ಕನ್ನಡ ಸುದ್ದಿ  /  ಚುನಾವಣೆಗಳು  /  ಕರ್ನಾಟಕದಲ್ಲಿ 75.47 ಕೋಟಿ ರೂ. ನಗದು ಸೇರಿ 403 ಕೋಟಿ ರೂ ಮೌಲ್ಯದ ಸ್ವತ್ತುಗಳ ಜಪ್ತಿ; ಚುನಾವಣಾ ಇತಿಹಾಸದಲ್ಲಿ ಹೊಸ ದಾಖಲೆ

ಕರ್ನಾಟಕದಲ್ಲಿ 75.47 ಕೋಟಿ ರೂ. ನಗದು ಸೇರಿ 403 ಕೋಟಿ ರೂ ಮೌಲ್ಯದ ಸ್ವತ್ತುಗಳ ಜಪ್ತಿ; ಚುನಾವಣಾ ಇತಿಹಾಸದಲ್ಲಿ ಹೊಸ ದಾಖಲೆ

ಲೋಕಸಭೆ ಚುನಾವಣೆಯಲ್ಲಿ ಕುರುಡು ಕಾಂಚಾರ ಕುಣಿತ ಜೋರಿದೆ. ಈ ಬಾರಿ ದಾಖಲೆ ಪ್ರಮಾಣದ ಹಣ,ಸ್ವತ್ತನ್ನು ಚುನಾವಣೆ ಆಯೋಗ ಕರ್ನಾಟಕದಲ್ಲಿ ವಶಪಡಿಸಿಕೊಂಡಿದೆ.ವರದಿ: ಎಚ್‌.ಮಾರುತಿ. ಬೆಂಗಳೂರು

ಚುನಾವಣೆ ಆಯೋಗ ಕರ್ನಾಟಕದಲ್ಲಿ ವಶಪಡಿಸಿಕೊಂಡ ಹಣ
ಚುನಾವಣೆ ಆಯೋಗ ಕರ್ನಾಟಕದಲ್ಲಿ ವಶಪಡಿಸಿಕೊಂಡ ಹಣ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಅಕ್ರಮಗಳನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸುತ್ತಿರುವ ಚುನಾವಣಾ ಆಯೋಗ 75.47 ಕೋಟಿ ರೂಪಾಯಿ ನಗದು ಸೇರಿದಂತೆ 403.40 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, ಮದ್ಯ, ಉಚಿತ ಉಡುಗೊರೆ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದೆ. ಈ ಪ್ರಮಾಣದ ವಸ್ತುಗಳನ್ನು ಜಪ್ತಿ ಮಾಡಿರುವುದು ಒಂದು ದಾಖಲೆಯಾಗಿದೆ ಎಂದು ಆಯೋಗ ತಿಳಿಸಿದೆ.ಆಯೋಗದ ಸ್ಥಿರ ಕಣ್ಣಾವಲು ತಂಡ, ಕ್ಷಿಪ್ರ ಪಡೆಗಳು, ಅಬಕಾರಿ, ಪೊಲೀಸ್, ವಾಣಿಜ್ಯ ಮತ್ತು ಆದಾಯ ಇಲಾಖೆಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು.

177.34 ಕೋಟಿ ರೂ. ಮೌಲ್ಯದ ಮದ್ಯ, 57.67 ಕೋಟಿ ರೂಪಾಯಿ ಮೌಲ್ಯದ ಚಿನ್ನ, 11.23 ಕೋಟಿ ರೂ. ಮೌಲ್ಯದ ಡ್ರಗ್ಸ್, 1.18 ಕೋಟಿ ರೂ. ಬೆಲೆಯ ಬೆಳ್ಳಿ, 90 ಲಕ್ಷ ರೂಪಾಯಿ ಮೌಲ್ಯದ ವಜ್ರ, 8.14 ಕೋಟಿ ಮೌಲ್ಯದ ಉಚಿತ ಉಡುಗೊರೆಗಳು ಹಾಗೂ 72.27 ಕೋಟಿ ಬೆಲೆಬಾಳುವ ಇತರೆ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ನಗದು, ಮದ್ಯ, ಡ್ರಗ್ಸ್, ಚಿನ್ನಾಭರಣ, ಬೆಳ್ಳಿ ಮತ್ತು ಉಚಿತ ಉಡುಗೊರೆ ವಸ್ತುಗಳನ್ನು ವಶಪಡಿಸಿಕೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ ಇದುವರೆಗ 1975 ಎಫ್‌ಐಆರ್ ಗಳನ್ನು ಚುನಾವಣಾ ಆಯೋಗ ದಾಖಲಿಸಿದೆ.

