Seetha Rama Serial: ರಾಮನಿಗೆ ಹೃದಯ ಕೊಟ್ಟ ಸೀತಾಗೆ, ಗಂಡು ಹುಡುಕಿದ್ದಾನೆ ಅಣ್ಣ; ಸೀತೆಗೆ ಕೆಡುಕು ಬಯಸುವ ಮೂರು ಪಾತ್ರಗಳ ಎಂಟ್ರಿ
ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ರಾಮನಿಗೆ ಹೃದಯ ಕೊಟ್ಟ ಸೀತಾಗೆ, ಗಂಡು ಹುಡುಕಿದ್ದಾನೆ ಅಣ್ಣ; ಸೀತೆಗೆ ಕೆಡುಕು ಬಯಸುವ ಮೂರು ಪಾತ್ರಗಳ ಎಂಟ್ರಿ

Seetha Rama Serial: ರಾಮನಿಗೆ ಹೃದಯ ಕೊಟ್ಟ ಸೀತಾಗೆ, ಗಂಡು ಹುಡುಕಿದ್ದಾನೆ ಅಣ್ಣ; ಸೀತೆಗೆ ಕೆಡುಕು ಬಯಸುವ ಮೂರು ಪಾತ್ರಗಳ ಎಂಟ್ರಿ

ಸೀತಾಳಿಗೆ ಇಷ್ಟ ಇಲ್ಲದಿದ್ದರೂ ಮದುವೆ ಸಂಬಂಧ ಹುಡುಕಿ ತಂದಿದ್ದಾನೆ ಅಣ್ಣ. ನನ್ನ ಈ ಪ್ರಪಂಚದಲ್ಲಿ ನಾನು ಮತ್ತು ಸಿಹಿ ಇಬ್ಬರೇ ಎಂದು ಮದುವೆ ತಿರಸ್ಕರಿಸಿ ಮುಂದೆ ಸಾಗಿದ್ದಾಳೆ ಸೀತಾ. ಹೀಗೆ ಸಾಗುವ ಏರುಪೇರಿನ ಹಾದಿಯಲ್ಲಿ ಇದೀಗ ಕೆಡುಕು ಬಯಸುವ ಮೂರು ಹೊಸ ಪಾತ್ರಗಳ ಎಂಟ್ರಿಯಾಗಿದೆ.

ರಾಮನಿಗೆ ಹೃದಯ ಕೊಟ್ಟ ಸೀತಾಗೆ, ಗಂಡು ಹುಡುಕಿದ್ದಾನೆ ಅಣ್ಣ; ಸೀತೆಗೆ ಕೆಡುಕು ಬಯಸುವ ಮೂರು ಪಾತ್ರಗಳ ಎಂಟ್ರಿ
ರಾಮನಿಗೆ ಹೃದಯ ಕೊಟ್ಟ ಸೀತಾಗೆ, ಗಂಡು ಹುಡುಕಿದ್ದಾನೆ ಅಣ್ಣ; ಸೀತೆಗೆ ಕೆಡುಕು ಬಯಸುವ ಮೂರು ಪಾತ್ರಗಳ ಎಂಟ್ರಿ

Seetha Rama Serial: ಜೀ ಕನ್ನಡದಲ್ಲಿನ ಸೀತಾ ರಾಮ ಧಾರಾವಾಹಿ ನೋಡುಗರ ಮನ ಸೆಳೆಯುತ್ತಿದೆ. ಸಂಚಿಕೆಯಿಂದ ಸಂಚಿಕೆಗೆ ಕೌತುಕ ಮೂಡಿಸುತ್ತ, ನವಿರಾದ ಕಥೆಯನ್ನು ನೋಡುಗರ ಮುಂದಿಡುತ್ತಿದ್ದಾರೆ ಈ ಸೀರಿಯಲ್‌ನ ನಿರ್ದೇಶಕರು. ಸಿಹಿಯ ತುಂಟತನ, ಸೀತಾಳ ಮುಗ್ಧತೆ, ರಾಮನ ಕಾಳಜಿ.. ಹೀಗೆ ಎಲ್ಲವೂ ಹದವಾಗಿ ಬೆರೆತು ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಿದೆ.

ಸಾಲಗಾರರಿಂದ ಪಾರು ಮಾಡಿದ ರಾಮ್‌ ಮೇಲೆ ಸೀತಾಳಿಗೆ ಒಳ್ಳೆಯ ಭಾವನೆ ಮೂಡಿದೆ. ಆರಂಭದಲ್ಲಿ ಸಣ್ಣ ಮುನಿಸಿದ್ದರೂ, ಅದು ಈಗ ಬಗೆಹರಿದು ಮುಂದಡಿಯಿಟ್ಟಿದೆ. ಇತ್ತ ರಾಮನ ಮನಸ್ಸಿನಲ್ಲಿ ಸೀತಾಳ ಮೇಲೆ ಪ್ರೀತಿ ಚಿಗುರೊಡೆಯುತ್ತಿದೆ. ಈಗಾಗಲೇ ಸಿಹಿಯಿಂದಾಗಿ ಇಬ್ಬರ ಫೋನ್‌ ನಂಬರ್‌ ಸಹ ಅದಲು ಬದಲಾಗಿವೆ.

ಅದೇ ರೀತಿ ಗುರುವಾರದ ಏಪಿಸೋಡ್‌ ಬಗ್ಗೆ ನೋಡುವುದಾದರೆ, ಆಫೀಸ್‌ನಲ್ಲಿ ಬಾಸ್‌ ಬದಲು ಸಾಮಾನ್ಯ ಕೆಲಸಗಾರನಂತೆ ಗುರುತಿಸಿಕೊಳ್ಳುತ್ತಿದ್ದಾನೆ ರಾಮ್.‌ ಬಾಸ್‌ ಚೇಂಬರ್‌ ಬಿಟ್ಟು, ಬೋನಸ್‌ ವಿಚಾರವಾಗಿ ನಡೆದ ಅಕ್ರಮವನ್ನು ಪತ್ತೆಮಾಡಲು ಕೆಲಸಗಾರರ ಮಧ್ಯೆ ತನ್ನದೇ ಆದ ಸೀಟ್‌ ಪಡೆದುಕೊಂಡಿದ್ದಾನೆ. ಅದೂ ಸೀತಾಳ ಪಕ್ಕದಲ್ಲಿಯೇ. ಇದೇ ವೇಳೆ ಸೀತಾಳಿಂದ ಹೃದಯವನ್ನೂ ಉಡುಗೊರೆ ರೂಪದಲ್ಲಿ ಪಡೆದುಕೊಂಡಿದ್ದಾನೆ ರಾಮ್!

ಚಿಕ್ಕಿಯ ದಿಢೀರ್‌ ಎಂಟ್ರಿಯಿಂದ ರಾಮ್‌ ಮತ್ತು ಅಶೋಕ್‌ಗೂ ಕೊಂಚ ಅನುಮಾನ ಮೂಡಿದೆ. ಅದಕ್ಕೆ ತೇಪೆ ಹಚ್ಚುವ ಸಲುವಾಗಿ ಕ್ಯಾರೇಟ್‌ ಹಲ್ವಾ ನೀಡುವ ನೆಪದಲ್ಲಿ ಬಂದು ಹೋದಂತೆ ನಾಟಕವಾಡಿದ್ದಾಳೆ ಭಾರ್ಗವಿ. ಹೀಗೆ ಸಾಗುತ್ತಿರುವ ಸೀತಾ ರಾಮ ಧಾರಾವಾಹಿಯಲ್ಲಿ ಗುರುವಾರ ಹೊಸ ಹೊಸ ಪಾತ್ರಗಳ ಜತೆಗೆ ಟ್ವಿಸ್ಟ್‌ ಸಹ ಎದುರಾಗಿದೆ.

