Flash Back Column: ಹಣಕಾಸಿನ ಸಮಸ್ಯೆಯಿಂದ ವಿದೇಶದಲ್ಲಿ ಸಿಲುಕಿದ್ದ ಡಾ. ರಾಜ್‌ಕುಮಾರ್ ನೆರವಿಗೆ ಬಂದಿತ್ತು ಅಂಬರೀಶ್ ಫೋನ್ ಕರೆ!
ವಿದೇಶದಲ್ಲಿ ಡಾ. ರಾಜ್‌ಗೆ ಹಣಕಾಸಿನ ಸಮಸ್ಯೆಯಾದಾಗ, ಅಂಬರೀಶ್‌ಗೆ ಫೋನ್ ಕರೆ ಮಾಡಿದ್ರು. ಹಾಗೆ ಕರೆ ಮಾಡಿದ ಕೆಲವೇ ಗಂಟೆಗಳಲ್ಲಿ ಅದು ಬಗೆ ಹರಿದಿತ್ತು. ಎರಡು ಪ್ರತ್ಯೇಕ ಘಟನೆಗಳ ಬಗ್ಗೆ ಇಂದಿನ ಫ್ಲಾಷ್‌ಬ್ಯಾಕ್ ಅಂಕಣದಲ್ಲಿದೆ ವಿವರ
Flash Back Column: ಹಣಕಾಸಿನ ಸಮಸ್ಯೆ ಸಿನಿಮಾ ಸ್ಟಾರ್‌ಗಳನ್ನೂ ಬಿಟ್ಟಿಲ್ಲ. ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ಕೆಲವೊಮ್ಮೆ ಅನಿರೀಕ್ಷಿತ ಘಟನೆಗಳು ಸಂಭವಿಸಿ ಇಕ್ಕಟ್ಟಿಗೆ ಸಿಲುಕಿಸಿ ಬಿಡುತ್ತವೆ. ಕರುನಾಡು ಕಂಡ ಮೇರುನಟ ಡಾ. ರಾಜ್‌ಕುಮಾರ್‌ಗೂ ಅಂಥ ಹಣಕಾಸಿನ ಸಮಸ್ಯೆ ಎದುರಾಗಿತ್ತು ಎಂದರೆ ನಂಬ್ತೀರಾ? ನಂಬಲೇ ಬೇಕು. ಒಮ್ಮೆ ವಿದೇಶಕ್ಕೆ ಮೊಮ್ಮಗನ ಚಿಕಿತ್ಸೆಗಾಗಿ ತೆರಳಿದಾಗ, ಮತ್ತೊಮ್ಮೆ ಸಿನಿಮಾ ಶೂಟಿಂಗ್‌ಗೆ ಹೋದಾಗ ಅವರಿಗೆ ಎದುರಾದ ಕಷ್ಟ ಅಷ್ಟಿಷ್ಟಲ್ಲ. ಹಣ ಪಾವತಿಸದಿದ್ದರೆ, ಯಾರನ್ನೂ ಇಲ್ಲಿಂದ ಆಚೆ ಕಳಿಹಿಸಲ್ಲ ಎಂಬ ಕಟು ಮಾತನ್ನೂ ರಾಜ್ ಕುಮಾರ್ ಮತ್ತು ಪಾರ್ವತಮ್ಮ ಆವತ್ತು ಕೇಳಿಸಿಕೊಂಡಿದ್ದರು. ಆಗ ಅವರ ಸಹಾಯಕ್ಕೆ ಬಂದದ್ದು ರೆಬೆಲ್‌ಸ್ಟಾರ್ ಅಂಬರೀಶ್!
