ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್​ಗಿಲ್ಲ​ ಸ್ಥಾನ; ಟಿ20 ವಿಶ್ವಕಪ್‌ಗೆ ಅಚ್ಚರಿಯ ಭಾರತ ತಂಡ ನಿರ್ಮಿಸಿದ ಅಂಬಾಟಿ ರಾಯುಡು
ಕನ್ನಡ ಸುದ್ದಿ  /  ಕ್ರಿಕೆಟ್  /  ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್​ಗಿಲ್ಲ​ ಸ್ಥಾನ; ಟಿ20 ವಿಶ್ವಕಪ್‌ಗೆ ಅಚ್ಚರಿಯ ಭಾರತ ತಂಡ ನಿರ್ಮಿಸಿದ ಅಂಬಾಟಿ ರಾಯುಡು

ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್​ಗಿಲ್ಲ​ ಸ್ಥಾನ; ಟಿ20 ವಿಶ್ವಕಪ್‌ಗೆ ಅಚ್ಚರಿಯ ಭಾರತ ತಂಡ ನಿರ್ಮಿಸಿದ ಅಂಬಾಟಿ ರಾಯುಡು

Ambati Rayudu : ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು ಅವರು ಬಲಿಷ್ಠ ಭಾರತ ತಂಡವನ್ನು ಆಯ್ಕೆ ಮಾಡಿದ್ದಾರೆ. ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ ಸೇರಿದಂತೆ ಪ್ರಮುಖ ಆಟಗಾರರನ್ನೇ ಕೈಬಿಟ್ಟಿದ್ದಾರೆ.

ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್​ಗಿಲ್ಲ ಸ್ಥಾನ; ಟಿ20 ವಿಶ್ವಕಪ್‌ಗೆ ಅಚ್ಚರಿಯ ಭಾರತ ತಂಡ ನಿರ್ಮಿಸಿದ ಅಂಬಾಟಿ ರಾಯುಡು
ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್​ಗಿಲ್ಲ ಸ್ಥಾನ; ಟಿ20 ವಿಶ್ವಕಪ್‌ಗೆ ಅಚ್ಚರಿಯ ಭಾರತ ತಂಡ ನಿರ್ಮಿಸಿದ ಅಂಬಾಟಿ ರಾಯುಡು

17ನೇ ಆವೃತ್ತಿಯ ಐಪಿಎಲ್ (IPL 2024) ಮಧ್ಯೆಯೇ ಮುಂಬರುವ ಟಿ20 ವಿಶ್ವಕಪ್ 2024 (T20 World Cup 2024) ನಿರಂತರ ಸದ್ದು ಮಾಡುತ್ತಿದೆ. ತಂಡಗಳನ್ನು ಘೋಷಿಸಲು ಮೇ 1ರ ಅಂತಿಮ ದಿನಾಂಕ ಸಮೀಪಿಸುತ್ತಿದ್ದು, ಮಾಜಿ ಆಟಗಾರರು ಮತ್ತು ವಿಶ್ಲೇಷಕರು ಯುಎಸ್ಎ ಮತ್ತು ವೆಸ್ಟ್ ಇಂಡೀಸ್​​​ನಲ್ಲಿ ನಡೆಯಲಿರುವ ಮೆಗಾ ಟೂರ್ನಿಗೆ 15 ಸದಸ್ಯರ ಭಾರತೀಯ ತಂಡವನ್ನು ಕಟ್ಟುತ್ತಿದ್ದಾರೆ. ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್ ಸೇರಿದಂತೆ ಪ್ರಮುಖರು ಬಲಿಷ್ಠ ತಂಡವನ್ನು ಕಟ್ಟಿದ್ದಾರೆ. ಇದೀಗ ಅವರ ಸಾಲಿಗೆ ಅಂಬಾಟಿ ರಾಯುಡು (Ambati Rayudu) ಸೇರಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್​​ನಲ್ಲಿ ಟಿ20 ವಿಶ್ವಕಪ್ ತಂಡಕ್ಕೆ ತಮ್ಮ 15 ಸದಸ್ಯರ ಭಾರತ ತಂಡ ಆಯ್ಕೆ ಮಾಡಿದ ಅಂಬಾಟಿ ರಾಯುಡು, ಇಡೀ ತಂಡದಲ್ಲಿ ಅನುಭವಿ ದಿನೇಶ್ ಕಾರ್ತಿಕ್ ಅವರನ್ನು ಏಕೈಕ ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಿದ್ದಾರೆ. ಅದ್ಭುತ ಫಾರ್ಮ್​ನಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಇಬ್ಬರನ್ನೂ ಕೈಬಿಟ್ಟಿದ್ದಾರೆ. ಅಲ್ಲದೆ, ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೂ ಸಹ ತನ್ನ ತಂಡದಲ್ಲಿ ಅವಕಾಶ ನೀಡಿಲ್ಲ.

