ಕಲ್ಲಂಗಡಿ ಹಣ್ಣು ತಿಂದು ಸಿಪ್ಪೆ ಯಾಕೆ ಎಂದು ಎಸೆಯದಿರಿ; ಮತ್ತೆ ಮತ್ತೆ ಸವಿಯಬೇಕೆನಿಸುವ 5 ವಿಭಿನ್ನ ಖಾದ್ಯಗಳ ನೀವೂ ತಯಾರಿಸಿ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಕಲ್ಲಂಗಡಿ ಹಣ್ಣು ತಿಂದು ಸಿಪ್ಪೆ ಯಾಕೆ ಎಂದು ಎಸೆಯದಿರಿ; ಮತ್ತೆ ಮತ್ತೆ ಸವಿಯಬೇಕೆನಿಸುವ 5 ವಿಭಿನ್ನ ಖಾದ್ಯಗಳ ನೀವೂ ತಯಾರಿಸಿ ನೋಡಿ

ಕಲ್ಲಂಗಡಿ ಹಣ್ಣು ತಿಂದು ಸಿಪ್ಪೆ ಯಾಕೆ ಎಂದು ಎಸೆಯದಿರಿ; ಮತ್ತೆ ಮತ್ತೆ ಸವಿಯಬೇಕೆನಿಸುವ 5 ವಿಭಿನ್ನ ಖಾದ್ಯಗಳ ನೀವೂ ತಯಾರಿಸಿ ನೋಡಿ

ಕಲ್ಲಂಗಡಿ ಹಣ್ಣನ್ನು ತಿಂದು ಸಿಪ್ಪೆಯ ಬಗ್ಗೆ ನಿರ್ಲಕ್ಷ್ಯ ತೋರುವವರೇ ಹೆಚ್ಚು. ಆದರೆ ಕಲ್ಲಂಗಡಿ ಹಣ್ಣಿನ ಸಿಪ್ಪೆಯಿಂದ ರುಚಿಕರ ಮಾತ್ರವಲ್ಲದೆ ಆರೋಗ್ಯಕ್ಕೂ ಉತ್ತಮವಾಗಿರುವ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಬಹುದು ಅನ್ನೋದು ಬಹುತೇಕರಿಗೆ ತಿಳಿದಿಲ್ಲ. ಹಾಗಿದ್ರೆ ಈ ಸುದ್ದಿ ನಿಮಗಾಗಿ.

ಕಲ್ಲಂಗಡಿ ಹಣ್ಣು ಸಿಪ್ಪೆಯ ವಿಭಿನ್ನ ಖಾದ್ಯಗಳ ನೀವೂ ತಯಾರಿಸಿ ನೋಡಿ
ಕಲ್ಲಂಗಡಿ ಹಣ್ಣು ಸಿಪ್ಪೆಯ ವಿಭಿನ್ನ ಖಾದ್ಯಗಳ ನೀವೂ ತಯಾರಿಸಿ ನೋಡಿ

ಬೇಸಿಗೆಕಾಲದಲ್ಲಿ ಬಾಯಾರಿಕೆ ತಣಿಸಲು ಕಲ್ಲಂಗಡಿ ಹಣ್ಣಿನ ಸೇವನೆ ತುಂಬಾ ಒಳ್ಳೆಯ ಆಯ್ಕೆ. ಕಲ್ಲಂಗಡಿ ಹಣ್ಣಿನಲ್ಲಿ ನೀರಿನ ಅಂಶವೂ ಹೆಚ್ಚಿಗೆ ಇರುವುದರಿಂದ ಬಾಯಾರಿಕೆಯನ್ನು ತಣಿಸುವುದರ ಜೊತೆಗೆ ಆರೋಗ್ಯಕ್ಕೂ ಇದು ಉತ್ತಮ. ಆದರೆ ಕಲ್ಲಂಗಡಿ ಹಣ್ಣು ತಿಂದ ನಂತರ ಅದರ ಸಿಪ್ಪೆಯನ್ನು ಬೇಡವೆಂದು ಹಸಿ ಕಸದೊಂದಿಗೆ ಸೇರಿಸುವವರ ಸಂಖ್ಯೆಯೇ ಹೆಚ್ಚು. ಆದರೆ ಕಲ್ಲಂಗಡಿ ಹಣ್ಣು ಮಾತ್ರವಲ್ಲದೆ ಅದರ ಸಿಪ್ಪೆಯನ್ನೂ ನಾವು ಬಳಕೆ ಮಾಡಬಹುದು ಅನ್ನೋದು ನಿಮಗೆ ಗೊತ್ತಾ? ಹೌದು, ಕಲ್ಲಂಗಡಿ ಹಣ್ಣಿನ ಸಿಪ್ಪೆಯಿಂದಲೂ ಅನೇಕ ತಿನಿಸುಗಳನ್ನು, ಪದಾರ್ಥಗಳನ್ನು ಮಾಡಬಹುದು. ಅವು ಯಾವುವು? ಅವುಗಳನ್ನು ತಯಾರಿಸುವ ವಿಧಾನ ಹೇಗೆ ಎಂಬುದರ ಮಾಹಿತಿ ಇಲ್ಲಿದೆ.

