Jaggesh wedding Anniversary: ದಾರಿ ಕಾಣದೆ ಕುಳಿತಾಗ ಕಣ್ಣಿಗೆ ಬಿದ್ದಳು ಪರಿಮಳಾ!; ಮದುವೆ ಆ್ಯನಿವರ್ಸರಿ ದಿನ ಹಳೇ ನೆನಪಿಗೆ ಜಾರಿದ ಜಗ್ಗೇಶ್
ಕನ್ನಡ ಸುದ್ದಿ  /  ಮನರಂಜನೆ  /  Jaggesh Wedding Anniversary: ದಾರಿ ಕಾಣದೆ ಕುಳಿತಾಗ ಕಣ್ಣಿಗೆ ಬಿದ್ದಳು ಪರಿಮಳಾ!; ಮದುವೆ ಆ್ಯನಿವರ್ಸರಿ ದಿನ ಹಳೇ ನೆನಪಿಗೆ ಜಾರಿದ ಜಗ್ಗೇಶ್

Jaggesh wedding Anniversary: ದಾರಿ ಕಾಣದೆ ಕುಳಿತಾಗ ಕಣ್ಣಿಗೆ ಬಿದ್ದಳು ಪರಿಮಳಾ!; ಮದುವೆ ಆ್ಯನಿವರ್ಸರಿ ದಿನ ಹಳೇ ನೆನಪಿಗೆ ಜಾರಿದ ಜಗ್ಗೇಶ್

ದಾರಿ ಕಾಣದೇ ಹರಟುತ್ತಾ ಕೂತಾಗ ಕಣ್ಣಿಗೆ ಬಿದ್ದವಳೇ 9ನೇ ತರಗತಿ ಓದುತ್ತಿದ್ದ ಪರಿಮಳಾ. ಸಾಮಾನ್ಯ ನೋಟ, ಪ್ರೀತಿಗೆ ತಿರುಗಿ ಮದುವೆಯವರೆಗೂ ಹೋಯಿತು. ನಂತರ ಕುಟುಂಬದ ವ್ಯಾಜ್ಯ, ಪೊಲೀಸ್ ಸ್ಟೇಷನ್, ನಂತರ ಸುಪ್ರೀಂ ಕೋರ್ಟ್‌..

ದಾರಿ ಕಾಣದೆ ಕುಳಿತಾಗ ಕಣ್ಣಿಗೆ ಬಿದ್ದಳು ಪರಿಮಳಾ!; ಮದುವೆ ಆ್ಯನಿವರ್ಸರಿ ದಿನ ಹಳೇ ನೆನಪಿಗೆ ಜಾರಿದ ಜಗ್ಗೇಶ್‌
ದಾರಿ ಕಾಣದೆ ಕುಳಿತಾಗ ಕಣ್ಣಿಗೆ ಬಿದ್ದಳು ಪರಿಮಳಾ!; ಮದುವೆ ಆ್ಯನಿವರ್ಸರಿ ದಿನ ಹಳೇ ನೆನಪಿಗೆ ಜಾರಿದ ಜಗ್ಗೇಶ್‌ (Instagram/Jaggesh)

Jaggesh wedding Anniversary: ಸ್ಯಾಂಡಲ್‌ವುಡ್‌ನ ನವರಸ ನಾಯಕ ಜಗ್ಗೇಶ್‌ಗೆ ಮಾರ್ಚ್‌ ತಿಂಗಳು ತುಂಬ ವಿಶೇಷ. ಬರ್ತ್‌ಡೇ ಜತೆಗೆ ಮದುವೆ ವಾರ್ಷಿಕೋತ್ಸವದ ತಿಂಗಳೂ ಇದೇ ಮಾರ್ಚ್‌! ಇತ್ತೀಚೆಗಷ್ಟೇ ಅದ್ದೂರಿಯಾಗಿ ಆಪ್ತರು, ಅಭಿಮಾನಿಗಳ ಸಮ್ಮುಖದಲ್ಲಿ 60ನೇ ಬರ್ತ್‌ಡೇ ಆಚರಿಸಿಕೊಂಡಿದ್ದ ಜಗ್ಗೇಶ್‌, ಇದೀಗ ವಿವಾಹ ವಾರ್ಷಿಕೋತ್ಸವದ ದಿನವನ್ನೂ ಸಂಭ್ರಮಿಸಿದ್ದಾರೆ. ಪತ್ನಿ ಪರಿಮಳ ಜತೆಗಿನ 39 ವರ್ಷದ ಪ್ರಯಾಣವನ್ನು ನೆನೆಪು ಮಾಡಿಕೊಂಡಿದ್ದಾರೆ. 1982ರ ಕಾಲಘಟ್ಟಕ್ಕೆ ಮತ್ತೆ ಜಾರಿದ್ದಾರೆ..

ಜಗ್ಗೇಶ್‌ ಬರೆದ ಬರಹ ಇಲ್ಲಿದೆ...

"1982, ಶ್ರೀರಾಮಪುರ 7ನೇ ಮುಖ್ಯ ರಸ್ತೆ, 2ನೇ ಅಡ್ಡ ರಸ್ತೆ, ಟೇಲರ್ ಶಿವ ಹಾಗೂ ಅಂತೋನಿ ಗ್ಯಾರೇಜ್ (ಈಗಲೂ ಅಲ್ಲೇ ಇದೆ) ನನ್ನ ಯೌವ್ವನದ ಅಡ್ಡ. ನನ್ನ ಸಹಪಾಠಿಗಳು 'ನನ್ನಾಸೆಯ ಹೂವೆ' ಚಿತ್ರದ ಛಾಯಾಗ್ರಾಹಕ ಜೆ ಜಿ ಕೃಷ್ಣ, ದಿವಂಗತ ಮೇಕಪ್ ಮಲ್ಲಿ, 'ಭಂಡ ನನ್ನ ಗಂಡ' ನಿರ್ದೇಶಕ ರಾಜ್ ಕಿಶೋರ್, ಶಂಕರ್ ನಾಗ್ ಸ್ಟುಡಿಯೋ ಇಂಜಿನಿಯರ್. ಆಗ ನಾವೆಲ್ಲಾ ದಾರಿ ಕಾಣದೆ ಪರಿತಪಿಸುತ್ತಿದ್ದ ಯುವಕರು! ಇವರು ಯಾರೂ ಸಿಗದೆ ಇದ್ದಾಗ ನನ್ನ ಬಾಲ್ಯ ಗೆಳೆಯ ('ನಿಜ' ಚಿತ್ರದ ನಿರ್ಮಾಪಕ) ರವಿ ಅನಾಸಿನ್ ಶಂಕರ್ ರೆಡ್ಡಿ (ಇಂದು ಎತ್ತರದ ಉದ್ಯಮಿ), ಅವನ ತಮ್ಮ ಪಿಲ್ಲಿ ಅಲಿಯಾಸ್ ಕೃಷ್ಣ ನನ್ನ ಟೈಮ್ ಪಾಸ್ ಸ್ನೇಹಿತರು.

ಕಣ್ಣಿಗೆ ಬಿದ್ದಳು 9ನೇ ತರಗತಿಯ ಪರಿಮಳಾ...

ಇವರ ಜೊತೆ ಹರಟುತ್ತಾ ಕೂತಾಗ ಕಣ್ಣಿಗೆ ಬಿದ್ದವಳೇ 9ನೇ ತರಗತಿ ಓದುತ್ತಿದ್ದ ಪರಿಮಳಾ. ಸಾಮಾನ್ಯ ನೋಟ, ಪ್ರೀತಿಗೆ ತಿರುಗಿ ಮದುವೆಯವರೆಗೂ ಹೋಯಿತು. ನಂತರ ಕುಟುಂಬದ ವ್ಯಾಜ್ಯ, ಪೊಲೀಸ್ ಸ್ಟೇಷನ್, ನಂತರ ಸುಪ್ರೀಂ ಕೋರ್ಟ್‌.. ಆರು ತಿಂಗಳು ದೆಹಲಿಯ ಕೋರ್ಟ್‌ಗೆ ಓಡಾಟ. ನಂತರ ಮುಖ್ಯ ನ್ಯಾಯಾಧೀಶರು ಭಗವತಿ ಅವರಿಂದ ಒಟ್ಟಿಗೆ ಬದುಕಬಹುದು ಎಂಬ ತೀರ್ಪು. ನಂತರ ಮಾಯಸಂದ್ರ ಪಕ್ಕದ ಗ್ರಾಮ ಆನಡಗುವಿನಲ್ಲಿ ಸಂಸಾರ ಶುರು. ಸಿನಿಮಾಗಾಗಿ ಅಪ್ಪನ ಜೊತೆ ಮನಸ್ತಾಪ. ಮನೆಯಿಂದ ಗೇಟ್‌ಪಾಸ್.. ನಂತರ ಶುರುವಾಯಿತು ಬದುಕು ಕಟ್ಟಿಕೊಳ್ಳಲು ರೋಚಕ ಹೋರಾಟ. ಇದ್ದದ್ದು ತಿನ್ನು, ಪುಟ್ಟ ಮನೆಯಲ್ಲಿ ರಾಜ ರಾಣಿಯ ಭ್ರಮೆಯ ಬದುಕು. ಅಬ್ಬಾ, ಯಾವ ಶತ್ರುವಿಗು ಬೇಡ ನಾನು ಪಟ್ಟ ಶ್ರಮ.

