Bangalore News: ಬೆಂಗಳೂರಲ್ಲಿ 45 ದಿನಗಳಲ್ಲಿ ಶೇ.80 ರಷ್ಟು ಬಗೆಹರಿದ ನೀರಿನ ಸಮಸ್ಯೆ;450 ಜನರಿಗೆ ಬಿತ್ತು ದಂಡ
ನೀರಿನ ಸಮಸ್ಯೆ ನೀಗಿಸಲು ಜಲಮಂಡಳಿ ಕೈಗೊಂಡ ಹಲವಾರು ಕ್ರಮಗಳು ಫಲ ನೀಡಿದ್ದು. ಇವುಗಳನ್ನು ಮುಂದುವರೆಸಲು ತೀರ್ಮಾನಿಸಲಾಗಿದೆ.ವರದಿ: ಎಚ್.ಮಾರುತಿ, ಬೆಂಗಳೂರು
ಬೆಂಗಳೂರು: ಬೆಂಗಳೂರು ನಗರದಲ್ಲಿ ಉದ್ಭವಿಸಿದ್ದ ನೀರಿನ ಸಮಸ್ಯೆಯನ್ನು ಕಳೆದ 45 ದಿನಗಳಲ್ಲಿ ಶೇ.80ರಷ್ಟು ಬಗೆಹರಿಸಲಾಗಿದೆ. ಸಮಸ್ಯೆಗಳಿರುವ ಪ್ರದೇಶಗಳಲ್ಲಿ ನೀರು ಸರಬರಾಜು ಮಾಡಲು ಜಲ ಮಂಡಳಿ ಕಾರ್ಯಪ್ರವೃತ್ತವಾಗಿದೆ ಎಂದು ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ಹೇಳಿದ್ದಾರೆ. ಜಲಮಿತ್ರರಿಗಾಗಿ ಮಂಡಳಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿ,ಕಳೆದ ಮೂರು ತಿಂಗಳಿನಿಂದ ಸುಗಮ ಮತ್ತು ಸಮರ್ಪಕ ನೀರು ಸರಬರಾಜಿಗೆ ಕೈಗೊಂಡ ಕ್ರಮಗಳನ್ನು ಅವರು ವಿವರಿಸಿದರು.ಇದುವರೆಗೆ ಕಾವೇರಿ ನೀರನ್ನು ಅನ್ಯ ಉದ್ದೇಶಕ್ಕೆ ಬಳಸಿದ 450 ಸಾರ್ವಜನಿಕರಿಗೆ ದಂಡ ವಿಧಿಸಲಾಗಿದೆ. 5 ಲಕ್ಷ ನಲ್ಲಿಗಳಿಗೆ ಏರಿಯೇಟರ್ ಅಳವಡಿಸಲಾಗಿದೆ. ಕಳೆದ 15 ದಿವಸಗಳಲ್ಲಿ 15 ಕೆರೆಗಳನ್ನು ಸಂಸ್ಕರಿಸಿದ ನೀರಿನಿಂದ ಭರ್ತಿ ಮಾಡಲಾಗಿದೆ. ಸಾಕಷ್ಟು ಸುಧಾರಣೆಯಾಗಿದ್ದು, ಪರಿಸ್ಥಿತಿ ಸುಧಾರಿಸಿದೆ. ಇನ್ನಷ್ಟು ಸುಧಾರಿಸಲಿದೆ. ಮುಂದೆಯೂ ಇದೇ ರೀತಿಯ ಜಾಗೃತಿ ಚಟುವಟಿಕೆಗಳನ್ನು ಮಂಡಳಿ ರೂಪಿಸಲಿದೆ ಎಂದು ಹೇಳಿದರು.
ಬೆಂಗಳೂರು ನಗರದಲ್ಲಿ ಏರಿಯೇಟರ್ ಗಳನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಿದ ನಂತರ ಇದುವರೆಗೆ 5 ಲಕ್ಷ ನಲ್ಲಿಗಳಿಗೆ ಏರಿಯೇಟರ್ ಅಳವಡಿಸಲಾಗಿದೆ. ಏಪ್ರಿಲ್ 30 ವರೆಗೆ ಗಡುವು ನೀಡಲಾಗಿದೆ. ಇವುಗಳ ಅಳವಡಿಕೆಯಿಂದ ಶೇ.30 ರಷ್ಟು ನೀರಿನ ಉಳಿತಾಯ ಮಾಡಬಹುದಾಗಿದ್ದು, ಸಾರ್ವಜನಿಕರು ಹೆಚ್ಚಿನ ಆಸಕ್ತಿ ವಹಿಸಬೇಕು. ಸಾರ್ವಜನಿಕರ ಸಹಕಾರವಿಲ್ಲದೇ ಮಂಡಳಿ ಒಂದೇ ಏನನ್ನೂ ಮಾಡಲು ಆಗದು ಎನ್ನುವುದನ್ನು ಮೊದಲು ಜನರು ಅರಿಯಬೇಕು ಎಂದು ತಿಳಿಸಿದರು.