ಕಲ್ಲಂಗಡಿ ಹಣ್ಣಿನ ಸಿಪ್ಪೆಯಿಂದ ರುಚಿಕರವಾದ ದೋಸೆ

ಬೇಕಾಗುವ ಸಾಮಗ್ರಿ: 3 ಲೋಟ ದೋಸೆ ಅಕ್ಕಿ, ಅರ್ಧ ಕೆಜಿ ಕಲ್ಲಂಗಡಿ ಹಣ್ಣಿನ ಸಿಪ್ಪೆ, ತೆಂಗಿನ ತುರಿ 1 ಕಪ್‌, ರುಚಿಗೆ ತಕ್ಕಷ್ಟು ಉಪ್ಪು

ತಯಾರಿಸುವ ವಿಧಾನ: 3 ಲೋಟ ದೋಸೆ ಅಕ್ಕಿಯನ್ನು 1 ಗಂಟೆ ಕಾಲ ನೀರಲ್ಲಿ ನೆನೆಸಿಟ್ಟುಕೊಳ್ಳಿ. ನಂತರ ಅದನ್ನು ನೀರಿನಿಂದ ಬೇರ್ಪಡಿಸಿಕೊಳ್ಳಿ. ಅದಕ್ಕೆ ಕಲ್ಲಂಗಡಿ ಹಣ್ಣಿನ ಹೊರಭಾಗದ ಹಸಿರು ಸಿಪ್ಪೆಯನ್ನು ತೆಗೆದು, ಒಳಗಿನ ಬಿಳಿ ಭಾಗವನ್ನು ಚಿಕ್ಕ ಭಾಗಗಳಾಗಿ ತುಂಡರಿಸಿಟ್ಟುಕೊಳ್ಳಿ. ಅಕ್ಕಿ ಮತ್ತು ಕಲ್ಲಂಗಡಿ ಸಿಪ್ಪೆಗೆ ತುರಿದಿಟ್ಟ 1 ಕಪ್‌ ತೆಂಗಿನಕಾಯಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ದೋಸೆಯ ಹದಕ್ಕೆ ರುಬ್ಬಿಕೊಳ್ಳಿ. ಅರ್ಧ ಗಂಟೆಗಳ ಕಾಲ ಹಿಟ್ಟು ಚೆನ್ನಾಗಿ ಮಿಶ್ರವಾಗಲು ಬಿಡಿ. ನಂತರ ಉಳಿದ ದೋಸೆಯನ್ನು ಮಾಡುವ ವಿಧದಲ್ಲಿ ದೋಸೆ ತಯಾರಿಸಿಕೊಳ್ಳಿ. ಆರೋಗ್ಯಕರ ಹಾಗೂ ರುಚಿಕರವಾದ ಕಲ್ಲಂಗಡಿ ಹಣ್ಣಿನ ಸಿಪ್ಪೆಯ ದೋಸೆಯನ್ನು ನೀವೂ ಸವಿಯಬಹುದು.

