ಅಂದು ಟೀಕಿಸಿದವರಿಂದಲೇ ಇಂದು ಶಹಬ್ಬಾಷ್‌ಗಿರಿ; ಟ್ರೋಲ್‌ಗಳಿಗೆ ಕುಗ್ಗದೆ ಆರ್‌ಸಿಬಿ ಅದೃಷ್ಟವನ್ನೇ ಬದಲಿಸಿದ ಯಶ್ ದಯಾಳ್
ಕನ್ನಡ ಸುದ್ದಿ  /  ಕ್ರಿಕೆಟ್  /  ಅಂದು ಟೀಕಿಸಿದವರಿಂದಲೇ ಇಂದು ಶಹಬ್ಬಾಷ್‌ಗಿರಿ; ಟ್ರೋಲ್‌ಗಳಿಗೆ ಕುಗ್ಗದೆ ಆರ್‌ಸಿಬಿ ಅದೃಷ್ಟವನ್ನೇ ಬದಲಿಸಿದ ಯಶ್ ದಯಾಳ್

ಅಂದು ಟೀಕಿಸಿದವರಿಂದಲೇ ಇಂದು ಶಹಬ್ಬಾಷ್‌ಗಿರಿ; ಟ್ರೋಲ್‌ಗಳಿಗೆ ಕುಗ್ಗದೆ ಆರ್‌ಸಿಬಿ ಅದೃಷ್ಟವನ್ನೇ ಬದಲಿಸಿದ ಯಶ್ ದಯಾಳ್

ಯಶ್ ದಯಾಳ್ ಆರ್‌ಸಿಬಿ ತಂಡದ ಹೀರೋ ಆಗಿದ್ದಾರೆ. ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಕೊನೆಯ ಓವರ್‌ ಬೌಲಿಂಗ್‌ ಮಾಡಿದ ಅವರು, ಧೋನಿ ಹಾಗೂ ಜಡೇಜಾ ಅವರನ್ನು ಕಟ್ಟಿಹಾಕಿದರು. ಇದರೊಂದಿಗೆ ಆರ್‌ಸಿಬಿ ಪ್ಲೇಆಫ್‌ಗೆ ಲಗ್ಗೆ ಹಾಕಲು ನೆರವಾದರು.

ಟ್ರೋಲ್‌ಗಳಿಗೆ ಕುಗ್ಗದೆ ಆರ್‌ಸಿಬಿ ಅದೃಷ್ಟವನ್ನೇ ಬದಲಿಸಿದ ಯಶ್ ದಯಾಳ್
ಟ್ರೋಲ್‌ಗಳಿಗೆ ಕುಗ್ಗದೆ ಆರ್‌ಸಿಬಿ ಅದೃಷ್ಟವನ್ನೇ ಬದಲಿಸಿದ ಯಶ್ ದಯಾಳ್ (X, AFP)

