ದುಬೈನ ಬುರ್ಜ್ ಖಲೀಫಾ ಮೇಲೆ ಸಿಸಿಎಲ್ ಪ್ರೋಮೋ ರಿಲೀಸ್; ಭಾರತೀಯ ಚಿತ್ರರಂಗದ ಖ್ಯಾತ ನಟರ ಹಾಜರಿ
ದುಬೈನಲ್ಲಿ ಸಿಸಿಎಲ್ ಸೀಸನ್ 10ಕ್ಕೆ ಚಾಲನೆ ಸಿಕ್ಕಿದೆ. ಬುರ್ಜ್ ಖಲೀಫಾ ಮೇಲೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ ಪ್ರೋಮೋ ಬಿಡುಗಡೆ ಆಗಿದೆ. ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕ ಕಿಚ್ಚ ಸುದೀಪ್ ಪ್ರೋಮೋ ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
CCL Season 10: 10ನೇ ಆವೃತ್ತಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ಗೆ ದಿನಗಣನೆ ಆರಂಭವಾಗಿದ್ದು, ದೇಶದ ಬೇರೆ ಬೇರೆ ಚಿತ್ರರಂಗದ ಸ್ಟಾರ್ ನಟರು ಫೆಬ್ರವರಿ 23 ರಿಂದ ಕೈಯಲ್ಲಿ ಬ್ಯಾಟ್ ಹಿಡಿದು ಕ್ರಿಕೆಟ್ ಅಖಾಡಕ್ಕಿಳಿಯಲಿದ್ದಾರೆ. ಅದರ ಭಾಗವಾಗಿ ಫೆ, 2ರಂದು ದುಬೈನಲ್ಲಿ ಸಿಸಿಎಲ್ ಸೀಸನ್ 10ರ ಪ್ರೋಮೋ ಬಿಡುಗಡೆ ಆಗಿದೆ. ಬುರ್ಜ್ ಖಲೀಫಾದ ಕಟ್ಟಡದ ಮೇಲೆ ಸಿಸಿಎಲ್ ಪ್ರೋಮೋ ಝಲಕ್ ರಿಲೀಸ್ ಆಗಿದೆ.
ಪ್ರೋಮೋ ಬಿಡುಗಡೆ ಕಾರ್ಯಕ್ರಮದಲ್ಲಿ ಕನ್ನಡದಿಂದ ಕಿಚ್ಚ ಸುದೀಪ್, ಹಿಂದಿಯಿಂದ ಸೊಹೈಲ್ ಖಾನ್, ತಮಿಳು ಚಿತ್ರರಂಗದಿಂದ ಆರ್ಯ ಮತ್ತು ಜೀವಾ, ತೆಲುಗಿನಿಂದ ತಮನ್ ಮತ್ತು ಸುಧೀರ್ ಬಾಬು, ಬೆಂಗಾಲಿಯ ಜಿಸ್ಸು ಸೇನ್‌ಗುಪ್ತಾ , ಪಂಜಾಬ್‌ನ ಬುನ್ನು ಧಿಲ್ಲೋನ್ ಮತ್ತು ಸೋನು ಸೂದ್, ಮಲಯಾಳಂನಿಂದ ಇಂದ್ರಜಿತ್ ಸುಕುಮಾರನ್ ಮತ್ತು ಉನ್ನಿ ಮುಕುಂದನ್ ಸೇರಿದಂತೆ CCLನ ಎಲ್ಲಾ 8 ತಂಡಗಳ ನಾಯಕರು ಭಾಗಿಯಾಗಿದ್ದರು.
ಫೆಬ್ರವರಿ 23 ರಿಂದ ಆರಂಭವಾಗುವ ಸಿಸಿಎಲ್‌ನ 10ನೇ ಸೀಸನ್ ಮಾರ್ಚ್ 17 ರವರೆಗೆ ನಡೆಯಲ್ಲಿದೆ. ಲೀಗ್ ಸುತ್ತು ಮಾರ್ಚ್ 10 ರವರೆಗೆ ನಡೆಯಲಿದ್ದು, ಈ ಸುತ್ತಿನಲ್ಲಿ 16 ಪಂದ್ಯಗಳು ನಡೆಯಲಿವೆ. ಆ ಬಳಿಕ ಪ್ಲೇಆಫ್ ಸುತ್ತು ಆರಂಭವಾಗಲಿದೆ. ಟೂರ್ನಿಯ ಮೊದಲ ಪಂದ್ಯ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಶಾರ್ಜಾದಲ್ಲಿ ನಡೆಯಲ್ಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಹೀರೋಸ್ ಮತ್ತು ಕೇರಳ ಸ್ಟ್ರೈಕರ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಭಾರತದ ಜನಪ್ರಿಯ ಒಟಿಟಿ ವೇದಿಕೆಯಾಗಿರುವ ಜಿಯೊಸಿನಿಮಾ, ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ಜೊತೆಗೆ ಸಹಭಾಗಿತ್ವವನ್ನು ಘೋಷಿಸಿದೆ. ಇದರ ಭಾಗವಾಗಿ, ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ ಹತ್ತನೇ ಸೀಸನ್ ಅನ್ನು ಜಿಯೊಸಿನಿಮಾ ನೇರಪ್ರಸಾರ ಮಾಡಲಿದೆ. ಕ್ರೀಡೆ ಮತ್ತು ಮನರಂಜನೆಗಳನ್ನು ಒಂದುಗೂಡಿಸಿ ಭಾರತದಲ್ಲಿ ರೂಪಿಸಿರುವ ಏಕಮಾತ್ರ ಪ್ರಯತ್ನ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಇದಾಗಿದೆ.
ಯುಎಇಯ ಶಾರ್ಜಾದಲ್ಲಿ ಲೀಗ್‌ನ ಮೂರು ಪಂದ್ಯಗಳು ನಡೆಯಲ್ಲಿದ್ದು, ಆ ನಂತರ ಲೀಗ್ ಭಾರತಕ್ಕೆ ಕಾಲಿಡಲಿದೆ. ಭಾರತದ ಐದು ನಗರಗಳಾದ ಹೈದರಾಬಾದ್, ಬೆಂಗಳೂರು, ಚಂಡೀಗಢ, ತಿರುವನಂತಪುರ ಮತ್ತು ವಿಶಾಖಪಟ್ಟಣಂನಲ್ಲಿ ಉಳಿದ ಪಂದ್ಯಗಳು ನಡೆಯಲಿವೆ. ವಾರಾಂತ್ಯದಲ್ಲಿ ಅಂದರೆ ಶನಿವಾರ ಹಾಗೂ ಭಾನುವಾರ ಡಬಲ್ ಹೆಡರ್ ಪಂದ್ಯಗಳಿರಲಿವೆ.
ಟೂರ್ನಿಯಲ್ಲಿ ಯಾವೆಲ್ಲ ತಂಡಗಳು ಸೆಣಸಲಿವೆ?
• ಕರ್ನಾಟಕ ಬುಲ್ಡೋಜರ್ಸ್
• ಬೆಂಗಾಲ್ ಟೈಗರ್ಸ್
• ಚೆನ್ನೈ ರೈನೋಸ್
• ಪಂಜಾಬ್ ದಿ ಶೇರ್
• ಮುಂಬೈ ಹೀರೋಸ್
• ಕೇರಳ ಸ್ಟ್ರೈಕರ್ಸ್
• ತೆಲುಗು ವಾರಿಯರ್ಸ್
• ಭೋಜಪುರಿ ದಬಾಂಗ್ಸ್