ದಾನ ಶೂರ ಕರ್ಣ ಎಂಬ ಪಟ್ಟವನ್ನೇನೋ ಅಂಬರೀಶ್ ಪಡೆದಿದ್ದಾರೆ. ಅನಿಸಿದ್ದನ್ನು ನೇರವಾಗಿ ಮುಖಕ್ಕೆ ಹೊಡೆದಂತೆ ಮಾತನಾಡುವುದು ಅವರ ಖಯಾಲಿ. ಮಾತು ಮುಳ್ಳಾದರೂ, ಮನಸ್ಸು ಹೂವು. ಈ ವಿಚಾರ ಬಹುತೇಕ ಅವರ ಆಪ್ತರಿಗೂ ಗೊತ್ತು. ಅಭಿಮಾನಿಗಳೂ ಬಲ್ಲರು. ಹೀಗಿರುವ ವಿದೇಶದಲ್ಲಿ ಹಣಕಾಸಿನ ವಿಚಾರದಲ್ಲಿ ಸಿಲುಕಿದ್ದ ಡಾ. ರಾಜ್ ಅವರಿಗೆ ಸಹಾಯಕ್ಕೆ ಮಾಡಿದ್ದು ಇದೇ ಅಂಬರೀಶ್. ಕೇವಲ ಒಂದೇ ಒಂದು ಫೋನ್ ಕರೆ ಮೂಲಕ ಸಮಸ್ಯೆ ಬಗೆಹರಿದಿತ್ತು. ತಲೆ ಮೇಲೆ ಕೈಹೊತ್ತು ಕುಳಿತಿದ್ದ ರಾಜ್‌ಕುಮಾರ್ ನಿಟ್ಟುಸಿರು ಬಿಟ್ಟು ನಿರಾಳರಾಗಿದ್ದರು. ಅಣ್ಣಾವ್ರು ವಿದೇಶದಲ್ಲಿ ಸಿಲುಕಿದ ಎರಡು ಪ್ರತ್ಯೇಕ ಘಟನೆಗಳಿಗೆ ಅಂಬಿ ಹೇಗೆ ನೆರವಾಗಿದ್ದರು? ಈ ವಿಚಾರವನ್ನು ಈ ಹಿಂದೆಯೇ ಹಿರಿಯ ನಿರ್ದೇಶಕ ದಿ. ದೊರೆ ಭಗವಾನ್ ಸಂದರ್ಶನವೊಂದರಲ್ಲಿ ನೆನಪು ಮಾಡಿಕೊಂಡಿದ್ದರು. ಅವರ ಮಾತಿನ ಧಾಟಿಯಲ್ಲಿಯೇ ಇಲ್ಲಿದೆ ವಿವರ.
ಘಟನೆ -1
ರಾಜ್‌ಕುಮಾರ್ ಮತ್ತು ಪಾರ್ವತಮ್ಮನವರ ಮಗಳು ಲಕ್ಷ್ಮೀ ಮತ್ತು ಗೋವಿಂದರಾಜ್ ದಂಪತಿಗೆ ಗಂಡು ಮಗು ಜನಿಸಿತ್ತು. ಹುಟ್ಟುತ್ತಲೇ ಆ ಮಗುವಿಗೆ ಸೀಳುತುಟಿ ಇತ್ತು. ಆಗಿನ ಕಾಲದಲ್ಲಿ ಆಪರೇಶನ್ ಸೌಕರ್ಯ ಇಲ್ಲಿರಲಿಲ್ಲ. ಅವರಿವರನ್ನು ವಿಚಾರಿಸಿದಾಗ, ರಮಣರಾವ್ ಅವರು ಹೇಳಿದ್ದರು. "ಅಮೆರಿಕಾದ ಮಯಾಮಿಗೆ ಹೋಗಿ, ಅಲ್ಲಿ ನನಗೊಬ್ಬರು ಗೊತ್ತಿರುವ ಡಾಕ್ಟರ್ ಇದ್ದಾರೆ. ಖಂಡಿತ ಆಪರೇಷನ್ ಆಗುತ್ತೆ" ಎಂದಿದ್ದರು. ಅವರ ಮಾತಿನಂತೆ, ಮಗುವಿನ ಜತೆಗೆ ರಾಜ್‌ಕುಮಾರ್, ಪಾರ್ವತಮ್ಮ, ಗೋವಿಂದರಾಜು ಮತ್ತು ಲಕ್ಷ್ಮೀ ಅಮೆರಿಕಕ್ಕೆ ತೆರಳಿದ್ದರು. ಉಳಿದುಕೊಳ್ಳಲು ಆಸ್ಪತ್ರೆ ಬಳಿಯ ಹೊಟೇಲ್ ಬುಕ್ ಮಾಡಿದ್ದರು. ಮಗುವಿನ ಚಿಕಿತ್ಸೆಯೂ ಆಯಿತು. ಅಂದಾಜು ಆಗಿನ ಕಾಲದಲ್ಲಿ ಎಲ್ಲ ಖರ್ಚನ್ನು ಸೇರಿಸಿ 500 ಡಾಲರ್ ತೆಗೆದುಕೊಂಡು ಹೋಗಿದ್ದರು. ಗೋವಿಂದರಾಜು ಬಳಿಯೂ ಒಂದಷ್ಟು ಹಣವಿತ್ತು.
