Master Manjunath: ಶಂಕರ್ ನಾಗ್ ಹೆಸರಲ್ಲಿ ಆಟೋ, ಟ್ಯಾಕ್ಸಿ ನಿಲ್ದಾಣ ನಿರ್ಮಾಣ; ಮಾಸ್ಟರ್ ಮಂಜುನಾಥ್ ನೀಡಿದ ಪ್ರತಿಕ್ರಿಯೆ ಹೀಗಿತ್ತು..
ರಾಜ್ಯ ಸರ್ಕಾರ ಈ ಸಲದ ಬಜೆಟ್‌ನಲ್ಲಿ ಶಂಕರ್‌ನಾಗ್ ಅವರನ್ನು ನೆನಪಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ‘ಆಟೋರಾಜ’ನ ಜತೆ ಗುರುತಿಸಿಕೊಂಡ ಮಾಸ್ಟರ್ ಮಂಜುನಾಥ್ ಪ್ರತಿಕ್ರಿಯಿಸಿದ್ದಾರೆ.
Master Manjunath on Karnataka Budget 2023: ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ಶುಭ ಶುಕ್ರವಾರದಂದು ಮಂಡನೆಯಾಗಿದೆ. ಚುನಾವಣೆ ಸಮಯವಾದ್ದರಿಂದ ಬಹುತೇಕ ಎಲ್ಲ ವರ್ಗದವರನ್ನು ತೃಪ್ತಿಪಡಿಸಲು ಸಿಎಂ ಬಸವರಾಜ ಬೊಮ್ಮಾಯಿ ನಿರ್ಧರಿಸಿದಂತೆ ತೋರುತ್ತಿದೆ ಈ ಬಾರಿಯ ಬಜೆಟ್. ಆದರೆ, ದೇಶವ್ಯಾಪಿ ಹೆಸರು ಮಾಡುತ್ತಿರುವ ಕನ್ನಡ ಚಿತ್ರೋದ್ಯಮಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಯಾವುದೇ ಮಹತ್ತರ ಕೊಡುಗೆಗಳು ಸಿಕ್ಕಿಲ್ಲ. ಹಲವು ವರ್ಷದ ಫಿಲಂ ಸಿಟಿ ನಿರ್ಮಾಣದ ಬೇಡಿಕೆಗೆ ಬಗ್ಗೆ ಸಿಎಂ ಮಾತನಾಡಿಲ್ಲ. ಈ ನಡುವೆ ಶಂಕರ್‌ನಾಗ್ ಅವರ ಹೆಸರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಕೆಲಸ ಮಾಡಿದ್ದಾರೆ.
ಹೌದು, ಶಂಕರ್‌ನಾಗ್ ನಮ್ಮ ನಡುವೆ ಇಲ್ಲವಾಗಿ ಮೂರು ದಶಕದ ಮೇಲಾಯಿತು. ಇಂದಿಗೂ ಅವರಿಗೆ ಅಪಾರ ಪ್ರಮಾಣದ ಅಭಿಮಾನಿಗಳಿದ್ದಾರೆ. ಅವರನ್ನ ಆರಾಧಿಸುವ ಫ್ಯಾನ್ಸ್‌ಗಳಿದ್ದಾರೆ. ಅದರಲ್ಲೂ ಆಟೋ ಚಾಲಕರಿಗೂ ಶಂಕರ್‌ನಾಗ್‌ಗೂ ಅವಿನಾಭಾವ ಸಂಬಂಧ. ಇಂದಿಗೂ ರಾಜ್ಯದ ಹಲವೆಡೆಗಳಲ್ಲಿ ಆಟೋ ಸಂಘಗಳಿಗೆ ಆಟೋರಾಜ ಶಂಕರ್‌ನಾಗ್ ಅವರ ಹೆಸರಿದೆ. ಹೀಗಿರುವಾಗ ಸರ್ಕಾರ ಶಂಕರ್‌ನಾಗ್ ಹೆಸರಿನಲ್ಲಿ ಆಟೋ, ಟ್ಯಾಕ್ಸಿ ನಿಲ್ದಾಣ ನಿರ್ಮಾಣ ವಿಚಾರವನ್ನು ಬಜೆಟ್‌ನಲ್ಲಿ ಘೋಷಿಸಿದ್ದು, ಅಭಿಮಾನಿವಲಯದಲ್ಲಿ ಸಂತಸ ಮನೆ ಮಾಡಿದೆ.
