ಕ್ರಿಕೆಟ್ ಪ್ರಿಯರಿಗೆ ಗುಡ್ನ್ಯೂಸ್; ಈ ಒಟಿಟಿ ಫ್ಲಾಟ್ಫಾರಂನಲ್ಲಿ ಉಚಿತವಾಗಿ ಟಿ20 ವಿಶ್ವಕಪ್ ನೋಡಿ ಎಂಜಾಯ್ ಮಾಡಿ!
T20 World Cup 2024: ಐಸಿಸಿ ಪುರುಷರ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಸಂಬಂಧಿಸಿ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಹೊರ ಬಿದ್ದಿದೆ. ಐಪಿಎಲ್ನಂತೆ ಟಿ20 ವಿಶ್ವಕಪ್ ಟೂರ್ನಿಯನ್ನು ಉಚಿತವಾಗಿ ವೀಕ್ಷಿಸಬಹುದು.
ಇಂಡಿಯನ್ ಪ್ರೀಮಿಯರ್ ಲೀಗ್ (IPL) 2024 ಕೊನೆಯ ಹಂತಕ್ಕೆ ಬಂದು ನಿಂತಿದೆ. ಭಾರತ ಸೇರಿದಂತೆ ಜಗತ್ತಿನಾದ್ಯಂತ ಕ್ರಿಕೆಟ್ ಅಭಿಮಾನಿಗಳು ಐಸಿಸಿ ಪುರುಷರ ಟಿ20 ವಿಶ್ವಕಪ್ 2024ರ (T20 World Cup 2024) ಆರಂಭಕ್ಕೆ ಕಾತರದಿಂದ ಕಾಯುತ್ತಿದ್ದಾರೆ. ಮಾರ್ಕ್ಯೂ ಐಸಿಸಿ ಈವೆಂಟ್ ಜೂನ್ 1 ರಿಂದ ಪ್ರಾರಂಭವಾಗಲಿದ್ದು, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ (ಯುಎಸ್ಎ) ಉದ್ಘಾಟನಾ ಪಂದ್ಯದಲ್ಲಿ ಕೆನಡಾವನ್ನು ಎದುರಿಸಲಿದೆ.
ಭಾರತದಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಿಯನ್ನು ಪ್ರತ್ಯೇಕ ದೂರದರ್ಶನ ಮತ್ತು ಡಿಜಿಟಲ್ ಬ್ರಾಡ್‌ಕಾಸ್ಟರ್‌ಗಳು ಪ್ರಸಾರ ಮಾಡುತ್ತಿವೆ. ಡಿಜಿಟಲ್ನಲ್ಲಿ ಉಚಿತವಾಗಿ ವೀಕ್ಷಿಸಬಹುದಾಗಿದೆ. ಅದರಂತೆ ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನವೇ ಡಿಸ್ನಿ + ಹಾಟ್‌ಸ್ಟಾರ್ ಕ್ರಿಕೆಟ್ ಫ್ಯಾನ್ಸ್ಗೆ ಸಿಹಿ ಗುಡ್ನ್ಯೂಸ್ ನೀಡಿದೆ. ಹೌದು, ಸ್ಮಾರ್ಟ್ ಬಳಕೆದಾರರು ಈ ಬಾರಿ ನಡೆಯುವ ಟಿ20 ವಿಶ್ವಕಪ್ ಅನ್ನು ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಉಚಿತ ವೀಕ್ಷಿಸಬಹುದು ಎಂದು ಡಿಸ್ನಿ + ಹಾಟ್‌ಸ್ಟಾರ್ ಮೇ 8ರ ಬುಧವಾರ ಘೋಷಿಸಿದೆ.
ಮೊಬೈಲ್ ಬಳಕೆದಾರರಿಗೆ ಮಾತ್ರ ಉಚಿತ
ಕಳೆದ ವರ್ಷ ಭಾರತದಲ್ಲಿ ಜರುಗಿದ ಏಕದಿನ ವಿಶ್ವಕಪ್-2023ರ ಮತ್ತು ಏಷ್ಯಾಕಪ್ ಟೂರ್ನಿಯನ್ನು ಸಹ ಡಿಸ್ನಿ + ಹಾಟ್‌ಸ್ಟಾರ್, ಮೊಬೈಲ್ ಬಳಕೆದಾರರಿಗೆ ಮಾತ್ರ ಉಚಿತ ವೀಕ್ಷಣೆಗೆ ಅವಕಾಶ ಕೊಟ್ಟಿತ್ತು. ಇದೀಗ ಟಿ20 ವಿಶ್ವಕಪ್ ಟೂರ್ನಿಯಲ್ಲೂ ಇದೇ ನಿಲುವು ತಳೆದಿದೆ. ಹಾಗಾಗಿ ಕ್ರಿಕೆಟ್ ಪ್ರೇಮಿಗಳು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಟಿ20 ವಿಶ್ವಕಪ್ 2024 ಉಚಿತ ಸ್ಟ್ರೀಮಿಂಗ್ ಆನಂದಿಸಬಹುದು. ಆದರಿದು ಮೊಬೈಲ್ ಬಳಕೆದಾರರಿಗೆ ಮಾತ್ರ ಅವಕಾಶ. ಡೆಸ್ಕ್‌ಟಾಪ್-ಪರ್ಸನಲ್ ಕಂಪ್ಯೂಟರ್‌ಗಳಲ್ಲಿ ಇದು ಲಭ್ಯವಿರುವುದಿಲ್ಲ.
