ಹರ್ಷಿಕಾ ಪೂಣಚ್ಚ ದಂಪತಿಗೆ ಹಲ್ಲೆ ಪ್ರಕರಣ; ಇಬ್ಬರು ಅನಾಮಿಕರ ವಿರುದ್ಧ ಪುಲಕೇಶಿನಗರ ಠಾಣೆಯಲ್ಲಿ ದೂರು ದಾಖಲು
ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೊಣಚ್ಚ ಮತ್ತು ಅವರ ಪತಿ ಭುವನ್ ಪೊನ್ನಣ್ಣ ಅವರಿಗೆ ಬೆಂಗಳೂರಿನ ಫ್ರೇಜರ್‌ಟೌನ್‌ನಲ್ಲಿ ಕರಾಳ ಅನುಭವವಾಗಿತ್ತು. ಈ ಘಟನೆಗೆ ಸಂಬಂಧಪಟ್ಟಂತೆ ಪುಲಕೇಶಿನಗರ ಠಾಣೆಯಲ್ಲಿ ಇಬ್ಬರು ಅನಾಮಿಕರ ವಿರುದ್ಧ ದೂರು ದಾಖಲಾಗಿದೆ.
ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೊಣಚ್ಚ ಮತ್ತು ಅವರ ಪತಿ ಭುವನ್ ಪೊನ್ನಣ್ಣ ಅವರಿಗೆ ಬೆಂಗಳೂರಿನ ಫ್ರೇಜರ್‌ಟೌನ್‌ನಲ್ಲಿ ಇತ್ತೀಚೆಗೆ ಕಹಿ ಅನುಭವ ಆಗಿತ್ತು. ಹಲ್ಲೆ, ಸರ ಕಳ್ಳತನಕ್ಕೆ ಪ್ರಯತ್ನ ಇತ್ಯಾದಿಗಳಿಂದ ದಂಪತಿ ತೊಂದರೆಗೀಡಾಗಿದ್ದರು. ಇದೇ ಸಮಯದಲ್ಲಿ ಕನ್ನಡಿಗರು ಕರ್ನಾಟಕದಲ್ಲಿ ಎಷ್ಟು ಸೇಫ್ ಎಂಬ ಪ್ರಶ್ನೆಯನ್ನು ಹರ್ಷಿಕಾ ಪೊಣಚ್ಚ ಸೋಷಿಯಲ್ ಮೀಡಿಯಾದಲ್ಲಿ ಕೇಳಿದ್ದರು. ಈ ಘಟನೆಯನ್ನು ವಿವರಿಸಿ ಸುದೀರ್ಘ ಬರಹ ಬರೆದಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪುಲಕೇಶಿನಗರ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ವರದಿಗಳು ತಿಳಿಸಿವೆ.
ಹರ್ಷಿಕಾ ಪೂಣಚ್ಚ ಮತ್ತು ಅವರ ಪತಿ ಭುವನ್ ಪೊನ್ನಣ್ಣ ಮೇಲೆ ಹಲ್ಲೆ ಹಾಗೂ ದರ್ಪ ತೋರಿದ ಪ್ರಕರಣಕ್ಕೆ ಇಬ್ಬರು ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪುಲಕೇಶಿನಗರ ಠಾಣೆಯಲ್ಲಿ ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್ 143, 341, 323, 393, 427, 504ರಡಿಯಲ್ಲಿ ದೂರು ದಾಖಲಾಗಿದೆ ಎಂದು ವರದಿಗಳು ತಿಳಿಸಿವೆ. ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಅವರನ್ನು ಹುಡುಕುತ್ತಿದ್ದಾರೆ.
ಏನಿದು ಘಟನೆ?
