ಕನ್ನಡ ಸುದ್ದಿ  /  Cricket  /  Ireland Defeat Afghanistan To Register First Test Win List Of Teams Attained First Win Against Team India England Jra

AFG vs IRE: ಚೊಚ್ಚಲ ಟೆಸ್ಟ್ ಜಯ ದಾಖಲಿಸಿದ ಐರ್ಲೆಂಡ್; ಭಾರತಕ್ಕಿಂತ ವೇಗವಾಗಿ ಮೊದಲ ಗೆಲುವಿನ ಸಾಧನೆ

ಅಫ್ಘಾನಿಸ್ತಾನ ವಿರುದ್ಧದ ಗೆಲುವಿನೊಂದಿಗೆ ಐರ್ಲೆಂಡ್ ಕ್ರಿಕೆಟ್‌ ತಂಡವು ಚೊಚ್ಚಲ ಟೆಸ್ಟ್ ಜಯ ದಾಖಲಿಸಿದೆ. ಆ ಮೂಲಕ ಭಾರತಕ್ಕಿಂತ ವೇಗವಾಗಿ ಮೊದಲ ಗೆಲುವಿನ ಸಾಧನೆ ಮಾಡಿದೆ. ಹಾಗಿದ್ದರೆ ಯಾವ ತಂಡ ಎಷ್ಟು ಪಂದ್ಯಗಳ ಬಳಿಕ ಮೊದಲ ಟೆಸ್ಟ್‌ ಜಯ ದಾಖಲಿಸಿದವು ಎಂಬ ವಿವರ ನೋಡೋಣ.

ಭಾರತಕ್ಕಿಂತ ವೇಗವಾಗಿ ಮೊದಲ ಟೆಸ್ಟ್ ಗೆಲುವಿನ ಸಾಧನೆ‌ ಮಾಡಿದ ಐರ್ಲೆಂಡ್
ಭಾರತಕ್ಕಿಂತ ವೇಗವಾಗಿ ಮೊದಲ ಟೆಸ್ಟ್ ಗೆಲುವಿನ ಸಾಧನೆ‌ ಮಾಡಿದ ಐರ್ಲೆಂಡ್

ಐರ್ಲೆಂಡ್‌ ಕ್ರಿಕೆಟ್‌ ತಂಡವು ಐತಿಹಾಸಿಕ ಸಾಧನೆ ಮಾಡಿದೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಮೊಟ್ಟಮೊದಲ ಜಯ ದಾಖಲಿಸುವ ಮೂಲಕ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ತಲುಪಿದೆ. ಅಬುಧಾಬಿಯಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ (Afghanistan vs Ireland) ಏಕೈಕ ಟೆಸ್ಟ್‌ ಪಂದ್ಯದಲ್ಲಿ ಆರು ವಿಕೆಟ್‌ಗಳಿಂದ ಗೆದ್ದ ಐರ್ಲೆಂಡ್ ಪಾಲಿಗೆ, ಟೆಸ್ಟ್‌ ಕ್ರಿಕೆಟ್‌ನಲ್ಲಿ ಇದು ಮೊದಲ ಗೆಲುವು ಎಂಬುದು ವಿಶೇಷ. ಟೆಸ್ಟ್‌ ಆಡುವ ಸ್ಥಾನಮಾನ ಪಡೆದ ನಂತರ ಇದು ಅವರ ಮೊದಲ ಗೆಲುವು. ಅಂದರೆ ಆಡಿದ 8ನೇ ಟೆಸ್ಟ್‌ನಲ್ಲಿ ಐರಿಶ್‌ ಆಟಗಾರರು ಜಯದ ನಗೆ ಬೀರಿದ್ದಾರೆ.