ಇತ್ತ ಶಂಕರ್‌ನಾಗ್ ಅವರೊಂದಿಗೆ ತಮ್ಮ ಬಾಲ್ಯವನ್ನು ಕಳೆದಿರುವ ನಟ ಮಾಸ್ಟರ್ ಮಂಜುನಾಥ್ ಸರ್ಕಾರದ ಈ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. "ಬಜೆಟ್ ಘೋಷಣೆ: 2023-24 - ಕನ್ನಡದ ಖ್ಯಾತ ನಟ ದಿವಂಗತ ಶ್ರೀ ಶಂಕರನಾಗ್ ಅವರ ಹೆಸರಿನಲ್ಲಿ ನಗರ ಮತ್ತು ಪಟ್ಟಣಗಳಲ್ಲಿ ಖಾಲಿ ನಿವೇಶನಗಳನ್ನು ಗುರುತಿಸಿ ಟ್ಯಾಕ್ಸಿ ಮತ್ತು ಆಟೋ ನಿಲ್ದಾಣಗಳನ್ನು ನಿರ್ಮಿಸಲಾಗುವುದು. ಮುಖ್ಯಮಂತ್ರಿ ಶ್ರೀ. ಬಸವರಾಜ ಬೊಮ್ಮಾಯಿ ಸರ್ ಗೆ ಧನ್ಯವಾದಗಳು" ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಮಿನಿ ಥಿಯೇಟರ್ ಮತ್ತು ಸಬ್ಸಿಡಿ ವಿಚಾರ ಪ್ರಸ್ತಾಪ
ಈ ಬಾರಿಯ ಬಜೆಟ್‌ನಲ್ಲಿ ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ, ಧಾರವಾಡ, ರಾಯಚೂರು ಸೇರಿದಂತೆ ಇತರ ಟೈರ್ 2 ನಗರಗಳಲ್ಲಿ ( 50,000-100,000 ಜನಸಂಖ್ಯೆ ಇರುವ ನಗರಗಳು) 100 ರಿಂದ 200 ಆಸನಗಳ ಸಾಮರ್ಥ್ಯ ಇರುವ ಮಿನಿ ಥಿಯೇಟರ್‌ಗಳ ಸ್ಥಾಪನೆಗೆ ಪ್ರೋತ್ಸಾಹ ನೀಡುವುದಾಗಿ ಸಿಎಂ ಹೇಳಿದ್ದಾರೆ.
ಈ ವರ್ಷ ಸುಮಾರು 200 ಸಿನಿಮಾಗಳಿಗೆ ಸಬ್ಸಿಡಿ ನೀಡುವುದು ಸೇರಿದಂತೆ ರಾಜ್ಯದ ನಗರ ಹಾಗೂ ಪಟ್ಟಣಗಳಲ್ಲಿ ಖಾಲಿ ಜಾಗಗಳನ್ನು ಗುರುತಿಸಿ ನಟ, ಕರಾಟೆ ಕಿಂಗ್ ಶಂಕರ್‌ನಾಗ್ ಅವರ ಹೆಸರಿನಲ್ಲಿ ಟ್ಯಾಕ್ಸಿ ಹಾಗೂ ಆಟೋ ನಿಲ್ದಾಣಗಳನ್ನು ನಿರ್ಮಿಸುವುದಾಗಿ ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದನ್ನು ಹೊರತುಪಡಿಸಿ ಮೆಟ್ರೋ ನಿಲ್ದಾಣಗಳಿಗೆ ಶಂಕರ್‌ನಾಗ್ ಅವರ ಹೆಸರಿಡುವುದು, ಫಿಲ್ಮ್ ಸಿಟಿ ನಿರ್ಮಾಣ ಹಾಗೂ ಇನ್ನಿತರ ಪ್ರಮುಖ ಬೇಡಿಕೆಗಳು ಈ ಬಾರಿ ಕೂಡಾ ಈಡೇರಿಲ್ಲ.