ಹಾರ್ದಿಕ್ ಪಾಂಡ್ಯ ವೈಫಲ್ಯ

ಪಾಂಡ್ಯ ಮುಂಬೈ ನಾಯಕನಾಗಿ ತಮ್ಮ ಮೊದಲ ವರ್ಷದಲ್ಲಿ ಅಭಿಮಾನಿಗಳಿಂದ ಉತ್ತಮ ಬೆಂಬಲ ಪಡೆಯಲು ವಿಫಲರಾಗಿದ್ದಾರೆ. ಅಲ್ಲದೆ, ಅವರ ಪ್ರದರ್ಶನವೂ ತೀವ್ರ ಕುಸಿದಿದೆ. ಪಾಂಡ್ಯ ಈ ಋತುವಿನಲ್ಲಿ 142.45 ಸ್ಟ್ರೈಕ್​​​ರೇಟ್ ಹೊಂದಿದ್ದಾರೆ. ಫಿನಿಷರ್​ಗಳಲ್ಲಿ ಒಬ್ಬರಾಗಿ ಕಣಕ್ಕಿಳಿದಿರುವುದನ್ನು ಪರಿಗಣಿಸಿದರೆ ಇದು ತೀರಾ ಕಡಿಮೆಯಾಗಿದೆ. ಎಂಟು ಪಂದ್ಯಗಳಲ್ಲಿ ಕೇವಲ 151 ರನ್ ಗಳಿಸಿರುವ ಪಾಂಡ್ಯ, ಬೌಲಿಂಗ್ ಸರಾಸರಿ 46.50 ಮತ್ತು ಕೇವಲ ನಾಲ್ಕು ವಿಕೆಟ್ ಪಡೆದಿದ್ದಾರೆ.

ಕಾರ್ತಿಕ್ ಮತ್ತು ಪಂತ್ ಇಬ್ಬರೂ ತಮ್ಮ ಫ್ರಾಂಚೈಸಿಗಳಿಗೆ ಉತ್ತಮ ಪ್ರದರ್ಶನ ನೀಡಿದ್ದಾರೆ. 38 ವರ್ಷದ ಅನುಭವಿ ಆಟಗಾರ 8 ಪಂದ್ಯಗಳಲ್ಲಿ 62.75 ಸರಾಸರಿಯಲ್ಲಿ 251 ರನ್ ಗಳಿಸಿದ್ದು, ಬ್ಯಾಟಿಂಗ್​ ಸ್ಟ್ರೈಕ್ ರೇಟ್ 196 ಇದೆ. ಕಾರ್ತಿಕ್ ಆರ್​​ಸಿಬಿ ಪರ ಫಿನಿಶರ್ ಪಾತ್ರವನ್ನು ಅತ್ಯಂತ ಸೊಗಸಾಗಿ ನಿರ್ವಹಿಸಿದ್ದಾರೆ. ಇದು ಅವರನ್ನು ವಿಶ್ವಕಪ್ ತಂಡದಲ್ಲಿ ಮೊದಲ ಸ್ಥಾನದಲ್ಲಿ ಸೇರಿಸುವ ಕೂಗಿಗೆ ಕಾರಣವಾಯಿತು. ಈ ಆವೃತ್ತಿಯ ನಂತರ ಐಪಿಎಲ್​ನಿಂದ ನಿವೃತ್ತಿ ಘೋಷಿಸಲು ಸಜ್ಜಾಗಿರುವ ಕಾರ್ತಿಕ್, ಟಿ20 ವಿಶ್ವಕಪ್ ರೇಸ್​​​ನಲ್ಲಿ ಮೊದಲ ಸಾಲಿನಲ್ಲಿ ನಿಂತಿದ್ದಾರೆ.