ಐಪಿಎಲ್ 2024ರ ಆವೃತ್ತಿಗೂ ಮುಂಚಿತವಾಗಿ ನಡೆದ ಆಟಗಾರರ ಹರಾಜು ಪ್ರಕ್ರಿಯೆ ವೇಳೆ, ಯಶ್‌ ದಯಾಳ್‌ ಅವರನ್ನು ಆರ್‌ಸಿಬಿ ಫ್ರಾಂಚೈಸಿಯು 5 ಕೋಟಿ ರೂಪಾಯಿ ಕೊಟ್ಟು ಖರೀದಿಸಿತ್ತು. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿಯ ಈ ಖರೀದಿ ನೋಡಿ ಅಭಿಮಾನಿಗಳು ಅಚ್ಚರಿಪಟ್ಟಿದ್ದರು. ಬೇರೆ ಯಾರೂ ಯಾಕೆ, ಖುದ್ದು ಆರ್‌ಸಿಬಿ ಅಭಿಮಾನಿಗಳೇ ಫ್ರಾಂಚೈಸ್‌ ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದರು. ಸತತ 5 ಸಿಕ್ಸರ್‌ ಹೊಡೆಸಿಕೊಂಡಿದ್ದ ಕಳಪೆ ಬೌಲರ್‌ ಖರೀದಿಗೆ 5 ಕೋಟಿ ಕೊಡಬೇಕಿತ್ತಾ ಎಂದು ಪ್ರಶ್ನಿಸತೊಡಗಿದರು. ಅಂಥಾ ಬೌಲರ್‌ ಈಗ ಆರ್‌ಸಿಬಿ ತಂಡದ ಗೆಲುವಿನ ಹೀರೋ ಆಗಿದ್ದಾರೆ. ಐಪಿಎಲ್‌ 2023ರಿಂದ ಟೀಕೆಗಳ ಮೇಲೆ ಟೀಕೆಗಳನ್ನು ಎದುರಿಸುತ್ತಾ, ಸಾಮಾಜಿಕ ಮಾಧ್ಯಮಗಳಲ್ಲಿಯೂ ಟ್ರೋಲ್ ಎದುರಿಸುತ್ತಾ ಬಂದಿದ್ದ ಯಶ್‌ ದಯಾಳ್‌ ಈಗ ತಲೆ ಎತ್ತಿ ನಿಂತಿದ್ದಾರೆ. ಎಲ್ಲಾ ಟ್ರೋಲ್‌ ಹಾಗೂ ಟೀಕೆ ಟಿಪ್ಪಣಿಗಳಿಗೆ ತಮ್ಮ ಪ್ರದರ್ಶನದಿಂದಲೇ ಉತ್ತರ ಕೊಟ್ಟಿದ್ದಾರೆ.

ನಿಮಗೆಲ್ಲಾ ನೆನಪಿರಬಹದು. ಕಳೆದ ವರ್ಷ, ಅಂದರೆ ಐಪಿಎಲ್‌ 2023ರ ಆವೃತ್ತಿಯಲ್ಲಿ ಗುಜರಾತ್‌ ಟೈಟಾನ್ಸ್‌ ಪರ‌ ಯಶ್ ಆಡಿದ್ದರು. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್‌ ವಿರುದ್ಧ ಕೊನೆಯ ಓವರ್‌ ಬೌಲಿಂಗ್‌ ಮಾಡಿದ್ದ ದಯಾಳ್‌, 5 ಎಸೆತಗಳಲ್ಲಿ 5 ಸಿಕ್ಸರ್‌ ಬಿಟ್ಟುಕೊಟ್ಟಿದ್ದರು. ರಿಂಕು ಸಿಂಗ್‌ ಅಬ್ಬರದಾಟಕ್ಕೆ ಸಿಲುಕಿದ ದಯಾಳ್‌, 5 ಸಿಕ್ಸರ್‌ ಸೋರಿಕೆ ಮಾಡಿ ತಮ್ಮ ತಂಡದ ಸೋಲಿಗೆ ಕಾರಣರಾದರು. ಅಲ್ಲಿಂದ ದಯಾಳ್ ಎದುರಿಸಿದ ಟೀಕೆ ಟಿಪ್ಪಣಿಗಳಿಗೆ ಮಿತಿಯೇ ಇಲ್ಲ.