ಕಲ್ಲಂಗಡಿ ಹಣ್ಣಿನ ಸಿಪ್ಪೆಯಿಂದ ಓಡು ಪಲ್ಯ

ಬೇಕಾಗುವ ಸಾಮಗ್ರಿಗಳು: ಅರ್ಧ ಕೆಜಿ ಕಲ್ಲಂಗಡಿ ಹಣ್ಣಿನ ಸಿಪ್ಪೆ, 2 ಚಮಚ ತೆಂಗಿನ ತುರಿ, ಮೆಣಸಿನ ಹುಡಿ (ಖಾರಕ್ಕೆ ಬೇಕಾದಷ್ಟು), ಅರಿಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಚಮಚ ಬೆಲ್ಲ, ಒಗ್ಗರಣೆಗೆ ಸಾಸಿವೆ, ಉದ್ದಿನಬೇಳೆ, ಕಡ್ಲೆಬೇಳೆ, ಇಂಗು (ಒಂದು ಚಿಟಿಕೆ) ಹಾಗೂ ಕರಿಬೇವಿನ ಸೊಪ್ಪು, ಎಣ್ಣೆ 2 ಚಮಚ.

ತಯಾರಿಸುವ ವಿಧಾನ: ಬಾಣಲೆಗೆ 2 ಚಮಚ ಎಣ್ಣೆ ಹಾಕಿ ಒಗ್ಗರಣೆಗೆ ಬೇಕಾದ ಸಾಸಿವೆ, ಉದ್ದಿನಬೇಳೆ, ಕಡ್ಲೆಬೇಳೆ ಹಾಗೂ ಕರಿಬೇವಿನ ಸೊಪ್ಪನ್ನು ಹಾಕಿಕೊಳ್ಳಿ, ಸಾಸಿವೆ ಸಿಡಿದು, ಉದ್ದಿನಬೇಳೆ ಬಣ್ಣ ಬದಲಿದ ನಂತರ ಕಲ್ಲಂಗಡಿ ಹಣ್ಣಿನ ಹೊಸಗಿನ ಹಸಿರು ಭಾಗವನ್ನು ಪ್ರತ್ಯೇಕಿಸಿ, ಬರಿಯ ಬಿಳಿ ಭಾಗವನ್ನು ಪಲ್ಯಕ್ಕೆ ಬೇಕಾದಂತೆ ಸಣ್ಣಗೆ ಹೆಚ್ಚಿಕೊಂಡು ಒಗ್ಗರಣೆಗಿಟ್ಟ ಬಾಣಲೆಗೆ ಹಾಕಿಕೊಳ್ಳಿ. ಇದಕ್ಕೆ ಉಪ್ಪು, ಬೆಲ್ಲ, ಮೆಣಸಿನ ಪುಡಿ, ಅರಿಶಿನ ಪುಡಿಯನ್ನೂ ಹಾಕಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ನಂತರ ಬೇಯಲು 10 ನಿಮಿಷಗಳ ಕಾಲ ಬಿಡಿ. ಬೆಂದ ನಂತರ ಇದಕ್ಕೆ ತೆಂಗಿನ ತುರಿಯನ್ನು ಹಾಕಿಕೊಂಡರೆ ಊಟದ ಜೊತೆಗೆ ಸವಿಯಲು ಕಲ್ಲಂಗಡಿ ಓಡಿನ ಪಲ್ಯ ಸಿದ್ಧವಾಗುತ್ತದೆ.

ಕಲ್ಲಂಗಡಿ ಸಿಪ್ಪೆಯಿಂದ ಕೂಟ್ಟ್‌

ಬೇಕಾಗುವ ಸಾಮಗ್ರಿಗಳು: ಕಲ್ಲಂಗಡಿ ಹಣ್ಣಿನ ಸಿಪ್ಪೆ ಅರ್ಧ ಕೆಜಿ, 1 ಕಪ್‌ ತೊಗರಿ ಬೇಳೆ, 1 ಕಪ್‌ ಹೆಸರು ಬೇಳೆ, ತೆಂಗಿನ ತುರಿ 1 ಕಪ್‌, ಒಣಮೆಣಸು 3-4, ಜೀರಿಗೆ 1 ಚಮಚ, 2 ಚಮಚ ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಕರಿಬೇವಿನ ಸೊಪ್ಪು.