ಅಬ್ಬರಿಸಿದರೂ ಪಂತ್​ಗಿಲ್ಲ ಸ್ಥಾನ

2022ರ ಡಿಸೆಂಬರ್ 30ರಂದು ಭೀಕರ ಅಪಘಾತಕ್ಕೆ ಒಳಗಾಗಿ ಚೇತರಿಸಿಕೊಂಡಿರುವ ರಿಷಭ್ ಪಂತ್, 9 ಪಂದ್ಯಗಳಿಂದ 48.86ರ ಬ್ಯಾಟಿಂಗ್ ಸರಾಸರಿಯಲ್ಲಿ 342 ರನ್ ಗಳಿಸಿದ್ದಾರೆ. 161.32 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಪಂತ್ ಬಾರಿಸಿದ ಮೂರು ಅರ್ಧಶತಕಗಳಲ್ಲಿ ಏಪ್ರಿಲ್ 24ರಂದು ಗುಜರಾತ್ ಟೈಟಾನ್ಸ್ ವಿರುದ್ಧದ ಅರ್ಧಶತಕವು ಅತ್ಯಂತ ರೋಮಾಂಚಕ ಆಟದಲ್ಲಿ ಒಂದಾಗಿದೆ. ಈ ಪಂದ್ಯದಲ್ಲಿ ಪಂತ್​ ಬ್ಯಾಟಿಂಗ್ ವೈಖರಿ ತನ್ನ ಹಳೆಯ ಆಟವನ್ನು ನೆನಪಿಸಿದೆ. ಅದರಲ್ಲೂ ಕೊನೆಯ ಓವರ್​​​ನಲ್ಲಿ 31 ರನ್ ಬಾರಿಸಿದ್ದು ಅದ್ಭುತವಾಗಿತ್ತು.

ಹೀಗಿದ್ದರೂ ರಾಯುಡು ಅವರುತನ್ನ ತಂಡದಲ್ಲಿ ರಿಷಭ್​ ಪಂತ್​ಗೆ ಅವಕಾಶ ನೀಡಿಲ್ಲ. ಒಬ್ಬ ಬ್ಯಾಕಪ್ ಕೀಪರ್ ಅನ್ನು ಆಯ್ಕೆ ಮಾಡದಿರುವುದು ಅಚ್ಚರಿ ಮೂಡಿಸಿದೆ. 2010 ರಿಂದ 2017 ರವರೆಗೆ ಮುಂಬೈ ಇಂಡಿಯನ್ಸ್ ಮತ್ತು ನಂತರ 2018 ರಿಂದ 2023 ರವರೆಗೆ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದ ರಾಯುಡು ಅವರು ಯುಜುವೇಂದ್ರ ಚಹಲ್ ಮತ್ತು ಕುಲ್ದೀಪ್ ಯಾದವ್ ಜೋಡಿಗೆ ಅವಕಾಶ ನೀಡಿದ್ದಾರೆ. ಅಲ್ಲದೆ, ರಾಜಸ್ಥಾನ್ ರಾಯಲ್ಸ್ ತಂಡದ ಯಶಸ್ವಿ ಜೈಸ್ವಾಲ್ ಜೊತೆಗೆ ರಿಯಾನ್ ಪರಾಗ್​​ಗೂ ಅವಕಾಶ ನೀಡಿದ್ದಾರೆ.

ರೋಹಿತ್​ ಜೊತೆಗೆ ಯಾರಿಗೆಲ್ಲಾ ಸಿಕ್ಕಿದೆ ಅವಕಾಶ?

ರೋಹಿತ್ ಶರ್ಮಾ ನಾಯಕನಾಗಿ ಖಚಿತವಾಗಿದ್ದು, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್, ರಿಂಕು ಸಿಂಗ್ ಬ್ಯಾಟರ್​​ಗಳಾಗಿದ್ದಾರೆ. ಶಿವಂ ದುಬೆ ವೇಗದ ಬೌಲಿಂಗ್ ಆಲ್​ರೌಂಡರ್​ ಆಗಿ ಅವಕಾಶ ಪಡೆದಿದ್ದಾರೆ. ಸ್ಪಿನ್ ಆಲ್​ರೌಂಡರ್​ ಆಗಿ ರವೀಂದ್ರ ಜಡೇಜಾಗೆ ಅವಕಾಶ ನೀಡಿದ್ದಾರೆ. ಆಲ್​ರೌಂಡರ್ 3 ಅರ್ಧಶತಕಗಳೊಂದಿಗೆ 51.83ರ ಸರಾಸರಿಯಲ್ಲಿ 311 ರನ್ ಗಳಿಸಿದ್ದು, 169.9ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ರವೀಂದ್ರ ಜಡೇಜಾ ಸ್ಪಿನ್ ಆಲ್​ರೌಂಡರ್ ಆಗಿದ್ದಾರೆ. ಗಾಯದಿಂದ ಚೇತರಿಸಿಕೊಂಡ ನಂತರ ಕುಲ್ದೀಪ್ ಎಲ್ಲಾ ಸ್ವರೂಪಗಳಲ್ಲಿ ಭಾರತಕ್ಕಾಗಿ ಮ್ಯಾಚ್ ವಿನ್ನರ್ ಆಗಿದ್ದಾರೆ.

ಚಹಲ್ ಐಪಿಎಲ್ 2024ರಲ್ಲಿ 13 ವಿಕೆಟ್​​ಗಳೊಂದಿಗೆ ಜಂಟಿಯಾಗಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಚಹಲ್ ಇತ್ತೀಚೆಗೆ ಐಪಿಎಲ್​​ನಲ್ಲಿ 200 ವಿಕೆಟ್ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಳೆದ ವರ್ಷ ಆಗಸ್ಟ್​​ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೊನೆಯ ಟಿ20ಐ ಆಡಿದ ನಂತರ ಅವರು ದೀರ್ಘಕಾಲದವರೆಗೆ ಭಾರತೀಯ ತಂಡದಿಂದ ಹೊರಗುಳಿದಿದ್ದಾರೆ. ವೇಗದ ಬೌಲರ್​​ಗಳ ಸಾಲಿನಲ್ಲಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಅರ್ಷದೀಪ್​ ಸಿಂಗ್ ಮತ್ತು ಎಲ್​ಎಸ್​ಜಿ ವೇಗಿ ಮಯಾಂಕ್ ಯಾದವ್​ಗೆ ಅವಕಾಶ ಕೊಡಲಾಗಿದೆ.

ಟಿ20 ವಿಶ್ವಕಪ್​ಗೆ ಅಂಬಾಟಿ ರಾಯುಡು ಕಟ್ಟಿದ ಭಾರತ ತಂಡ

ರೋಹಿತ್​ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಯಾನ್ ಪರಾಗ್, ರಿಂಕು ಸಿಂಗ್, ದಿನೇಶ್ ಕಾರ್ತಿಕ್, ಶಿವಂ ದುಬೆ, ರವೀಂದ್ರ ಜಡೇಜಾ, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಮಯಾಂಕ್ ಯಾದವ್.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Whats_app_banner