ಭಾರತ ಸೇರಿದಂತೆ ಹಲವು ದೇಶಗಳು ನಿಯಮಿತವಾಗಿ ಟೆಸ್ಟ್‌ ಪಂದ್ಯಗಳಲ್ಲಿ ಆಡುತ್ತಿವೆ. ಆದರೆ, ಈ ಸ್ವರೂಪದಲ್ಲಿ ಆಡಲು ಆರಂಭಿಸಿದ ಮೊದಲ ಪಂದ್ಯದಲ್ಲೇ ಎಲ್ಲಾ ತಂಡಗಳು ಗೆದ್ದಿಲ್ಲ. ಹೀಗಾಗಿ ಪ್ರಮುಖ ಟೆಸ್ಟ್‌ ತಂಡಗಳು ಮೊದಲ ಟೆಸ್ಟ್‌ ಗೆಲುವು ದಾಖಲಿಸಲು ಎಷ್ಟು ಪಂದ್ಯಗಳನ್ನು ತೆಗೆದುಕೊಂಡವು ಎಂಬುದನ್ನು ನೋಡೋಣ.

147 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಮೊದಲ ಗೆಲುವನ್ನು ದಾಖಲಿಸಿದ ನಾಲ್ಕನೇ ವೇಗದ ತಂಡ ಎಂಬ ಹೆಗ್ಗಳಿಕೆಗೆ ಐರ್ಲೆಂಡ್ ಪಾತ್ರವಾಗಿದೆ. ಈ ಹಿಂದೆ ಆಸ್ಟ್ರೇಲಿಯಾ ತಂಡ ಮಾತ್ರ ಚೊಚ್ಚಲ ಟೆಸ್ಟ್ ಗೆಲುವಿಗೆ ಕೇವಲ ಒಂದು ಪಂದ್ಯವನ್ನು ತೆಗೆದುಕೊಂಡಿತ್ತು.‌ ಅತ್ತ ಇಂಗ್ಲೆಂಡ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ದೇಶಗಳು ಈ ಸಾಧನೆಗೆ ಎರಡು ಪಂದ್ಯಗಳನ್ನು ತೆಗೆದುಕೊಂಡವು. ವೆಸ್ಟ್ ಇಂಡೀಸ್ 6ನೇ ಪಂದ್ಯದಲ್ಲಿ ಜಯ ಸಾಧಿಸಿದರೆ, ಇದೀಗ ಐರ್ಲೆಂಡ್ ತಂಡ 8ನೇ ಪಂದ್ಯದಲ್ಲಿ ಮೊದಲ ಟೆಸ್ಟ್‌ ಜಯ ಸಾಧಿಸಿದೆ. ಹಾಗಿದ್ದರೆ, ಭಾರತ ಎಷ್ಟು ಪಂದ್ಯಗಳ ಬಳಿಕ ಮೊದಲ ಜಯ ಸಾಧಿಸಿತು ಎಂಬುದನ್ನು ನೋಡೋಣ.

ಬರೋಬ್ಬರಿ 45 ಪಂದ್ಯಗಳ ಬಳಿಕ ನ್ಯೂಜಿಲ್ಯಾಂಡ್‌ಗೆ ಮೊದಲ ಜಯ

1956ರ ಬೇಸಿಗೆಯಲ್ಲಿ ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಕಿವೀಸ್ ತಂಡವು ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನು ಇನ್ನಿಂಗ್ಸ್ ಮತ್ತು 190 ರನ್‌ಗಳಿಂದ ಸೋಲಿಸಿತು. ಇದು ಕಿವೀಸ್‌ ಪಾಲಿಗೆ ದಿಗ್ವಿಜಯವಾಯ್ತು.

14ನೇ ಪಂದ್ಯದಲ್ಲಿ ಮೊದಲ ಜಯದ ರುಚಿ ನೋಡಿ ಶ್ರೀಲಂಕಾ

ಶ್ರೀಲಂಕಾ ಕೂಡ ಭಾರತದ ವಿರುದ್ಧವೇ ಮೊದಲ ಜಯ ದಾಖಲಿಸಿತು. 1985ರಲ್ಲಿ ಕೊಲಂಬೊದ ಪಿ ಸಾರಾ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡವನ್ನು 149 ರನ್‌ಗಳಿಂದ ಲಂಕಾ ಮಣಿಸಿತು.