ಇದನ್ನೂ ಓದಿ | Onion Benefits: ಬೇಸಿಗೆ ಉರಿಗೆ ಈರುಳ್ಳಿ ಮದ್ದು, ಪ್ರತಿದಿನ ಈರುಳ್ಳಿ ಬಳಸಿದರೆ ಆರೋಗ್ಯಕ್ಕೆ ಹಲವು ಲಾಭ

ತಯಾರಿಸುವ ವಿಧಾನ: ಕಲ್ಲಂಗಡಿ ಹಣ್ಣಿನ ಹೊರಭಾಗದ ಸಿಪ್ಪೆ ತೆಗೆದು, ಬಿಳಿ ಭಾಗವನ್ನಷ್ಟು ಉಳಿಸಿ, ಅದನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ. ತೊಗರಿಬೇಳೆ ಹಾಗೂ ಹೆಸರುಬೇಳೆಯನ್ನು ಅರ್ಧ ಗಂಟೆಯ ಕಾಲ ನೀರಿನಲ್ಲಿ ನೆನೆಸಿಡಿ. ಮತ್ತೊಂದೆಡೆ ತೆಂಗಿನ ತುರಿ, ಒಣ ಮೆಣಸು ಹಾಗೂ ಜೀರಿಗೆಯನ್ನು ಹಾಕಿ ರುಬ್ಬಿಟ್ಟುಕೊಳ್ಳಿ. ಈಗ ಕುಕ್ಕರ್‌ನಲ್ಲಿ ಎಣ್ಣೆ ಬಿಸಿಗಿಟ್ಟು ಒಗ್ಗರಣೆ ಹಾಕಿಕೊಂಡು ತೊಳೆದಿಟ್ಟ ಕಲ್ಲಂಗಡಿ ಹಣ್ಣಿನ ಸಿಪ್ಪೆ, ನೀರಿನಲ್ಲಿ ನೆನೆಸಿಟ್ಟ ತೊಗರಿಬೇಳೆ, ಹೆಸರುಬೇಳೆಯನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ ಪುಡಿ ಹಾಕಿ 2 ವಿಸಿಲ್‌ ಕೂಗಿಸಿಕೊಳ್ಳಿ. ಇದಕ್ಕೆ ರುಬ್ಬಿಟ್ಟುಕೊಂಡ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಒಂದು ಕುದಿ ಬರಲು ಬಿಡಿ. ಅನ್ನದ ಜೊತೆಗೆ ದೋಸೆ ಇಲ್ಲವೇ ಚಪಾತಿಯ ಜೊತೆಗೂ ಸೇರಿಸಿಕೊಳ್ಳಲು ಕಲ್ಲಂಗಡಿ ಹಣ್ಣಿನ ಸಿಪ್ಪೆಯ ಕೂಟ್ಟ್‌ ಸಿದ್ಧವಾಗುತ್ತದೆ.

ಕಲ್ಲಂಗಡಿ ಹಣ್ಣಿನ ಸಿಪ್ಪೆಯಿಂದ ತಾಳಿಪಟ್ಟು

ಬೇಕಾಗುವ ಸಾಮಗ್ರಿಗಳು: 1 ಕಪ್‌ ತುರಿದಿಟ್ಟ ಕಲ್ಲಂಗಡಿ ಹಣ್ಣಿನ ಬಿಳಿ ಭಾಗದ ಸಿಪ್ಪೆ, 2 ಕಪ್‌ ಗೋಧಿ ಹುಡಿ, 1 ಕಪ್‌ ಅಕ್ಕಿ ಹುಡಿ, ಅರ್ಧ ಕಪ್‌ ಜೋಳದ ಹುಡಿ, ಅರ್ಧ ಕಪ್‌ ಕಡಲೇಹುಡಿ, ರುಚಿಗೆ ತಕ್ಕಷ್ಟು ಬೆಲ್ಲದ ಹುಡಿ ಹಾಗೂ ಉಪ್ಪು