ಭಾರತದ ಡಿಸ್ನಿ + ಹಾಟ್‌ಸ್ಟಾರ್ ಮುಖ್ಯಸ್ಥ ಈ ಕುರಿತು ಪ್ರತಿಕ್ರಿಯಿಸಿ, ಟಿ20 ವಿಶ್ವಕಪ್ ಅನ್ನು ಮೊಬೈಲ್‌ನಲ್ಲಿ ಉಚಿತವಾಗಿ ನೋಡಲು ಅವಕಾಶ ನೀಡುವ ಮೂಲಕ ಕ್ರಿಕೆಟ್ ಅನ್ನು ಮತ್ತಷ್ಟು ಪ್ರೇಕ್ಷಕರನ್ನು ತಲುಪುವ ಗುರಿ ಹೊಂದಿದ್ದಾರೆ. ಏಕದಿನ ವಿಶ್ವಕಪ್ ಅನ್ನೂ ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್ ಮೂಲಕ ಮೊಬೈಲ್‌ನಲ್ಲಿ ಉಚಿತವಾಗಿ ಸ್ಟ್ರೀಮ್ ಮಾಡಲಾಗಿತ್ತು. ಇದು ಏಕಕಾಲದಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡು ಹಲವು ದಾಖಲೆಗಳನ್ನು ಮುರಿದಿತ್ತು. ಭಾರತ-ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯ ಏಕಕಾಲಕ್ಕೆ 5.9 ಕೋಟಿ ವೀಕ್ಷಣೆ ಕಂಡಿತ್ತು.
ಜೂನ್ 1ರಿಂದ ಟಿ20 ವಿಶ್ವಕಪ್ ಆರಂಭ
ಜೂನ್ 1 ರಿಂದ ಪ್ರಾರಂಭವಾಗುವ ಬಹುನಿರೀಕ್ಷಿತ ಮೆಗಾ ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 18ರ ತನಕ ಲೀಗ್ ಹಂತದಲ್ಲಿ 40 ಪಂದ್ಯಗಳು ಜರುಗಲಿವೆ. ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ಜರುಗಲಿವೆ. ಟಿ20 ವಿಶ್ವಕಪ್ನ ಹೈವೋಲ್ಟೇಜ್ ಪಂದ್ಯ ಭಾರತ-ಪಾಕಿಸ್ತಾನ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿದ್ದು, ಇಡೀಗ ಜಗತ್ತೇ ಈ ಪಂದ್ಯಕ್ಕೆ ಕಾಯುತ್ತಿದೆ. ಭಾರತ ತನ್ನ ಆರಂಭಿಕ ಪಂದ್ಯದಲ್ಲಿ ಜೂನ್ 5ರಂದು ಐರ್ಲೆಂಡ್ ವಿರುದ್ಧ ಸೆಣಸಾಡಲಿದೆ.
ಟೂರ್ನಿಯಲ್ಲಿ 20 ತಂಡಗಳು ಭಾಗವಹಿಸಲಿವೆ. ಅದಕ್ಕೆ ತಕ್ಕಂತೆ ತಲಾ 2 ಅಭ್ಯಾಸ ಪಂದ್ಯಗಳು ನಡೆಯಲಿವೆ ಎಂದು ಐಸಿಸಿ ಮಾಹಿತಿ ನೀಡಿದೆ. ಟೂರ್ನಿಯಲ್ಲಿ ಸೂಪರ್-8 ಪಂದ್ಯಗಳಿಗೆ ಯಾವುದೇ ರಿಸರ್ವ್ ಡೇ ಇರುವುದಿಲ್ಲ. ಈ ಮ್ಯಾಚ್ಗಳು ಮಳೆಯಿಂದ ಅಥವಾ ಇನ್ನಿತರ ಕಾರಣಗಳಿಂದ ರದ್ದುಗೊಂಡರೆ ತಲಾ 1 ಅಂಕ ಪಡೆಯಲಿವೆ. ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ರಿಸರ್ವ್ ಡೇ ಇರಲಿದ್ದು, ಮಳೆ ಬಂದರೆ ಮೀಸಲು ದಿನ ಪಂದ್ಯ ನಡೆಯಲಿದೆ. ಒಂದು ವೇಳೆ ಮೀಸಲು ದಿನವೂ ಮಳೆಯಿಂದ ರದ್ದಾದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವ ತಂಡ ಚಾಂಪಿಯನ್ ಆಗಲಿದೆ.