ಜರಿ ಕಂಬ್ಯಾಕ್ ಮಾಡಿದೆ. ಸತತ 6 ಸೋಲುಗಳ ನಂತರ ಗೆಲುವು ಕಂಡ ಆರ್ಸಿಬಿ, ತವರಿನ ಮೈದಾನದಲ್ಲಿ ಸನ್ರೈಸರ್ಸ್ ಹೈದರಾಬಾದ್ (SRH) ತಂಡಕ್ಕೆ ಸೋಲುಣಿಸಿದೆ. 35 ರನ್ಗಳಿಂದ ಸೋಲಿಸಿದ ಫಾಫ್ ಪಡೆ, ಟೂರ್ನಿಯಲ್ಲಿ ಎರಡನೇ ದಿಗ್ವಿಜಯ ಸಾಧಿಸಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ತನ್ನ ಮೊದಲ ಗೆಲುವು ಸಾಧಿಸಿತ್ತು. ಇದೀಗ ತನ್ನ ಪ್ಲೇಆಫ್ ಆಸೆಯನ್ನು ಇನ್ನೂ ಜೀವಂತವಾಗಿಟ್ಟುಕೊಂಡಿದೆ.
ಹೈದರಾಬಾದ್ನ ರಾಜೀವ್ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ ಸತತ ಮೂರನೇ ಬಾರಿಗೆ 200ರ ಗಡಿ ದಾಟಿತು. ರಜತ್ ಪಾಟೀದಾರ್ ಅವರ ವೇಗದ ಅರ್ಧಶತಕ, ವಿರಾಟ್ ಕೊಹ್ಲಿ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಬೆಂಗಳೂರು, 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 206 ರನ್ ಪೇರಿಸಿತು. ಜಯದೇವ್ ಉನಾದ್ಕತ್ 3, ಟಿ ನಟರಾಜನ್ 2 ವಿಕೆಟ್ ಪಡೆದು ಮಿಂಚಿದರು.
ಈ ಗುರಿ ಬೆನ್ನಟ್ಟಿದ ಸನ್ರೈಸರ್ಸ್ ಹೈದರಾಬಾದ್, ಮತ್ತೆ ಬ್ಯಾಟಿಂಗ್ ನಡೆಸಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಆರ್ಸಿಬಿ ಬೌಲರ್ಗಳು ಲಯಕ್ಕೆ ಮರಳುವ ಮೂಲಕ ಎದುರಾಳಿಗೆ ಆಘಾತ ನೀಡಿದರು. ಇದು ಎಸ್ಆರ್ಹೆಚ್ ಬ್ಯಾಟರ್ಸ್ ಕೂಡ ನಿರೀಕ್ಷಿಸಿರಲಿಲ್ಲ. ಸ್ಪಿನ್ನರ್ಗಳು ಬಲಿಷ್ಠ ಬ್ಯಾಟಿಂಗ್ ವಿರುದ್ಧ ದರ್ಬಾರ್ ನಡೆಸಿದರು. ಅಂತಿಮವಾಗಿ ಹೈದರಾಬಾದ್ 20 ಓವರ್ಗಳಲ್ಲಿ 8 ವಿಕೆಟ್ಗೆ 171 ರನ್ ಗಳಿಸಿತು. ಕ್ಯಾಮರೂನ್ ಗ್ರೀನ್ ಕರಣ್ ಶರ್ಮಾ ಮತ್ತು ಸ್ವಪ್ನಿಲ್ ಸಿಂಗ್ ತಲಾ 2 ವಿಕೆಟ್ ಪಡೆದರು.
ಅದ್ಭುತ ಬೌಲಿಂಗ್ ನಡೆಸಿದ ಆರ್ಸಿಬಿ
207 ರನ್ಗಳ ಗುರಿ ಬೆನ್ನಟ್ಟಿದ ಎಸ್ಆರ್ಹೆಚ್ಗೆ ಆರ್ಸಿಬಿ ಭಾರಿ ಆಘಾತ ನೀಡಿತು. ಆರೆಂಜ್ ಆರ್ಮಿ, ಆರ್ಸಿಬಿ ಬೌಲರ್ಗಳನ್ನು ಪುಡಿಗಟ್ಟುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಆಗಿದ್ದೇ ಬೇರೆ. ಆರ್ಸಿಬಿ ಬೌಲರ್ಗಳು ಪವರ್ಪ್ಲೇನಲ್ಲಿ 4 ವಿಕೆಟ್ ಪಡೆದು ಮಿಂಚಿದರು. ಅಭಿಷೇಕ್ ಶರ್ಮಾ (31), ಟ್ರಾವಿಸ್ ಹೆಡ್ (1), ಏಡನ್ ಮಾರ್ಕ್ರಮ್ (7), ಹೆನ್ರಿಚ್ ಕ್ಲಾಸೆನ್ (7) ಬೇಗನೇ ನಿರ್ಗಮಿಸಿದರು. ಈ ಬ್ಯಾಟರ್ಸ್ ಕಳೆದ ಪಂದ್ಯಗಳಲ್ಲಿ ವಿಧ್ವಂಸ ಸೃಷ್ಟಿಸಿದ್ದರು.