ಶನಿವಾರವಷ್ಟೇ ಬೆಂಗಳೂರಿನ ಬಿನ್ನಿ ಮಿಲ್ ಹತ್ತಿರದ ಎಪಿಎಂಸಿ ಬಳಿ ಇರುವ ಚೆಕ್ ಪೋಸ್ಟ್‌ನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 2 ಕೋಟಿ ರೂಪಾಯಿ ನಗದನ್ನು ಸ್ಥಿರ ಕಣ್ಣಾವಲು ಪಡೆ ವಶಪಡಿಸಿಕೊಂಡಿತ್ತು.

2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಒಟ್ಟು ರೂಪಾಯಿ 88 ಕೋಟಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. 2023 ರ ವಿಧಾನಸಭಾ ಚುನಾವಣೆಯಲ್ಲಿ 384 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆಗ ಇದು ದೊಡ್ಡ ದಾಖಲೆಯಾಗಿತ್ತು.

ರಾಜ್ಯದಲ್ಲಿ ಚುನಾವಣೆಗೆ ಇನ್ನೂ ಆರು ದಿನಗಳಿದ್ದು, ಭಾನುವಾರದವರೆಗೆ ರೂಪಾಯಿ 403.40 ಕೋಟಿ ಮೌಲ್ಯದ ನಗದು ಮತ್ತು ವಸ್ತುಗಳನ್ನು ಆಯೋಗ ವಶಪಡಿಸಿಕೊಂಡಿದೆ. ಇಷ್ಟು ಪ್ರಮಾಣದಲ್ಲಿ ಇದೇ ಮೊದಲ ಬಾರಿಗೆ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದ್ದು, ಇದೊಂದು ದಾಖಲೆಯಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ರಾಜ್ಯದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. 14 ಲೋಕಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 26, ಶುಕ್ರವಾರ ಮತದಾನ ನಡೆಯಲಿದೆ. ಇನ್ನುಳಿದ 14 ಕ್ಷೇತ್ರಗಳಲ್ಲಿ ಮೇ 7ರಂದು ಮತದಾನ ನಡೆಯಲಿದೆ.

1.46 ಕೋಟಿ ಲೀಟರ್‌ ಮದ್ಯವನ್ನು ವಶಪಡಿಸಿಕೊಂಡಿರುವುದು ಈ ಬಾರಿಯ ಮತ್ತೊಂದು ವಿಶೇಷ. ವಿವಿಧ ಜಿಲ್ಲೆಗಳ ಪಾನೀಯ ನಿಗಮ ಮತ್ತು ಉಗ್ರಾಣ ನಿಗಮದ ಗೋದಾಮುಗಳಲ್ಲಿ ದಾಖಲೆಗಳಿಲ್ಲದೆ ಸಂಗ್ರಹಿಸಿದ್ದ ಅಪಾರ ಪ್ರಮಾಣದ ಮದ್ಯವನ್ನು ಚುನಾವಣಾ ಆಯೋಗ ವಶಪಡಿಸಿಕೊಂಡಿದೆ.

ಅಬಕಾರಿ ನಿಯಮಗಳನ್ನು ಉಲ್ಲಂಘಿಸಿದ ಮದ್ಯ ಮಾರಾಟಗಾರರು ಮತ್ತು ಸಾರ್ವಜನಿಕರ ವಿರುದ್ಧ 30,000 ಕ್ಕೂ ಹೆಚ್ಚು ಪ್ರಕರಣ ದಾಖಲಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ವರದಿ: ಎಚ್.ಮಾರುತಿ.ಬೆಂಗಳೂರು

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)