ಹೀಗೆ ಮಗುವಿನ ಚಿಕಿತ್ಸೆ ಮುಗಿಯುತ್ತಿದ್ದಂತೆ, ಆಸ್ಪತ್ರೆ ಬಿಲ್ಲೇ ಜಾಸ್ತಿ ಆಗೋಗಿದೆ. ತಮ್ಮ ಬಳಿ ಇದ್ದಿದ್ದಕ್ಕಿಂತ ಹೆಚ್ಚು ಬಿಲ್ ಬಂದಿದೆ. ಇತ್ತ ಆಸ್ಪತ್ರೆಗೆ ಕೊಡುವುದೋ, ಅತ್ತ ಹೊಟೇಲ್ ಬಿಲ್ ಕಟ್ಟುವುದೋ ಒಂದು ತೋಚದಂತಾಗಿತ್ತು. ಆಗಿನ ಕಾಲದಲ್ಲಿ ಈ ಆನ್‌ಲೈನ್ ಪೇಮೆಂಟ್ ಇರಲಿಲ್ಲ. ಏನೇ ಇದ್ದರೂ ಕೈಯಲ್ಲಿಯೇ ಒಂದಷ್ಟು ಹಣ ಇರಿಸಿಕೊಂಡು ಹೋಗಬೇಕಿತ್ತು. ಬಿಲ್ ನೋಡಿ ಎಲ್ಲರೂ ತಲೆ ಮೇಲೆ ಕೈ ಹೊತ್ತು ಕುಳಿತರು. ಏನು ಮಾಡುವುದೆಂದೂ ಯಾರಿಗೂ ತೋಚಲಲ್ಲ. ಆಗ ಪಾರ್ವತಮ್ಮ ಅವರಿಗೆ ನೆನಪಾಗಿದ್ದು ಅಂಬರೀಶ್. "ಗೋವಿಂದು ಹೋಗಿ ಅಂಬರೀಶ್‌ಗೆ ಫೋನ್ ಮಾಡು, ಇಲ್ಲಿನದ್ದು ವಿವರಿಸು, ಏನಾದರೂ ಮಾಡಲು ಸಾಧ್ಯವೆ ನೋಡು.." ಎಂದು ಹೇಳಿ ಕಳಿಸಿದ್ರು.
ಅದೇ ರೀತಿ ಅಂಬರೀಶ್‌ಗೆ ಫೋನ್ ಮಾಡಿದ ಗೋವಿಂದರಾಜು, ನಡೆದ ಘಟನೆಯನ್ನು ವಿವರಿಸಿದ್ದರು. ಹೋಗುವಾಗ ನನಗ್ಯಾಕೆ ಹೇಳಲಿಲ್ಲ ಎಂದು ಅಂಬಿ ಪ್ರಶ್ನಿಸಿದರು. ಇಷ್ಟೊಂದು ಹಣ ಬೇಕಾಗಬಹುದೆಂದು ನಮಗೆ ಗೊತ್ತಿರಲಿಲ್ಲ. ಹಾಗಾಗಿ ಅಕ್ಕ ನಿಮ್ಮ ಗಮನಕ್ಕೆ ತನ್ನಿ ಎಂದರು ಅದಕ್ಕೆ ಹೇಳಿದೆ ಎಂದರು ಗೋವಿಂದು. "ಸರಿ ಸರಿ ದೇವರಿದ್ದಾನೆ ಬಿಡಿ.. ಒಂದು ಗಂಟೆ ಸಮಯ ಕೊಡಿ" ಎಂದು ಅಂಬರೀಶ್ ಫೋನ್ ಇಟ್ಟರು.
