ಕನ್ನಡ ಸುದ್ದಿ  /  Entertainment  /  Kannada Television News Zee Kannada New Reality Show Mahanati Telecast Date And Timings Mnk

Mahanati: ನಟಿಯಾಗೋ ಕನಸಿಗೆ ಮೊದಲ ಮೆಟ್ಟಿಲಾಗ್ತಿದೆ ಮಹಾನಟಿ ಶೋ; ಹೀಗಿದೆ ಪ್ರಸಾರದ ದಿನ ಮತ್ತು ಸಮಯ

ಮಹಾನಟಿ ಹೆಸರಿನ ರಿಯಾಲಿಟಿ ಶೋ ಪ್ರಸಾರಕ್ಕೆ ದಿನ ನಿಗದಿಯಾಗಿದೆ. ಜೀ ಕನ್ನಡದಲ್ಲಿ ಇದೇ ಶನಿವಾರದಿಂದ ಈ ಶೋ ಶುರುವಾಗಲಿದೆ. ಈ ಶೋನಲ್ಲಿ ಒಟ್ಟು ನಾಲ್ವರು ತೀರ್ಪುಗಾರರ ಇರಲಿದ್ದಾರೆ.

Mahanati: ನಟಿಯಾಗೋ ಕನಸಿಗೆ ಮೊದಲ ಮೆಟ್ಟಿಲಾಗ್ತಿದೆ ಮಹಾನಟಿ ಶೋ; ಹೀಗಿದೆ ಪ್ರಸಾರದ ದಿನ ಮತ್ತು ಸಮಯ
Mahanati: ನಟಿಯಾಗೋ ಕನಸಿಗೆ ಮೊದಲ ಮೆಟ್ಟಿಲಾಗ್ತಿದೆ ಮಹಾನಟಿ ಶೋ; ಹೀಗಿದೆ ಪ್ರಸಾರದ ದಿನ ಮತ್ತು ಸಮಯ

Mahanati Reality Show: ತನ್ನ ವಿಭಿನ್ನ ರಿಯಾಲಿಟಿ ಶೋಗಳ ಮೂಲಕ ಸಾಕಷ್ಟು ಯುವ ಪ್ರತಿಭೆಗಳನ್ನು ಕರುನಾಡಿಗೆ ಪರಿಚಯಿಸಿರುವ ಜೀ ಕನ್ನಡ ವಾಹಿನಿ, ಈ ಬಾರಿ ಮತ್ತೊಂದು ಹೊಸ ರಿಯಾಲಿಟಿ ಶೋ ಮೂಲಕ ಕರುನಾಡಿನ ಯುವ ನಟಿಯರನ್ನು ಹುಡುಕುವ ಕೆಲಸ ಶುರುಮಾಡಿದೆ. ಅದೇ ಮಹಾನಟಿ. ಕಳೆದ ಎರಡು ತಿಂಗಳಿಂದ ಪ್ರೋಮೋ ಮೂಲಕವೇ ಕುತೂಹಲ ಮೂಡಿಸಿದ್ದ ಮಹಾನಟಿ ಶೋ, ಇದೀಗ ಆಡಿಷನ್‌ ಕೆಲಸಗಳನ್ನು ಮುಗಿಸಿಕೊಂಡು ಪ್ರಸಾರದ ಸನಿಹಕೆ ಬಂದಿದೆ. ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ ನಾಲ್ಕು ಜನ ಈ ಮಹಾನಟಿ ಶೋನ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ.

ಜೀ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋಗಳಾದ ಡ್ರಾಮಾ ಜೂನಿಯರ್ಸ್‌, ಕಾಮಿಡಿ ಕಿಲಾಡಿಗಳು, ಡಿಕೆಡಿ, ಭರ್ಜರಿ ಬ್ಯಾಚುಲರ್ಸ್‌ ಮತ್ತು ಸರಿಗಮಪ ಮೂಲಕ ಈಗಾಗಲೆ ಸಾಕಷ್ಟು ನಟನಟಿಯರು, ಗಾಯಕ ಗಾಯಕಿಯರು ಹಾಗು ಕೊರಿಯೋಗ್ರಾಫರ್‌ಗಳನ್ನ ಕರುನಾಡಿಗೆ ಕೊಟ್ಟಿರುವ ಜೀ ಕನ್ನಡ ವಾಹಿನಿ, ಇದೀಗ ಮಹಾನಟಿ ಎಂಬ ಹೊಚ್ಚ ಹೊಸ ರಿಯಾಲಿಟಿ ಶೋ ಮೂಲಕ ಆಗಮಿಸುತ್ತಿದೆ. ನಿಮ್ಮೂರಿನಲ್ಲಿರುವ ನಟಿಯಾಗುವ ಕನಸು ಹೊತ್ತಿರುವ, ಅವಕಾಶ ವಂಚಿತ ಪ್ರತಿಭೆಗಳಿಗೆ ವೇದಿಕೆ ಒದಗಿಸಲು ಈ ಕಾರ್ಯಕ್ರಮವನ್ನು ಹೆಣೆದ್ದಿದ್ದು, ಕನ್ನಡ ಚಿತ್ರರಂಗಕ್ಕೆ ಯುವ ನಾಯಕ ನಟಿಯರನ್ನು ನೀಡುವ ಕೆಲಸವನ್ನು ಈ ರಿಯಾಲಿಟಿ ಶೋ ಮಾಡಲಿದೆ.