ಡೆತ್‌ ಓವರ್‌ನಲ್ಲಿ ರನ್‌ ಸೋರಿಕೆ ಮಾಡಿ ತಂಡದ ಸೋಲಿಗೆ ಆತನೇ ಕಾರಣ ಎಂದು ಅಭಿಮಾನಿಗಳು ಹಿಗ್ಗಾಮುಗ್ಗ ಟ್ರೋಲ್‌ ಮಾಡಿದ್ದರು. ಅಲ್ಲಿಗೆ ಆ ಆಟಗಾರನ ಭವಿಷ್ಯವೇ ಅಂತ್ಯವಾಯ್ತು ಎನ್ನಲಾಗಿತ್ತು. ಆದರೆ, ಒಂದು ಕೆಟ್ಟ ದಿನ ಅಥವಾ ಒಂದು ಪಂದ್ಯ ಯಾವೊಬ್ಬ ಆಟಗಾರನ ಸಾಮರ್ಥ್ಯ ಸಾಬೀತುಪಡಿಸಲು ಸಾಧ್ಯವಿಲ್ಲ. ಅದರಂತೆಯೇ ಈ ಬಾರಿ ಆರ್‌ಸಿಬಿ ತಂಡ ಸೇರಿಕೊಂಡ ವೇಗಿ, ತಂಡದ ನಂಬರ್‌ ವನ್‌ ಬೌಲರ್‌ ಆಗಿ ಮಿಂಚುತ್ತಿದ್ದಾರೆ. ಈ ಆವೃತ್ತಿಯಲ್ಲಿ ಆರ್‌ಸಿಬಿ ಪರ ಅತಿ ಹೆಚ್ಚು ವಿಕೆಟ್‌ ಪಡೆಯುವ ಮೂಲಕ ಸಿರಾಜ್‌, ಫರ್ಗ್ಯುಸನ್‌ ಅವರಂಥ ವಿಶ್ವದರ್ಜೆಯ ಬೌಲರ್‌ಗಳನ್ನು ಹಿಂದಿಕ್ಕಿದ್ದಾರೆ.

ಕೊನೆಯ ಓವರ್‌ನಲ್ಲಿ ಸಿಎಸ್‌ಕೆ ಕಟ್ಟಿಹಾಕಿದ ದಯಾಳ್

ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಗೆಲುವಿನಲ್ಲಿ ಯಶ್‌ ದಯಾಳ್‌ ಪಾತ್ರ ನಿರ್ಣಾಯಕವಾಗಿತ್ತು. ಕೊನೆಯ ಓವರ್‌ ಎಸೆದ ದಯಾಳ್‌, ಮೊತ್ತವನ್ನು ಸಮರ್ಥವಾಗಿ ಡಿಫೆಂಡ್‌ ಮಾಡಿಕೊಂಡರು. ಅಲ್ಲದೆ ತಂಡವು ಪ್ಲೇಆಫ್‌ಗೆ ಲಗ್ಗೆ ಹಾಕಬೇಕಾದರೆ ಸಿಎಸ್‌ಕೆ 17 ರನ್‌ ಮೀರದಂತೆ ನಿಯಂತ್ರಿಸಬೇಕಿತ್ತು. ಆ ಕೆಲಸವನ್ನು ಯಶಸ್ವಿಯಾಗಿ ನಿಭಾಯಿಸಿದರು. ಕೊನೆಯ ಓವರ್‌ನ ಮೊದಲ ಎಸೆತದಲ್ಲಿ ಧೋನಿ ಬೃಹತ್‌ ಸಿಕ್ಸರ್‌ ಸಿಡಿಸಿದರು. ಆದರೆ, ನಂತರ ನಿಧಾನಗತಿಯ ಎಸೆತದೊಂದಿಗೆ ತಂತ್ರ ಬದಲಿಸಿದ ದಯಾಳ್‌ ದಿಗ್ಗಜನ ವಿಕೆಟ್‌ ಕಿತ್ತರು. ಅಚ್ಚರಿಯೆಂದರೆ ಆ ನಂತರ ಚೆನ್ನೈಗೆ ಗಳಿಸಲು ಸಾಧ್ಯವಾಗಿದ್ದು 1 ರನ್‌ ಮಾತ್ರ.