ಪವರ್ಪ್ಲೇ ಬಳಿಕವೂ ಎಸ್ಆರ್ಹೆಚ್ ಬ್ಯಾಟಿಂಗ್ ವಿಭಾಗ ಡಲ್ ಆಯಿತು. ನಿತೀಶ್ ರೆಡ್ಡಿ (13), ಅಬ್ದುಲ್ ಸಮದ್ (10) ಕೂಡ ನಿರಾಸೆ ಮೂಡಿಸಿದರು. ಆದರೆ ಪ್ಯಾಟ್ ಕಮಿನ್ಸ್ (31), ಶಹಬಾಜ್ ಅಹ್ಮದ್ (40) ಫೈಟ್ ಬ್ಯಾಕ್ ನೀಡಲು ಪ್ರಯತ್ನಿಸಿದರು. ಆದರೆ ಸಾಧ್ಯವಾಗಲಿಲ್ಲ. ಭುವನೇಶ್ವರ್ ಕುಮಾರ್ 13 ರನ್, ಜಯದೇವ್ ಉನಾದ್ಕತ್ 8 ರನ್ ಗಳಿಸಿದರು.
ರಜತ್ ಪಾಟೀದಾರ್ ವೇಗದ ಅರ್ಧಶತಕ
ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ಪರ ಫಾಫ್ ಡು ಪ್ಲೆಸಿಸ್ 25 ರನ್ ಗಳಿಸಿ ಔಟಾದರು. ವಿಲ್ ಜಾಕ್ಸ್ (6) ಕೂಡ ಬೇಗನೇ ಮರಳಿದರು. ಈ ಹಂತದಲ್ಲಿ ಒಂದಾದ ವಿರಾಟ್ ಕೊಹ್ಲಿ ಮತ್ತು ರಜತ್ ಪಾಟೀದಾರ್, ಅರ್ಧಶತಕದ ಪಾಲುದಾರಿಕೆ ನೀಡಿದರು. ಅಲ್ಲದೆ, ಪಾಟೀದಾರ್, ಮಯಾಂಕ್ ಮಾರ್ಕಂಡೆ ಬೌಲಿಂಗ್ ಸತತ 4 ಸಿಕ್ಸರ್ಗಳನ್ನು ಬಾರಿಸಿ ಕೇವಲ 19 ಎಸೆತಗಳಲ್ಲಿ 50 ರನ್ಗಳ ವೇಗದ ಅರ್ಧಶತಕ ಬಾರಿಸಿದರು. ಇದು ಆರ್ಸಿಬಿ ಪರ ದಾಖಲೆ ಎರಡನೇ ವೇಗದ ಅರ್ಧಶತಕ.
ಪಾಟೀದಾರ್ ಬಿರುಸಿನ ಬ್ಯಾಟಿಂಗ್ ನಡೆಸಿದರೆ, ವಿರಾಟ್ ಕೊಹ್ಲಿ ವಿಕೆಟ್ ಕಾಪಾಡುತ್ತಾ ನಿಧಾನಗತಿಯ ಅರ್ಧಶತಕ ಪೂರೈಸಿದರು. ರಜತ್ 20 ಎಸೆತಗಳಲ್ಲಿ 5 ಸಿಕ್ಸರ್, 2 ಬೌಂಡರಿ ಸಹಿತ 50 ರನ್ ಗಳಿಸಿದರೆ, ಕೊಹ್ಲಿ 43 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ 51 ರನ್ ಗಳಿಸಿದರು. ಇಬ್ಬರು ಸಹ ಜಯದೇವ್ ಉನಾದ್ಕತ್ಗೆ ಬಲಿಯಾದರು. ಕೊನೆಯಲ್ಲಿ ಮಿಂಚಿದ ಕ್ಯಾಮರೂನ್ ಗ್ರೀನ್ ಅಜೇಯ 37 ರನ್ಗಳ ಕಾಣಿಕೆ ನೀಡಿದರೆ, ಮಹಿಪಾಲ್ ಲೊಮ್ರೋರ್ 7, ದಿನೇಶ್ ಕಾರ್ತಿಕ್ 11, ಸ್ವಪ್ನಿಲ್ ಸಿಂಗ್ 12 ರನ್ ಬಾರಿಸಿದರು.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