ಅದಾಗಲೇ ಮುಂದೇನು? ಎಂಬಂತೆ ಕೂತಿದ್ದ ಎಲ್ಲರ ಬಳಿ ಬಂದ ಒಬ್ಬ ವ್ಯಕ್ತಿ, ಆಸ್ಪತ್ರೆ ಬಿಲ್ಲು ಎಲ್ಲವೂ ಕ್ಲಿಯರ್ ಆಗಿದೆ. ನೀವು ನಿಮ್ಮ ಮಗುವನ್ನು ಕರೆದುಕೊಂಡು ಹೊರಡಬಹುದೆಂದು ಹೇಳಿದರು. ಪಾರ್ವತಮ್ಮನವರಿಗೆ ಆಶ್ಚರ್ಯ. ಯಾರು ಹಣ ಕೊಟ್ಟಿದ್ದು, ಹೇಳಿ ಎಂದರು ರಾಜ್‌ಕುಮಾರ್. ನಾನು ಮತ್ತೆ ಅಂಬರೀಶ್ ಇಬ್ಬರೂ ಸ್ನೇಹಿತರು. ಅಂಬಿ ಫೋನ್ ಮಾಡಿ ನಡೆದ ಘಟನೆಯನ್ನು ವಿವರಿಸಿದ್ರು. ಹಾಗಾಗಿ ಬಂದೆ ಎಂದರು. ಬಳಿಕ ಬೆಂಗಳೂರಿಗೆ ಬಂದ ಕೂಡಲೇ ಎಂಥ ಸಂದಿಗ್ಧ ಪರಿಸ್ಥಿತಿಯಿಂದ ನಮ್ಮನ್ನು ಕಾಪಾಡಿಬಿಟ್ಟೆ ಅಂಬರೀಶ್ ಎಂದು ಬಾಚಿ ತಬ್ಬಿಕೊಂಡರು. ಅಯ್ಯೋ ಬಿಡಿ. ಮಗು ಗುಣಮುಖವಾಗಿ ಬಂತಲ್ಲ ಅಷ್ಟೇ ಸಾಕು ಬಿಡಿ ಎಂದು ನಕ್ಕರು.
-----
ಘಟನೆ -2
ಒಮ್ಮೆ ಅಣ್ಣಾವ್ರು ಮತ್ತು ಪಾರ್ವತಮ್ಮ ಸೇರಿ ಹಲವರು ಸಿನಿಮಾ ಶೂಟಿಂಗ್‌ಗೆ ಅಂತ ಮಾಲ್ಡೀವ್ಸ್‌ಗೆ ಹೋಗಿದ್ದರು. ಆಗ ಬಹುತೇಕ ಹಣ ಶೂಟಿಂಗ್‌ಗೆ ಖರ್ಚಾಯ್ತು. ಹೊಟೇಲ್ ಬಿಲ್ ಕೊಡುವಷ್ಟೂ ದುಡ್ಡು ಇರಲಿಲ್ಲ. ಕೈಗೆ ಬಿಲ್ ಬಂದ ಮೇಲೆಯೇ ಎಲ್ಲರೂ ಅಚ್ಚರಿಗೊಳಗಾಗಿದ್ದರು. ಬಿಲ್ ಕೊಡುವವರೆಗೂ ನಾವು ಯಾರನ್ನೂ ಆಚೆ ಬಿಡಲ್ಲ ಎಂದು ಹೊಟೇಲ್‌ನವರು ಪಟ್ಟು ಹಿಡಿದಿದ್ದರು. ಊರಿಗೆ ಹೋಗಿ ನಿಮ್ಮ ದುಡ್ಡು ಕಳಿಸಬಹುದೇ ಎಂದು ಪಾರ್ವತಮ್ಮನವರು ಕೇಳಿಕೊಂಡರು. ಆಗಬಹುದು, ಆದರೆ ನೀವು ದುಡ್ಡು ಕಳಿಸುವ ವರೆಗೂ ನಾವು ಇವರನ್ನು (ರಾಜ್‌ಕುಮಾರ್) ಬಿಡಲ್ಲ ಎಂದಿದ್ದರು. ಆಗ ಇವರನ್ನು ಕಳಿಸಿ, ಬೇಕಿದ್ರೆ ನಾನು ಇಲ್ಲೇ ಇರ್ತಿನಿ ಎಂದರು ಪಾರ್ವತಮ್ಮ.
ಬಳಿಕ ಎಲ್ಲರೂ ಬೆಂಗಳೂರಿಗೆ ಬಂದರು. ಪಾರ್ವತಮ್ಮನವರಿಗೆ ಹೀಗಾದ ವಿಚಾರ ಅಂಬರೀಶ್ ಕಿವಿಗೂ ಬಿತ್ತು. ನೇರವಾಗಿ ಫೋನ್ ಮಾಡಿ, "ಏನಕ್ಕ ನೀನೂ ನನಗೆ ಒಂದು ಮಾತು ಹೀಗಾಗಿದೆ ಅಂತ ಹೇಳಬಾರ್ದಾ? ಈ ಥರ ಮಾಲ್ಡೀವ್ಸ್‌ಗೆ ಹೋಗ್ತಿದಿನಿ, ಅಲ್ಲಿ ದುಡ್ಡು ಬೇಕಾಗುತ್ತೆ ಅಂತ ಹೇಳಬಾರದಿತ್ತೆ. ಕೊಡು ಮ್ಯಾನೇಜರ್ ಕಡೆ ಫೋನ್.." ಎಂದ್ರು, ತಮ್ಮ ವರಸೆಯಂತೆ, " ಎಷ್ಟ್ರಿ ನಿಮ್ದು ಬಿಲ್ಲು? ಅದಕ್ಕೆ ಹೊಟೇಲ್‌ನವರು ಇಷ್ಟು ಎಂದು ಹೇಳಿದ್ದಾರೆ. "ಸರಿ ನಿಮ್ಮ ದುಡ್ಡು ಒಂದು ಗಂಟೆಯಲ್ಲಿ ಬರುತ್ತೆ, ಅವರನ್ನು ಬಿಟ್ಟು ಕಳಿಸಿ ಎಂದಿದ್ದಾರೆ. ಕೆಲವೇ ಗಂಟೆ ಬಳಿಕ ಹೊಟೇಲ್ ಬಿಲ್ ಕ್ಲಿಯರ್ ಮಾಡಿದ್ದಾರೆ. ಬಳಿಕ ಮುಂದಿನ ವಿಮಾನದಲ್ಲಿಯೇ ಮಾಲ್ಡೀವ್ಸ್‌ನಿಂದ ಮರಳಿದ್ದರು. ಅಂಬರೀಶ್‌ಗೆ ದಾನಶೂರ ಕರ್ಣ ಅಂತ ಟೈಟಲ್ ಕೊಟ್ಟಿದ್ದಾರೆ ನಿಜ. ಅದರ ಆಚೆಗೂ ಸಾಕಷ್ಟು ಕೆಲಸಗಳನ್ನು ಮಾಡಿದ್ದಾನೆ. ಒಂದು ಫೋನ್‌ನಲ್ಲಿಯೇ ಎಲ್ಲವನ್ನೂ ಬಗೆಹರಿಸುತ್ತಿದ್ದ. ಆತನ ಹೃದಯ ಕಮಲದಂತೆ, ಮಾತು ಮುಳ್ಳಂತೆ. ಆ ಥರ ಸ್ವಭಾವ ಅವ್ರದ್ದು ಸಿಡುಕಿನಲ್ಲಿಯೇ ಮಾತನಾಡಿದ್ರೂ, ಮಾಡೋದು ಒಳ್ಳೆ ಕೆಲಸವನ್ನೇ.
ಮಂಜುನಾಥ ಕೊಟಗುಣಸಿ
ಇಂಥ ಮತ್ತಷ್ಟು ಅಂಕಣ ಬರಹಗಳಿಗೆ ಇಲ್ಲಿ ಕ್ಲಿಕ್ ಮಾಡಿ.
ಫ್ಯಾಷ್‌ಬ್ಯಾಕ್ ಅಂಕಣ ಬರಹದ ಬಗ್ಗೆ ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆ, ಸಲಹೆಗಳಿಗೆ ಸ್ವಾಗತ. ಇಮೇಲ್: manjunath.kotagunasi@htdigital.in, ht.kannada@htdigital.in