ಮೂರನೇ ಎಸೆತ ಎದುರಿಸಿದ ಶಾರ್ದುಲ್‌ ಠಾಕೂರ್‌ ಡಾಟ್‌ ಮಾಡಿದರು. ನಾಲ್ಕನೇ ಎಸೆತಕ್ಕೆ ಸಿಂಗಲ್‌ ಓಡಿದರು. ಕೊನೆಯ ಎರಡು ಎಸೆತ ಎದುರಿಸಿದ ಜಡೇಜಾ, 10 ರನ್‌ ಗಳಿಸಿದರೆ ಸಿಎಸ್‌ಕೆ ಪ್ಲೇಆಫ್‌ ಟಿಕೆಟ್‌ ಖಚಿತವಾಗುತ್ತಿತ್ತು. ಅನುಭವಿ ಜಡೇಜಾಗೆ ಇದು ದೊಡ್ಡ ಕೆಲಸವೇನೂ ಆಗಿರಲಿಲ್ಲ. ಕಳೆದ ವರ್ಷದ ಐಪಿಎಲ್‌ ಫೈನಲ್‌ ಪಂದ್ಯದಲ್ಲಿ ಇದೇ ಸಾಧನೆ ಮಾಡಿದ್ದರು. ಆದರೆ, ದಯಾಳ್‌ ಎಸೆತಗಳನ್ನು ಜಡೇಜಾಗೆ ಕನೆಕ್ಟ್‌ ಮಾಡಲು ಕೂಡಾ ಸಾಧ್ಯವಾಗಲಿಲ್ಲ. ಎರಡು ಡಾಟ್‌ ಎಸೆತಗಳೊಂದಿಗೆ ಆರ್‌ಸಿಬಿ ಪ್ಲೇಆಫ್‌ ಪ್ರವೇಶ ಮಾಡಿತು.

ಇದನ್ನೂ ಓದಿ | Video: ನಿದ್ದೆಗೆಟ್ಟು ಸಂಭ್ರಮಾಚರಣೆಯಲ್ಲಿ ಮುಳುಗಿದ ಆರ್‌ಸಿಬಿ ಫ್ಯಾನ್ಸ್; ಇದು ಗ್ರೇಟೆಸ್ಟ್‌ ಕಂಬ್ಯಾಕ್ ಎಂದು ಹರ್ಷೋದ್ಘಾರ

26 ವರ್ಷದ ಯುವ ವೇಗಿ, ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ತಂಡದ ಗೆಲುವಿನ ರೂವಾರಿಯಾಗಿ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ಗಳಿಸಿದರು. ಅಂದು ತನ್ನ ತಂಡದ ಸೋಲಿಗೆ ಕಾರಣರಾಗಿದ್ದ ಆಟಗಾರ, ಇಂದು ಗೆಲುವಿನಲ್ಲಿ ರೂವಾರಿಯಾದರು. ಅಂದು ತಲೆತಗ್ಗಿಸಿದ್ದ ವೇಗಿ, ಇಂದು ತಲೆ ಎತ್ತಿ ನಡೆಯುತ್ತಿದ್ದಾರೆ.

ಸಿಎಸ್‌ಕೆ ವಿರುದ್ಧದ ಗೆಲುವಿನೊಂದಿಗೆ ಆರ್‌ಸಿಬಿ ತಂಡವು ಪ್ಲೇಆಫ್‌ಗೆ ಲಗ್ಗೆ ಹಾಕಿತು. ಆ ಮೂಲಕ ಟೂರ್ನಿಯಲ್ಲಿ ಅಚ್ಚರಿಯ ರೀತಿಯಲ್ಲಿ ಕಂಬ್ಯಾಕ್‌ ಮಾಡಿತು. ಇದು ತಂಡದ ಕಂಬ್ಯಾಕ್‌ ಮಾತ್ರವಲ್ಲ. ಯಶ್‌ ದಯಾಳ್‌ ಪಾಲಿಗೂ ಅತ್ಯುತ್ತಮ ಕಂಬ್ಯಾಕ್‌ ಆಗಿದೆ.

ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್‌ ಮಾಡಿದ ನಾಯಕ ಫಾಫ್‌ ಡುಪ್ಲೆಸಿಸ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಆದರೆ, ಈ ಪ್ರಶಸ್ತಿಯು ಯಶ್‌ ದಯಾಳ್‌ಗೆ ಸೇರಬೇಕು ಎಂದು ನಾಯಕ ಹೇಳಿದರು.

ಇದನೂ ಓದಿ | ಸನ್‌ರೈಸರ್ಸ್‌ ವಿರುದ್ಧ ಟಾಸ್‌ ಗೆದ್ದ ಪಂಜಾಬ್‌ ಬ್ಯಾಟಿಂಗ್;‌ 10 ಭಾರತೀಯ ಆಟಗಾರರೊಂದಿಗೆ ಕಣಕ್ಕಿಳಿದ ಕಿಂಗ್ಸ್

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner