Vivek Agnihotri: ನ್ಯಾಯಾಂಗ ನಿಂದನೆ ಪ್ರಕರಣ... ಏಪ್ರಿಲ್ 10ಕ್ಕೆ ಕೋರ್ಟ್‌ಗೆ ಹಾಜರಾಗುವಂತೆ ವಿವೇಕ್ ಅಗ್ನಿಹೋತ್ರಿಗೆ ಸೂಚನೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಮಾರ್ಚ್ 16) ನಡೆದ ವಿಚಾರಣೆಯಲ್ಲಿ ವಿವೇಕ್ ರಂಜನ್ ಅಗ್ನಿಹೋತ್ರಿ ಹಾಜರಾಗಲಿರಲಿಲ್ಲ. ತಮ್ಮ ಕಕ್ಷಿದಾರರ ಆರೋಗ್ಯ ಸರಿ ಇಲ್ಲ ಎಂದು ವಿವೇಕ್ ಅಗ್ನಿಹೋತ್ರಿ ಪರ ನ್ಯಾಯಾದೀಶರು ನ್ಯಾಯಾಲಯದ ಗಡುವು ಕೇಳಿದ್ದರು.
ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಏಪ್ರಿಲ್ 10 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ದೆಹಲಿ ಕೋರ್ಟ್ ಸೂಚಿಸಿದೆ. ನ್ಯಾಯಮೂರ್ತಿ ಅವರನ್ನು ನಿಂದಿಸಿದ ನಂತರ ವಿವೇಕ್ ರಂಜನ್ ಅಗ್ನಿಹೋತ್ರಿ ಕ್ಷಮೆ ಯಾಚಿಸಿದ್ದರೂ ಅವರಿಗೆ ಸಂಕಷ್ಟ ತಪ್ಪಿಲ್ಲ. ಖುದ್ದು ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಸೂಚಿಸಿದೆ.
ಏನಿದು ಪ್ರಕರಣ?
ಭೀಮಾ ಕೋರೆಂಗಾವ್ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತ ಗೌತಮ್ ನವ್ಲಾಖ ಅವರಿಗೆ ಜಾಮೀನು ನೀಡಿದ್ದ ನ್ಯಾಯಮೂರ್ತಿ ಎಸ್. ಮುರಳೀಧರ್ ಪಕ್ಷಪಾತ ಎಸಗಿದ್ದಾರೆ ಎಂದೂ ಆರೋಪಿಸಿ ವಿವೇಕ್ ರಂಜನ್ ಅಗ್ನಿಹೋತ್ರಿ 2018ರಲ್ಲಿ ಟ್ವೀಟ್ ಮಾಡಿದ್ದರು. ಈ ಸಂಬಂಧ ದೆಹಲಿ ನ್ಯಾಯಾಲಯ ಸ್ವಯಂಪ್ರೇರಿತವಾಗಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿತ್ತು. ನಂತರ ವಿವೇಕ್ ಅಗ್ನಿಹೋತ್ರಿ ಪರ ವಕೀಲರು, ತಮ್ಮ ಕಕ್ಷಿದಾರರು ಟ್ವೀಟ್ ಡಿಲೀಟ್ ಮಾಡಿದ್ದಾರೆ ಎಂದು ಅಫಿಡವಿಟ್ ಸಲ್ಲಿಸಿದ್ದರು. ಆದರೆ ಅದನ್ನು ಡಿಲೀಟ್ ಮಾಡಿದ್ದರು ವಿವೇಕ್ ಅಗ್ನಿಹೋತ್ರಿ ಅಲ್ಲ, ಟ್ವಿಟ್ಟರ್ ಸಂಸ್ಥೆ ಎಂದು ನ್ಯಾಯಾಲಯದ ಪರ ವಕೀಲರು ವಾದ ಮಂಡಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಮಾರ್ಚ್ 16) ನಡೆದ ವಿಚಾರಣೆಯಲ್ಲಿ ವಿವೇಕ್ ರಂಜನ್ ಅಗ್ನಿಹೋತ್ರಿ ಹಾಜರಾಗಲಿರಲಿಲ್ಲ. ತಮ್ಮ ಕಕ್ಷಿದಾರರ ಆರೋಗ್ಯ ಸರಿ ಇಲ್ಲ ಎಂದು ವಿವೇಕ್ ಅಗ್ನಿಹೋತ್ರಿ ಪರ ನ್ಯಾಯಾದೀಶರು ನ್ಯಾಯಾಲಯದ ಗಡುವು ಕೇಳಿದ್ದರು. ಆದ್ದರಿಂದ ಏಪ್ರಿಲ್ 10ರಂದು ಮುಂದಿನ ವಿಚಾರಣೆ ನಡೆಯಲಿದ್ದು ಆ ದಿನ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ನ್ಯಾಯಪೀಠ ಸೂಚಿಸಿದೆ.