12ನೇ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾಗೆ ಚೊಚ್ಚಲ ಗೆಲುವು

ಬಲಿಷ್ಠ ಹರಿಣಗಳ ಟೆಸ್ಟ್‌ನಲ್ಲಿ ತಮ್ಮ ಮೊದಲ ಗೆಲುವಿಗಾಗಿ 12 ಪಂದ್ಯಗಳವರೆಗೆ ಕಾಯಬೇಕಾಯ್ತು. ಇಂಗ್ಲೆಂಡ್‌ ವಿರುದ್ಧ ತಂಡ ಮೊದಲ ಗೆಲುವು ದಾಖಲಿಸಿ ಇತಿಹಾಸ ಬರೆಯಿತು.

2ನೇ ಪಂದ್ಯದಲ್ಳೇ ಮೊದಲ ಜಯ ಸಾಧಿಸಿದ ಪಾಕಿಸ್ತಾನ

ಲಕ್ನೋದ ವಿಶ್ವವಿದ್ಯಾನಿಲಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಭಾರತದ ವಿರುದ್ಧ ತಮ್ಮ ಮೊದಲ ಟೆಸ್ಟ್ ಜಯ ದಾಖಲಿಸಿತು. ತಾನಾಡಿದ ಎರಡನೇ ಪಂದ್ಯದಲ್ಲಿಯೇ ಭಾರತವನ್ನು ಇನ್ನಿಂಗ್ಸ್ ಮತ್ತು 43 ರನ್‌ಗಳಿಂದ ಸೋಲಿಸಿದ ಸಾಂಪ್ರದಾಯಿಕ ಎದುರಾಳಿಗಳು ಇತಿಹಾಸ ನಿರ್ಮಿಸಿದರು.

2ನೇ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಮೊದಲ ಜಯ

1877ರಲ್ಲಿ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ಪ್ರವಾಸ ಮಾಡಿತು. ಅಲ್ಲಿ ಮೊದಲ ಪಂದ್ಯದಲ್ಲಿ ಸೋತಿತು. ಆದರ ಬೆನ್ನಲ್ಲೇ ಐತಿಹಾಸಿಕ ಎಂಸಿಜಿ ಮೈದಾನದಲ್ಲಿ ನಾಲ್ಕು ವಿಕೆಟ್‌ಗಳಿಂದ ಮೊದಲ ಜಯ ದಾಖಲಿಸಿತು.

ಮೊದಲ ಟೆಸ್ಟ್‌ನಲ್ಲಿಯೇ ಗೆದ್ದು ಬೀಗಿದ ಆಸ್ಟ್ರೇಲಿಯಾ

ಅಂದಿಗೂ ಇಂದಿಗೂ ಬಲಿಷ್ಠರಾಗಿರುವ ಕಾಂಗರೂಗಳು 1877ರಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ ತಮ್ಮ ಮೊದಲ ಟೆಸ್ಟ್‌ ಪಂದ್ಯದಲ್ಲೇ 45 ರನ್‌ಗಳಿಂದ ಗೆದ್ದು ಬೀಗಿದರು. ಆ ಬಳಿಕ ಸರಣಿಯ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದು ಸರಣಿ ಸಮಬಲಗೊಳಿಸಿತು.

ಬರೋಬ್ಬರಿ 25ನೇ ಪಂದ್ಯದಲ್ಲಿ ಮೊದಲ ಜಯ ಕಂಡ ಭಾರತ

1951-52ರಲ್ಲಿ ಭಾರತದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತವು ಮೊದಲ ಟೆಸ್ಟ್‌ ಜಯದ ರುಚಿ ನೋಡಿತು. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ ಎಂಟು ರನ್‌ಗಳಿಂದ ಪ್ರವಾಸಿ ಇಂಗ್ಲೆಂಡ್‌ಗೆ ಭಾರತ ಸೋಲುಣಿಸಿತು.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point