ಕರುನಾಡಿನ ಧೀಮಂತ ನಟಿಯರ ಸಾಲಿಗೆ ಸೇರಲು ಬಯಸುವ ಎಲ್ಲಾ ಯುವ ನಟಿಯರಿಗೆ ವೇದಿಕೆ ಕಲ್ಪಿಸಿಕೊಡುವ ಈ ಮಹಾನಟಿ ಕಾರ್ಯಕ್ರಮವು, ನಿಮ್ಮ ಕನಸನ್ನು ನನಸು ಮಾಡುವ ನಾಡಿನ 31 ಜಿಲ್ಲೆಗಳನ್ನು ಸಂಚರಿಸಿ, ಪ್ರತಿಭೆಗಳನ್ನು ಅಳೆದು ತೂಗಿ, ವೇದಿಕೆ ಕಲ್ಪಿಸಿ ಕೊಡಲು ಹೊರಟಿರುವ ಈ ಹೊಸ ರಿಯಾಲಿಟಿ ಶೋನ ಆಡಿಷನ್‌ ಕೊನೆಯ ಹಂತ ತಲುಪಿದೆ.

ನಾಲ್ವರು ತೀರ್ಪುಗಾರರು

ನಟಿಯಾಗುವ ಕನಸು ಹೊತ್ತ ಅದೆಷ್ಟೋ ಯುವ ನಟಿಯರಿಗೆ, ಸರಿಯಾದ ವೇದಿಕೆ ಸಿಗದೆ ಅವರ ಕನಸುಗಳು ಕರುಗುವ ಹೊತ್ತಿನಲ್ಲಿ, ಅದನ್ನು ಪೋಷಿಸಿ ಬೆಳೆಸಲು ಮಾಡುತ್ತಿರುವ ಈ ಹೊಸ ಪ್ರಯತ್ನವೇ ಮಹಾನಟಿ. ಇಂತಹ ಹೊಸ ಪ್ರಯೋಗದ ಈ ಮಹಾನಟಿ ರಿಯಾಲಿಟಿ ಶೋನಲ್ಲಿ ತೀರ್ಪುಗಾರರು ಯಾರು ಎಂಬ ಕುತೂಹಲ ಎಲ್ಲರಲ್ಲೂ ಈಗ ಮನೆಮಾಡಿದ್ದು, ಈ ಬಾರಿ ಮೂರು ಹೊಸ ತೀರ್ಪುಗಾರರು ವೇದಿಕೆಯನ್ನು ಅಲಂಕರಿಸಲ್ಲಿದ್ದು, ಅವರಲ್ಲಿ ಚಂದನವನದ ಖ್ಯಾತ ನಿರ್ದೇಶಕ, ನಟ ರಮೇಶ್‌ ಅರವಿಂದ್‌, ಖ್ಯಾತ ನಾಯಕ ನಟಿ ಪ್ರೇಮ, ಕಾಟೇರದಂತಹ ಯಶಸ್ವಿ ಚಿತ್ರಕೊಟ್ಟ ನಿರ್ದೇಶಕ ತರುಣ್‌ ಸುಧೀರ್‌ ಮತ್ತು ಯುವ ನಾಯಕ ನಟಿ ನಿಶ್ವಿಕಾ ನಾಯ್ಡು ಈ ರಿಯಾಲಟಿ ಶೋನ ತೀರ್ಪುಗಾರರಾಗಿ ಕಾರ್ಯನಿರ್ವಹಿಸಲ್ಲಿದ್ದಾರೆ.

ಪ್ರತಿ ಶನಿವಾರ ಭಾನುವಾರ ರಾತ್ರಿ 7:30ಕ್ಕೆ

ಆ ನಾಲ್ಕು ಜನಗಳಲ್ಲಿ ಒಬ್ಬರು ಹೊಸದಾಗಿ ಬರುವ ನಟಿಯರಿಗೆ ಅಭಿನಯದ ಮಜಲುಗಳನ್ನು ಕಲಿಸುವ ಮೆಂಟರ್‌ ಆಗಿ ಕಾರ್ಯನಿರ್ವಹಿಸಲ್ಲಿದ್ದಾರೆ ಎಂದು ವಾಹಿನಿ ತಿಳಿಸಿದೆ. ಪ್ರತಿ ಬಾರಿ ತನ್ನ ಕಾರ್ಯಕ್ರಮದಲ್ಲಿ ವಿಭಿನ್ನ ಪ್ರಯೋಗಗಳನ್ನು ಮಾಡುವ ಜೀ ಕನ್ನಡ ವಾಹಿನಿ ಈ ಬಾರಿ ಮಹಾನಟಿಯ ರಿಯಾಲಿಟಿ ಶೋ ಮೂಲಕ ಮನೋರಂಜನೆಯಲ್ಲಿ ಹೊಸತನವನ್ನು ತರಲು ತಯಾರಿ ಮಾಡಿಕೊಂಡಿದ್ದು, ಇದೇ ಮಾರ್ಚ್‌ 30ರಂದು ಶನಿವಾರ ತನ್ನ ಮೊದಲ ಸಂಚಿಕೆ ಪ್ರಸಾರ ಮಾಡಲಿದೆ. ಇನ್ನು ಮುಂದೆ ಈ ಕಾರ್ಯಕ್ರಮವು ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 7.30ಕ್ಕೆ ಪ್ರಸಾರವಾಗಲಿದೆ.