ಸೀತಾಳ ಹಣಕ್ಕೆ ಹಪಹಪಿಸುವ ಅಣ್ಣ ಮತ್ತು ಅತ್ತಿಗೆಯ ಎಂಟ್ರಿಯಿಂದ ಮತ್ತೊಂದು ಪದರು ಬಿಚ್ಚಿಕೊಂಡಿದೆ. ನಾಟಕೀಯ ವ್ಯಕ್ತಿತ್ವದ ಅಣ್ಣ ಮತ್ತು ಅಣ್ಣನ ಹೆಂಡತಿ, ಯಾವುದೋ ಒಂದು ಕಾರಣಕ್ಕೆ ಆದಷ್ಟು ಬೇಗ ಸೀತಾಳನ್ನು ಮದುವೆ ಮಾಡಿಸಿಕೊಡುವ ನಿರ್ಧಾರಕ್ಕೆ ಬಂದಿದ್ದಾರೆ. ಆಕೆಯ ಕಚೇರಿಗೆ ಹೋಗಿ ಮದುವೆ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಕಡ್ಡಿ ಮುರಿದಂತೆ ನಾನು ಮದುವೆ ಆಗಲ್ಲ, ಮದುವೆ ಬಗ್ಗೆ ಮಾತನಾಡಬೇಡಿ, ನನ್ನ ಈ ಪ್ರಪಂಚದಲ್ಲಿ ನಾನು ಮತ್ತು ಸಿಹಿ ಇಬ್ಬರೇ ಎಂದು ಉತ್ತರ ಕೊಟ್ಟಿದ್ದಾಳೆ ಸೀತಾ.

ಇತ್ತ ಸೀತಾ ತನ್ನವಳಾಗಬೇಕೆಂದು ಪಟ್ಟು ಹಿಡಿದ ದುಷ್ಟ ಲಾಯರ್‌ವೊಬ್ಬನ ಹೊಸ ಎಂಟ್ರಿಯೂ ಆಗಿದೆ. ಆ ವಕೀಲನಿಗೆ ಸೀತೆಯನ್ನು ಮದುವೆ ಮಾಡಿಸುವುದಾಗಿ ಆಕೆಯ ಅಣ್ಣ ಅತ್ತಿಗೆ ಮಾತು ಬೇರೆ ಕೊಟ್ಟಿದ್ದಾರೆ. ಮದುವೆ ಮಾಡಿಸುವಂತೆ ಅವರಿಗೇ ಧಮಕಿ ಹಾಕಿದ್ದಾನೆ ಆ ವಕೀಲ. ಅಷ್ಟೇ ಅಲ್ಲ ಆ ವಕೀಲನನ್ನು ಸೀತಾಳ ಮನೆಗೂ ಕರೆತಂದಿರುವ ಅಣ್ಣ, ಹೆಣ್ಣು ನೋಡುವ ಶಾಸ್ತ್ರವನ್ನೂ ಮಾಡಿದ್ದಾರೆ. ಹಣ್ಣು, ಹೂವು, ತಾಂಬೂಲದ ತಟ್ಟೆ ಸಮೇತ ಸೀತಾಳ ಮುಂದೆ ಬಂದಿದ್ದಾನೆ ಲಾಯರ್.‌

ಮೊದಲೇ ಸಮಸ್ಯೆಯಲ್ಲಿ ಸಿಲುಕಿರುವ ಸೀತಾಗೆ ಇದೀಗ ಮದುವೆ ಅನ್ನೋ ಹೊಸ ತಲೆ ನೋವು ಶುರುವಾಗಿದೆ. ಹಾಗಾದರೆ ಸೀತಾಳ ಮುಂದಿನ ನಡೆಯೇನು? ಈ ಮದುವೆ ವಿಚಾರವನ್ನು ರಾಮ್‌ ಮುಂದಿಡುತ್ತಾಳಾ? ಈ ಸಮಸ್ಯೆಯನ್ನು ಬಗೆಹರಿಸುವಂತೆ ರಾಮ್‌ ಬಳಿ ಕೋರಿಕೊಳ್ಳುತ್ತಾಳಾ? ಕಾದು ನೋಡಬೇಕು.

ಮನರಂಜನೆ ಕುರಿತ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Whats_app_banner