'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಮೂಲಕ ಖ್ಯಾತರಾದ ವಿವೇಕ್ ರಂಜನ್ ಅಗ್ನಿಹೋತ್ರಿ
ವಿವೇಕ್ ರಂಜನ್ ಅಗ್ನಿಹೋತ್ರಿ ನಿರ್ದೇಶನದ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಕಳೆದ ವರ್ಷ ಮಾರ್ಚ್ 11 ರಂದು ತೆರೆ ಕಂಡಿತ್ತು. ಸುಮಾರು 25 ಕೋಟಿ ರೂಪಾಯಿ ಬಜೆಟ್‌ನಿಂದ ತಯಾರಾದ ಈ ಸಿನಿಮಾ 340 ಕೋಟಿ ರೂಪಾಯಿ ಲಾಭ ಮಾಡಿತ್ತು. ಕಾಶ್ಮೀರಿ ಪಂಡಿತರ ಹತ್ಯೆ, ಹಾಗೂ ಹಿಂಸಾಚಾರದ ನೈಜ ಘಟನೆ ಆಧಾರಿತ ಚಿತ್ರ ಇದು. ಸಿನಿಮಾಗೆ ಒಂದೆಡೆ ಹೊಗಳಿಕೆ ಆದರೆ ಮತ್ತೊಂದು ಕಡೆ ವಿವಾದ ಸೃಷ್ಟಿಸಿತ್ತು. ನೈಜ ಘಟನೆ ಆಧಾರಿತ ಸಿನಿಮಾ ಎಂದು ಹೇಳಿ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಈ ಚಿತ್ರದಲ್ಲಿ ಕೆಲವೊಂದು ಘಟನೆಗಳನ್ನು ತಿರುಚಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೆ ಇದಕ್ಕೆ ರಾಜಕೀಯ ಬಣ್ಣ ಬಳಿಯಲಾಗಿತ್ತು. 'ದಿ ಕಾಶ್ಮೀರ್ ಫೈಲ್ಸ್' ಚಿತ್ರವನ್ನು ಜೀ ಸ್ಟುಡಿಯೋಸ್, ಅಭಿಷೇಕ್ ಅಗರ್‌ವಾಲ್ ಆರ್ಟ್ಸ್, ಐ ಆಮ್ ಬುದ್ಧ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ವಿವೇಕ್ ರಂಜನ್ ಅಗ್ನಿಹೋತ್ರಿ ಕಥೆ ಬರೆದು ನಿರ್ದೇಶಿಸಿದ್ದಾರೆ.
'ದಿ ವ್ಯಾಕ್ಸಿನ್ ವಾರ್' ಚಿತ್ರದಲ್ಲಿ ಬ್ಯುಸಿ ಇರುವ ನಿರ್ದೇಶಕ
ವಿವೇಕ್ ರಂಜನ್ ಅಗ್ನಿಹೋತ್ರಿ ಸದ್ಯಕ್ಕೆ 'ದಿ ವ್ಯಾಕ್ಸಿನ್ ವಾರ್' ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕನ್ನಡದ ಸಪ್ತಮಿ ಗೌಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಪತ್ನಿ ಪಲ್ಲವಿ ಜೋಶಿಗೆ ಅಪಘಾತವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ವಿವೇಕ್ ರಂಜನ್ ಅಗ್ನಿಹೋತ್ರಿ ತಾತ್ಕಾಲಿಕವಾಗಿ ಚಿತ್ರೀಕರಣ ನಿಲ್ಲಿಸಿದ್ದರು. ಇದೀಗ ಮತ್ತೆ ಚಿತ್ರೀಕರಣ ಆರಂಭವಾಗಿದೆ.