ಘಟನೆ ಕುರಿತು ಹರ್ಷಿಕ ಪೂಣಚ್ಚ ಅವರು ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಅವರು ಕೆಲವು ದಿನಗಳ ಹಿಂದೆ ಫ್ರೇಜರ್ ಟೌನ್ ಪ್ರದೇಶದ ಸಮೀಪವಿರುವ ಪುಲಿಕೇಶಿ ನಗರದ ಮಸೀದಿ ರಸ್ತೆಯಲ್ಲಿರುವ ಕರಾಮಾ ಎಂಬ ಹೋಟೆಲ್‌ಗೆ ಹೋಗಿ ಊಟ ಮಾಡಿ ಬರುವಾಗ ಕೆಲವರಿಂದ ತೊಂದರೆ ಅನುಭವಿಸಿದ್ದರು. ಇಬ್ಬರು ವ್ಯಕ್ತಿಗಳು ಡ್ರೈವರ್ ಸೀಟ್ ಕಿಟಕಿಯ ಬಳಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡು, ನಿಮ್ಮ ವಾಹನವು ತುಂಬಾ ದೊಡ್ಡದಾಗಿದೆ, ಇದ್ದಕ್ಕಿದ್ದಂತೆ ಚಲಿಸಿದಲ್ಲಿ ಅದು ನಮ್ಮನ್ನು ಮುಟ್ಟಬಹುದು ಎಂದು ಮಾತು ಆರಂಭಿಸಿ ಬಳಿಕ ಜಗಳ ಆರಂಭಿಸಿದ್ದರು. ಬಳಿಕ ಅವರ ಭಾಷೆಯಲ್ಲಿ ನಿಂದನೆ ಆರಂಭಿಸಿದ್ದರು ಎಂದು ಹರ್ಷಿಕಾ ಪೂಣಚ್ಚ ಸೋಷಿಯಲ್ ಮೀಡಿಯಾದಲ್ಲಿ ಬರೆದಿದ್ದರು.
ಲೋಕಲ್ ಕನ್ನಡಿಗರಿಗೆ ಪಾಠ ಕಲಿಸಬೇಕು ಎಂದು ಹೇಳಿ ನನ್ನ ಪತಿಯ ಮುಖದ ಮೇಲೆ ಹೊಡೆಯಲು ಸಹ ಪ್ರಯತ್ನಿಸಿದರು ಎಂದು ಹರ್ಷಿಕಾ ಪೂಣಚ್ಚ ಹೇಳಿದ್ದಾರೆ. 2 - 3 ನಿಮಿಷಗಳಲ್ಲಿ ಅದೇ ಗ್ಯಾಂಗ್‌ನ 20 - 30 ಸದಸ್ಯರ ಗುಂಪು ಜಮಾಯಿಸಿತು. ಅವರಲ್ಲಿ ಭುವನ್ ಪೊನ್ನಣ್ಣ ಅವರ ಚಿನ್ನದ ಸರವನ್ನು ಕಿತ್ತುಕೊಳ್ಳಲು ಯತ್ನಿಸಿದರು. ಬಳಿಕ ಇವರ ವಾಹನಕ್ಕೂ ಹಾನಿ ಮಾಡಿದರು ಎಂದು ವಿವರವಾಗಿ ಹರ್ಷಿಕಾ ಪೂಣಚ್ಚ ಸೋಷಿಯಲ್ ಮೀಡಿಯಾದಲ್ಲಿ ಬರೆದಿದ್ದರು.
ಇದಾದ ಬಳಿಕ ಈ ಘಟನೆ ವಿರುದ್ಧ ಜನರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಈ ಸುದ್ದಿ ವೈರಲ್ ಆಗಿತ್ತು. ರಾಜ್ಯ ಮಾತ್ರವಲ್ಲದೆ ರಾಷ್ಟ್ರಮಟ್ಟದ ಪತ್ರಿಕೆಗಳಲ್ಲೂ ಘಟನೆಯ ಕುರಿತು ವರದಿಯಾಗಿತ್ತು. ಇದೀಗ ಪೊಲೀಸರು ಈ ಘಟನೆ ಕುರಿತು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರಂಭದಲ್ಲಿ ಈ ಘಟನೆ ಕುರಿತು ದೂರು ನೀಡದೆ ಇರಲು ಭುವನ್ ಪೊನ್ನಣ್ಣ ನಿರ್ಧರಿಸಿದ್ದರು. ಬಳಿಕ ಇವರ ಆತ್ಮೀಯರು ನೀಡಿದ ಸಲಹೆಯ ಮೇರೆಗೆ ದೂರು ದಾಖಲಿಸಿದ್ದಾರೆ.