ತಯಾರಿಸುವ ವಿಧಾನ: ಕಲ್ಲಂಗಡಿ ಹಣ್ಣಿನ ಬಿಳಿ ಭಾಗದ ಸಿಪ್ಪೆಯನ್ನು ತುರಿದಿಟ್ಟುಕೊಳ್ಳಿ. ಇದಕ್ಕೆ ಅಳತೆಯಂತೆ ತೆಗಿದಿಟ್ಟ ಗೋಧಿ ಹುಡಿ, ಅಕ್ಕಿ ಹುಡಿ, ಜೋಳದ ಹುಡಿ ಹಾಗೂ ಬೇಸನ್‌ ಸೇರಿಸಿ ಉಪ್ಪು ಹಾಗೂ ಬೆಲ್ಲದ ಹುಡಿ ಹಾಕಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ನೀರು ಸೇರಿಸಿ ರೊಟ್ಟಿ ಹಿಟ್ಟಿನ ಹದಕ್ಕೆ ಬರುವಂತೆ ಮಾಡಿಕೊಂಡು, ಮೇಲಿನಿಂದ ಎಣ್ಣೆ ಹಾಕಿಕೊಳ್ಳಿ. ನಂತರ ತವಾದಲ್ಲಿ 1 ಚಮಚ ಎಣ್ಣೆ ಹಾಕಿಕೊಂಡು ಕೈಯಿಂದಲೇ ಹಿಟ್ಟನ್ನು ತವಾದ ಮೇಲೆ ತಟ್ಟಿಕೊಳ್ಳಿ. ಮಧ್ಯೆ ತೂತು ಮಾಡಿಕೊಂಡು ಎರಡು ಕಡೆಗಳಲ್ಲೂ ಚೆನ್ನಾಗಿ ಬೇಯಿಸಿಕೊಳ್ಳಿ. ರುಚಿಕರ, ಆರೋಗ್ಯಕರವಾದ ಕಲ್ಲಂಗಡಿ ಹಣ್ಣಿನ ಸಿಪ್ಪೆಯ ತಾಳಿಪಟ್ಟು ತಿನ್ನಲು ಸಿದ್ಧ.

ಕಲ್ಲಂಗಡಿ ಹಣ್ಣಿನ ಸಿಪ್ಪೆಯಿಂದ ಖಾರವಾದ ಚಟ್ನಿ

ಬೇಕಾಗುವ ಸಾಮಗ್ರಿಗಳು: ಕಲ್ಲಂಗಡಿ ಹಣ್ಣಿನ ಸಿಪ್ಪೆಯ ಬಿಳಿ ಭಾಗ 1 ಕಪ್‌, ಸಾಸಿವೆ 1 ಚಮಚ, ಜೀರಿಗೆ 1 ಚಮಚ, ಕೊತ್ತಂಬರಿ ಬೀಜ 2 ಚಮಚ, ಬಿಳಿ ಎಳ್ಳು ಅರ್ಧ ಚಮಚ, ಕಡ್ಲೆಬೀಜ 3 ಚಮಚ, ಒಣ ಮೆಣಸು 3-4, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ: ಕಲ್ಲಂಗಡಿ ಹಣ್ಣಿನ ಸಿಪ್ಪೆಯ ಬಿಳಿ ಭಾಗವನ್ನು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಹಾಕಿಕೊಂಡು ಅದನ್ನು ಚೆನ್ನಾಗಿ ಹುರಿದುಕೊಳ್ಳಿ. ಇನ್ನೊಂದು ಕಡೆ ತವಾದಲ್ಲಿ ಸಾಸಿವೆ, ಜೀರಿಗೆ, ಕೊತ್ತಂಬರಿ ಬೀಜ, ಬಿಳಿ ಎಳ್ಳು ಹಾಗೂ ಕಡ್ಲೆ ಬೀಜಗಳನ್ನು ಸೇರಿಸಿ ಒಣಮೆಣಸಿನೊಂದಿಗೆ ಹುರಿದುಕೊಂಡಿರಿ. ಇದು ತಣ್ಣಗಾದ ಮೇಲೆ ಕಲ್ಲಂಗಡಿ ಸಿಪ್ಪೆಯೊಂದಿಗೆ ಸೇರಿಸಿ ರುಚಿಗೆ ಬೇಕಾದಷ್ಟು ಉಪ್ಪು ಹಾಕಿಕೊಂಡು ರುಬ್ಬಿಕೊಂಡರೆ ಖಾರಖಾರವಾದ ಚಟ್ನಿಯನ್ನು ಸವಿಯಬಹುದು.

ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು ಮನೆಗೆ ತಂದರೆ ತಪ್ಪದೇ ಈ ಖಾದ್ಯಗಳನ್ನು ಮನೆಯಲ್ಲೊಮ್ಮೆ ತಯಾರಿಸಿಕೊಳ್ಳಿ. ಒಮ್ಮೆ ಇದರ ರುಚಿ ಸಿಕ್ಕಿದರೆ ಮತ್ತೆ ಮತ್ತೆ ಇದನ್ನೇ ತಯಾರಿಸಿ ತಿನ್ನಬೇಕೆನ್ನಿಸುವುದು ಖಂಡಿತಾ.

Whats_app_banner