ಬೆಂಗಳೂರು ನಗರದಲ್ಲಿ ಈ ಮುಂಚೆ ನೀರಿನ ಮಟ್ಟ 400 ಮೀಟರ್ ಗೆ ಲಭ್ಯವಿತ್ತು. ಈಗ 1200 ಮೀಟರ್ ಕೊರೆಸಿದರೂ ನೀರು ಸಿಗುತ್ತಿಲ್ಲ ಎಂಬುದು ಆತಂಕಕಾರಿ ಸಂಗತಿಯಾಗಿದೆ. ಅಂತರ್ಜಲ ಮಟ್ಟವನ್ನು ಸುಧಾರಿಸುವ ಪ್ರಯತ್ನವಾಗಿ ಮಳೆನೀರು ಇಂಗಿಸಲು ಮುಂದಾಗಬೇಕು ಎಂದರು.
ಕಳೆದ 15 ದಿನಗಳಲ್ಲಿ 15 ಕೆರೆಗಳನ್ನು ಸಂಸ್ಕರಿಸಿದ ನೀರಿನಿಂದ ಭರ್ತಿ ಮಾಡಲಾಗಿದೆ. ಮುಂದಿನ ಒಂದು ವರ್ಷದಲ್ಲಿ 200 ಕೆರೆಗಳನ್ನು ತುಂಬಿಸುವ ಗುರಿ. ಹಾಕಿಕೊಂಡಿದ್ದು, ಇದಕ್ಕೆ ಜಲಮಿತ್ರರ ಸಹಕಾರ ಅಗತ್ಯವಾಗಿದೆ ಎಂದರು.
ಕೊಳಚೆ ಪ್ರದೇಶ, ಮತ್ತು ಮಧ್ಯಮ ವರ್ಗದ ಜನರು ವಾಸಿಸುತ್ತಿರುವ ಹಾಗೂ ಜನನಿಬೀಡ ಪ್ರದೇಶಗಳಲ್ಲಿ 1500 ಸಿಂಟೆಕ್ಸ್ ಗಳನ್ನು ಅಳವಡಿಸಲಾಗಿದ್ದು, ಪ್ರತಿನಿತ್ಯ 3 ಬಾರಿ ಟ್ಯಾಂಕರ್ ಗಳ ಮೂಲಕ ಸಿಂಟೆಕ್ಸ್ ಗಳಿಗೆ ನೀರು ತುಂಬಿಸಲಾಗುತ್ತಿದೆ ಎಂದು ಜಲ ಮಂಡಳಿ ಪ್ರಯತ್ನಗಳನ್ನು ವಿವರಿಸಿದರು.
ದೂರದ ಕಾವೇರಿಯಿಂದ ನಗರಕ್ಕೆ ಸರಬರಾಜು ಮಾಡುವ ನೀರಿನ ಸದ್ಬಳಕೆ ಬಹಳ ಮುಖ್ಯ. ಪೋಲಾಗುವ ಪ್ರತಿ 1000 ಲೀಟರ್ ನೀರಿನಿಂದ ಬೆಂಗಳೂರು ಜಲಮಂಡಳಿಗೆ ಸುಮಾರು 50 ರೂ.ಗಳಷ್ಟು ನಷ್ಟ ಉಂಟಾಗುತ್ತದೆ. ಈ ರೀತಿ ಪೋಲಾಗುವ ನೀರನ್ನು ಸಂಸ್ಕರಣೆ ಮಾಡಲು ಮತ್ತೆ ಹಣ ವ್ಯಯಿಸಬೇಕು. ಈ ಹೊರೆಯನ್ನು ತಪ್ಪಿಸಲು ನೀರು ಉಳಿತಾಯ, ಸಂಸ್ಕರಿಸಿದ ನೀರಿನ ಬಳಕೆ ಸೇರಿದಂತೆ ಪಂಚ ಸೂತ್ರಗಳನ್ನು ಅಳವಡಿಸಿಕೊಂಡರೆ ಮಾತ್ರ ಸಾಧ್ಯ ಎಂದು ಹೇಳಿದರು.
ನೀರು ಉಳಿತಾಯ, ಸಮರ್ಪಕ ಬಳಕೆ ಹಾಗೂ ಜಲಮಂಡಳಿ ಹಮ್ಮಿಕೊಳ್ಳುವ ಜನಜಾಗೃತಿಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಜಲಮಿತ್ರರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಕಳೆದ 30 ದಿನಗಳಲ್ಲಿ 9000 ಆಸಕ್ತ ಸಾರ್ವಜನಿಕರು ಜಲಮಿತ್ರರಾಗಲು ಮುಂದೆ ಬಂದಿದ್ದಾರೆ. ಇಂತಹ ಅರಿವು ಮೂಡಿಸುವ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಜಲಮಿತ್ರರಿಗೆ "ಬೆಂಗಳೂರು ಹೆಮ್ಮೆಯ ನಾಗರೀಕ" ಎಂಬ ಪ್ರಮಾಣ ಪತ್ರವನ್ನು ನೀಡಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
ವರದಿ: ಎಚ್. ಮಾರುತಿ, ಬೆಂಗಳೂರು
ವಿಭಾಗ