ಬದುಕು ಬದಲಾಯಿತು...

ರಾಯರ ಕೃಪೆ ಸಾಧಾರಣ ಜೂನಿಯರ್ ಕಲಾವಿದನಾಗಿದ್ದ ನಾನು, ದಾಪು ಹೆಜ್ಜೆ ಹಾಕಿ ಕನ್ನಡಿಗರ ಚಪ್ಪಾಳೆ ಸನ್ಮಾನ ಪಡೆದು ರಾಜಣ್ಣ, ವಿಷ್ಣು ಸಾರ್, ಅಂಬಿ ಸಾರ್, ಪ್ರಭಾಕರ್ ಸಾರ್, ಶಂಕರ್ ನಾಗ್ ಸಾರ್, ರವಿ ಸಾರ್ ಆಳುತ್ತಿದ್ದ ಸಿನಿಮಾ ಕಾಲದಲ್ಲಿ ಎಲ್ಲರ ಪ್ರೀತಿ ಹಾರೈಕೆಯಿಂದ ಸಿನಿಮಾ ಬದುಕು ಗೆದ್ದು ನವರಸ ನಾಯಕನಾಗಿ, ರಾಜಕೀಯದಲ್ಲಿ ಎಂಎಲ್‌ಎ/ ಎಂಎಲ್‌ಸಿ ಆಗಿ, ಇಂದು ವಿಶ್ವನಾಯಕ ನರೇಂದ್ರ ಮೋದಿ ಸಾರ್ ಜೊತೆ ರಾಜ್ಯಸಭೆಯ ಎಂಪಿ ಆಗಿರುವೆ. ಆ ದಿನಗಳು ಸಾಧನೆ, ದುಡಿಮೆ ಇಲ್ಲದಿದ್ದರೂ, ನನ್ನ ಗಂಡನೇ ನನ್ನ ರಾಜಕುಮಾರ ಅಂಥ ಪ್ರೀತಿಸಿ ಇದ್ದುದ್ದರಲ್ಲೇ ಸಂಸಾರ ತೂಗಿಸಿ, ಬದುಕು ಗೆಲ್ಲಲು ಸಹಕರಿಸಿದ್ದು ನನ್ನ ಹೆಮ್ಮೆಯ ಮಡದಿ ಪರಿಮಳ..

ನೀವೇ ನಮ್ಮನ್ನು ಹರಸಬೇಕು..

10ನೇ ಕ್ಲಾಸ್ ಓದಿದ ಪರಿಮಳಾಳನ್ನು, ಅವಳು ಓದುವವರೆಗೂ ಓದಿಸಿ, ಇಂದು ಅದ್ಭುತ ಸಾಧಕಿ ಮಾಡಿರುವೆ. ಮಡದಿ ಪರಿಮಳಾ ಮತ್ತು ನಾನು ಮದುವೆಯಾಗಿ ಇಂದಿಗೆ 39ವರ್ಷ.. ಮದುವೆ ಆಗುವುದು ದೊಡ್ಡದಲ್ಲಾ. ಸಂಸಾರ ತೂಗಿಸಿ ಸಪ್ತಪದಿ ತುಳಿದಾಗಿನಿಂದ ಕೊನೆಯವರೆಗೂ ಪ್ರೀತಿ, ನಂಬಿಕೆ, ವಿಶ್ವಾಸ, ಸಹನೆ, ತಾಳ್ಮೆ ಕಡಿಮೆಯಾಗದಂತೆ ಬಾಳಬೇಕು. ಆಗ ಸಂಬಂಧ ಶ್ರೇಷ್ಠವಾಗಿ ಉಳಿಯತ್ತದೆ ಅನ್ಯರಿಗೂ ಮಾದರಿಯಾಗುತ್ತದೆ. ನಮ್ಮ ಮದುವೆಗೆ ಇಂದು 39ವರ್ಷ. ನನ್ನ ಬಂಧುಗಳು ನೀವೆ ಕನ್ನಡಿಗರು.. ನೀವೆ ನಮ್ಮ ಹರಸಬೇಕು. ರಾಯರ ಕಾರುಣ್ಯ, ನಮ್ಮ ನಿಮ್ಮ ಮೇಲಿರಲಿ ಎಂದು ಪ್ರಾರ್ಥನೆ..

Whats_app_banner